ಬೆಂಗಳೂರು: ಸರ್ಕಾರ ಯಾವ ಸಾಧನೆಯನ್ನು ಮಾಡಿಲ್ಲ ಎಂಬುದು ರಾಜ್ಯ ಪಾಲರ ಭಾಷಣದಿಂದ ಸ್ಪಷ್ಟವಾಗಿದೆ. ಆದ್ದರಿಂದ ಮಾಡಿದ ಈ ಭಾಷಣವನ್ನು ನಾನು ಭೂಸಾ ಅಥವಾ ತೌಡು ಕುಟ್ಟುವ ಭಾಷಣ ಎಂದು ಕರೆಯ ಬಯಸುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದರು.
ರಾಜ್ಯಪಾಲರ ಭಾಷಣ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಇಂದಿನ ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಸರ್ಕಾರ ಯಾವ ಸಾಧನೆಯನ್ನೂ ಮಾಡದಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದರು.
ರಾಜ್ಯವು ಇಂದು ಮುಖ್ಯವಾಗಿ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸೌಹಾರ್ಧದ ಸಮಸ್ಯೆ, ಅಶಾಂತಿಯ ವಾತಾವರಣ , ಕೃಷಿ ಬಿಕ್ಕಟ್ಟು, ನೇಕಾರರ, ಸಮಸ್ಯೆಗಳು, ಮೀನುಗಾರರ ಸಮಸ್ಯೆಗಳು, ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಇದ್ದದ್ದು ಮುಂತಾದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಇಡಿ ರಾಜ್ಯಪಾಲರ 82 ಪ್ಯಾರಾಗಳ ಭಾಷಣದಲ್ಲಿ ಈ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿದ್ದಾರೆ.

ರಾಜಸ್ತಾನ ಬಿಟ್ಟರೆ ಕರ್ನಾಟಕ ಎರಡನೇ ಅತಿ ದೊಡ್ಡ ಒಣ ಭೂಮಿ ಇರುವ ರಾಜ್ಯ. ಈಗಾಗಲೇ ತೆಲಂಗಾಣದವರು ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಆದ್ದರಿಂದ ಆ ನೀರನ್ನು ತಮಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಗಳ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಬಹಳ ಕಾಲದಿಂದ ಮಹದಾಯಿ, ಮೇಕೆದಾಟು, ಭದ್ರಾ-ಕೃಷ್ಣ ಮೇಲ್ದಂಡೆ, ತುಂಗಭದ್ರ ಅಣೆಕಟ್ಟುಗಳ ನಿರ್ಮಾಣ ಮುಂತಾದ ಅನೇಕ ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಸರ್ಕಾರ ನೀರಾವರಿ ವಿಚಾರದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಯಥೇಚ್ಚವಾಗಿ ಜಲ ಸಂಪನ್ಮೂಲದ ಲಭ್ಯತೆ ಇದ್ದರೂ ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಪಾಲರ ಭಾಷಣದಲ್ಲಿ ನೀರಾವರಿಯ ಕುರಿತು ಅಥವಾ ಈ ಯೋಜನೆಗಳ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾಪವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳು ಸೇರಿದಂತೆ 2 ಕೋಟಿಗೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ನಯಾಪೈಸೆಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಹಾಗೆಯೇ ರಾಜ್ಯದಲ್ಲಿ 88 ಲಕ್ಷ ಕೃಷಿ ಕುಟುಂಬಗಳಿವೆ. ಕೃಷಿಯನ್ನು ಲಾಭದಾಯಕ ಚಟುವಟಿಕೆಯನ್ನಾಗಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ರಾಜ್ಯವು ಇಂದು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ ಭ್ರಷ್ಟಚಾರದ್ದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಪ್ರಸ್ತಾಪವಿಲ್ಲದ್ದರಿಂದ ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಢೀಕರಿಸುತ್ತಿದೆ ಎಂದು ಆಪಾದಿಸಿದ್ದಾರೆ.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಡಾ.ಶಿವರಾಮ ಕಾರಂತ ಬಡಾವಣೆಗಳ ಪ್ರಸ್ತಾಪ ಮಾಡಿದ್ದಾರೆ. ಈ ಎಲ್ಲಾ ಬಡಾವಣೆಗಳೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭಗೊಂಡ ಬಡಾವಣೆಗಳಾಗಿವೆ. ಹಾಗೆಯೇ ತುಮಕೂರು ರಸ್ತೆಯಿಂದ ಹೊಸೂರುವರೆಗಿನ 100 ಮೀಟರ್ ಅಗಲದ ಫೆರಿಫೆರಲ್ ರಸ್ತೆ ಮತ್ತು ಸಬ್ ಅರ್ಬನ್ ರೈಲು ಯೋಜನೆಯ ಮಾತನ್ನು ಕಳೆದ ನಾಲ್ಕು ವರ್ಷಗಳಿಂದ ಕೇಳಿ ಸಾಕಾಗಿದೆ. ಯೋಜನೆ ಆರಂಭವೂ ಆಗುತ್ತಿಲ್ಲ. ಹೀಗಾಗಿ ರಾಜ್ಯಪಾಲರ ಬಾಯಲ್ಲಿ ಹಲವು ಸುಳ್ಳುಗಳನ್ನು ಹೇಳಿಸಲಾಗಿದೆ ಎಂದಿದ್ದಾರೆ.
ರಾಜ್ಯಪಾಲರ ಬಾಯಲ್ಲಿ ಸರ್ಕಾರ ಹೇಳಿಸಿರುವ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಕ್ರಮಗಳಾಗಿವೆ. ಕೌಶಲ್ಯ ಅಭಿವೃದ್ಧಿ ನಮ್ಮ ಸರ್ಕಾರದ ಯೋಜನೆ, ಸೋಲಾರ್ ಮತ್ತು ವಿಂಡ್ ಎಂಬ ರಿನೀವಬಲ್ ಎನರ್ಜಿ ಯೋಜನೆ ನಮ್ಮ ಸರ್ಕಾರದ್ದು. ನಾವು ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದ್ದೆವು. ಈ ಸರ್ಕಾರ ಅದನ್ನು ಮಾರಾಟ ಮಾಡಿ ಲಾಭ ಮಾಡುವುದರಲ್ಲೂ ಶಕ್ತವಾಗಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ತಾನು ಏನನ್ನೂ ಮಾಡಿಲ್ಲ. ಭ್ರಷ್ಟಾಚಾರವನ್ನು ಬಿಟ್ಟು, ರಾಜ್ಯದ ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಬಿಟ್ಟು ಬೇರೆ ಸಾಧನೆಗಳನ್ನು ಮಾಡಿಲ್ಲ ಎನ್ನುವುದನ್ನು ರಾಜ್ಯಪಾಲರ ಭಾಷಣದಲ್ಲಿ ಒಪ್ಪಿಕೊಂಡಿದೆ. ಹೀಗೆ ತನ್ನ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರನ್ನು ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.











