ಬೀದರ್: ಜ . 31 ರಂದು ಬೀದರ್’ನಲ್ಲಿ ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ ಹಾಗೂ ಮಾರುತಿ ಬೌದ ಅವರು ಮಾಡಿರುವ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ನ್ಯಾಯಾಲಯ ನೀಡಿರುವ ಆದೇಶಕ್ಕೂ , ಕೆಲವು ಸಂಘಟನೆಯವರು ನನ್ನ ಮೇಲೆ ಮಾಡುತ್ತಿರುವ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ನ್ಯಾಯಾಲಯ ನನಗೆ ನೀಡಿರುವ ಬೇಡ ಜಂಗಮ ಪ್ರಮಾಣ ಪತ್ರ ತಿರಸ್ಕರಿಸಿದೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು, ಔರಾದ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವುದು ಸೂರ್ಯಚಂದ್ರರಷ್ಟೇ ಸತ್ಯ ಎಂದು ತಿಳಿಸಿದರು.

ಬೀದರ್ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ 4 ಎಫ್ ಅಡಿಯಲ್ಲಿ ಪ್ರಕರಣ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಹೈಕೋರ್ಟ್’ನಲ್ಲಿ ಪ್ರಕರಣ ದಾಖಲಾಗಿ ಕೋರ್ಟ್ ಸಮಯ ವ್ಯರ್ಥಮಾಡಿದ್ದಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದ ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ . ಆದರೆ ಬೇಡಜಂಗಮ ಪ್ರಮಾಣ ಪತ್ರ ಕುರಿತು ಕೆಲವರು ಇಲ್ಲಸಲ್ಲದ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದರು.
ಈ ಹಿಂದೆ ಹೈಕೋರ್ಟ್ನಲ್ಲಿ ಡಬ್ಲೂ.ಪಿ . ಸಂ . 225917/2020 ಪ್ರಭು ಚವ್ಹಾಣ ಅವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತು ತನಿಖೆ ಆಗಬೇಕೆಂದು ನ್ಯಾಯಾಲಯ ಆದೇಶಿಸಿತ್ತು. ಆಗ ವಿಚಾರಣೆ ನಡೆದಾಗ ಇವರೆಲ್ಲ ಎಲ್ಲಿಗೆ ಹೋಗಿದ್ದರು ? ಈವಾಗ ನೆನಪಾಯಿತೇ ಎಂದು ಪ್ರಶ್ನಿಸಿದರು. ಇದು ಕೇವಲ ರಾಜಕೀಯ ಪ್ರೇರಿತ. ಸಮಿತಿಯವರಿಗೆ ಸೂತ್ರಧಾರಿ ಪ್ರಭು ಚವ್ಹಾಣರವರೇ ಆಗಿದ್ದಾರೆ ಎಂದು ಆರೋಪಿಸಿದರು.
24-06-2020 ರಂದು ಪ್ರಭು ಚವ್ಹಾಣ ಅವರೇ ಸಿಆರ್’ಇ ಸೆಲ್’ಗೆ ಪತ್ರ ಬರೆದಿರುವ ಉದಾಹರಣೆ ಸಾಕ್ಷಿ ಸಮೇತ ನಮ್ಮಲ್ಲಿವೆ ಎಂದು ಸ್ಪಷ್ಟಪಡಿಸಿದರು.
ಶೀಘ್ರವೇ ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ ಏಕತಾ ಜನತಾ ಆಶೀರ್ವಾದ ಯಾತ್ರೆ ಕೈಗೊಳ್ಳಲಿದ್ದೇನೆ. ಬದಲಾವಣೆ ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ರವೀಂದ್ರ ಸ್ವಾಮಿ ಮನವಿ ಮಾಡಿದರು.











