• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 1

ನಾ ದಿವಾಕರ by ನಾ ದಿವಾಕರ
February 8, 2023
in Top Story, ಅಂಕಣ
0
ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 1
Share on WhatsAppShare on FacebookShare on Telegram

ಹಿಂಡನ್‌ಬರ್ಗ್‌ ಸಂಸ್ಥೆಯ ವರದಿಯೊಂದು ಹಣಕಾಸು ಜಾಗತೀಕರಣದ ಒಳಬಿರುಕುಗಳನ್ನು ತೆರೆದಿಟ್ಟಿದೆ

ADVERTISEMENT

ಕಳೆದ ಹಲವು ದಶಕಗಳಿಂದ ಭಾರತದ ಆರ್ಥಿಕ ಅಭಿವೃದ್ಧಿ ಪಥವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಭುತ್ವ ಅಥವಾ ಆಡಳಿತಾರೂಢ ಸರ್ಕಾರಗಳು ಮತ್ತು ಖಾಸಗಿ ಬಂಡವಾಳದ ನಡುವಿನ ಸಂಬಂಧಗಳು ಹೆಚ್ಚು ಆಪ್ತತೆಯಿಂದ ಕೂಡಿರುವುದನ್ನು ಗಮನಿಸಲು ಸಾಧ್ಯ. 1980ರ ಲ್ಯಾಟಿನ್‌ ಅಮೆರಿಕದ ಆರ್ಥಿಕತೆ, 1990ರ ನಂತರದ ರಷ್ಯಾದ ಅರ್ಥವ್ಯವಸ್ಥೆ ಇದೇ ಮಾರ್ಗದಲ್ಲಿ ಚಲಿಸಿದ್ದನ್ನೂ ಸ್ಮರಿಸಬಹುದು. ಸರ್ಕಾರಗಳ ಮಾರುಕಟ್ಟೆ ಸ್ನೇಹಿ ನೀತಿಗಳು ಮತ್ತು ವ್ಯಾಪಾರ ವಾಣಿಜ್ಯ ನೀತಿಗಳು ಕೆಲವೇ ಕಂಪನಿಗಳಿಗೆ ಮಾರುಕಟ್ಟೆಯ ಮೇಲೆ, ಆಸ್ತಿ ಒಡೆತನದ ಮೇಲೆ ಏಕಸ್ವಾಮ್ಯ ಸಾಧಿಸಲೂ ನೆರವಾಗಿರುವುದನ್ನು ಈ ಹಾದಿಯಲ್ಲಿ ಗುರುತಿಸಬಹುದು. ಆಪ್ತ ಬಂಡವಾಳಶಾಹಿ ಪದ್ಧತಿಯಲ್ಲಿ (Croney Capitalism)  ಉತ್ಪಾದಕೀಯತೆಗೆ ಯಾವುದೇ ಕೊಡುಗೆ ನೀಡದೆ ಇದ್ದರೂ ಸಹ ಔದ್ಯಮಿಕ ಸಂಪತ್ತಿನ ಕ್ರೋಢೀಕರಣವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಸರ್ಕಾರಗಳ ಬೆಂಬಲದೊಂದಿಗೇ ಪೈಪೋಟಿಯನ್ನು ಕೊನೆಗೊಳಿಸುವುದೇ ಅಲ್ಲದೆ, ಪ್ರಮುಖ ವಲಯಗಳಲ್ಲಿ ಹೊಸ ಉದ್ದಿಮೆಗಳ ಪ್ರವೇಶಕ್ಕೂ ತಡೆಗೋಡೆಗಳನ್ನು ನಿರ್ಮಿಸುವ ಒಂದು ಪ್ರಕ್ರಿಯೆಯೂ ಬಂಡವಾಳಶಾಹಿ ಆರ್ಥಿಕತೆಯ ಒಂದು ಲಕ್ಷಣ. ಅದಾನಿ ಸಮೂಹದ ಬೆಳವಣಿಗೆಯನ್ನು ಇದೇ ಮಾರ್ಗದಲ್ಲೇ ಗುರುತಿಸಬಹುದು.

ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಸ್ಥಳೀಯ ಖಾಸಗಿ ಬಂಡವಾಳ ಹೂಡಿಕೆಯಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿದ್ದು , ಅದಾನಿ ಸಮೂಹವು ಉಳಿದೆಲ್ಲಾ ಉದ್ಯಮಗಳನ್ನೂ ಹಿಂದಿಕ್ಕಿ, ಏಷ್ಯಾದಲ್ಲೇ ಅತಿ ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ಐದು ವರ್ಷಗಳಲ್ಲಿ ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿನ ಹೆಚ್ಚಳ ಮತ್ತು ಆಸ್ತಿ ಒಡೆತನದಲ್ಲಿನ ಹೆಚ್ಚಳವು, ಎಲಾನ್‌ ಮಸ್ಕ್‌ ಅವರ ಟೆಸ್ಲಾ ಮತ್ತು ಬೆಜೋ ಅವರ ಅಮೆಜಾನ್‌ ಕಂಪನಿಗಳನ್ನೂ ಹಿಂದಿಕ್ಕುವುದರಲ್ಲಿ ಸಫಲವಾಗಿದೆ. ರಾಜಕೀಯ ಅರ್ಥಶಾಸ್ತ್ರಜ್ಞ ಅಟುಲ್‌ ಕೊಹ್ಲಿ 1980 ರಿಂದ 2005ರ ನಡುವೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಕುರಿತು ಸಂಶೋಧನೆಯನ್ನು ನಡೆಸಿದ್ದಾರೆ. ಇವರ ಅಭಿಪ್ರಾಯದಲ್ಲಿ ಭಾರತ 1990ರಲ್ಲಿ ಜಾಗತಿಕ ಆರ್ಥಿಕ ಭೂಮಿಕೆಯನ್ನು ಪ್ರವೇಶಿಸಲು ಅನುಕೂಲಕರವಾದ  ಪರಿಸ್ಥಿತಿಯನ್ನು 1980ರಿಂದಲೇ ಆರಂಭವಾದ ಆರ್ಥಿಕ ಸುಧಾರಣೆಗಳು ಸೃಷ್ಟಿಸಿದ್ದವು. ಪ್ರಭುತ್ವ ಮತ್ತು ಖಾಸಗಿ ಔದ್ಯಮಿಕ ವಲಯದ ನಡುವಿನ ಸಂಬಂಧಗಳು ಈ ಹಂತದಲ್ಲೇ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದವು. 1990 ಮತ್ತು 2000ದ ದಶಕದಲ್ಲಿ ಭಾರತದಲ್ಲಿ ಕಂಡುಬಂದಂತಹ ಆರ್ಥಿಕ ಅಭಿವೃದ್ಧಿಗೆ ಮಾರುಕಟ್ಟೆ ಪರ ಆಡಳಿತ ನೀತಿಗಳು ಕಾರಣವೋ ಅಥವಾ ಸಂಕೀರ್ಣವಾದ ಪ್ರಭುತ್ವದ ಹಸ್ತಕ್ಷೇಪದ ಮಾದರಿಗಳು ಕಾರಣವೋ ಎನ್ನುವುದನ್ನು ಕೊಹ್ಲಿ ತಮ್ಮ ಸಂಶೋಧನೆಯಲ್ಲಿ ವಿಶ್ಲೇಷಿಸುತ್ತಾರೆ. ಹಲವು ತಜ್ಞರ ಅನುಸಾರ, 1991ರಲ್ಲಿ ನರಸಿಂಹರಾವ್‌ ಸರ್ಕಾರ ಆರ್ಥಿಕ ಉದಾರೀಕರಣಕ್ಕೆ ಭಾರತದ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸಿದ್ದು, ಮಾರುಕಟ್ಟೆ ಪರ ಬೆಳವಣಿಗೆಯ ಮಾದರಿಗೆ ಅನುಕೂಲಕರವಾಗಿತ್ತು . 

ಕೊಹ್ಲಿ ಅವರ ಅಭಿಪ್ರಾಯದಲ್ಲಿ ಈ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳು, ಬಹುಮಟ್ಟಿಗೆ ಬಂಡವಾಳ ಮಾರುಕಟ್ಟೆಯ ನೆಲೆಯಲ್ಲೇ ಇದ್ದರೂ, ದೂರಸಂಪರ್ಕ, ವಾಹನ ತಯಾರಿಕೆ, ವಿಮಾನಯಾನ, ಮಾಹಿತಿ ತಂತ್ರಜ್ಞಾನ, ಕಟ್ಟಡ ನಿರ್ಮಾಣ, ಗ್ರಾಹಕ ಪದಾರ್ಥಗಳು ಈ ವಲಯಗಳಲ್ಲಿ ಭಾರತದ ಮಾರುಕಟ್ಟೆಗೆ ಹೆಚ್ಚು ನಮ್ಯತೆಯೊಂದಿಗೆ ವ್ಯವಹರಿಸುವ ಅವಕಾಶಗಳನ್ನು ಕಲ್ಪಿಸಿದ್ದವು. ಖಾಸಗಿ ಬಂಡವಾಳಹೂಡಿಕೆಗೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ನೀತಿಯನ್ನು ಅನುಸರಿಸಲಾಗಿತ್ತು. ಈ ಹಂತದಲ್ಲಿ ಭಾರತದಲ್ಲಿ ಪ್ರಭುತ್ವ-ಬಂಡವಾಳ-ಖಾಸಗಿ ಉದ್ಯಮದ ಮೈತ್ರಿಯ ಬಲವರ್ಧನೆಯನ್ನೂ ಗುರುತಿಸಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಆಳವಾಗಿ ವಿಘಟಿತವಾಗಿರುವ ಭಾರತದ ಶ್ರಮಿಕ ವರ್ಗಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ಆರ್ಥಿಕ ಸಂರಕ್ಷಣೆಯ ನೆಲೆಗಳೂ ಸಹ ದುರ್ಬಲವಾಗಿದ್ದವು.

ನವ ಭಾರತದ ಆರ್ಥಿಕ ಹೆಜ್ಜೆಗಳು

ಆದಾಗ್ಯೂ 2001 ರಿಂದ 2014ರ ನಡುವೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಮುನ್ನೆಲೆಗೆ ಬಂದ “ ಗುಜರಾತ್‌ ಅಭಿವೃದ್ಧಿ ಮಾದರಿ “ಯು ಇದೇ ಪ್ರಕ್ರಿಯೆಗೆ ಮತ್ತಷ್ಟು ಉತ್ತೇಜನಕಾರಿಯಾಗಿದ್ದು, ಮೂಲ ಸೌಕರ್ಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಖಾಸಗಿ ಬಂಡವಾಳಕ್ಕೆ ಹೆಚ್ಚಿನ ಪ್ರಾಶಸ್ತ್ಯವೂ ದೊರೆತಿತ್ತು. ಅದಾನಿ ಮುಂತಾದ ಉದ್ಯಮಪತಿಗಳು ಈ ಬೆಳವಣಿಗೆಗಳ ಫಲಾನುಭವಿಗಳೇ ಆಗಿದ್ದಾರೆ. ಗುಜರಾತ್‌ ಅಭಿವೃದ್ಧಿ ಮಾದರಿಯ ಮೂಲ ಮಂತ್ರ ಇರುವುದೇ ಮೂಲ ಸೌಕರ್ಯಗಳ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ. ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿಯ ಯೋಜನೆಗಳಲ್ಲಿ ಅದಾನಿ ಸಮೂಹವು ತನಗಿದ್ದ ಮಿತಜನಾಧಿಪತ್ಯದ ಸಂಪರ್ಕಗಳನ್ನು ಬಳಸಿಕೊಂಡು, ಹೆಚ್ಚಿನ ಮಾರುಕಟ್ಟೆ ಶಕ್ತಿಯನ್ನು ಸಂಗ್ರಹಿಸಿ ಕ್ರೋಢೀಕರಿಸಿರುವುದೇ ಅಲ್ಲದೆ, ಒಟ್ಟಾರೆ ಉತ್ಪಾದಕೀಯತೆಗೆ ಹೆಚ್ಚಿನ ಕೊಡುಗೆ ನೀಡದೆಯೇ ಬೃಹತ್‌ ಪ್ರಮಾಣದ ಲಾಭಗಳಿಕೆಯತ್ತ ಸಾಗಿರುವುದನ್ನು ಈ ಮಾದರಿಯಲ್ಲಿ ಗುರುತಿಸಬಹುದು. ಅದಾನಿ ಸಮೂಹದ ಬೆಳವಣಿಗೆಯನ್ನು, ಬಂದರುಗಳು ಮತ್ತು ವಿಮಾನನಿಲ್ದಾಣಗಳಲ್ಲಿ ಬಂಡವಾಳ ಹೂಡುವ ಪ್ರಕ್ರಿಯೆಗಳಲ್ಲಿ ಕಾಣಬಹುದು. ಈ ಪ್ರಕ್ರಿಯೆಗೆ ಪೂರಕವಾಗಿದ್ದುದು ಹೆಚ್ಚುತ್ತಿದ್ದ ಷೇರು ಮೌಲ್ಯಗಳು ಮತ್ತು ಕಾರ್ಪೋರೇಟ್‌ ಸಾಲದ ಪ್ರಮಾಣ. 2020ರ ನಂತರದಲ್ಲಿ ಇದು ತೀವ್ರತೆ ಪಡೆದುಕೊಂಡಿದ್ದನ್ನು ಗಮನಿಸಬಹುದು.

ಕೆಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಕುಟುಂಬ ನಿಯಂತ್ರಿತ ವಾಣಿಜ್ಯ ಕೂಟಗಳಲ್ಲಿ ಹೆಚ್ಚಿನ ಆರ್ಥಿಕ ಶಕ್ತಿಯು ಕ್ರೋಢೀಕರಣವಾಗುವುದರ ಮೂಲಕವೇ ಭಾರತದ ಆರ್ಥಿಕ ಅಭಿವೃದ್ಧಿಯೂ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ದಕ್ಷಿಣ ಕೊರಿಯಾದ ಚೇಬೊಲ್‌ ಕುಟುಂಬದ ಔದ್ಯಮಿಕ ಸಾಮ್ರಾಜ್ಯವನ್ನು ಉದಾಹರಣೆಯಾಗಿ ನೀಡಲಾಗುತ್ತದೆ. ಆದರೆ ಪ್ರಭುತ್ವ ಮತ್ತು ಔದ್ಯಮಿಕ ವಲಯದ ಸಂಬಂಧಗಳಲ್ಲಿ ಅದಾನಿ ಸಮೂಹದಂತಹ ವಾಣಿಜ್ಯ ಕೂಟಗಳಿಗೆ ಸರ್ಕಾರದ ವತಿಯಿಂದ, ಸಾರ್ವಜನಿಕ ಬ್ಯಾಂಕುಗಳಿಂದ, ವಿಮಾ ಕಂಪನಿಗಳಿಂದ ಎಷ್ಟು ಪ್ರಮಾಣದಲ್ಲಿ ಹಣಕಾಸು ನೆರವು ದೊರೆತಿದೆ ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ಸೂಕ್ಷ್ಮ ಪರಿಶೀಲನೆಗೊಳಪಡಬೇಕಿದೆ. ಲಭ್ಯ ಮಾಹಿತಿಗಳ ಅನುಸಾರ ರಾಷ್ಟ್ರೀಕೃತ ಬ್ಯಾಂಕುಗಳು ಅದಾನಿ ಸಮೂಹಕ್ಕೆ ಖಾಸಗೀ ಬ್ಯಾಂಕುಗಳಿಗಿಂತಲೂ ದುಪ್ಪಟ್ಟು ಸಾಲ ನೀಡಿವೆ. ದೇಶದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಅದಾನಿ ವಾಣಿಜ್ಯ ಕೂಟಕ್ಕೆ 260 ಕೋಟಿ ರೂಗಳಷ್ಟು ಸಾಲ ನೀಡಿರುವುದಾಗಿ ಬ್ಲೂಮ್‌ಬರ್ಗ್‌ ಸಂಸ್ಥೆಯ ವರದಿಗಳು ಹೇಳುತ್ತವೆ.

ನವ ಉದಾರವಾದ ಮತ್ತು ಜಾಗತೀಕರಣದ ಡಿಜಿಟಲ್‌ ಯುಗದಲ್ಲಿ ಹಣಕಾಸು ಬಂಡವಾಳವೂ ಡಿಜಿಟಲ್‌ ಸ್ವರೂಪದಲ್ಲೇ ತನ್ನ ವ್ಯಾಪ್ತಿ ಮತ್ತು ಹರವನ್ನು ವಿಸ್ತರಿಸಿಕೊಳ್ಳುತ್ತಿದ್ದು, ದೇಶ-ಖಂಡ-ಪ್ರದೇಶಗಳ ಸೀಮಾರೇಖೆಗಳ ಹಂಗಿಲ್ಲದ ಮುಕ್ತ ಚಲನೆಯನ್ನು ತನ್ನದಾಗಿಸಿಕೊಂಡಿದೆ ಈ ಸೀಮಾತೀತ ಹಣ ಅಥವಾ ಬಂಡವಾಳದ ಗಮ್ಮತ್ತೆಂದರೆ, ಸಾವಿರಾರು ಮೈಲಿಗಳ ದೂರದಲ್ಲಿರುವ ಒಂದು ಬೃಹತ್‌ ಉದ್ಯಮವನ್ನು ಕ್ಷಣಮಾತ್ರದಲ್ಲಿ ಕಾಲೆಳೆದು ಕೆಡವಿಬಿಡುತ್ತದೆ. ಬಂಡವಾಳದ ಚಲನಶೀಲತೆ ಹೆಚ್ಚಾದಂತೆಲ್ಲಾ ಮಾರುಕಟ್ಟೆಯ ಮೇಲೆ ಮತ್ತು ಔದ್ಯಮಿಕ ವಲಯದ ಮೇಲೆ ಅದರ ಹಿಡಿತವೂ ಹೆಚ್ಚಾಗುತ್ತಾ ಹೋಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಪ್ರತಿಯೊಂದು ದೇಶವೂ ಈ ಬಂಡವಾಳದ ಚಾಂಚಲ್ಯದ ಬುಗುರಿಯ ತಲೆಯ ಮೇಲೆ ನಿಂತಿರುತ್ತದೆ. ಈ ಬುಗುರಿಯನ್ನು ಆಡಿಸುವ ದಾರ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿರುವ ಸೂತ್ರಧಾರ ಕಂಪನಿಯ ಕೈಯ್ಯಲ್ಲಿರುತ್ತದೆ.  ಒಂದು ಪೈಸೆ ಬಂಡವಾಳ ಹೂಡದೆ, ದೂರದ ಒಂದು ದೇಶದಲ್ಲಿರುವ ಒಂದು ಬೃಹತ್‌ ಜಾಗತಿಕ ಉದ್ಯಮವನ್ನು ಕುಸಿಯುವಂತೆ ಮಾಡುವ ಕ್ಷಮತೆಯನ್ನು ಕೆಲವು ಉದ್ದಿಮೆಗಳಿಗೆ ಇದೇ ಬಂಡವಾಳವೇ ಒದಗಿಸಿರುತ್ತದೆ.

ಅಮೆರಿಕದ ಹಿಂಡನ್‌ಬರ್ಗ್‌ ಸಂಶೋಧನಾ ಸಂಸ್ಥೆ ಈ ಕ್ಷಮತೆಯನ್ನೇ ಬಳಸಿಕೊಂಡು, ಅಮೃತ ಕಾಲದತ್ತ ಸಾಗುತ್ತಿರುವ ನವ ಭಾರತದ ಅಗ್ರಮಾನ್ಯ ಔದ್ಯಮಿಕ ಸಮೂಹವಾದ ಅದಾನಿ ಸಾಮ್ರಾಜ್ಯವನ್ನು ಕಂಗೆಡಿಸಿಬಿಟ್ಟಿದೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಾರುಕಟ್ಟೆ ಮತ್ತು ಅರ್ಥವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಒಂದು ಉದ್ಯಮವು ಸಾರ್ವಜನಿಕರಿಗೆ ವಿತರಿಸಬೇಕಿದ್ದ ಷೇರುಗಳನ್ನು ಹಿಮಪಡೆಯುವಂತಾಗಿದೆ. 20 ಸಾವಿರ ಕೋಟಿ ರೂ ಮೌಲ್ಯದ ಷೇರು ಮಾರಾಟ ಪ್ರಕ್ರಿಯೆಯನ್ನು ಅದಾನಿ ಎಂಟರ್‌ಪ್ರೈಸಸ್‌ ರದ್ದುಪಡಿಸಿರುವುದು ಚಾರಿತ್ರಿಕ ಘಟನೆ ಎಂದೇ ಹೇಳಬಹುದು. Follow-on public offering  ಅಥವಾ ಎಫ್‌ಪಿಒ ಎಂದು ಹೇಳಲಾಗುವ ಈ ಷೇರು ಮಾರಾಟವನ್ನು ಸಾಮಾನ್ಯವಾಗಿ ಕಂಪನಿಗಳು ತಮ್ಮ ಆರಂಭಿಕ ಷೇರು ಮಾರಾಟದ ನಂತರದ ಹಂತದಲ್ಲಿ ಕೈಗೊಲ್ಳುತ್ತವೆ. ಇದನ್ನು ಅನುಷಂಗಿಕ ಷೇರು ಮಾರಾಟ ಎಂದೂ ಹೇಳಲಾಗುತ್ತದೆ.

ಅದಾನಿ ಸಾಮ್ರಾಜ್ಯದ ಒಳಬಿರುಕುಗಳು

ಡಿಸೆಂಬರ್‌ 2022ರ ವೇಳೆಗೆ ಒಟ್ಟು 19.63 ಲಕ್ಷ ಕೋಟಿ ರೂಗಳ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿದ್ದ ಅದಾನಿ ಸಮೂಹದ ಹತ್ತು ಉದ್ಯಮಗಳು ಷೇರುಪೇಟೆಯಲ್ಲಿ ನೋಂದಾಯಿತವಾಗಿವೆ. ಆದರೆ ಕಳೆದ ಒಂದು ವಾರದಲ್ಲಿ ಈ ಬಂಡವಾಳ ಮೌಲ್ಯದಲ್ಲಿ 8.76 ಲಕ್ಷ ಕೋಟಿ ರೂಗಳ ಕುಸಿತ ಉಂಟಾಗಿದೆ. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಷನ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಪೋರ್ಟ್ಸ್‌, ಅದಾನಿ ವಿಲ್ಮರ್‌, ಅದಾನಿ ಪವರ್‌ ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಎನ್‌ಡಿಟಿವಿ ಇವು ಅದಾನಿ ಸಾಮ್ರಾಜ್ಯದ ವಿಭಿನ್ನ ಔದ್ಯಮಿಕ ಶಾಖೆಗಳಾಗಿವೆ. ಕಳೆದ ವಾರದ ಷೇರುಮಾರುಕಟ್ಟೆ ಪ್ರಹಸನದ ಪರಿಣಾಮ ಅದಾನಿ ಎಂಟರ್‌ಪ್ರೈಸಸ್‌ನ ವಹಿವಾಟು ಶೇ 26ರಷ್ಟು ಕುಸಿದಿದ್ದು ಉಳಿದ ಉದ್ದಿಮೆಗಳ ಷೇರು ಮೌಲ್ಯವೂ ಗಣನೀಯವಾಗಿ ಇಳಿಕೆಯಾಗಿದೆ.  ಎಫ್‌ಪಿಒ ಮೂಲಕ ಷೇರುಗಳನ್ನು ತಲಾ 3112-3276 ರೂಗಳ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿತ್ತಾದರೂ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಸ್ಪಂದನೆ ದೊರೆಯದೆ, ಷೇರು ಬೆಲೆಗಳಲ್ಲಿ ಕುಸಿತ ಉಂಟಾಗಿದ್ದರಿಂದ, ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಿ, ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

ಅಬುಧಾಬಿಯ ರಾಜಕುಟುಂಬ ಹಾಗೂ ಭಾರತದ ಕೋಟ್ಯಧೀಶ ಕುಟುಂಬಗಳ ಬೆಂಬಲವನ್ನು ನಿರೀಕ್ಷಿಸಿ ಅದಾನಿ ಎಂಟರ್‌ಪ್ರೈಸಸ್‌ ಈ ಭಾರಿ ಮೊತ್ತದ ಷೇರು ವಹಿವಾಟಿಗೆ ಮುಂದಾಗಿತ್ತು. ಆದರೂ ಮರುದಿನವೇ ಷೇರು ಮೌಲ್ಯಗಳಲ್ಲಿ ಶೇ 28ರಷ್ಟು ಕುಸಿತ ಉಂಟಾಗಿದ್ದು ತೀವ್ರ ಹೊಡೆತವಾಗಿ ಪರಿಣಮಿಸಿತ್ತು. ತಮಗೆ ಹೂಡಿಕೆದಾರರ ಹಿತಾಸಕ್ತಿಯೇ ಮುಖ್ಯ ಎಂಬ ಉದಾತ್ತ ಹೇಳಿಕೆಯೊಂದಿಗೆ ಷೇರು ವಿಕ್ರಯ ಪ್ರಕ್ರಿಯೆಯನ್ನು ಹಿಂಪಡೆದಿರುವ ಅದಾನಿ ಸಮೂಹ, ಮಾರುಕಟ್ಟೆಯ ಅಸ್ಥಿರತೆಯೇ ತಮ್ಮ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದೆ. ಔದ್ಯಮಿಕ ಜಗತ್ತಿನಲ್ಲಿ ಷೇರುದಾರರ ಹಿತಾಸಕ್ತಿಯನ್ನು ಕಾಳಜಿಯಿಂದ ಕಾಪಾಡುವ ಒಂದು ಪ್ರವೃತ್ತಿ ಇರಲು ಸಾಧ್ಯವೇ ಎಂಬ ಅನುಮಾನದೊಂದಿಗೇ ಗೌತಮ್‌ ಅದಾನಿ ಅವರ ಉದಾತ್ತ ನುಡಿಗಳನ್ನು ಸ್ವೀಕರಿಸಬೇಕಿದೆ.

ಭಾರತೀಯ ಜೀವ ವಿಮಾ ನಿಗಮವು ಅದಾನಿ ಸಮೂಹದ ಷೇರುಗಳಲ್ಲಿ ಮತ್ತು ಸಾಲದ ರೂಪದಲ್ಲಿ 30,127 ಕೋಟಿ ರೂಗಳನ್ನು ಹೂಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಜನವರಿ 27ರಂದು ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿದ ನಂತರವೂ, ಎಲ್‌ಐಸಿ ಹೂಡಿಕೆಯು 56,142 ಕೋಟಿ ರೂಗಳಷ್ಟಾಗಿರುತ್ತದೆ. ಅದಾನಿ ಸಮೂಹದ ಷೇರುಗಳು ಕುಸಿಯುವ ಮುನ್ನ ಹಿಂದಿನ ವಾರದಲ್ಲಿ ಎಲ್‌ಐಸಿ ಹೂಡಿಕೆಯು 80 ಸಾವಿರ ಕೋಟಿ ರೂಗಳಷ್ಟಿತ್ತು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅಂದರೆ, ಷೇರು ಮಾರುಕಟ್ಟೆಯ ವ್ಯತ್ಯಯಗಳಿಂದ ಎಲ್‌ಐಸಿ ಹೂಡಿಕೆಯಲ್ಲಿ 23,735 ಕೋಟಿ ರೂಗಳ ನಷ್ಟ ಸಂಭವಿಸಿದೆ.  ಜನಸಾಮಾನ್ಯರ ಉಳಿತಾಯದ ರೂಪದಲ್ಲಿ ಕೋಟ್ಯಂತರ ರೂಗಳ ಬಂಡವಾಳವನ್ನು ಹೊಂದಿರುವ ಎಲ್‌ಐಸಿ ಸಂಸ್ಥೆಗೆ ಈ ನಷ್ಟವೂ ಗಣನೀಯವಾಗಿಯೇ ಕಾಣುತ್ತದೆ. ಪ್ರಭುತ್ವದ ಬಂಡವಾಳ ಮತ್ತು ಖಾಸಗಿ ಉದ್ಯಮಗಳ ನಡುವೆ ಇರುವ ಸಂಬಂಧಗಳು ಹಲವು ರಾಚನಿಕ ಸವಾಲುಗಳನ್ನು ಮುಂದಿಟ್ಟಿದ್ದು, ಆಡಳಿತಾರೂಢ ಪಕ್ಷಗಳೊಡನೆ ನಿಕಟ ಸಂಪರ್ಕ ಹೊಂದಿರುವ ಕುಟುಂಬ ನಿಯಂತ್ರಣದ ವಾಣಿಜ್ಯ ಕೂಟಗಳು ಅಪಾರದರ್ಶಕ ಮಾದರಿಯಲ್ಲಿ ಔದ್ಯಮಿಕ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸುವುದು ಮತ್ತು ಔದ್ಯಮಿಕ ವಲಯದಲ್ಲಿನ ನಿಯಮಗಳನ್ನು ನಿರಾತಂಕವಾಗಿ ಉಲ್ಲಂಘಿಸುವುದು, ಈ ಸವಾಲುಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ. ಇಂತಹ ವಾಣಿಜ್ಯ ಕೂಟಗಳು ಸಾರ್ವಜನಿಕ ಸಂಸ್ಥೆಗಳಿಂದ ಮತ್ತು ಸಾಲ ನೀಡುವ ಬ್ಯಾಂಕ್‌, ವಿಮೆ ಮುಂತಾದ ಸಂಸ್ಥೆಗಳಿಂದ ಹೆಚ್ಚಿನ ಪ್ರಮಾಣದ ಹಣಕಾಸು ಸೌಲಭ್ಯ ಪಡೆದಿರುವುದು, ಆರ್ಥಿಕತೆಗೆ ಮತ್ತು ಭಾರತದ ಸಾಮಾನ್ಯ ಜನತೆಗೆ ಅಪಾಯಕಾರಿಯಾಗಿ ಕಾಣುತ್ತದೆ.

ಮುಂದಿನ ಭಾಗದಲ್ಲಿ ನಿರೀಕ್ಷಿಸಿ… ಅದಾನಿ ಸಾಮ್ರಾಜ್ಯದ ಏಳು-ಬೀಳು

Tags: ಬಿಜೆಪಿ
Previous Post

ಪೇಶ್ವೆ ಡಿಎನ್ ಎ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಲಿ: ಹೆಚ್.ಡಿ.ಕುಮಾರಸ್ವಾಮಿ

Next Post

ಅಪ್ಪು ಸಮಾಧಿ ಅದ್ಬುತ ಸ್ಮಾರಕ ಮಾಡಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಅಪ್ಪು ಸಮಾಧಿ ಅದ್ಬುತ ಸ್ಮಾರಕ ಮಾಡಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

ಅಪ್ಪು ಸಮಾಧಿ ಅದ್ಬುತ ಸ್ಮಾರಕ ಮಾಡಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada