ಅಮೆರಿಕೆಯಲ್ಲಿ ನೆಲೆಸಿರುವ ಭಾರತೀಯ ಮೂಲದ ದಲಿತ ಜನಾಂಗವು ಭಾರತದಂತೆ ಅಲ್ಲಿಯೂ ಮೇಲ್ವರ್ಗದ ಜನರಿಂದ ದೌರ್ಜನ್ಯ ಹಾಗು ಜಾತಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಅದರ ವಿರುದ್ಧ ಇತ್ತೀಚಿಗೆ ಅಲ್ಲಿನ ದಲಿತರು ಜಾಗೃತಗೊಂಡಿದ್ದಾರೆ. ಈ ದೀಸೆಯಲ್ಲಿ ತೀರ ಇತ್ತೀಚಿನ ಒಂದು ಉಪಕ್ರಮದಿಂದ ಅಮೆರಿಕೆಯಲ್ಲಿ ಅಂಬೇಡ್ಕರ್ವಾದಿಗಳಿಗೆ ವಿಜಯವನ್ನು ತಂದಿತ್ತಿದೆ. ಭಾರತೀಯ-ಅಮೆರಿಕನ್ ಮತ್ತು ಸಿಯಾಟಲ್ ಸಿಟಿ ಕೌನ್ಸಿಲ್ ಸದಸ್ಯರಾದ ಕ್ಷಮಾ ಸಾವಂತ್ ಅವರು ಕಳೆದ ಮಂಗಳವಾರ ಒಂದು ಸುಗ್ರೀವಾಜ್ಞೆಯನ್ನು ತರುವ ಮೂಲಕ ಅಮೆರಿಕೆಯಲ್ಲಿ ಜಾತಿ ಆಧಾರಿತ ತಾರತಮ್ಯದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸುಗ್ರೀವಾಜ್ಞೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಅಮೆರಿಕೆಯ ಸಿಯಾಟಲ್ ನಗರದಲ್ಲಿನ ಭಾರತೀಯ ದಲಿತ ಕಾರ್ಮಿಕರಿಗೆ ಹೆಚ್ಚಿನ ರಕ್ಷಣೆ ನೀಡುವ ಉದ್ದೇಶದಿಂದ ಜಾತಿ, ವರ್ಣ, ಲಿಂಗ, ಧಾರ್ಮಿಕˌ ಪಂಥೀಯ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ನಡೆಯುವ ತಾರತಮ್ಯಗಳನ್ನು ನಿವಾರಿಸಲು ಸಿಯಾಟಲ್ ಸಿಟಿ ಕೌನ್ಸಿಲ್ನಲ್ಲಿ ಶಾಸನವನ್ನು ತರಲಾಗಿದೆಯಂತೆ. ಫೆಬ್ರವರಿ ೨೦೨೦ ರಲ್ಲಿ, ಕ್ಷಮಾ ಸಾವಂತ ಅವರು ಭಾರತದಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ವಾದಿಸಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅನ್ನು ನಿಲ್ಲಿಸಲು ಭಾರತ ಸರಕಾರವನ್ನು ಒತ್ತಾಯಿಸಲು ಅವರು ಅಲ್ಲಿನ ಕೌನ್ಸಿಲ್ನಲ್ಲಿ ನಿರ್ಣಯವನ್ನು ಮಂಡಿಸಿದ್ದರು. ಆ ನಿರ್ಣಯವು ಅಂಗೀಕರಿಸಲಾಗಿತ್ತು.
ತೀರ ಇತ್ತೀಚಿಗೆ ಯುಎಸ್ ನಲ್ಲಿ ನೆಲೆಸಿರುವ ದಲಿತರ ಮೇಲೆ ಮೇಲ್ಜಾತಿಯವರಿಂದ ನಡೆಯುತ್ತಿರುವ ಜಾತಿ ದೌರ್ಜನ್ಯಗಳನ್ನು ನಿಲ್ಲಿಸಲು ಮತ್ತು ದಲಿತ ನಾಗರಿಕರಿಗೆ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಕಾನೂನು ರಕ್ಷಣೆಯನ್ನು ನೀಡಲು ಈ ಸುಗ್ರೀವಾಜ್ಞೆ ನೆರವಾಗಲಿದೆ ಎನ್ನಲಾಗುತ್ತಿದೆ.
ಸುಗ್ರೀವಾಜ್ಞೆಯ ಮೂಲಕ ತರಲಾದ ಈ ಶಾಸನವು ದಲಿತರಿಗೆ ಉದ್ಯೋಗ, ಅಧಿಕಾರಾವಧಿ, ಬಡ್ತಿ, ಕೆಲಸದ ಸ್ಥಳದ ಮತ್ತು ವೇತನಕ್ಕೆ ಸಂಬಂಧಿಸಿದಂತೆ ಜಾತಿಯ ಆಧಾರದ ಮೇಲೆ ಎಸಗುವ ತಾರತಮ್ಯಗಳನ್ನು ನಿಷೇಧಿಸುತ್ತದೆ ಹೇಳಲಾಗುತ್ತಿದೆ. ಈ ಕಾನೂನು ಹೋಟೆಲ್ಗಳು, ಸಾರ್ವಜನಿಕ ಸಾರಿಗೆ, ಚಿಕ್ಕಪುಟ್ಟ ಸಂಸ್ಥೆಗಳು ಮತ್ತು ರೆಸ್ಟೋರೆಂಟ್ಗಳಂತಹ ಸಾರ್ವಜನಿಕ ವಸತಿಗಳಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ. ಬಾಡಿಗೆ ವಸತಿ ಗುತ್ತಿಗೆ ಮತ್ತು ಆಸ್ತಿ ಮಾರಾಟದಲ್ಲಿ ವಸತಿ ತಾರತಮ್ಯವನ್ನು ಈ ಕಾನೂನು ನಿಷೇಧಿಸುತ್ತದೆ ಎನ್ನುತ್ತವೆ ಮೂಲಗಳು. ಈ ಜಾತಿ ತಾರತಮ್ಯಗಳು ಸಾಮಾನ್ಯವಾಗಿ ಸಾಮಾಜಿಕ ಪ್ರತ್ಯೇಕತೆ, ಆರ್ಥಿಕ ಶೋಷಣೆˌ ದೈಹಿಕ ಮತ್ತು ಮಾನಸಿಕ ಹಿಂಸೆಯ ರೂಪಗಳಲ್ಲಿ ಸಂಭವಿಸುತ್ತದೆ ಎಂದು ಕ್ಷಮಾ ಸಾವಂತ್ ವಿವರಿಸಿದ್ದಾರಂತೆ.
ಕ್ಷಮಾ ಸಾವಂತ್ ಅವರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅಮೆರಿಕೆಯಲ್ಲಿ ತಂತ್ರಜ್ಞಾನ, ನಿರ್ಮಾಣ, ರೆಸ್ಟೋರೆಂಟ್ಗಳು ಮತ್ತು ಸೇವಾ ಉದ್ಯಮಗಳು ಸೇರಿದಂತೆ ಹಲವು ಉದ್ಯಮ ಕ್ಷೇತ್ರಗಳಲ್ಲಿ ಜಾತಿ ತಾರತಮ್ಯ ಹೆಚ್ಚುತ್ತಿದೆ ಎಂದು ಸಾವಂತ್ ಅಭಿಪ್ರಾಯಪಟ್ಟಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಏಷ್ಯಾದ ೧೬೭,೦೦೦ ಕ್ಕೂ ಹೆಚ್ಚು ಜನರು ವಾಷಿಂಗ್ಟನ್ನಲ್ಲಿ ವಾಸಿಸುತ್ತಿದ್ದಾರೆ. ಈ ತಾರತಮ್ಯವು ಹೆಚ್ಚಾಗಿ ಗ್ರೇಟರ್ ಸಿಯಾಟಲ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ, ಈ ಪ್ರದೇಶದಲ್ಲಿ ಜಾತಿ ತಾರತಮ್ಯವನ್ನು ನಿವಾರಿಸಬೇಕು ಮತ್ತು ಅದು ಗುಪ್ತಗಾಮಿನಿಯಂತೆ ಅಸ್ಥಿತ್ವದಲ್ಲಿರುವುದನ್ನು ತಡೆಯಬೇಕು ಎನ್ನುವುದು ಕ್ಷಮಾ ಅವರ ಅಭಿಪ್ರಾಯವಾಗಿದೆ.
ಈ ಹಿಂದೆ, ಹಾರ್ವರ್ಡ್, ಬ್ರೌನ್, ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಯುಎಸ್ನ ಬ್ರಾಂಡೀಸ್ ವಿಶ್ವವಿದ್ಯಾಲಯಗಳು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಇದೇ ರೀತಿ ಪ್ರತಿಭಟಿಸಿದ್ದವು. ಅಟ್ಲಾಂಟಾದ ಭಾರತೀಯ ಐಟಿ ಉದ್ಯೋಗಿ ಮತ್ತು ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನ ಸದಸ್ಯ ಅನಿಲ್ ವಾಗ್ಡೆ, ರಾಜಕೀಯ ವೇದಿಕೆಗಳಲ್ಲಿ ಈ ವಿಷಯವನ್ನು ಚರ್ಚೆಗೆ ತರುವ ದೃಷ್ಟಿಯಿಂದ ಸುಗ್ರೀವಾಜ್ಞೆಯನ್ನು ಪರಿಚಯಿಸಿರುವುದು ಒಂದು ಸಾಧನೆಯಾಗಿದೆ ಎಂದು ಹೇಳಿದ್ದಾರೆ. ಈ ಶಾಸನವು ಅಂಗೀಕಾರವಾಗಲಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ ಅನಿಲ್ ವಾಗ್ಡೆ.
ಇದು ಅಂಗೀಕಾರವಾಗಲಿ ಅಥವಾ ಇಲ್ಲದಿರಲಿ, ತಾರತಮ್ಯವನ್ನು ಎದುರಿಸುತ್ತಿರುವ ದಲಿತ ಮತ್ತು ಹಿಂದುಳಿದ ಜಾತಿಗಳ ಜನರು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸೂಕ್ತವಾದ ವೇದಿಕೆಯನ್ನು ಕಂಡುಕೊಳ್ಳುವುದರಿಂದ ಮಸೂದೆಯ ಪರಿಚಯವು ಮಹತ್ವದ್ದಾಗಿದೆ. ಕೌನ್ಸಿಲ್ ತನ್ನ ಅರ್ಹತೆಯ ಮೇಲೆ ಸಾರ್ವಜನಿಕರೊಂದಿಗೆ ಚರ್ಚೆಗಳನ್ನು ಕೈಗೊಳ್ಳುತ್ತದೆ ಮತ್ತು ನಂತರ ಮಸೂದೆಯನ್ನು ಅಂಗೀಕರಿಸಲು ಪರಿಗಣಿಸುತ್ತದೆ ಎಂಬ ಆಶಾಭಾವನೆ ಅನಿಲ್ ವಾಗ್ಡೆ ಅವರು ಹೊಂದಿದ್ದಾರೆ.
೨೦೨೦ ರ ಸಿಸ್ಕೋ ಪ್ರಕರಣವನ್ನು ಉಲ್ಲೇಖಿಸಿರುವ ಅನಿಲ್ ವಾಗ್ಡೆಯವರು, ಅಲ್ಲಿ ದಲಿತ ಕಾರ್ಯಕರ್ತನೊಬ್ಬನ ಜಾತಿಯ ಹಿನ್ನೆಲೆಯನ್ನು ತಿಳಿದ ನಂತರ ಮೇಲ್ಜಾತಿಗೆ ಸೇರಿದ್ದ ಆತನ ಸಿನೀಯರ್ ಉದ್ಯೋಗಿಯೊಬ್ಬರು ಆತನಿಗೆ ಕಿರುಕುಳ ನೀಡಿ ಆ ಯೋಜನೆಯಿಂದ ಆತನನ್ನು ವರ್ಗಾಯಿಸಿದ್ದರೆದು ಹೇಳಿದ್ದಾರೆ. ಆತ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ದೂರುಗಳಿಂದ ಸಹಾಯವಾಗಲಿಲ್ಲ ಎನ್ನಲಾಗಿದೆ. ಅಲ್ಲಿನ ಮಾನವ ಸಂಪನ್ಮೂಲ ಇಲಾಖೆಗೆ ಜಾತಿ ತಾರತಮ್ಯದ ಕುರಿತು ಅರ್ಥವಾಗದ ಕಾರಣ ಸಿಸ್ಕೋ ಪ್ರಕರಣ ಸಂಭವಿಸಿತ್ತು ಆನಂತರ ಆ ದಲಿತ ವ್ಯಕ್ತಿ ನ್ಯಾಯಯುತ ಉದ್ಯೋಗ ಮತ್ತು ವಸತಿ ಇಲಾಖೆಯನ್ನು ಸಂಪರ್ಕಿಸಿದ್ದ. ಈಗ ಆ ಇಲಾಖೆಯನ್ನು ಕ್ಯಾಲಿಫೋರ್ನಿಯಾ ನಾಗರಿಕ ಹಕ್ಕುಗಳ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆಯಂತೆ.