• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಗಾಂಧಿ ಏಕೆ ಇಂದಿಗೂ ಪ್ರಸ್ತುತವಾಗುತ್ತಾರೆ ? ವರ್ತಮಾನದ ಭಾರತಕ್ಕೆ ಗಾಂಧಿ ಪ್ರಸ್ತುತ ಎನಿಸಲು ಇರುವ ಹತ್ತು ಮುಖ್ಯ ಕಾರಣಗಳು

ನಾ ದಿವಾಕರ by ನಾ ದಿವಾಕರ
January 30, 2023
in ಅಂಕಣ
0
ಗಾಂಧಿ ಏಕೆ ಇಂದಿಗೂ ಪ್ರಸ್ತುತವಾಗುತ್ತಾರೆ ? ವರ್ತಮಾನದ ಭಾರತಕ್ಕೆ ಗಾಂಧಿ ಪ್ರಸ್ತುತ ಎನಿಸಲು ಇರುವ ಹತ್ತು ಮುಖ್ಯ ಕಾರಣಗಳು
Share on WhatsAppShare on FacebookShare on Telegram

ADVERTISEMENT

ಮೂಲ : ರಾಮಚಂದ್ರ ಗುಹಾ

ಅನುವಾದ : ನಾ ದಿವಾಕರ

ಇಂದು 30 ಜನವರಿ 2023ಕ್ಕೆ  ಮಹಾತ್ಮ ಗಾಂಧಿ ಹುತಾತ್ಮರಾಗಿ 75ನೆಯ ವರ್ಷಗಳು ಕಳೆಯುತ್ತವೆ. ಗಾಂಧಿ ನಿಧನರಾಗಿ ಇಷ್ಟು ವರ್ಷಗಳು ಕಳೆದಿದ್ದರೂ, ಇನ್ನೂ ಪ್ರಸ್ತುತವಾಗುತ್ತಾರೆಯೇ ? ಈ ಲೇಖನದ ಮೂಲಕ ನಾನು ಗಾಂಧಿ, ಅವರ ಬದುಕು ಮತ್ತು ಅವರ ಆಲೋಚನೆಗಳು 21ನೆಯ ಶತಮಾನದ ಮೂರನೆಯ ದಶಕದಲ್ಲೂ ಏಕೆ ಪ್ರಸ್ತುತ ಎನಿಸುತ್ತವೆ ಎನ್ನಲು 10 ಕಾರಣಗಳನ್ನು ಮುಂದಿಡುತ್ತೇನೆ.

ಮೊದಲನೆಯ ಕಾರಣವೆಂದರೆ, ಗಾಂಧಿ ಭಾರತಕ್ಕೆ ಮತ್ತು ಜಗತ್ತಿಗೆ, ಸ್ವತಃ ಬಲಪ್ರಯೋಗ ಮಾಡದೆಯೇ ಅನ್ಯಾಯದ ವ್ಯವಸ್ಥೆಯ ವಿರುದ್ಧ ಪ್ರತಿರೋಧ ತೋರುವ ಮಾರ್ಗವನ್ನು ತೋರಿದ್ದಾರೆ. ಕುತೂಹಲಕಾರಿ ಅಂಶವೆಂದರೆ, ಸತ್ಯಾಗ್ರಹದ ಪರಿಕಲ್ಪನೆಯು ಉಗಮಿಸಿದ್ದು ಜೋಹಾನ್ಸ್‌ಬರ್ಗ್‌ನ ಎಂಪೈರ್‌ ಥಿಯೇಟರ್‌ನಲ್ಲಿ, 1906ರ ಸೆಪ್ಟಂಬರ್‌ 11ರಂದು.  ಅಂದು ಗಾಂಧಿಯ ಮುಂದಾಳತ್ವದಲ್ಲಲಿ ಭಾರತೀಯರು, ಜನಾಂಗೀಯ ತಾರತಮ್ಯದ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಬಂಧನಕ್ಕೊಳಗಾಗಲು ನಿರ್ಧರಿಸಿದ್ದರು. 95 ವರ್ಷಗಳ ನಂತರ ಇದೇ ದಿನ, ವಿಶ್ವ ವ್ಯಾಪಾರ ಕೇಂದ್ರವನ್ನು ಭಯೋತ್ಪಾದಕರು ಧ್ವಂಸ ಮಾಡಿದ್ದರು. ಅಂದರೆ ಎರಡು 9/11 ಘಟನೆಗಳು. ಒಂದು ವೈಯುಕ್ತಿಕ ತ್ಯಾಗ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ನ್ಯಾಯವನ್ನು ಕೋರುವ ಮಾರ್ಗವಾದರೆ ಇನ್ನೊಂದು ಭೀತಿ ಮತ್ತು ಬಲಪ್ರಯೋಗದ ಮೂಲಕ ಶತ್ರುವನ್ನು ಹೆದರಿಸುವ ಮಾರ್ಗ.  ಇತಿಹಾಸವು ನಿರೂಪಿಸಿರುವಮತೆ, ಅನ್ಯಾಯದ ವಿರುದ್ಧ ಪ್ರತಿರೋಧದ ಒಂದು ರೂಪವಾಗಿ ಸತ್ಯಾಗ್ರಹವು, ಇತರ ಪರ್ಯಾಯ ಮಾರ್ಗಳಿಗೆ ಹೋಲಿಸಿದರೆ ಹೆಚ್ಚು ನೈತಿಕವೂ, ಪರಿಣಾಮಕಾರಿಯಾಗಿಯೂ ಇರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಮತ್ತು ಭಾರತದಲ್ಲಿ ಬ್ರಿಟೀಷ್‌ ಆಳ್ವಿಕೆಯ ವಿರುದ್ಧ , ಆರಂಭಿಕ ಪುನರಾವರ್ತನೆಯ ನಂತರ, ಗಾಂಧಿ ಮಾದರಿಯ ಪ್ರತಿಭಟನೆಯನ್ನು ಅನೇಕ ಹೋರಾಟಗಳು ಅನುಸರಿಸಿದ್ದವು. ಮುಖ್ಯವಾಗಿ ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟವನ್ನು ಉದಹರಿಸಬಹುದು.

ಗಾಂಧಿ ಪ್ರಸ್ತುತವಾಗಲು ಎರಡನೆಯ ಕಾರಣ ಎಂದರೆ, ಅವರು ತಮ್ಮ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುವುದರೊಂದಿಗೇ, ಅಲ್ಲಿನ ಅವಲಕ್ಷಣಗಳನ್ನೂ ಗುರುತಿಸಿ ಪರಿಹರಿಸುವ ಪ್ರಯತ್ನವನ್ನು ಮಾಡಿದ್ದರು. ಇತಿಹಾಸಕಾರ ಸುನಿಲ್‌ ಖಿಲ್ನಾನಿ ಅವರು ಹೇಳಿದಂತೆ, ಗಾಂಧಿ ಬ್ರಿಟೀಷರ ವಿರುದ್ಧ ಮಾತ್ರ ಹೋರಾಡುತ್ತಿರಲಿಲ್ಲ, ಭಾರತದ ವಿರುದ್ಧವೂ ಹೋರಾಡುತ್ತಿದ್ದರು. ತಮ್ಮ ಸುತ್ತಲಿನ ಸಮಾಜವನ್ನು, ನಮ್ಮ ಸಮಾಜವನ್ನು ಬಲ್ಲವರಾಗಿದ್ದ ಗಾಂಧಿ, ಅದರೊಳಗೆ ಆಳವಾಗಿ ಬೇರೂರಿದ್ದ ಅಸಮಾನತೆಗಳನ್ನು ಗುರುತಿಸಿದ್ದರು. ಅಸ್ಪೃಶ್ಯತೆಯ ವಿರುದ್ಧ ಅವರ ಸಂಘರ್ಷವು, ಭಾರತೀಯರನ್ನು ನೈಜ ಸ್ವಾತಂತ್ರ್ಯಕ್ಕೆ ಅರ್ಹರನ್ನಾಗಿ ಮಾಡುವ ಆಕಾಂಕ್ಷೆಯಿಂದಲೇ ರೂಪುಗೊಂಡಿತ್ತು. ಕಟ್ಟಾ ಸ್ತ್ರೀವಾದಿ ಅಲ್ಲದಿದ್ದರೂ, ಮಹಿಳೆಯರನ್ನು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿಸುವುದರಲ್ಲಿ ಸಾಕಷ್ಟು ಶ್ರಮವಹಿಸಿದ್ದರು.

ಗಾಂಧಿ ಪ್ರಸ್ತುತ ಎನಿಸಲು ಮೂರನೆಯ ಕಾರಣ ಎಂದರೆ, ಆಚರಣೆಯಲ್ಲಿ ಗಾಂಧಿ ಹಿಂದೂ ಆಗಿದ್ದರೂ ಅವರು ಪೌರತ್ವವನ್ನು ಮತಶ್ರದ್ಧೆಯ ಆಧಾರದ ಮೇಲೆ ನಿರ್ವಚಿಸಲು ಇಚ್ಚಿಸಲಿಲ್ಲ. ಜಾತಿ ಹಿಂದೂಗಳನ್ನು ಅಡ್ಡಡ್ಡಲಾಗಿ ವಿಭಜಿಸಿದರೆ ಮತಧರ್ಮವು ಭಾರತವನ್ನು ಲಂಬಗತಿಯಲ್ಲಿ ವಿಭಜಿಸುತ್ತದೆ. ಈ ಲಂಬಗತಿಯ ಮತ್ತು ಚಾರಿತ್ರಿಕವಾಗಿ ವಿರುದ್ಧವಾದ ನೆಲೆಗಳ ನಡುವೆ ಸೇತುವೆಗಳನ್ನು ನಿರ್ಮಿಸಲು ಗಾಂಧಿ ಸಂಘರ್ಷ ನಡೆಸಿದ್ದರು. ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಸಾಧಿಸುವುದು ಅವರ ಶಾಶ್ವತವಾದ ಕಾಳಜಿಯಾಗಿತ್ತು. ಅದಕ್ಕಾಗಿಯೇ ಕೊನೆಯವರೆಗೂ ಬದುಕಿ, ಅದಕ್ಕಾಗಿಯೇ ಸಾಯಲೂ ಸಿದ್ಧವಾಗಿದ್ದರು.

ಗಾಂಧಿ ಪ್ರಸ್ತುತ ಎನಿಸಲು ನಾಲ್ಕನೆಯ ಕಾರಣವೆಂದರೆ, ಅವರು ಗುಜರಾತಿ ಸಂಸ್ಕೃತಿಯಲ್ಲೇ ಮಿಂದೆದ್ದಿದ್ದರೂ, ಗುಜರಾತಿ ಗದ್ಯ ಸಾಹಿತ್ಯದಲ್ಲಿ ಪ್ರಬುದ್ಧತೆ ಸಾಧಿಸಿದ್ದರೂ, ಗಾಂಧಿ ಸಂಕುಚಿತ ಮನೋಭಾವದ ಪ್ರಾದೇಶಿಕವಾದಿಯಾಗಿರಲಿಲ್ಲ. ತಮ್ಮದಲ್ಲದ ಧರ್ಮಗಳ ಬಗ್ಗೆಯ ಪ್ರೀತ್ಯಾದರಗಳನ್ನು ಹೊಂದಿದ್ದಂತೆಯೇ, ಇತರ ಮತಧರ್ಮಗಳಿಗೂ ಅವರಲ್ಲಿ ಪ್ರೀತಿ, ಅವಕಾಶಗಳಿದ್ದವು. ಭಾರತದ ಧಾರ್ಮಿಕ ಹಾಗೂ ಭಾಷಿಕ ವೈವಿಧ್ಯತೆಯ ಬಗ್ಗೆ ಗಾಂಧಿಯ ಗ್ರಹಿಕೆ ಆಳವಾಗಿದ್ದು ಅವರು ವಿದೇಶದಲ್ಲಿದ್ದಾಗ. ಅಲ್ಲಿ ಅವರ ಸಂಗಾತಿಗಳಾಗಿ ಮುಸ್ಲಿಮರು, ಪಾರ್ಸಿಗಳು, ಹಿಂದೂಗಳು, ಪ್ರಾದೇಶಿಕವಾಗಿ ತಮಿಳು ಭಾಷಿಕರೂ, ಗುಜರಾತಿಗಳೂ ಇದ್ದರು.

ಗಾಂಧಿ ಪ್ರಸ್ತುತ ಎನಿಸಲು ಐದನೆಯ ಕಾರಣ ಎಂದರೆ, ಅವರು ಅಪ್ರತಿಮ ದೇಶಭಕ್ತರಾಗಿದ್ದಂತೆಯೇ ಅಂತರರಾಷ್ಟ್ರೀಯವಾದಿಯೂ ಆಗಿದ್ದರು. ಭಾರತೀಯ ನಾಗರಿಕತೆಯ ಶ್ರೀಮಂತಿಕೆ ಮತ್ತು ಭವ್ಯ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಗಾಂಧಿ, 20ನೆಯ ಶತಮಾನದಲ್ಲಿ ಯಾವುದೇ ದೇಶವೂ ಬಾವಿಯೊಳಗಿನ ಕಪ್ಪೆಯಂತೆ ಇರುವುದು ಸಾಧ್ಯವಿಲ್ಲ ಎಂಬ ವಾಸ್ತವ ಅರಿತಿದ್ದರು. ಪ್ರತಿಯೊಬ್ಬರೂ ತಮ್ಮನ್ನು ಮತ್ತೊಬ್ಬರ ಕನ್ನಡಿಯಲ್ಲಿ ನೋಡಿಕೊಳ್ಳುವುದರಿಂದ ಇದು ಅರ್ಥವಾಗುತ್ತದೆ. ಗಾಂಧಿಯ ಮೇಲೆ ಪಶ್ಚಿಮದಷ್ಟೇ ಭಾರತೀಯತೆಯೂ ಪ್ರಭಾವ ಬೀರಿತ್ತು. ಅವರ ತತ್ವಶಾಸ್ತ್ರೀಯ ಹಾಗೂ ರಾಜಕೀಯ ದೃಷ್ಟಿಕೋನಗಳಿಗೆ ಟಾಲ್ಸ್‌ಟಾಯ್‌ ಮತ್ತು ರಸ್ಕಿನ್‌ ಪ್ರೇರಣೆಯಾಗಿದ್ದಂತೆಯೇ ಗೋಖಲೆ ಮತ್ತು ರಾಯಚಂದಭಾಯಿ ಸಹ ಪ್ರೇರಣೆಯಾಗಿದ್ದರು. ಜನಾಂಗೀಯ ವಿಭಜನೆಯನ್ನು ದಾಟಿ ಗಾಂಧಿ ಸ್ನೇಹವನ್ನು ಸಂಪಾದಿಸಿದ್ದರು. ಪ್ರಮುಖವಾಗಿ ಅವರ ಸ್ನೇಹ ವಲಯದಲ್ಲಿ ಹೆನ್ರಿ ಮತ್ತು ಮಿಲ್ಲೀ ಪೊಲಾಕ್, ಹೆರ್ಮನ್‌ ಕಲೆಬಾಕ್‌ ಮತ್ತು ಸಿ.ಎಫ್. ಆಂಡ್ರ್ಯೂ ಅವರನ್ನು ಗುರುತಿಸಬಹುದು. ಇವರೆಲ್ಲರೂ ಗಾಂಧಿಯ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕು ರೂಪಿಸುವಲ್ಲಿ ಪ್ರೇರಕರಾಗಿದ್ದರು.

ಇಲ್ಲಿ ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲೆತ್ನಿಸುತ್ತೇನೆ. ಗಾಂಧಿ ಪರಂಪರೆಯ ಈ ಐದು ವಿಚಾರಗಳು ಇಲ್ಲದೆ ಹೋಗಿದ್ದರೆ  ಸ್ವತಂತ್ರ ಭಾರತವು ಬಹುಶಃ ಭಿನ್ನ ಮಾರ್ಗವನ್ನೇ ಆಯ್ಕೆ ಮಾಡುತ್ತಿತ್ತು ಎನಿಸುತ್ತದೆ. ಏಕೆಂದರೆ ಗಾಂಧಿ ಮಾತುಕತೆಯ ಪರವಾಗಿ ನಿಂತು ಹಿಂಸೆಯನ್ನು ವಿರೋಧಿಸಿದರು. ಇದು ಭಾರತದಲ್ಲಿ, ಏಕಪಕ್ಷದ ನಿರಂಕುಶ ಪ್ರಭುತ್ವಗಳ ಬದಲು, ಬಹುಪಕ್ಷಗಳ ಪ್ರಜಾಪ್ರಭುತ್ವ ಸ್ಥಾಪನೆಗೆ ಕಾರಣವಾಗಿತ್ತು. (ಏಷ್ಯಾ ಮತ್ತು ಆಫ್ರಿಕಾದ ಅನೇಕ ದೇಶಗಲು ಸ್ವಯಂ ನಿರ್ಧಾರಕ್ಕಾಗಿ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದ್ದವು).  ಗಾಂಧಿ ಮತ್ತು ಡಾ ಬಿ.ಆರ್. ಅಂಬೇಡ್ಕರ್‌ ಅವರಂತಹ ನಾಯಕರು ಲಿಂಗ ಹಾಗೂ ಜಾತಿ ಸಮಾನತೆಯನ್ನು ಪ್ರತಿಪಾದಿಸದ್ದರಿಂದಲೇ ಈ ತತ್ವಗಳನ್ನು ನಮ್ಮ ಸಂವಿಧಾನದಲ್ಲೂ ಅಳವಡಿಸಲಾಯಿತು. ಗಾಂಧಿ ಮತ್ತು ಜವಹರಲಾಲ್‌ ನೆಹರೂ ಧಾರ್ಮಿಕ ಮತ್ತು ಭಾಷಿಕ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದುದರಿಂದಲೇ ಭಾರತವು, ಇದರ ದೇಶಗಳಿಗಿಂತಲೂ ಭಿನ್ನವಾಗಿ ಮುನ್ನಡೆದು, ಯಾವುದೇ ಒಂದು ಶ್ರೇಷ್ಠ ಎನ್ನಲಾಗುವ ಮತದ ಅಥವಾ ಭಾಷೆಯ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಲಿಲ್ಲ.

ಈ ನಿಟ್ಟಿನಲ್ಲಿ ಅಂಬೇಡ್ಕರ್‌ ಮತ್ತು ನೆಹರೂ ಅವರನ್ನು ನೆನೆಯುವ ಮೂಲಕ, ಸ್ವತಂತ್ರ ಭಾರತವು ಒಂದು ಪ್ರಜಾಸತ್ತಾತ್ಮಕ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಲಕ್ಷಣವನ್ನು ಮೈಗೂಡಿಸಿಕೊಳ್ಳಲು  ಗಾಂಧಿ ಏಕೈಕ ಕಾರಣರಲ್ಲ ಎನ್ನುವುದನ್ನೂ ನಾನು ಸ್ಪಷ್ಟಪಡಿಸುತ್ತೇನೆ. ಆದಾಗ್ಯೂ ಗಾಂಧಿ ಅವರ ನಾಯಕತ್ವದ ಮೂಲಕ, ಪ್ರಜಾಪ್ರಭುತ್ವದ ಬಗ್ಗೆ, ಸಾಂಸ್ಕೃತಿಕ ಬಹುತ್ವದ ಬಗ್ಗೆ, ಸಾಮಾಜಿಕ ಸಮಾನತೆಯ ಬಗ್ಗೆ ಹೆಚ್ಚುಹೆಚ್ಚು ಒತ್ತುನೀಡುವ ಮೂಲಕ, ನಿರ್ಣಾಯಕ ಪಾತ್ರ ವಹಿಸಿದ್ದರು ಎನ್ನುವುದು ಸ್ಪಷ್ಟ.

ಗಾಂಧಿ ಇಂದಿಗೂ ಪ್ರಸ್ತುತ ಎನಿಸಲು ಆರನೆಯ ಕಾರಣ ಎಂದರೆ, ಅವರು ಅಕಾಲಪ್ರೌಢ ಪರಿಸರವಾದಿಯಾಗಿದ್ದರು. ಅಸೀಮಿತ ಅಭಿವೃದ್ಧಿ ಮತ್ತು ಗ್ರಾಹಕ ಸಂಸ್ಕೃತಿ ಭೌಗೋಳಿಕ ವಿಪತ್ತಿಗೆ ಕಾರಣವಾಗುತ್ತದೆ ಎನ್ನುವುದನ್ನು ನಿರೀಕ್ಷಿಸಿದ್ದರು. ಡಿಸೆಂಬರ್‌ 28ರ ಒಂದು ಬರಹದಲ್ಲಿ ಗಾಂಧಿ “ ಪಶ್ಚಿಮ ರಾಷ್ಟ್ರಗಳ ಮಾದರಿಯಲ್ಲಿ ಭಾರತವೂ ಅಸೀಮಿತ ಕೈಗಾರಿಕೀಕರಣದ ಹಾದಿಯಲ್ಲಿ ಸಾಗುವುದನ್ನು ದೇವರೇ ತಪ್ಪಿಸಬೇಕು.  ಒಂದು ಪುಟ್ಟ ದ್ವೀಪ ಸಾಮ್ರಾಜ್ಯದ (ಇಂಗ್ಲೆಂಡ್) ಆರ್ಥಿಕ ಸಾಮ್ರಾಜ್ಯವಾದವು ಇಂದು ಇಡೀ ಜಗತ್ತನ್ನು ಸಂಕೋಲೆಗಳಲ್ಲಿ ಬಂಧಿಸಿದೆ. 30 ಕೋಟಿ ಜನತೆಯ ಒಂದು ದೇಶ ಇದೇ ಆರ್ಥಿಕ ಶೋ಼ಷಣೆಯ ಮಾರ್ಗವನ್ನು ಅನುಸರಿಸಿದರೆ, ಅದು ಮಿಡತೆಗಳಂತೆ ಇಡೀ ಜಗತ್ತನ್ನೇ ಬೆತ್ತಲಾಗಿಸುತ್ತದೆ  ” ಎಂದು ಹೇಳಿದ್ದರು. ಇದು ಒಂದು ರೀತಿಯಲ್ಲಿ ಅಸಾಧಾರಣವಾದ ದೂರದೃಷ್ಟಿಯೇ ಆಗಿತ್ತು. ಏಕೆಂದರೆ ಬಂಡವಾಳ ತೀವ್ರತೆಯ, ಸಂಪನ್ಮೂಲ ತೀವ್ರತೆಯ, ಇಂಧನ ತೀವ್ರತೆಯ ಕೈಗಾರಿಕೀಕರಣವನ್ನು ಪಶ್ಚಿಮ ರಾಷ್ಟ್ರಗಳು, ಚೀನಾ ಮತ್ತು ಭಾರತ ಅನುಕರಿಸಿದ್ದರಿಂದಲೇ ಇಂದು ಇಡೀ ಜಗತ್ತು ಮಿಡತೆಗಳಿಂದ ಬೆತ್ತಲಾಗುವ ಅಪಾಯವನ್ನು ಎದುರಿಸುತ್ತಿದೆ. ತಮ್ಮ ಬದುಕಿನಲ್ಲಿ ಮತ್ತು ಬರಹಗಳಲ್ಲಿ ಗಾಂಧಿ ಸಂಯಮ ಮತ್ತು ಜವಾಬ್ದಾರಿಯ ನೀತಿಯನ್ನು  ಬೋಧಿಸುತ್ತಿದ್ದರು. ಭೂಮಂಡಲದ ಭವಿಷ್ಯವೂ ಈ ನೀತಿಗಳನ್ನು ಒಪ್ಪಿಕೊಳ್ಳುವುದರ ಮೇಲೆ ಅವಲಂಬಿಸಿದೆ.

ಗಾಂಧಿಯ ಪ್ರಸ್ತುತತೆಗೆ ಏಳನೆಯ ಕಾರಣ ಎಂದರೆ,  ಹಲವು ಹೊಸ ಸವಾಲುಗಳನ್ನು ಎದುರಿಸುತ್ತಲೇ, ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತಲೇ ಬೆಳೆದು, ರೂಪುಗೊಳ್ಳಲು ಅವರಲ್ಲಿದ್ದ ಶಕ್ತಿ. “ವಾಸ್ತವಗಳು ಬದಲಾದಾಗ ನಾನು ನನ್ನ ಮನಸ್ಸು ಬದಲಾಯಿಸುತ್ತೇನೆ. ನೀವು ಹೇಗೆ ಸರ್‌ ” ಎಂಬ ಹೇಳಿಕೆಯೊಂದನ್ನು ತಪ್ಪಾಗಿ ಜಾನ್‌ ಮೇನಾರ್ಡ್‌ ಕೀನ್ಸ್‌ ಅವರಿಗೆ ಆರೋಪಿಸಲಾಗಿದೆ. ಆದರೆ ಈ ಹೇಳಿಕೆಯನ್ನು ವಾಸ್ತವದಲ್ಲಿ ದಾಖಲಿಸಿದ್ದು ಗಾಂಧಿ, 1934ರಲ್ಲಿ. ಗಾಂಧಿಯ ಹೇಳಿಕೆ ಇಂತಿದೆ : “ ನಾನು ದೃಢತೆಯ ಗುಮ್ಮ ಸೃಷ್ಟಿಸುವುದಿಲ್ಲ. ಪ್ರತಿಯೊಂದು ಕ್ಷಣವೂ ನನಗೆ ನಾನೇ ನಿಷ್ಠೆಯನ್ನು ಹೊಂದಿರುವುದೇ  ಆದಲ್ಲಿ ನನಗೆ ಆರೋಪಿಸಲಾಗುವ ಯಾವುದೇ ರೀತಿಯ ಅಸಂಗತತೆಗಳನ್ನೂ ಲೆಕ್ಕಿಸುವುದಿಲ್ಲ .” 

ತಮ್ಮ ಜೀವನದುದ್ದಕ್ಕೂ ಗಾಂಧಿ ಮೂರು ನಿರ್ಣಾಯಕ ವಿಷಯಗಳಲ್ಲಿ ತಮ್ಮ ನಿಲುವು ಬದಲಿಸಿದ್ದನ್ನು ಗಮನಿಸಬಹುದು. ಅವುಗಳೆಂದರೆ ಜನಾಂಗ, ಲಿಂಗ ಮತ್ತು ಜಾತಿಯ ಪ್ರಶ್ನೆಗಳು. ಈ ಮೂರೂ ನೆಲೆಗಳಲ್ಲಿ ಗಾಂಧಿ ತಮ್ಮ ಹಿಂದಿನ ಪೂರ್ವಾಗ್ರಹಗಳನ್ನು ಕೈಬಿಟ್ಟು, ಹೆಚ್ಚು ಪುರೋಗಾಮಿ ನಿಲುವುಗಳನ್ನು ಪ್ರತಿಪಾದಿಸಿದ್ದರು. ದುಡುಕಿನ ಜನಾಂಗೀಯವಾದಿಯಾಗಿದ್ದ ಗಾಂಧಿ ತತ್ವಬದ್ಧ ಜನಾಂಗೀಯತೆಯ ವಿರೋಧಿಯಾಗಿದ್ದರು. ಮೃದು ಧೋರಣೆಯೊಂದಿಗೆ ಹಿಂಜರಿಕೆಯಿಂದ ಜಾತಿ ಶ್ರೇಣೀಕರಣವನ್ನು ಪ್ರಶ್ನಿಸುತ್ತಿದ್ದ ಗಾಂಧಿ ನೇರವಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಜಾತಿ ಶ್ರೇಣೀಕರಣವನ್ನು ಪ್ರಶ್ನಿಸಲಾರಂಭಿಸಿದ್ದರು. ಮಹಿಳೆಯರಿಗೆ ರಾಜಕೀಯೇತರ ಸ್ಥಾನವನ್ನಷ್ಟೇ ನೀಡುತ್ತಿದ್ದ ಗಾಂಧಿ, ಸಾರ್ವಜನಿಕ ಜೀವನದಲ್ಲಿ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಸಕ್ರಿಯವಾಗಲು ಮನಃಪೂರ್ವಕವಾಗಿ ಪ್ರೋತ್ಸಾಹಿಸಿದ್ದರು.

ಗಾಂಧಿ ಪ್ರಸ್ತುತ ಎನಿಸಲು ಎಂಟನೆಯ ಕಾರಣವೆಂದರೆ, ಅವರಲ್ಲಿ ಅನುಯಾಯಿಗಳಿಂದಲೇ ನಾಯಕರನ್ನು ರೂಪಿಸುವ ಜಾಣ್ಮೆ ಇತ್ತು. ಗಾಂಧಿ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅದನ್ನು ಬೆಳೆಸುತ್ತಿದ್ದರು. ತದನಂತರ ಅಂತಹ ಪ್ರತಿಭೆಗಳನ್ನು ಸ್ವತಃ ಬೆಳೆಯಲು ಅವಕಾಶ ಕಲ್ಪಿಸುತ್ತಿದ್ದರು. ಅವರನ್ನೇ ಅನುಕರಿಸಿದ ಅನೇಕ ಅನುಯಾಯಿಗಳು ತಮ್ಮದೇ ಆದ ನೆಲೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇವರುಗಳ ಪೈಕಿ ಜವಹರಲಾಲ್‌ ನೆಹರೂ, ವಲ್ಲಭಾಯಿ ಪಟೇಲ್‌, ಕಮಲಾದೇವಿ ಚಟ್ಟೋಪಾಧ್ಯಾಯ, ಸಿ ರಾಜಗೋಪಾಲಾಚಾರಿ, ಝಕೀರ್‌ ಹುಸೇನ್‌, ಜೆ.ಬಿ. ಕೃಪಲಾನಿ, ಜೆ.ಸಿ. ಕುಮಾರಪ್ಪ, ಸರಳಾದೇವಿ ( ಕ್ಯಾಥರಿನ್‌ ಮೇರಿ ಹೀಲ್ಮನ್) ಇನ್ನೂ ಹಲವರನ್ನು ಹೆಸರಿಸಬಹುದು.

ಸ್ವತಂತ್ರ ಭಾರತದ ಅತ್ಯಂತ ಪ್ರಭಾವಿ ಪ್ರಧಾನಮಂತ್ರಿಗಳಿಗೆ ಹೋಲಿಸಿದಾಗ ಭವಿಷ್ಯದ ನಾಯಕರನ್ನು ರೂಪಿಸುವ ಗಾಂಧಿಯ ಸಾಮರ್ಥ್ಯವು ತದ್ವಿರುದ್ಧವಾಗಿ ಕಾಣುತ್ತದೆ. ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ಮತ್ತು ನರೇಂದ್ರ ಮೋದಿ ತಮ್ಮ ವ್ಯಕ್ತಿಗುಣ ಮತ್ತು ರಾಜಕೀಯ ಸಿದ್ಧಾಂತಗಳ ನೆಲೆಯಲ್ಲಿ ಸಾಕಷ್ಟು ಭಿನ್ನತೆಯನ್ನು ಹೊಂದಿದ್ದಾರೆ. ಅದರೆ ಒಂದು ವಿಚಾರದಲ್ಲಿ ಒಂದೇ ರೀತಿ ಕಾಣುತ್ತಾರೆ. ಅದೇನೆಂದರೆ, ಪಕ್ಷ, ಸರ್ಕಾರ ಮತ್ತು ಪ್ರಭುತ್ವವನ್ನು ತಮ್ಮೊಡನೆಯೇ ಗುರುತಿಸಿಕೊಳ್ಳುವ ಗುಣ. ಅಧಿಕಾರದ ಈ ವೈಯುಕ್ತಿಕೀಕರಣವನ್ನು ಇಂದಿರಾ ಗಾಂಧಿ ನೆಹರೂಗಿಂತಲೂ ಮುಂದಕ್ಕೆ ಕೊಂಡೊಯ್ದಿದ್ದರು, ಮೋದಿ ಇದನ್ನು ಇನ್ನೂ ವಿಸ್ತರಿಸಿದ್ದಾರೆ. ಮೂವರೂ ಸಹ ತಮ್ಮನ್ನು  ಅನುಪೇಕ್ಷ್ಯ ಮತ್ತು ಬದಲಿಡಲಾಗದ ನಾಯಕರೆಂದೇ ಭಾವಿಸುವವರಾಗಿದ್ದಾರೆ. ಭವಿಷ್ಯದ ಪೀಳಿಗೆಯ ನಾಯಕರನ್ನು ಪೋಷಿಸುವಲ್ಲಿ ಅವರ ಕೊಡುಗೆ ಅತ್ಯಲ್ಪ. ( ರಾಜಕೀಯದಿಂದ ಹೊರತಾಗಿ ನೋಡಿದಾಗ, ಅಧಿಕಾರದ ವೈಯುಕ್ತಿಕೀಕರಣವು ಭಾರತದ ಅನೇಕ ಕಾರ್ಪೋರೇಟ್‌ ಉದ್ಯಮಿಗಳಲ್ಲೂ, ನಾಗರಿಕ ಸಮಾಜದ ಸಂಘಟನೆಗಳ ಮುಖ್ಯಸ್ಥರಲ್ಲೂ ಕಂಡುಬರುತ್ತದೆ. ಇವರೂ ಸಹ ಸಂಘಟನೆಯನ್ನು, ಸಂಸ್ಥೆಯನ್ನು ತಮ್ಮೊಡನೆಯೇ ಗುರುತಿಸಿಕೊಳ್ಳಲು ಹಂಬಲಿಸುತ್ತಾರೆ).

ಗಾಂಧಿ ಪ್ರಸ್ತುತ ಎನಿಸಲು ಒಂಬತ್ತನೆಯ ಕಾರಣ ಎಂದರೆ, ವಿರೋಧಿಯ ನಿಲುವುಗಳನ್ನು ಸ್ವೀಕರಿಸುವ ಅವರ ಗುಣ ಮತ್ತು ವಿರೋಧಿಗಳನ್ನೂ ತಲುಪಿ, ಗೌರವಯುತವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಧೋರಣೆ. ತಮ್ಮ ತಾಳ್ಮೆಯ ಪ್ರಯತ್ನಗಳ ಮೂಲಕವೇ, ಅನೇಕ ವರ್ಷಗಳ ಕಾಲ ರಾಜಕೀಯ ವಿರೋಧಿಗಳಾದ ಜಿನ್ನಾ ಮತ್ತು ಅಂಬೇಡ್ಕರ್‌ ಅವರೊಡನೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲೂ ಸಹ ಸಾಮ್ರಾಜ್ಯಶಾಹಿ ನೇತಾರರೊಡನೆ, ಸಮಾನ ನೆಲೆಯನ್ನು ಕಂಡುಕೊಂಡಿದ್ದರು. ಗಾಂಧಿಯಲ್ಲಿ ವೈಯುಕ್ತಿಕ ದ್ವೇಷವನ್ನು ಕಾಣಲಾಗುವುದಿಲ್ಲ. ಬೌದ್ಧಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಕಾಣಬಹುದಿತ್ತು. ಇದನ್ನೂ ಸಹ ಪರಿಹರಿಸುವತ್ತಲೇ ಯೋಚಿಸುತ್ತಿದ್ದರು.

ಗಾಂಧಿ ಇಂದಿಗೂ ಪ್ರಸ್ತುತ ಎನಿಸಲು ಹತ್ತನೆಯ ಕಾರಣ ಎಂದರೆ, ರಾಜಕೀಯ ಬದುಕಿನಲ್ಲಿ ಅವರ ಪಾರದರ್ಶಕತೆ. ಅವರ ಆಶ್ರಮದೊಳಗೆ ಯಾರು ಬೇಕಾದರೂ ಪ್ರವೇಶಿಸಬಹುದಿತ್ತು. ಅವರೊಡನೆ ಯಾರೇ ಆದರೂ ಚರ್ಚಿಸಬಹುದಿತ್ತು. ಅಂತಿಮವಾಗಿ ಸಂಭವಿಸಿದಂತೆ, ಯಾರೇ ಆದರೂ ಅವರನ್ನು ಸಮೀಪಿಸಿ ಹತ್ಯೆ ಮಾಡಬಹುದಿತ್ತು. ರಕ್ಷಣೆಗಾಗಿ ಹಾತೊರೆಯುವ, ಅವರ ಕಾಲಘಟ್ಟದ ಮತ್ತು ಇಂದಿನ ಇತರ ರಾಜಕೀಯ ನಾಯಕರೊಡನೆ ಹೋಲಿಸಿದಾಗ ಅಜಗಜಾಂತರ ಅಂತರ ಕಾಣಬಹುದು.

ಇಲ್ಲಿ ನಾನು ಉಲ್ಲೇಖಿಸಿರುವ ಗಾಂಧಿಯ ಬದುಕಿನಿಂದ ಕಲಿಯಬಹುದಾದ ಪಾಠಗಳು ಈ ದೇಶಕ್ಕೆ ಮಾತ್ರವೇ ಪ್ರಸ್ತುತ ಎಂದು ಭಾವಿಸಬೇಕಿಲ್ಲ. ಆದರೆ ಆಕ್ರಮಣಕಾರಿ ಧಾರ್ಮಿಕ ಬಹುಸಂಖ್ಯಾವಾದದ ವಾತಾವರಣದಲ್ಲಿ,  ನಿಂದಾತ್ಮಕ, ದೌರ್ಜನ್ಯಯುತ ರಾಜಕೀಯ ಸಂಸ್ಕೃತಿಯ ನಡುವೆ, ಸರ್ಕಾರಗಳ ಮತ್ತು ನಾಯಕರ ಸುಳ್ಳು ಮತ್ತು ಮಿಥ್ಯೆಗಳ ನಡುವೆ, ವಿನಾಶದತ್ತ ಸಾಗಿರುವ ನೈಸರ್ಗಿಕ ಪರಿಸರದ ನಡುವೆ, ವೈಯುಕ್ತಿಕ ಆರಾಧನೆಯ ವಾತಾವರಣದಲ್ಲಿ, ಭಾರತದಲ್ಲಿ ಈ ಹತ್ತು ಅಂಶಗಳು ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತವೆ.

-೦-೦-೦-೦-

Previous Post

ಜಾಮೀನು ಸಿಕ್ಕಿದ್ದರೂ ಇನ್ನೂ ಜೈಲಲ್ಲಿರುವ ಸಿದ್ದೀಕ್ ಕಪ್ಪನ್ ಶೀಘ್ರದಲ್ಲೇ ಬಿಡುಗಡೆ

Next Post

JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?

Related Posts

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..
Top Story

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇರಾನ್‌ ಹಾಗೂ ಅಮೆರಿಕ, ಇಸ್ರೇಲ್‌ ನಡುವಿನ ಯುದ್ಧದ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಶಾಂತಿ ದೂತರೊಬ್ಬರ ಮಾತುಗಳು ಹಾಗೂ ಅವರ ಯೋಚನೆಗಳು...

Read moreDetails
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

April 15, 2026
Next Post
JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?

JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada