ರಾಜ್ಯ ಸರ್ಕಾರ ಇತ್ತೀಚಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆ ಸಮಯದಲ್ಲಿ ಇನ್ನೂ ಜಾತಿಯ ಹಿಂದೆ ಹೋಗುವ ಅವಶ್ಯಕತೆ ಇದೆಯಾ..? ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ಹೋಗಿದ್ದರೂ ಇನ್ನೂ ಜಾತಿ ಅಡಿಯಲ್ಲಿ ಮೀಸಲಾತಿ ಕೊಡಬೇಕಾದ ಅವಶ್ಯಕತೆ ಕಾಣಿಸುತ್ತಿದೆಯಾ ಎನ್ನುವ ಪ್ರಶ್ನೆ ಸಾಕಷ್ಟು ಕಡೆಗಳಲ್ಲಿ ಕೇಳಿ ಬಂದಿತ್ತು. ಆ ಬಳಿಕ ಕೇಂದ್ರ ಸರ್ಕಾರ ಮುಂದುವರಿದ ಬಡವರಿಗೆ ಶೇಕಡ 10ರಷ್ಟು ಮೀಸಲಾತಿ ಘೋಷಣೆ ಮಾಡುವ ಮೂಲಕ ಮೀಸಲಾತಿ ನಿಯಮ ಮೀರಿ ನಡೆದುಕೊಂಡಿತ್ತು. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆದಿದ್ದವು. ಈ ಬಗ್ಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಒಂದು ಪೋಸ್ಟ್ ಹಾಕಿದ್ದು, ಸರ್ಕಾರ ಹಾಗು ಮನುವಾದಿಗಳನ್ನು ಪ್ರಶ್ನೆ ಮಾಡಿದ್ದಾರೆ. ಯಾಕೆ ಮೀಸಲಾತಿ ಬೇಕು..? ಸರ್ಕಾರ ನಡೆದುಕೊಳ್ತಿರೋ ರೀತಿ ಹೇಗಿದೆ ಅನ್ನೋ ಬಗ್ಗೆ ಸಾಕ್ಷಿ ಸಮೇತ ಬರೆದಿದ್ದಾರೆ.
ಸರ್ಕಾರವೇ ಜಾತಿ ವಿಚಾರದಲ್ಲಿ ದ್ರೋಹ ಮಾಡ್ತಿದ್ಯಾ..?
ರಾಜ್ಯ ಹಾಗು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯ ಸೇರಿದಂತೆ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಮಾನ್ಯತೆ ಕೊಡುತ್ತೇವೆ ಎಂದು ಹೇಳಿಕೊಂಡಿತ್ತು. ಇತ್ತೀಚಿಗೆ ಕಲಬುರಗಿ ಹಾಗು ಯಾದಗಿರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಲಂಬಾಣಿ ಸಮುದಾಯದ ಜನರಿಗೆ ಹಕ್ಕುಪತ್ರ ವಿತರಣೆ ಮಾಡಿ, ‘ನಾನು ನಿಮ್ಮ ಮಗ, ದಿಲ್ಲಿಯಲ್ಲಿದ್ದೇನೆ, ನಿಮ್ಮನ್ನೆಲ್ಲಾ ನೋಡಿಕೊಳ್ತೇನೆ’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಆದರೆ ರಾಜ್ಯ ಹಾಗು ಕೇಂದ್ರ ಬಿಜೆಪಿ ಸರ್ಕಾರ ಹಿಂದುಳಿದ ಹಾಗು ಎಸ್ಸಿ, ಎಸ್ಟಿ ಸಮುದಾಯಗಳನ್ನ ಸಮಾನವಾಗಿ ನೋಡಿಕೊಳ್ತಿದ್ಯಾ..? ಎಂದು ಕೇಳುವ ಪ್ರಶ್ನೆ ಗೆ ಉತ್ತರ ಇಲ್ಲ. ಸರ್ಕಾರ ಜಾತಿ ಜಾತಿಗಳ ನಡುವೆ ತಾರತಮ್ಯ ಮಾಡುತ್ತಿದೆ. ಕೇವಲ ಬ್ರಾಹ್ಮಣರಿಗೆ ಆದ್ಯತೆ ಕೊಟ್ಟು ಉಳಿದ ಸಮುದಾಯಗಳನ್ನು ಕಡೆಗಣಿಸುತ್ತಿದೆ ಎನ್ನುವುದು ಸರ್ಕಾರದ ಈ ಒಂದು ಆದೇಶದಿಂದ ಸಾಬೀತಾಗುತ್ತಿದೆ.

ಹೆಚ್.ಸಿ ಮಹದೇವಪ್ಪ ಪ್ರಶ್ನೆ ಮಾಡಿದ್ದು ಏನು..?
ಜನವರಿ 13ರಂದು ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಉಪನಿರ್ದೇಶಕರು ಒಂದು ಆದೇಶ ಹೊರಡಿಸಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡುವ ಬ್ರಾಹ್ಮಣ ಸಮುದಾಯದ ಪತ್ರಿಕೆಗಳಲ್ಲಿ ಜಾಹಿರಾತು ನೀಡಲು ಸೂಚಿಸಲಾಗಿದೆ. 2022-23ನೇ ಸಾಲಿನ ಬಜೆಟ್ ವಿಚಾರಗಳ ಬಗ್ಗೆ ಜಾಹೀರಾತು ನೀಡಲು ಸರ್ಕಾರದ ಆದೇಶಕ್ಕೆ ಒಳಪಟ್ಟಿರುವ ಹಾಗು ಜಿಲ್ಲೆಯಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟ ಆಗುತ್ತಿರುವ ಬ್ರಾಹ್ಮಣ ಸಮುದಾಯದ ಮಾಲೀಕರ ಮಾಹಿತಿಯನ್ನು ಸಂಗ್ರಹ ಮಾಡಿ, ಮುಂದಿನ 7 ದಿನಗಳ ಒಳಗಾಗಿ ಇಲಾಖೆಗೆ ಸಲ್ಲಿಕೆ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ಅದರಲ್ಲಿ ಜಾತಿ ಪ್ರಮಾಣ ಪತ್ರವನ್ನೂ ಕೇಳಿರುವುದು ಹಾಗು ಸರ್ಕಾರ ಕೇವಲ ಬ್ರಾಹ್ಮಣ ಸಮುದಾಯದ ಮಾಲೀಕತ್ವ ಇರುವ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತು ನೀಡಲು ಕ್ರಮ ತೆಗೆದುಕೊಂಡಿರುವ ಕ್ರಮ ಖಂಡನಾರ್ಹವಾಗಿದೆ. ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಜಾತಿ ಎಲ್ಲಿದೆ ಎಂದು ಪ್ರಶ್ನಿಸುವ ಮನುವಾದಿಗಳೇ ನೋಡಿ..
ಹೆಚ್.ಸಿ ಮಹದೇವಪ್ಪ ಅವರ ಮಾತುಗಳಲ್ಲೇ ಹೇಳುವುದಾದರೆ ರಾಜ್ಯ ಸರ್ಕಾರ ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು ಎಂದು ಆದೇಶ ಹೊರಡಿಸಿದೆ. ಇತ್ತ ಮನುವಾದಿಗಳು ಈ ಕಾಲದಲ್ಲೂ ಜಾತಿ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೀಸಲಾತಿ ಇನ್ನೂ ಯಾಕೆ ಬೇಕು..? ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಜಾತಿ ಆಧಾರವಾಗಿ ಸಮಾಜವನ್ನು ಒಡೆಯಬೇಡಿ ಎಂದು ತಲೆ ಬುಡ ಇಲ್ಲದ ಮಾತುಗಳನ್ನು ಆಡುತ್ತಾರೆ. ಮುಂದೆ ಹಿಂದೂಗಳು ನಾವೆಲ್ಲಾ ಒಂದು ಎಂದು ಬೊಗಳೆ ಬಿಡುವುದು, ಹಿಂದೆ ಇಂತಹ ಕೆಲಸ ಮಾಡುವುದು. ಈ ರೀತಿಯ ಡಬಲ್ ಸ್ಟ್ಯಾಂಡರ್ಡ್ ನಡವಳಿಕೆ ಮತ್ತು ಸಾಮಾಜಿಕ ವಂಚನೆಯನ್ನು ಅರಿತುಕೊಂಡೇ ಬಾಬಾ ಸಾಹೇಬರು, ಅಂದೇ ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿದ್ದಾರೆ. ಆದರೂ ಮೀಸಲಾತಿ ಯಾಕೆ..? ಜಾತಿ ಎಲ್ಲಿದೆ ಎನ್ನುವ ಮಂದಿ ಇದಕ್ಕೆ ಏನು ಹೇಳುತ್ತಾರೆ..?ಎಂದು ಕುಹಕ ಆಡಿದ್ದಾರೆ. ಇನ್ನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಬಿಜೆಪಿ ನಾಯಕರಿಗೆ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರು ಬೇಡವೇ..? ಎಂದು ಸವಾಲು ಎಸೆದಿದ್ದಾರೆ. ಇದಕ್ಕೆ ಉತ್ತರವನ್ನು ಬಿಜೆಪಿ ಹಾಗು ಸರ್ಕಾರವೇ ನೀಡಬೇಕಿದೆ.