ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರೈತರು ಸರ್ಕಾರದ ವಿರುದ್ದ ಘೋಷಣೆಗಳನ್ನ ಕೂಗಿ ಆಕ್ರೋಶ ಹೊರಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಸೋಮವಾರ ನಗರದ ಪೆಟ್ರೋಲ್ ಬಂಕ್ ಸರ್ಕಲ್‌ನಲ್ಲಿ ಜಮಾಯಿಸಿದ ರೈತಸಂಘದ ನೂರಾರು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಸೆಸ್ಕ್ ಅಧಿಕಾರಿಗಳ ವಿರುದ್ದ ಘೋಷಣೆಗಳಲ್ಲಿ ಕೂಗಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.

ಸೆಸ್ಕ್ ಇಲಾಖೆಯು ರೈತರಿಗೆ ನಿರಂತರವಾಗಿ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಸದೆ ಕಡಿತ ಮಾಡಿ ರೈತರಿಗೆ ಮೋಸ ಮಾಡುತ್ತಿದೆ. ತಾಲೂಕಿನ ತೋಟದ ಮನೆಗಳಲ್ಲಿ ವಾಸ ಮಾಡುತ್ತಿರುವ ರೈತರ ಮನೆಗಳಿಗೆ 5.2ರಿಂದ ರಾತ್ರಿ ವೇಳೆ ಸಂಪೂರ್ಣ ವಿದ್ಯುತ್ ನಿಲುಗಡೆ ಮಾಡಿದೆ. ಇದರಿಂದ ರಾತ್ರಿ ವೇಳೆ ಕತ್ತಲಿನಲ್ಲಿ ರೈತರು ಕಳೆಯುವಂತಾಗಿದೆ ಎಂದು ದೂರಿದರು.
ತಾಲ್ಲೂಕಿನ ತೋಟದ ಮನೆಗಳಿಗೆ ರಾತ್ರಿ ವೇಳೆ ಉಚಿತ ವಿದ್ಯುತ್ ನೀಡಬೇಕು. ತಾಲ್ಲೂಕಿನ ಎಲ್ಲಾ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ಸರ್ಕಾರ ನಿಗದಿಪಡಿಸಿರುವ 7 ಗಂಟೆ ನಿರಂತರ ವಿದ್ಯುತ್ ನೀಡಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ 24 ಗಂಟೆಗಳ ಒಳಗೆ ಬದಲಾಯಿಸಿ ಕೊಡಬೇಕು. ರೈತರ ಜಮೀನುಗಳ ಮೇಲೆ ಹಾದು ಹೋಗಿರುವ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಪ್ರಾಣ ಹಾನಿ ಹಾಗೂ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.





