ಕಾಂಗ್ರೆಸ್ ಹೈಕಮಾಂಡ್ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರಿಗೆ ಬುಲಾವ್ ನೀಡಿದೆ. ಕಾಂಗ್ರೆಸ್ನಲ್ಲಿ ಪ್ರಬಾವಿ ಮುಸ್ಲಿಂ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಝಡ್ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಕ್ಷೇತ್ರ ಚಾಮರಾಜಪೇಟೆಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯವನ್ನೂ ಮಾಡಿದ್ದರು. ಇದೀಗ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಪಕ್ಷವನ್ನೇ ಬಿಟ್ಟು ಬಿಡ್ತಾರಾ..? ಎನ್ನುವ ಶಂಕೆ ಮೂಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅಹ್ಮದ್ ಖಾನ್ ಜೊತೆಗೆ ಚರ್ಚೆ ಮಾಡುವ ಉದ್ದೇಶದಿಂದ ದೆಹಲಿಗೆ ಬರುವಂತೆ ಬುಲಾವ್ ಕೊಟ್ಟಿದೆ.
ಕಾಂಗ್ರೆಸ್ನಿಂದ ಮಾನಸಿಕವಾಗಿ ದೂರ ಆಗಿದ್ದ ಜಮೀರ್..!
ಜಮೀರ್ ಮನೆ ಮೇಲೆ ಐಡಿ ಹಾಗು ಇಡಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಕಾಂಗ್ರೆಸ್ನಿಂದ ಜಮೀರ್ ಅಹ್ಮದ್ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದ ಜಮೀರ್ ಅಹ್ಮದ್ ಖಾನ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಚಾಟಿ ಬೀಸಿದ್ದರು. ಆ ಬಳಿಕ ಮಗನ ಸಿನಿಮಾ ಬಿಡುಗಡೆ ವೇಳೆ ಹಿಂದೂ ಸಂಪ್ರದಾಯದಂತೆ ಗಣೇಶನನ್ನು ಕೂರಿಸಿ ಪೂಜೆ ಮಾಡಿದ್ದರು. ಕಾಂಗ್ರೆಸ್ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಜಮೀರ್ ಅಹ್ಮದ್ ಖಾನ್, ಸಿಎಂ ಹಾಗು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದರು. ಆದರೀಗ ಜಮೀರ್ ಆಹ್ಮದ್ ಖಾನ್ ದೃಷ್ಟಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಸ್ಥಾಪಿಸಿರುವ ಭಾರತ್ ರಾಷ್ಟ್ರೀಯ ಸಮಿತಿ ಕಡೆಗೆ ಹೊರಳಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕೆಸಿಆರ್ ಕೈ ಹಿಡಿಯುತ್ತಾರಾ ಜಮೀರ್ ಅಹ್ಮದ್ ಖಾನ್ ?
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ಬಾರದೆ, ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ ಎನ್ನುವುದೂ ಗೊತ್ತಾಗದೆ ಕಾಂಗ್ರೆಸ್ ಸಂಘಟನೆಯಿಂದಲೂ ದೂರ ಸರಿದಿದ್ದ ಸಿದ್ದರಾಮಯ್ಯ ಬಲಗೈ ಬಂಟ ಜಮೀರ್ ಅಹ್ಮದ್ ಖಾನ್ ಗೌಪ್ಯವಾಗಿ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವುದು ಬಯಲಾಗಿದೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಭಾರತ್ ರಾಷ್ಟ್ರೀಯ ಸಮಿತಿ ಪಕ್ಷವನ್ನು ಸ್ಥಾಪನೆ ಮಾಡಿ ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷ ಸಂಘಟನೆಗೆ ಮುಂದಾಗಿರುವುದು, ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಭೇಟಿ ಆಗಿರುವುದು ಒಂದಕ್ಕೊಂದು ಸಂಬಂಧ ಇದೆ ಎನ್ನುತ್ತಿದೆ. ಜಮೀರ್ ಕಾಂಗ್ರೆಸ್ ಬಿಡ್ತಾರೆ ಅನ್ನೋ ಮಾಹಿತಿ ಕಾಂಗ್ರೆಸ್ ವಲಯದಲ್ಲೇ ಹರಿದಾಡ್ತಿದ್ದು, ಹೈಕಮಾಂಡ್ ಜೊತೆಗಿನ ಚರ್ಚೆ ಬಳಿಕ ಜಮೀರ್ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಗಳಿವೆ.
ಕಾಂಗ್ರೆಸ್ನಿಂದ ದೂರ ಆಗ್ತಿವೆಯಾ ಮುಸ್ಲಿಂ ಮತಗಳು ?
ದೆಹಲಿಗೆ ಬರುವಂತೆ ಜಮೀರ್ ಅಹ್ಮದ್ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ. ಕಾಂಗ್ರೆಸ್ನಲ್ಲಿ ಇದೀಗ ಹೇಳಿಕೊಳ್ಳುವಂತ ಪ್ರಬಲ ಮುಸ್ಲಿಂ ಸಮುದಾಯದ ನಾಯಕರು ಯಾರೂ ಇಲ್ಲ ಎನ್ನುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಎನ್ನುವುದು ಶುದ್ಧ ಸುಳ್ಳು, ಈ ಬಾರಿ ಬೇರೆ ಪಕ್ಷಗಳಿಗೆ ಮುಸ್ಲಿಂ ಮತಗಳು ಹರಿಯಲಿವೆ ಎಂದು ಸುಳಿವು ಕೊಟ್ಟಿದ್ದರು. ಇದೀಗ ಜಮೀರ್ ಅಹ್ಮದ್ ಖಾನ್ ಕೂಡ ಕಾಂಗ್ರೆಸ್ನಿಂದ ದೂರ ಆಗ್ತಿರೋದನ್ನು ನೋಡಿದಾಗ ಮುಸ್ಲಿಂ ಮತಗಳು ಕಾಂಗ್ರೆಸ್ ಮತ ಬುಟ್ಟಿಯಿಂದ ಹೊರಕ್ಕೆ ಬೀಳುವ ಸಂಭವ ಹೆಚ್ಚು ಅಂತಾನೇ ಹೇಳಬಹುದು. ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಸೇರಿದಂತೆ ಸಣ್ಣ ಪುಟ್ಟ ನಾಯಕರು ಕಾಂಗ್ರೆಸ್ನಲ್ಲಿ ಇರಬಹುದು. ಆದರೆ ಸಮುದಾಯದ ಮತ ಸೆಳೆಯುವ ಸಂಪೂರ್ಣ ತಾಕತ್ತು ಇದೆ ಎಂದು ಹೇಳಲು ಸಾಧ್ಯವಿಲ್ಲ.
ಕೃಷ್ಣಮಣಿ
