ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೆ ನೂರಕ್ಕೆ ನೂರು ಅವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಿಮ್ಮ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ನಮ್ಮ ನಿಲುವು ಪ್ರಕಟಿಸುತ್ತೇವೆ.
ಬೆಂಗಳೂರು: ಹಳೆಯ ಪಿಂಚಣಿ ವ್ಯವಸ್ಥೆ ಮುಂದುವರಿಸುವ ವಿಚಾರದ ಕುರಿತು ಹೈಕಮಾಂಡ್ ಜೊತೆ ಚರ್ಚೆ ಮಾಡಿ ನಮ್ಮ ನಿಲುವನ್ನು ಪ್ರಕಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ನ ಮುಂದಿಟ್ಟು ಅವರ ಸಲಹೆ ಪಡೆಯುತ್ತೇನೆ. ಇಂದು ನಿಮ್ಮೆಲ್ಲರಿಗೂ ಸುಳ್ಳು ಭರವಸೆಗಳನ್ನು ನೀಡಿ ಹೋಗುವುದಿಲ್ಲ. ಹೀಗಾಗಿ ಆಡಿದ ಮಾತಿನಂತೆ ನಡೆದುಕೊಳ್ಳಬೇಕು, ಹೀಗಾಗಿ ನಿಮ್ಮ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ನಾವು ಹಿಂದೇಟು ಹಾಕುವುದಿಲ್ಲ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೆ ನೂರಕ್ಕೆ ನೂರು ಅವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಿಮ್ಮ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ನಮ್ಮ ನಿಲುವು ಪ್ರಕಟಿಸುತ್ತೇವೆ.
ಅಲ್ಲದೇ ಹಿಮಾಚಲ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ನಮ್ಮ ಪಕ್ಷ ಹಳೆಯ ಪಿಂಚಣಿ ಪದ್ದತಿಯನ್ನು ಜಾರಿ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಳೆಯ ಪಿಂಚಣಿ ಪದ್ದತಿಯನ್ನು ಜಾರಿಗೆ ತಂದಿದ್ದಾರೆ, ಪಂಜಾಬ್ ಮತ್ತು ಛತ್ತೀಸ್ಘಡದಲ್ಲಿ ಜಾರಿ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಇರುವ ಕಡೆಗಳಲ್ಲಿ ಹಳೆಯ ಪಿಂಚಣಿ ಪದ್ದತಿ ಮರುಜಾರಿ ಮಾಡಿದ್ದಾರೆ. ಆದ್ದರಿಂದ ನಿಮ್ಮ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವೆ, ಹೈಕಮಾಂಡ್ ಸಹ ಮುಕ್ತ ಮನಸಿನಿಂದ ಇದೆ. ಹೀಗಾಗಿ ಅವರೊಂದಿಗೆ ಚರ್ಚಿಸಿ ಕರ್ನಾಟಕದಲ್ಲೂ ಸಹ ಕಾಂಗ್ರೆಸ್ ಸರಿಯಾದ ನಿರ್ಧಾರಕ್ಕೆ ಬರಲಿದೆ ಎಂದರು.
ಅಲ್ಲದೇ ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಬೇಕು, ಇಂದಿನ ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡು ಹೋಗಿ ಮುಂದೆ ನಿಮ್ಮ ಬೇಡಿಕೆ ಈಡೇರಿಸಲು ಆಗುವುದಿಲ್ಲ. ಈ ಕಾರಣಕ್ಕಾಗಿ ನಿಮ್ಮ ಬೇಡಿಕೆಗಳ ಕುರಿತು ರಾಜ್ಯದ ಆರ್ಥಿಕ ಇಲಾಖೆ ಬಳಿ ಮಾತನಾಡಿದ್ದೇನೆ, ಹೊಸ ಪಿಂಚಣಿ ನಿಯಮ ಜಾರಿಯಾದದ್ದು 2006ರಲ್ಲಿ, ಆ ನಂತರ ನೇಮಕಾತಿ ಆದ ನೌಕಕರು ನಿವೃತ್ತರಾಗುವುದು 35 ರಿಂದ 40 ವರ್ಷಗಳ ನಂತರ ಹಾಗಾಗಿ ಈಗಲೇ ಏನು ಹೇಳಲು ಆಗಲ್ಲ ಎಂದಿದ್ದಾರೆ. ಸರ್ಕಾರಿ ನೌಕಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಹಿಂದೆಯೂ ಇದೇ ವಿಷಯಕ್ಕೆ ಸರ್ಕಾರಿ ನೌಕರರು ಹೋರಾಟ ಮಾಡಿದ್ದರು. ಆದರೆ ಹೋರಾಟದಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ 6ನೇ ವೇತನ ಆಯೋಗವನ್ನು ರಚನೆ ಮಾಡಿ, ಆಯೋಗವು ನೀಡಿದ್ದ ವರದಿಯನ್ನು ಒಪ್ಪಿಕೊಂಡು ಜಾರಿಗೆ ನೀಡಿದ್ದೆ, ಇದರಿಂದ 10,600 ಕೋಟಿ ಹೊರೆಯಾಯಿತು. ಆದರು ಸರ್ಕಾರಿ ನೌಕರರ ಹಿತಾಸಕ್ತಿಯನ್ನು ಪರಿಗಣಿಸಿ ಜಾರಿಗೆ ನೀಡಿದ್ದೆ. ಯಾಕೆಂದರೆ ಸರ್ಕಾರಿ ನೌಕರರು ಸರ್ಕಾರದ ರೀತಿಗಳನ್ನು, ನಿರ್ಧಾರಗಳನ್ನು ಜಾರಿ ಮಾಡುವವರು. ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪ್ರಯತ್ನ ಮಾಡಿದಾಗ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರಿ ನೌಕರರ ಹಿತರಕ್ಷಣೆ ಕೂಡ ಮುಖ್ಯವಾಗುತ್ತದೆ ಎಂದರು.