ಹುಬ್ಬಳ್ಳಿ: ಮಹಾದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಮನಮೋಹನ್ ಸಿಂಗ್ ಅವರಿಗೆ ಪರಿಪರಿಯಾಗಿ ಬೇಡಿಕೊಂಡೆವು. ಯೋಜನೆ ಜಾರಿಗೆ ಕೊನೆಯ ಹಂತದ ತೀರ್ಮಾನ ತೆಗೆದುಕೊಳ್ಳಲು ಸಜ್ಜಾಗಿದ್ದೇವೆ. ಒಗ್ಗರಣೆ ಹಾಕಿ ಅಡುಗೆ ಮಾಡುವವರು ನಾವೇ, ಕೊನೆಯಲ್ಲಿ ನಾವು ಮಾಡಿದ್ದು ಅನ್ನುವುದು ಕಾಂಗ್ರೆಸ್ ಅಭ್ಯಾಸ ಎಂದು ಟಾಂಗ್ ನೀಡಿದರು.
ಕೋವಿಡ್ ಹೆಸರಲ್ಲಿ ಕಾಂಗ್ರೆಸ್ ಪಾದಯಾತ್ರೆ ತಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಯಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಪಾದಯಾತ್ರೆ ನಡೆದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ. ಹೀಗಾಗಿ ಕೋವಿಡ್ ಕಾಂಗ್ರೆಸ್ಗೆ ವರವಾಗಿ ಪರಿಣಮಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಧಾರವಾಡಕ್ಕೆ ಯುವಜನ ಮಹೋತ್ಸವಕ್ಕೆ ಪ್ರಧಾನಿಗಳು ಬರುತ್ತಿದ್ದು, ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದ ಅವರು, ಬೊಮ್ಮಾಯಿ ನೇತೃತ್ವದಲ್ಲಿ ಜನಪರ ಆಡಳಿತ ಕೊಡುತ್ತಿದ್ದೇವೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಮೇಜಾರಿಟಿಯಲ್ಲಿ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು.