ಕೋವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಸೂಚಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಹುಬ್ಬಳ್ಳಿ: ಕೋವಿಡ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ಹೊಸವರ್ಷಕ್ಕೆ ಮಾರ್ಗಸೂಚಿ ಹೊರಡಿಸುವ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಸೂಚಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೂಸ್ಟರ್ ಡೋಸ್ ಕೊಡುವುದು, ಶಿಬಿರಗಳನ್ನು ಮಾಡಿ ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಿದ್ದೇನೆ. ಇದರೊಂದಿಗೆ ಏರ್ಪೋರ್ಟ್ ಗಳಲ್ಲಿ ತಪಾಸಣೆ ನಡೆಸಿ ಕಟ್ಟೆಚ್ಚರವಹಿಸಲಾಗುವುದು. ಅಲ್ಲದೇ ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಹೊರಡಿಸುವ ಬಗ್ಗೆ ಸಚಿವರಾದ ಅಶೋಕ್, ಸುಧಾಕರ್ ಅವರು ಚರ್ಚೆ ಮಾಡಿ ತಿಳಿಸುತ್ತಾರೆ ಎಂದರು.
ಈಗಾಗಲೇ ಆರೋಗ್ಯ ಸಚಿವರಿಗೆ ಸನ್ನದ್ಧರಾಗುವಂತೆ ಸೂಚಿಸಿದ್ದೇನೆ, ಆಕ್ಸಿಜನ್ ಸೇರಿದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತೇವೆ. ಯಾರು ಸಹ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಇರಲಿ ಎಂದು ತಿಳಿಸಿದರು.
ಸದನದಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಚರ್ಚೆ ಆಗದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕನಿಷ್ಠ 2-3 ದಿನ ಚರ್ಚೆ ಆಗಬೇಕು. ಸಭಾಪತಿಗಳ ಜೊತೆ ಇದೇ ವಿಚಾರ ಮಾತನಾಡಿದ್ದೇನೆ ಎಂದರು.
ಮುಂದಿನ ಚುನಾವಣೆ ಕುರಿತು ಮಾತನಾಡಿದ ಅವರು,
ಅವಧಿ ಪೂರ್ಣ ಚುನಾವಣೆ ಹೋಗುವ ಮಾತೇ ಇಲ್ಲ. ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಅವರ ಕಾರ್ಯಕರ್ತರನ್ನ ಸನ್ನದ್ಧ ಮಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು