ಫೆಬ್ರವರಿ ತಿಂಗಳಲ್ಲಿ 2023-24ನೇ ಸಾಲಿನ ಆಯವ್ಯಯವನ್ನ ಮಂಡಿಸಲಾಗುವುದು ಈ ಸಂಬಂಧ ಹಣಕಾಸಿನ ಇಲಾಖೆಯೊಂದಿಗೆ ಎರಡು ಸುತ್ತಿನ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಶಿಗ್ಗಾಂವಿಯಲ್ಲಿ ಮಾತನಾಡಿದ ಸಿಎಂ ಅಧಿವೇಶನ ಮುಗಿದ ನಂತರ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು.ಜನವರಿ ತಿಂಗಳಿನಿಂದ ಬಜೆಟ್ ನ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಸಂಭಾವ್ಯ ನಾಲ್ಕನೇ ಅಲೆ ತಡೆ ಕುರಿತು ಮಾತನಾಡಿದ ಸಿಎಂ ಐಎಲ್ ಐ ಮತ್ತು ಸಾರಿಗಳ ಪರೀಕ್ಷೆ ಹೆಚ್ಚಿಸಲಾಗುವುದು ಹಾಗೂ ಬೂಸ್ಟರ್ ಡೋಸ್ ಗಳನ್ನು ಹೆಚ್ಚಿಸಲಾಗುವುದು. ಆಸ್ಪತ್ರೆಗಳಲ್ಲಿ ಆಕ್ಸಿಜನ್ , ಬೆಡ್ ಗಳು ಸೇರಿದಂತೆ ಮೂಲಭೂತಸೌಕರ್ಯಗಳನ್ನು ಸಜ್ಜುಗೊಳಿಸುವುದು ಹಾಗೂ ಐಸಿಯು ಘಟಕಗಳನ್ನು ಸಿದ್ದಪಡಿಸಿಕೊಳ್ಳುವುದು. ಮಾಸ್ಕ್ ಗಳನ್ನು ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು. ಏರ್ ಪೋರ್ಟ್, ಮತ್ತು ಬಸ್ ನಿಲ್ದಾಣಗಳಲ್ಲಿ ಮೊದಲು ಪಾಲಿಸುತ್ತಿದ್ದ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಉತ್ತರಿಸಿದ್ದಾರೆ.
ಇನ್ನು ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋವಿಡ್ ಬಿಸಿ ಕುರಿತು ಉತ್ತರಿಸಿ ಸಮ್ಮೇಳನ ಬಯಲು ಪ್ರದೇಶದಲ್ಲಿ ಆಗುವುದರಿಂದ, ತೊಂದರೆಯ ಸಾಧ್ಯತೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗಸೂಚಿಗಳನ್ನು ಸೂಚಿಸಲಾಗುವುದು ಎಂದು ಹೇಳಿದ್ದಾರೆ.






