ಖ್ಯಾತ ಇತಿಹಾಸಕಾರ ಎಚ್. ಜಿ. ವೆಲ್ಸ್ ತನ್ನ “ದಿ ಔಟಲೈನ್ ಆಫ್ ಹಿಸ್ಟರಿ” ಗ್ರಂಥದಲ್ಲಿ ಮೌರ್ಯ ದೊರೆ ಅಶೋಕನ ಕುರಿತು ಹೀಗೆ ಹೇಳಿದ್ದಾರೆ:
“Amidst the tens of thousands of names of monarchs that crowd the columns of history, their majesties and graciousnesses and serenities and royal highnesses and the like, the name of Ashoka shines, and shines, almost alone, a star.”
–H.G. Wells
(“ಇತಿಹಾಸದ ಪುಟಗಳಲ್ಲಿ ತುಂಬಿರುವ ಹತ್ತಾರು ಸಾವಿರ ರಾಜರ ಹೆಸರುಗಳ ನಡುವೆ, ತನ್ನ ಗಾಂಭೀರ್ಯ, ಸೌಜನ್ಯ, ಪ್ರಶಾಂತತೆ, ರಾಜಮನೆತನದ ಶ್ರೇಷ್ಠತೆ, ಮುಂತಾದವುಗಳ ನಡುವೆ, ಸಾಮ್ರಾಟ್ ಅಶೋಕನ ಹೆಸರು ಏಕಾಂಗಿಯಾಗಿ ಕಂಗೊಳಿಸುತ್ತದೆ.”)
ಜಗತ್ತಿನ ಇತಿಹಾಸದಲ್ಲಿ ಸಾಮ್ರಾಟ್ ಅಶೋಕನ ಮಹತ್ವವನ್ನು ವಿವರಿಸುವ ‘ಸರ್ಚಿಂಗ್ ಫಾರ್ ಅಶೋಕ: ಕ್ವೆಸ್ಟಿಂಗ್ ಫಾರ್ ಎ ಬುದ್ದಿಸ್ಟ್ ಕಿಂಗ್ ಫ್ರಾಮ್ ಇಂಡಿಯಾ ಟು ಥೈಲ್ಯಾಂಡ್’ ಎಂಬ ಗ್ರಂಥದ ಲೇಖಕಿ ಹಾಗು ಇತಿಹಾಸಕಾರ್ತಿ ನಯನಜೋತ್ ಲಾಹಿರಿ ಅವರೊಂದಿಗೆ ಪತ್ರಕರ್ತ ಅಭಿಶೇಕ್ ರಾಯ್ ಅವರು ಸ್ಕ್ರಾಲ್.ಇನ್ ವೆಬ್ ಜರ್ನಲ್ಲಿಗಾಗಿ ನಡೆಸಿದ ಸಂದರ್ಶನವನ್ನು ೫ˌ ನವೆಂಬರ್ ೨೦೨೨ ರಂದು ಪ್ರಕಟಿಸಿದ್ದಾರೆ. ಆ ಸಂದರ್ಶನದ ಸಾರಾಂಶವನ್ನು ನಾನು ಈ ಅಂಕಣದಲ್ಲಿ ಪ್ರಾಸ್ತಾಪಿಸಿದ್ದೇನೆ. ಅಶೋಕ ಚಕ್ರವರ್ತಿಯು ಇತಿಹಾಸದಲ್ಲಿ ಅಳಿದು ಹೋದ ಅನೇಕ ರಾಜರಂತೆ ಮುಖಗೇಡಿಯಲ್ಲ. ಆತ ತನ್ನ ಮಾತು ಹಾಗು ಕೃತಿಗಳ ಮೂಲಕ ತನ್ನನ್ನು ತಾನು ಎದ್ದು ಕಾಣುವಂತೆ ಮಾಡಿದವನು ಎನ್ನುತ್ತಾರೆ ನಯನಜೋತ್ ಲಾಹಿರಿ ಅವರು. ತಮ್ಮ ಕಥನ ಇತಿಹಾಸ ಶೈಲಿಯ ಮೊದಲ ಪ್ರಯತ್ನವಾದ ‘ಫೈಂಡಿಂಗ್ ಫಾರ್ಗಾಟನ್ ಸಿಟೀಸ್’ (೨೦೦೫) ಗ್ರಂಥದಲ್ಲಿ ನಯನಜೋತ್ ಲಾಹಿರಿಯವರು ನಿಖರವಾಗಿ ಸುಮಾರು ನೂರು ವರ್ಷಗಳ ಹಿಂದಿನ ಸಿಂಧೂ ನಾಗರಿಕತೆಯ ಆವಿಷ್ಕಾರದ ಬಗ್ಗೆ ಚೆಲ್ಲಿದ ಬೆಳಕು ನಮ್ಮ ಪ್ರಾಚೀನ ಕಾಲದ ಭಾರತೀಯವನ್ನು ಅರಿಯಲು ಇತಿಹಾಸದ ಅನೇಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆಯಂತೆ. ಆ ಗ್ರಂಥದಲ್ಲಿ ಆಕೆ ಟೆಸಿಟೋರಿ, ದಯಾ ರಾಮ್ ಸಾಹ್ನಿ, ರಾಖಲ್ದಾಸ್ ಬ್ಯಾನರ್ಜಿ, ಜಾನ್ ಮಾರ್ಷಲ್ ಮತ್ತು ಇತರರಿಂದ ಆದಂತಹ ಆವಿಷ್ಕಾರದ ಸಂಪೂರ್ಣ ಚಾಪವನ್ನು ದೈತ್ಯ ಜಿಗ್ಸಾ ಪಝಲ್ನ ಒಟ್ಟುಗೂಡಿಸುವಿಕೆಯ ಮಾದರಿಯಲ್ಲಿ ಹಿಡಿದಿಟ್ಟಿದ್ದಾರಂತೆ.
![](https://pratidhvani.com/wp-content/uploads/2022/12/chakravartin-ashoka-samrat-92818258.jpg)
ಲಾಹಿರಿಯವರು ತಮ್ಮ ಇತ್ತೀಚಿನ ‘ಅಶೋಕನ ಹುಡುಕಾಟ….’ ಪುಸ್ತಕದಲ್ಲಿ ಚರ್ಚಿಸಿದ ಅನೇಕ ಸಂಗತಿಗಳ ಕುರಿತು Scroll.in ನೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ. ಆ ಸಂದರ್ಶನದ ಆಯ್ದ ಸಾರಾಂಶವು ನಾವು ಇಲ್ಲಿ ಗಮನಿಸಬಹುದಾಗಿದೆ. ಚಕ್ರವರ್ತಿ ಅಶೋಕ ತನ್ನ ಪ್ರಚಂಡ ಅಧಿಕಾರದ ಅವಧಿಯಲ್ಲಿ ಕೈಕೊಂಡ ಕಾರ್ಯಗಳಿಂದ ಪ್ರಾಚೀನ ಕಾಲದ ಇತರ ಚಕ್ರವರ್ತಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ. ತನ್ನ ಎಪಿಗ್ರಾಫಿಕ್ ಸಹಿಯಲ್ಲಿ ಇರುವ ವ್ಯತಿರಿಕ್ತತೆ ಒಂದುಕಡೆಗಾದರೆ ರಾಜನಾಗಿ ಆತ ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿದ್ದನು. ಆತನ ಪ್ರತಿಯೊಂದು ರಾಜಾಜ್ಞೆಯು ವೈಯಕ್ತಿಕ ಸಂದೇಶದ ರೂಪದಲ್ಲಿದ್ದು, ಅವು ಆತನ ಸಾರ್ವಜನಿಕ ಸಂವಹನದ ವಿನೂತನ ಮಾದರಿಗಳಾಗಿ ನಿರಂತರ ನೆನಪಿಸುತ್ತವೆ. ‘ದೇವನಾಂಪ್ರಿಯ ಹೀಗೆ ಮಾತನಾಡುತ್ತಾನೆ’ ಎಂದು ಆತನ ಮೊದಲ ಶಿಲಾ ಶಾಸನಗಳು ಪ್ರಾರಂಭವಾಗುತ್ತವೆ ಎನ್ನುತ್ತಾರೆ ಲಾಹಿರಿಯವರು. ಅಶೋಕನ ಸ್ವಯಂ-ಚಿತ್ರಣವು ಆತನ ಅಯಶಸ್ವಿ ಕಾರ್ಯಗಳನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿವೆ. ರಾಜಾಜ್ಞೆಗಳ ಮೂಲಕ ಜನರನ್ನು ತನ್ನ ಆಲೋಚನೆಗಳಿಗೆ ಪರಿವರ್ತಿಸುವ ಸಾಮರ್ಥ್ಯ ಅಶೋಕನಿಗಿತ್ತು ಎನ್ನುವುದು ಆತನ ಹಲವಾರು ಶಾಸನಗಳು ಡಿಕ್ಟಟ್ಗಳಂತೆ ಧ್ವನಿಸುತ್ತವೆ ಎನ್ನುತ್ತಾರೆ ಲಾಹಿರಿಯವರು.
ಬ್ರಿಟೀಷ್ ವಸಾಹತುಶಾಹಿ ಇತಿಹಾಸಕಾರರು ಅಶೋಕನನ್ನು ಕಲ್ಪಿಸಿಕೊಂಡ ರೀತಿ ಮತ್ತು ಆ ಹಿನ್ನೆಲೆಯಲ್ಲಿ ಇಂದಿನ ಇತಿಹಾಸವು ಅಶೋಕನನ್ನು ಸಾಮಾನ್ಯವಾಗಿ ನೋಡುವ ರೀತಿಯ ಮೇಲೆ ಹೇಗೆ ಪ್ರಭಾವ ಬೀರಿತು ಎನ್ನುವುದನ್ನು ಲಾಹಿರಿಯವರು ಮಾರ್ಮಿಕವಾಗಿ ವಿವರಿಸುತ್ತಾರೆ. ಅಶೋಕನ ಕುರಿತು ವಸಾಹತುಶಾಹಿ ಪಾಂಡಿತ್ಯವು ವಿಶಾಲವಾಗಿ ಎರಡು ಬಗೆಯದ್ದು. ಮೊದಲನೆಯದುˌ ೧೮೩೭ ರಲ್ಲಿ ಜೇಮ್ಸ್ ಪ್ರಿನ್ಸೆಪ್, ಅಶೋಕ ನಿರ್ಮಿಸಿದ ಶಿಲಾಶಾಸನಗಳಲ್ಲಿ ಅಡಗಿರುವ ಜ್ಞಾನದ ಪೂಲ್ಗಳನ್ನು ನಿರ್ಮಿಸಿ, ಅಶೋಕನನ್ನು ಅನ್ಲಾಕ್ ಮಾಡಿದ ಕೀಲಿಯನ್ನು ಬಹಿರಂಗಪಡಿಸಿದನಂತೆ. ಆತ ಅಶೋಕನ ಶಾಸನಗಳನ್ನು ಓದಲು ಸಾಧ್ಯವಾಗುವಂತೆ ಲಿಪಿಯನ್ನು ಅರ್ಥೈಸಿಕೊಂಡ ಎನ್ನುತ್ತಾರೆ ಲಾಹಿರಿಯವರು. ಎರಡನೆಯದಾಗಿ, ಅಶೋಕ ಚಕ್ರವರ್ತಿಯ ಕುರಿತ ವಿದ್ವತ್ಪೂರ್ಣ ಬರಹಗಳನ್ನು ವಿನ್ಸೆಂಟ್ ಸ್ಮಿತ್ ಅವರು ಸಂಗ್ರಹಿಸಿˌ ಅಶೋಕ – ಭಾರತದ ಬೌದ್ಧ ಚಕ್ರವರ್ತಿ ಎಂಬ ಶೀರ್ಷಿಕೆಯಡಿಯಲ್ಲಿ ಒಟ್ಟುಗೂಡಿಸಿ ಬರೆದ ಮೊದಲ ಆಧುನಿಕ ಜೀವನಚರಿತ್ರೆಯಾಗಿದೆ. ಒಬ್ಬ ಸನ್ಯಾಸಿ ಮತ್ತು ರಾಜನ ಕರ್ತವ್ಯಗಳನ್ನು ತನ್ನಲ್ಲಿ ಸಂಯೋಜಿಸಿಕೊಂಡಿರುವ ಏಕೈಕ ದೊರೆ ಅಶೋಕನಾಗಿದ್ದು ಪೂರ್ವ ಅಥವಾ ಪಶ್ಚಿಮ ಜಗತ್ತಿನ ಬೇರಾವುದೇ ರಾಜ ಅಶೋಕನಿಗೆ ಸರಿಸಾಟಿಯಾಗುವುದಿಲ್ಲ ಎಂಬ ದೃಢವಾದ ನಂಬಿಕೆಯನ್ನು ವಿನ್ಸೆಂಟ್ ಸ್ಮಿತ್, ಹೊಂದಿದ್ದರು ಎನ್ನುತ್ತಾರೆ ಲಾಹಿರಿಯವರು.
![](https://pratidhvani.com/wp-content/uploads/2022/12/Samrat-Ashok-29.1.20-4.jpg)
ದೊರೆ ಅಶೋಕ ಮತ್ತು ಆತನ ಕಾಲದ ಶಿಲಾಶಾಸನಗಳನ್ನು ಇತಿಹಾಸ ಬರವಣಿಗೆಯ ಮೂಲಾಧಾರವಾಗಿ ಬಳಸುವ ಮೂಲಕ ಚಾರ್ಲ್ಸ್ ಅಲೆನ್ ತನ್ನ ಕೃತಿಯಲ್ಲಿ ಪ್ರಾಚೀನ ಭಾರತದ ಈ ಆಡಳಿತಗಾರನನ್ನು ನೈಜವಾಗಿ ಚಿತ್ರಿಸಿದ್ದಾನೆ. ಅದಷ್ಟೆ ಅಲ್ಲದೆ ಈಗ ಅಳಿವಿನಂಚಿನಲ್ಲಿರುವ ಮೌರ್ಯರು ಬಹುವಾಗಿ ಬಳಸಿದ ಬ್ರಾಹ್ಮಿ ಲಿಪಿಯನ್ನು ಬ್ರಿಟಿಷರು ಕಂಡುಹಿಡಿಯುವವರೆಗೂ ಮರೆತುಹೋಗಿತ್ತು ಎನ್ನುತ್ತಾರೆ ಲಾಹಿರಿಯವರು. ಹೀಗೆ ವಸಹಾತುಶಾಹಿ ಇತಿಹಾಸಕಾರರು ಅಶೋಕ ಮತ್ತು ಆತನ ಆಡಳಿತ ಹಾಗು ಧರ್ಮಕಾರ್ಯಗಳ ಮೇಲೆ ಮೌಲಿಕವಾದ ಬೆಳಕನ್ನು ಚೆಲ್ಲಿದ್ದಾರೆ ಎನ್ನುವುದು ಲಾಹಿರಿಯವರ ಅಭಿಮತವಾಗಿದೆ. ಅಶೋಕನ ಕುರಿತ ಅಧ್ಯಯನದಲ್ಲಿ ತಾನು ವೈಯಕ್ತಿಕವಾಗಿ ಗ್ರಹಿಸಿದ ಸಂಗತಿಯಂತೆ ಲಾಹಿರಿಯವರು ಅಶೋಕನನ್ನು ಒಬ್ಬ ಕ್ರಿಯಾಶೀಲ ಮತ್ತು ಚಿಂತನೆಯ ಪ್ರಪಂಚವನ್ನು ವ್ಯಾಪಿಸಬಲ್ಲ ಪುರಾತನ ರಾಜನೀತಜ್ಞನಾಗಿ ಗುರುತಿಸುತ್ತಾರೆ.
ಅಶೋಕ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದು, ಆತ ಒಬ್ಬ ಮಹಾನ್ ಚಕ್ರವರ್ತಿಯಾಗಿ ಕಳಿಂಗ ಯುದ್ದದಲ್ಲಿ ವ್ಯವಹರಿಸಿದ ರೀತಿ ಮತ್ತು ಅದರಿಂದ ತನ್ನ ಕೈಗಳಿಗೆ ಅಂಟಿದ ರಕ್ತದ ಕಲೆಯ ಅಪರಾಧಿಕ ಭಾವವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣದಿಂದ ನಮಗೆ ಕಲಿಯಲು ಸಾಕಷ್ಟು ಇದೆ ಎನ್ನುತ್ತಾರೆ ಲಾಹಿರಿಯವರು. ಹೀಗೆ ಮೌರ್ಯ ಸಾಮ್ರಾಟ್ ಅಶೋಕ ಒಬ್ಬ ಅಸಾಧಾರಣ ಚಕ್ರವರ್ತಿಯಾಗಿ ಬುದ್ಧನ ಅಹಿಂಸಾ ಧರ್ಮವನ್ನು ಸ್ವೀಕರಿಸುವ ಮೂಲಕ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುವ ದೊರೆಯಾಗಿ ಮಾರ್ಪಾಟಾಗಿರುವ ಘಟನೆ ತುಂಬಾ ಅಪರೂಪದ್ದು. ಆತ ಎರಡು ಸಾವಿರ ವರ್ಷಗಳ ಹಿಂದೆ ಬಹುತೇಕ ಭಾರತ ಭೂಮಿಯ ಚಕ್ರವರ್ತಿಯಾಗಿ ಜಾಗತಿಕ ಮಟ್ಟದಲ್ಲಿ ಸಹಬಾಳ್ವೆ ˌ ಶಾಂತಿ ಮತ್ತು ಸಹೋದರತೆಯ ರಾಯಭಾರಿಗಳನ್ನು ಕಳಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಜಗತ್ತಿನ ಮೊಟ್ಟಮೊದಲ ಶಾಂತಿಯ ಧರ್ಮದ ರಾಯಭಾರಿಯಾಗಿ ವಿಶ್ವ ಇತಿಹಾಸದಲ್ಲಿ ಸ್ಥಾನಪಡೆಯುತ್ತಾನೆ.