ಕಾಂಗ್ರೆಸ್, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ದೇಶದ ಚುನಾವಣೆಯಲ್ಲಿ ಹೊಡೆದಾಡುತ್ತಿದ್ದು ಗೊತ್ತಿರುವ ಸಂಗತಿ. ಗುಜರಾತ್ನಲ್ಲಿ ಭಾರೀ ಮಟ್ಟದಲ್ಲಿ ಗೆಲುವು ಸಾಧಿಸಿ ಕನಿಷ್ಠ ಪಕ್ಷ ವಿರೋಧ ಸ್ಥಾನಕ್ಕಾದರೂ ನಾವು ಬರುತ್ತೇವೆ ಎಂದುಕೊಂಡಿದ್ದ ಆಮ್ ಆದ್ಮಿ ಪಾರ್ಟಿ ಕೇವಲ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ಕೂಡ ವಿರೋಧ ಪಕ್ಷದ ಸ್ಥಾನಮಾನ ಕಳೆದುಕೊಳ್ಳುವಂತೆ ಮಾಡುವಲ್ಲಿ ಆಮ್ ಆದ್ಮಿ ಪಕ್ಷದ ಪಾಲು ಇದೆ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳಲೇ ಬೇಕು. ಯಾಕಂದರೆ ಆಮ್ ಆದ್ಮಿ ಪಾರ್ಟಿ ಬಿಜೆಪಿ, ಕಾಂಗ್ರೆಸ್ಗೆ ಪರ್ಯಾಯವಾಗಿ ದೇಶದಲ್ಲಿ ಬೆಳವಣಿಗೆ ಆಗ್ತಿದ್ದು, ಇದೀಗ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿದೆ.
ದೆಹಲಿ, ಪಂಜಾಬ್, ಗೋವಾ ಬಳಿಕ ಗುಜರಾತ್..!
ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿರುವ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್, ಆ ನಂತರ ಗುರಿಯಾಗಿಸಿಕೊಂಡಿದ್ದು ಪಕ್ಕದ ಪಂಜಾಬ್ ಅನ್ನು. ಆ ನಂತರ ಚುನಾವಣೆ ನಡೆದಾಗ ಗೋವಾದಲ್ಲೂ ಅಸ್ತಿತ್ವ ರೂಪಿಸಿಕೊಂಡಿತ್ತು. ಮೂರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ಮಾನ್ಯತೆ ಪಡೆದಿದ್ದ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಮೇಲ್ಪಂಕ್ತಿ ಪಡೆಯಲು ಬೇಕಿದ್ದದ್ದು ಕೇವಲ ಎರಡು ಸ್ಥಾನಗಳು ಮಾತ್ರ. ಇದೀಗ ಗುಜರಾತ್ನಲ್ಲಿ ಆಮ್ ಆದ್ಮಿ ಪಾರ್ಟಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಶೇಕಡ 12ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದಿರುವ ಕಾರಣ ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ಕೂಡ ಭಡ್ತಿ ಪಟಡೆದುಕೊಂಡಿದೆ.
ರಾಷ್ಟ್ರೀಯ ಪಕ್ಷವಾದಲು ಇರುವ ಅರ್ಹತೆ ಏನು..?
ಯಾವುದೇ ಒಂದು ಪಕ್ಷ ನೋಂದಣಿ ಆದ ಬಳಿಕ ಒಂದು ರಾಜ್ಯದಲ್ಲಿ ಕನಿಷ್ಟ 2 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಅಥವಾ ಚಲಾವಣೆಯಾಗಿರುವ ಒಟ್ಟು ಅಧಿಕೃತ ಮತಗಳಲ್ಲಿ ಕನಿಷ್ಠ ಪಕ್ಷ ಶೇಕಡ 6ರಷ್ಟು ಮತಗಳನ್ನು ಪಡೆದಿರಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿರಬೇಕು. ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಭರ್ಜರಿ ಜಯ ದಾಖಲಿಸಿ ಸರ್ಕಾರ ರಚನೆ ಮಾಡಿದ ಬಳಿಕ ಪಂಜಾಬ್ನಲ್ಲೂ ಸರ್ಕಾರ ರಚನೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಶೇಕಡ 6.77 ರಷ್ಟು ಮತಗಳನ್ನು ಪಡೆದು ಪ್ರಾದೇಶಿಕ ಪಾರ್ಟಿ ಅನ್ನೋ ಪಟ್ಟ ಪಡೆದುಕೊಂಡಿತ್ತು. ಇದೀಗ 4ನೇ ರಾಜ್ಯವಾಗಿ ಗುಜರಾತ್ನಲ್ಲಿ ಶೇಕಡ12ಕ್ಕಿಂತ ಹೆಚ್ಚು ಮತ ಹಾಗು 5 ಸ್ಥಾನಗಳಲ್ಲೂ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ.
ಬೇರೆ ಯಾವ ಪಕ್ಷಕ್ಕಿದೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ?
ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗುವ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಾವು ಗುಜರಾತ್ನಲ್ಲಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ. ಆದರೆ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಸ್ಥಾನ ಪಡೆದಿದೆ. ಈ ಮೂಲಕ ಅತೀ ವೇಗವಾಗಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿದ್ದು ಆಪ್ನ ಹೆಗ್ಗಳಿಕೆ ಎಂದಿದ್ದಾರೆ. ಇನ್ನು ದೇಶದಲ್ಲಿ 9ನೇ ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪಕ್ಷ ಸೇರ್ಪಡೆ ಆಗಿದೆ. ಇನ್ನುಳಿದಂತೆ ಕಾಂಗ್ರೆಸ್, ಬಿಜೆಪಿ, ಮಾಯಾವತಿ ನೇತೃತ್ವದ ಬಿಎಸ್ಪಿ, ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಿಪಿಐ ಮ್ಯಾಕ್ಸಿಸ್ಟ್, ಶರದ್ ಪವಾರ್ ಅವರ ಎನ್ಸಿಪಿ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಮೇಘಾಲಯ ಮೂಲದ ನ್ಯಾಷನಲ್ ಪೀಪಲ್ಸ್ ಪಾರ್ಟಿ ರಾಷ್ಟ್ರೀಯ ಪಕ್ಷಗಳಾಗಿವೆ.
ಆಮ್ ಆದ್ಮಿ ಕಾಂಗ್ರೆಸ್ಗೆ ಕಂಟಕ ಹೇಗೆ..?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರ ಇದ್ದಾಗ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮಣಿಸಿ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿದಿದೆ. ಆ ಬಳಿಕ ಗೋವಾದಲ್ಲೂ ಆಮ್ ಆದ್ಮಿ ಪಕ್ಷ ಅಖಾಡಕ್ಕೆ ಇಳಿದಿತ್ತು, ಬಿಜೆಪಿ ಪಕ್ಷ ಅಧಿಕಾರ ಹಿಡಿದಿದೆ. ಇದೀಗ ಗುಜರಾತ್ನಲ್ಲೂ ಶೇಕಡ 12ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿರುವುದು ಕಾಂಗ್ರೆಸ್ ಪಾಲಿಗೆ ದುಬಾರಿ ಆಗಿದೆ. ರಾಜ್ಯದಲ್ಲೂ ಆಮ್ ಆದ್ಮಿ ಇದೇ ರೀತಿ ಮತಗಳನ್ನು ಸೆಳೆದುಕೊಂಡರೆ ಕಾಂಗ್ರೆಸ್ ಪಾಲಿಕೆ ಕಂಟಕವಾಗಿಯೇ ಉಳಿಯುವ ಸಾಧ್ಯತೆಯಿದೆ. ಇದರ ಜೊತೆಗೆ ದೇಶದಲ್ಲಿ ಬಿಜೆಪಿಗೆ ಎದುರಾಳಿ ಆಮ್ ಆದ್ಮಿ ಎನ್ನುವ ಹಾಗೆ ಬೆಳೆಯುವ ಲಕ್ಷಣವೂ ಕಾಣಿಸುತ್ತಿದೆ.
ಕೃಷ್ಣಮಣಿ