ವೈದ್ಯಕೀಯ ಕ್ಷೇತ್ರದ ಎಲ್ಲರೂ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬುಧವಾರ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ನಾರಾಯಣ ದೇವಾಲಯ- ಉಚಿತ ನೇತ್ರ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ನಾರಾಯಣ ನೇತ್ರಾಲಯ ಒಂದು ಹೆಜ್ಜೆ ಮುಂದೆ ಹೋಗಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ. ಡಾ: ಭುಜಂಗ ಶೆಟ್ಟಿಯವರು ತಮ್ಮ ವೃತ್ತಿ ಯಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ಸು ಪಡೆದವರೆಲ್ಲಾ ಬದುಕಿನಲ್ಲಿ ಸಮಾಜಕ್ಕೆ ಹಿಂತಿರುಗಿಸಿ ನೀಡಬೇಕೆಂಬ ಸಣ್ಣ ಗುಣಧರ್ಮವಿದ್ದರೆ , ಈ ಜಗತ್ತು ಇನ್ನಷ್ಟು ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಶ್ರೀಮಂತಿಕೆನಿರುವುದಿಲ್ಲ. ಅಂತಿಮವಾಗಿ ನಮ್ಮ ದುಡಿಮೆ, ಶ್ರೀಮಂತಿಕೆ ಸೃಷ್ಟಿಗೆ ಸೇರಿದ್ದು. ನಾವು ಸೃಷ್ಟಿಯ ಭಾಗವಷ್ಟೇ. ಭುಜಂಗಶೆಟ್ಟಿ ಯವರಿಗೆ ನಾನು ಎನ್ನುವ ಭಾವವಿಲ್ಲ. ಕೃತಿಯಲ್ಲಿ ಮಾಡುವ ದೊಡ್ಡ ಗುಣ ಅವರು ಹಾಗೂ ಅವರ ಕುಟುಂಬದವರಿಗೆ ಇದೆ.
ನಮ್ಮ ಸರ್ಕಾರ ಕಣ್ಣಿನ ಚಿಕಿತ್ಸೆಗೆ ಯೋಜನೆ ರೂಪಿಸಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ, ಚಿಕಿತ್ಸೆ, ಉಚಿತ ಕನ್ನಡಕ ನೀಡುವ ಯೋಜನೆ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ಡಾ.ಭುಜಂಗಶೆಟ್ಟಿ ಅವರು ಮೆಂಟರ್ ಆಗಿ ಬರಬೇಕು. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಿದೆ.

ಕಿವಿಯ ಸಮಸ್ಯೆಗೆ ಕಾಕ್ಲಿಯರ್ ಇಂಪ್ಲಾಂಟ್ ಮಾಡುವ ಯೋಜನೆ 500 ಕೋಟಿ ರೂ.ಗಳ ಯೋಜನೆ ರೂಪಿಸಿದ್ದೇವೆ. ನಮ್ಮ ಸರ್ಕಾರ ಅತ್ಯಂತ ಸೂಕ್ಷ್ಮ ವಿಚಾರಗಳ ಕಡೆಗೆ ಹೆಚ್ಚಿನ ಗಮನ ನೀಡಿದ್ದೇವೆ.ಡಯಾಲಿಸಿಸ್ ಸೈಕಲ್ ನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 12 ಹೊಸ ಕೇಂದ್ರಗಳನ್ನು ತೆರೆದು ಕೀಮೋಥೆರಪಿ ಸೈಕಲ್ ಗಳನ್ನು ದುಪ್ಪಟ್ಟು ಮಾಡಲಾಗಿದೆ.
ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಪ್ರರಿ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಕೈಗೊಳ್ಳಲು ಆದೇಶ ಹೊರಡಿಸಿದೆ. 100 ಪಿ.ಹೆಚ್.ಸಿ ಕೇಂದ್ರಗಳನ್ನು ಸಿ.ಹೆಚ್.ಸಿ ಕೇಂದ್ರಗಳಾಗಿ ತಲಾ 10.ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿ ಅವರು ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷ ರೂವರೆಗೂ ಬಡವರ ಚಿಕಿತ್ಸೆಗಾಗಿ ಜಾರಿಗೊಳಿಸಿದ್ದಾರೆ. ರಾಜ್ಯ ದಲ್ಲಿ 5 ಕೋಟಿ ಕಾರ್ಡುಗಳನ್ನು ನೀಡುವ ಗುರಿ ಇದ್ದು, ಈಗಾಗಲೇ ಒಂದು ಕೋಟಿ ಕಾರ್ಡ್ ನೀಡಿದ್ದೇವೆ. ಇದೊಂದು ಕಡೆಯಾದರೆ, ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಇಲ್ಲದೆ ನೇರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕಾದರೆ ಅವರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುವುದು ಮುಖ್ಯ ಎಂದು ಹೇಳಿದ್ದಾರೆ.