• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

EWS ಕೋಟಾದಲ್ಲಿ ಮೀಸಲಾತಿ ಪಡೆಯುವಾಗ ಮೆರಿಟ್ ಗೆ ಅನ್ಯಾಯ ಆಗೊದಿಲ್ವೆ?

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
November 24, 2022
in ಅಭಿಮತ
0
EWS ಕೋಟಾದಲ್ಲಿ ಮೀಸಲಾತಿ ಪಡೆಯುವಾಗ ಮೆರಿಟ್ ಗೆ ಅನ್ಯಾಯ ಆಗೊದಿಲ್ವೆ?
500
VIEWS
Share on WhatsAppShare on FacebookShare on Telegram

ಭಾರತೀಯ ಸಾಮಾಜಿಕ ಸಂರಚನೆಯಲ್ಲಿ ಅಡಗಿರುವ ಜಾತಿ ವ್ಯವಸ್ಥೆಯ ಅನ್ಯಾಯ ಮತ್ತು ದೌರ್ಜನ್ಯಗಳ ಕುರಿತು ಮೇಲ್ಜಾತಿಯವರಿಗೆ ತಿಳಿದಿಲ್ಲವೆಂತಲ್ಲ. ಬಹುಶಃ ಅವರಿಗೆ ಅದರ ಕುರಿತು ಚೆನ್ನಾಗಿ ಗೊತ್ತಿದೆ ಮತ್ತು ಆ ಶ್ರೇಣೀಕೃತ ವ್ಯವಸ್ಥೆ ಮುಂದುವರಿಯಬೇಕೆಂದು ಬಯಸುತ್ತಾರೆ. ಈ ಸಾಮಾಜಿಕ ತಾರತಮ್ಯವನ್ನು ಸರಿದೂಗಿಸಲೆಂದು ತರಲಾದ ಮೀಸಲಾತಿ ವ್ಯವಸ್ಥೆಯನ್ನು ಉದ್ದಕ್ಕೂ ದ್ವೇಷಿಸಿದ ಮೇಲ್ವರ್ಗದವರು ಅದರಿಂದ ಪ್ರತಿಭೆಗೆ ಅನ್ಯಾಯವಾಗುತ್ತದೆಂದು ಆರೋಪಿಸುತ್ತ ಬಂದಿದ್ದಾರೆ. ಈಗ ಇವಿಎಸ್ ಕೋಟಾದಲ್ಲಿ ಸೀಟು/ಉದ್ಯೋಗ ಪಡೆಯುವಾಗ ಮೇಲ್ವರ್ಗದ ಪ್ರತಿಭಾವಂತ ಶ್ರೀಮಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಿಲ್ಲವೆ? ಅದರ ಬಗ್ಗೆ ಯಾಕೆ ಮೇಲ್ವರ್ಗದ ಜಾತಿವಾದಿಗಳು ಬಾಯಿ ಬಿಡುತ್ತಿಲ್ಲ? ಬ್ರಾಹ್ಮಣರ ನಿಯಂತ್ರಣದಲ್ಲಿರುವ ಮೋದಿ ಸರಕಾರ ತರಲಾದ ಈ ಇವಿಎಸ್ ಮೀಸಲಾತಿಯನ್ನು ಇತ್ತೀಚಿಗೆ ಸರ್ವೋಚ್ಛ ನ್ಯಾಯಾಲಯ ಕೂಡ ಎತ್ತಿಹಿಡಿದು ಸಂವಿಧಾನದ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೂಲ ಆಶಯವನ್ನೆ ಬುಡಮೇಲು ಮಾಡಿದೆ. 

ಇವಿಎಸ್ ಮೀಸಲಾತಿಯೊಳಗೆ ಅಡಗಿರುವ ವ್ಯಂಗ್ಯ ಮತ್ತು ಅಸಂಗತಗಳನ್ನು ಅಂಕಣಕಾರ ಅಪೂರ್ವಾನಂದ ಅವರು ಇದೇ ನವಂಬರ್ ೧೪ˌ ೨೦೨೨ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಮಾರ್ಮಿಕವಾಗಿ ವಿಮರ್ಶಿಸಿದ್ದಾರೆ. ಆ ಅಂಕಣದಲ್ಲಿ ವಿವರಿಸಲಾದ ಸಂಗತಿಗಳನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಅಪೂರ್ವಾನಂದ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಷಯದ ಭೋದಕರಾಗಿದ್ದಾರೆ. ಇವಿಎಸ್ ಮೀಸಲಾತಿಯ ಅಸಂಗತೆಯನ್ನು ಪೂರ್ವಾನಂದ ಅವರು ಒಂದು ಕತೆಯ ಮೂಲಕ ವಿವರಿಸುತ್ತಾರೆ. ದೆಹಲಿ ಮೆಟ್ರೋ ರೈಲುಗಳಲ್ಲಿ ಎರಡು ಕೋಚ್‌ಗಳು ಮಹಿಳೆಯರು ಮತ್ತು ಹುಡುಗಿಯರಿಗೆ ಮೀಸಲಿಡಲಾಗಿದೆಯಂತೆ. ಅವುಗಳಲ್ಲಿ ಪುರುಷ ಪ್ರಯಾಣಿಕರು ಹತ್ತುವಂತಿಲ್ಲ. ಅಷ್ಟೇ ಅಲ್ಲದೆ, ಸಾಮಾನ್ಯ ವರ್ಗದ ಕೋಚ್‌ಗಳಲ್ಲೂ ಕೂಡ ಮಹಿಳೆಯರಿಗೆ ಕೆಲವು ಆಸನಗಳನ್ನು ಮೀಸಲಿಡಲಾಗಿದೆ. ಆದ್ದರಿಂದ, ಮಹಿಳೆಯರು ಮೆಟ್ರೋದಲ್ಲಿ ‘ಡಬಲ್ ಮೀಸಲಾತಿ’ ಆನಂದಿಸುತ್ತಾರೆ. 

ಅನೇಕ ಬಾರಿ ಪುರುಷರು ಸಾಮಾನ್ಯ ಬೋಗಿಗಳಲ್ಲಿ ಹತ್ತುವ ಮಹಿಳಾ ಪ್ರಯಾಣಿಕರಿಗೆ ತಮಗೆ ಮೀಸಲಿರುವ ಕೋಚ್‌ಗಳಿಗೆ ಹೋಗುವಂತೆ ಅವಹನೆಯಿಂದ ಆದೇಶಿಸುವುದನ್ನು ನಾವು ಕೇಳುತ್ತೇವೆ. ಆಗ ಆ ಮಹಿಳಾ ಪ್ರಯಾಣಿಕರು ಇದು “ಪುರುಷರಿಗೆ ಮಾತ್ರ” ಮೀಸಲಿಲ್ಲ, ಮಹಿಳೆಯರಿಗೆ ಅಲ್ಲಿರಲು ಹಕ್ಕಿದೆ ಎಂದು ತಕ್ಷಣ ಉತ್ತರಿಸುತ್ತಾರೆ. ಬಡ ಪುರುಷ ಪ್ರಯಾಣಿಕರಿಗಾಗಿ ಕೆಲವು ಬೋಗಿಗಳು ಮೀಸಲಿಡುವುದನ್ನು ನೀವು ಊಹಿಸಬಲ್ಲಿರಾ? ಆಗ ಇತರ ಶ್ರೀಮಂತ ಪುರುಷರು ಅದನ್ನು ತಕ್ಷಣಕ್ಕೆ ವಿರೋಧಿಸುತ್ತಾರೆ. ಅಗತ್ಯವಿದ್ದರೆ ಆ ಬಡವರಿಗೆ ಟಿಕೆಟ್ ಖರೀದಿಸಲು ಹಣ ಸಂದಾಯ ಮಾಡಿ, ಆದರೆ ಅವರಿಗೆ ಪ್ರತ್ಯೇಕ ಬೋಗಿ ಕಲ್ಪಿಸಿ ಅದರಿಂದ ನಮ್ಮನ್ನು ಏಕೆ ಹೊರಗೆ ಇಡುತ್ತೀರಿ ಎಂದು ಖಂಡಿತ ಪ್ರಶ್ನಿಸುತ್ತಾರೆ. ಇದು ಅಪೂರ್ವಾನಂದ ಅವರು ಮೀಸಲಾತಿ ಕುರಿತು ವಿವರಿಸಿದ ಅರ್ಥಪೂರ್ಣ ಕಥಾನಕ. 

ಒಮ್ಮೆ ಅಪೂರ್ವಾನಂದರ ಸಹೋದ್ಯೋಗಿಯೊಬ್ಬ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಪ್ರವೇಶಕ್ಕಾಗಿ ಸಂದರ್ಶನ ಮುಗಿಸಿ ಹಿಂದಿರುಗಿದ ನಂತರ, ಹೀಗೆ ಗೊಣಗಿದನಂತೆ: “ಈಗಾಗಲೇ ಅವರಿಗೆ ಪ್ರತ್ಯೇಕ ಮೀಸಲಾತಿ ಕೋಟಾ ಇರುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದಲ್ಲಿ ಪ್ರವೇಶಕ್ಕಾಗಿ ಏಕೆ ಪರಿಗಣಿಸಬೇಕು? ಅವರಿಗಾಗಿಯೇ ಪ್ರತ್ಯೇಕ ಜಾಗ ಕಲ್ಪಿಸಿರುವಾಗ ಬೇರೆಯವರ ಜಾಗವನ್ನು ಏಕೆ ಒತ್ತುವರಿ ಮಾಡಿಕೊಳ್ಳಬೇಕು?” ತಮ್ಮ ಈ ಸಹೋದ್ಯೋಗಿ ಸಾಂದರ್ಭಿಕವಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೂ, ಸಾಮಾನ್ಯ ರೈಲು ಕೋಚ್ ಎಲ್ಲರಿಗಾಗಿ ಇರುತ್ತದೆ ಎಂದು ಏಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಅಪೂರ್ವಾನಂದರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮೀಸಲಾತಿಯ ಬಗ್ಗೆ ಪೂರ್ವಾಗ್ರಹ ಹೊಂದಿರುವ ಮೇಲ್ವರ್ಗದ ಜನರು ಈಗ ಇವಿಎಸ್ ಮೀಸಲಾತಿ ಹೊಡೆದುಕೊಂಡು ಮುಗುಮ್ಮಾಗಿ ಕುಳಿತಿದ್ದಾರೆ.

ರೈಲು ಬೋಗಿಗಳಲ್ಲಿ ಕೆಲವು ಕೋಚ್‌ಗಳನ್ನು ಮಹಿಳೆಯರಿಗಾಗಿ ಏಕೆ ಮೀಸಲಿಡಬೇಕು? ಪುರುಷ ಪ್ರಯಾಣಿಕರು ೧೦ ಕೋಚ್‌ಗಳಲ್ಲಿ ಎಂಟಕ್ಕೆ ಮಾತ್ರ ಏಕೆ ತೃಪ್ತರಾಗಬೇಕು ಮತ್ತು ಸಾಮಾನ್ಯ ಕೋಚ್‌ಗಳಲ್ಲಿ ಮಹಿಳೆಯರ ಪ್ರಯಾಣವನ್ನು ಏಕೆ ಸಹಿಸಿಕೊಳ್ಳಬೇಕು? ಇದು ಪುರುಷ ಪ್ರಯಾಣಿಕರ ಹಕ್ಕುಗಳನ್ನು ಕಸಿದುಕೊಂಡತ್ತಲ್ಲವೆ? ಭಾರತದಲ್ಲಿ ಮೀಸಲಾತಿ ಕುರಿತು ೧೦೦ ವರ್ಷಗಳಿಂದಲೂ ಈ ಬಗೆಯ ಚರ್ಚೆ ನಡೆಯುತ್ತಲೆಯಿದೆ, ಆದರೆ “ಪುರುಷರು” ಅಂದರೆ “ಮೇಲ್ವರ್ಗದವರು” ತಮ್ಮಿಂದ ಕೆಲವು ರೈಲು ಕೋಚ್‌ಗಳನ್ನು ಏಕೆ ಕಸಿದುಕೊಳ್ಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ರೈಲು ಪ್ರಯಾಣದಿಂದ ಯಾವಾಗಲೂ ಹೊರಗುಳಿದಿರುವವರನ್ನು ಸುಲಭವಾಗಿ ರೈಲಿನಲ್ಲಿ ಪ್ರಯಾಣಿಸುವಂತೆ ಮಾಡಲು ಸರಕಾರ ಏಕೆ ಮಧ್ಯಪ್ರವೇಶಿಸಬೇಕಾಯಿತು ಎನ್ನುವುದನ್ನು ಮೇಲ್ವರ್ಗದವರು ಅರ್ಥಮಾಡಿಕೊಳ್ಳಬೇಕು. ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ದುಡಿಯುತ್ತಾರೆ, ಅನೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರು ಕೂಡ, ಆದರೂ ಅವರಿಗೆ ಪುರುಷರೇ ತುಂಬಿದ ರೈಲು ಬೋಗಿಗಳಲ್ಲಿ ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ ಎಂದು ನಮಗೆ ತಿಳಿದಿದೆ ಎನ್ನುತ್ತಾರೆ ಅಪೂರ್ವಾನಂದ.

ಮಹಿಳೆಯು ಒಂದುವೇಳೆ ಸಾಮಾನ್ಯ ರೈಲು ಬೋಗಿಗಳಲ್ಲಿ ಪ್ರಯಾಣಿಸಿದರೆ ಪುರುಷ ಪ್ರಯಾಣಿಕರಿಂದ ಲೈಂಗಿಕ ಶೋಷಣೆಗೊಳಗಾಗುವ ಎಲ್ಲ ಸಾಧ್ಯತೆಗಳು ಇರುತ್ತದೆ. ಮಹಿಳೆಯರ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಅವರನ್ನು ಈ ಅಪಾಯದಿಂದ ಇನ್ನೂ ಸಂಪೂರ್ಣವಾಗಿ ಮುಕ್ತಗೊಳಿಸಿಲ್ಲ. ಮೆಟ್ರೋ ಅಧಿಕಾರಿಗಳು ಯಾವತ್ತಾದರೂ ಮಹಿಳೆಯರಿಗಾಗಿ ಮೀಸಲಿರುವ ಈ ಕಾಯ್ದಿರಿಸುವಿಕೆ ವ್ಯವಸ್ಥೆಗೆ ಮುಕ್ತಾಯ ದಿನಾಂಕವನ್ನು ನಿಗದಿಪಡಿಸಬಹುದೇ ಎಂದು ಅಪೂರ್ವಾನಂದ ಅವರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ನಡೆಯುವ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯ ನಂತರ, ೬೦ ಅಂಕಗಳನ್ನು ಗಳಿಸಿದ ನಂತರವೂ ನನಗೆ ಪ್ರವೇಶ ಸಿಗಲಿಲ್ಲ ಮತ್ತು ಕೇವಲ ೪೦ ಅಂಕ ಗಳಿಸಿದ “ಆ ಜನರು” ಸೀಟು/ಕೆಲಸ ಪಡೆದರು ಎಂಬ ಮೇಲ್ವರ್ಗದವರ ಗೊಣಗಾಟ ಕೇಳಿಬರುತ್ತದೆ. ಈಗ ಇವಿಎಸ್ ಮೀಸಲಾತಿಯಿಂದ ವಾರ್ಷಿಕ ೮ ಲಕ್ಷ ರೂಪಾಯಿ ಆದಾಯ ಮಿತಿ ಹೊಂದಿರುವ ೪೦ ಅಂಕ ಪಡೆದ ಮೇಲ್ವರ್ಗದ ಅಭ್ಯರ್ಥಿಯಿಂದ ೮ ಲಕ್ಷ ಆರ್ಥಿಕ ಮಿತಿ ದಾಟಿದ ೬೦ ಅಂಕ ಗಳಿಸಿದ ಮೇಲ್ವರ್ಗದ ಮೇರಿಟ್ ಅಭ್ಯರ್ಥಿಗೆ ಈಗ ಅನ್ಯಾಯ ಆಗುವುದಿಲ್ಲವೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಇವಿಎಸ್ ಮೀಸಲಾತಿಯಿಂದ ಇಲ್ಲಿ ಪ್ರತಿಭೆಗೆ ಅಘಾದವಾದ ಅನ್ಯಾಯವಾಗುತ್ತದೆ.

ಮೀಸಲಾತಿಯಿಂದ ಪ್ರತಿಭೆಗೆ ಅನ್ಯಾಯವಾಗುತ್ತದೆ ಎನ್ನುವ ಈ ವಾದದ ಹಿಂದೆ ‘ಮೆರಿಟ್’ ಎಂಬುದು ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ವೈಯಕ್ತಿಕ ಲಕ್ಷಣ ಎಂಬ ತಪ್ಪು ತಿಳುವಳಿಕೆ ಇದೆ. ಈ ‘ಮೆರಿಟ್’ ಹೆಚ್ಚಾಗಿ ಕೋಚಿಂಗ್‌ ಕ್ಲಾಸ್ ಗಳಲ್ಲಿ ಉತ್ಪಾದಿಸಲಾಗುತ್ತದೆ ಎಂಬುದನ್ನು ನಾವು ಮರೆತಿದ್ದೇವೆ. ನಮ್ಮ ಮಕ್ಕಳನ್ನು ತರಬೇತಿ ಶಾಲೆಗಳಿಗೆ ಸೇರಿಸಲು ನಮ್ಮಲ್ಲಿ ಸಾಕಷ್ಟು ಹಣವೂ ಬೇಕು. ಕೋಚಿಂಗ್ ಸಂಸ್ಥೆಗಳಲ್ಲಿ ಜಾತಿ ಸಮೀಕ್ಷೆ ನಡೆದಿದೆಯೇ? ಈ ಕೋಚಿಂಗ್ ಪ್ರಪಂಚವನ್ನು ಯಾವ ಜಾತಿಯ ಜನರು ಜನಪ್ರಿಯಗೊಳಿಸುತ್ತಿದ್ದಾರೆ? ಒಬ್ಬ ವ್ಯಕ್ತಿಯ ‘ಮೆರಿಟ್’ಗೆ ಆರ್ಥಿಕ, ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಈ ಎಲ್ಲಾ ರೀತಿಯ ಗಣನೀಯ ಹೂಡಿಕೆಯ ಅಗತ್ಯವಿದೆ ಎಂದು ನಮಗೆ ತಿಳಿದಿದೆ. ಒಂದು ತಲೆಮಾರಿನ ಪ್ರತಿಭೆಯ ಹಿಂದೆ ಹಲವು ತಲೆಮಾರುಗಳ ಹೂಡಿಕೆ ಇರುತ್ತದೆ. ಆದರೂ ‘ನಮ್ಮ’ ಪ್ರತಿಭೆಯನ್ನು ನಮ್ಮದೇ ಸಾಧನೆ ಎಂದು ನಾವು ಪರಿಗಣಿಸುತ್ತೇವೆ. ನಾವು ಎಲ್ಲಿ ಹುಟ್ಟಿದ್ದೇವೆ ಮತ್ತು ಎಲ್ಲಿ ವಾಸಿಸುತ್ತಿದ್ದೇವೆ ಎಂಬುದರ ನಡುವೆ ಏನಾದರೂ ಸಂಬಂಧವಿದೆಯೆ ಎಂದು ನಾವು ಯಾವತ್ತೂ ಯೋಚಿಸುವುದಿಲ್ಲ ಎನ್ನುವುದು ಅಪೂರ್ವಾನಂದರ ಯೋಚನೆಯಾಗಿದೆ. 

ಹೌದು, ಸಾಮಾಜಿಕ ಅಸಮಾತನತೆಯನ್ನು ಸರಿಪಡಿಸಲು ತರಲಾದ ಕೇವಲ ೭೦ ವರ್ಷಗಳ ಈ ಮೀಸಲಾತಿ ವ್ಯವಸ್ಥೆಯಿಂದ ಇಷ್ಟೊಂದು ಹತಾಷಗೊಂಡಿರುವವರು ಶತಮಾನಗಳಿಂದ ಅಸ್ಥಿತ್ವದಲ್ಲಿರುವ ಸಾಮಾಜಿಕ ಅಸಮಾನತೆಯ ನೋವನ್ನು ಅನುಭವಿಸಿದವರು ಎಷ್ಟು ಹತಾಷೆಗೊಳ್ಳಬೇಕು? ೪೦ ಅಂಕ ಪಡೆಯುವ ಮೀಸಲು ಅಭ್ಯರ್ಥಿಗಳು ಎಂದಿಗೂ ೬೦ ಅಂಕ ಪಡೆದ ಸಾಮಾನ್ಯ ಅಭ್ಯರ್ಥಿಯೊಂದಿಗೆ ಸ್ಪರ್ಧಿಸುವುದಿಲ್ಲ ಎನ್ನುವ ಸಂಗತಿ ಮರೆಮಾಚಲಾಗುತ್ತದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ೧೦೦% ಸ್ಥಾನಗಳಿಗೆ ಸ್ಪರ್ಧಿಸುವುದಿಲ್ಲ, ಅವರು ಕೇವಲ ೧೫% ಸ್ಥಾನಗಳಿಗೆ, ಎಸ್‌ಟಿ ಅಭ್ಯರ್ಥಿಗಳು ಕೇವಲ ೭.೫% ಸ್ಥಾನಗಳಿಗೆ ಮತ್ತು ಒಬಿಸಿಗಳು ೨೭% ಸ್ಥಾನಗಳಿಗೆ ಸ್ಪರ್ಧಿಸುತ್ತಾರೆ. ಇವರೆಲ್ಲರ ಸ್ಪರ್ಧೆಯು ಒಟ್ಟು ಸ್ಥಾನಗಳ ೪೯.೫% ಗೆ ಸೀಮಿತವಾಗಿದೆಯೆ ಹೊರತು ಉಳಿದ ಶೇ. ೫೦ ರಷ್ಟು ಸ್ಥಾನಗಳಿಗೆ ಅಲ್ಲ. ೪೯.೫% ಮೀಸಲು ಸ್ಥಾನಗಳಿಗೆ ಇರುವ ಅರ್ಹತೆಯುˌ ೫೦% ಸಾಮಾನ್ಯ ಅಭ್ಯರ್ಥಿಗಳಿಗೆ ಕಾಯ್ದಿರಿಸದ ಸ್ಥಾನಗಳಿಗೆ ಸಮಾನವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎನ್ನುವುದು ಅಪೂರ್ವಾನಂದರ ಅಭಿಮತವಾಗಿದೆ.

ಮೀಸಲಾತಿ ವ್ಯವಸ್ಥೆಯಡಿಯಲ್ಲಿ  ಸಮಾನ ಅವಕಾಶಗಳು ಹೊಂದಿರುವ ಜನರ ನಡುವೆ ಮಾತ್ರ ಸ್ಪರ್ಧೆ ಏರ್ಪಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಸಮಾನತೆಯನ್ನು ವ್ಯಾಖ್ಯಾನಿಸುವುದು ಕೆಲವೊಮ್ಮೆ ಸುಲಭದ ಕಾರ್ಯವಲ್ಲ. ಶತಶತಮಾನಗಳಿಂದ ಶಿಕ್ಷಣದಿಂದ ವಂಚಿಸಲ್ಪಟ್ಟ, ಶಾಲೆಗಳಲ್ಲಿ ಸಾಮಾನ್ಯ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕೆ ಥಳಿತಕ್ಕೊಳಪಡುವ, ತಮ್ಮ ಮದುವೆಯಲ್ಲಿ ಕುದುರೆ ಸವಾರಿ ಮಾಡಿದ್ದಕ್ಕೆ ಹಲ್ಲೆಗೊಳಗಾಗುವ ಹಾಗು ಇಂದಿಗೂ ಮಂದಿರಗಳಲ್ಲಿ ಪ್ರವೇಶ ನಿರಾಕರಿಸಲ್ಪಡುವ ಸಮುದಾಯಗಳನ್ನು ಎಂದೆಂದಿಗೂ ತಮಗೆ ಸಮಾನರೆಂದು ಪರಿಗಣಿಸಲು ಸಿದ್ಧರಿಲ್ಲದ ಮೇಲ್ಜಾತಿಯ ಜನರು ಶಿಕ್ಷಣದ ಪ್ರವೇಶ ಮತ್ತು ಉದ್ಯೋಗಗಳಲ್ಲಿ ಮಾತ್ರ ಅವರನ್ನು ತಮಗೆ ಸಮಾನವಾಗಿ ಪರಿಗಣಿಸಬೇಕೆಂದು ಬಯಸುತ್ತಾರೆ. 

ದೇಶದ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟಿರುವ ಜನರು ೧೦೦% ಸಾರ್ವಜನಿಕ ಹುದ್ದೆಗಳನ್ನು ತಾವೇ ಆಕ್ರಮಿಸಿಕೊಳ್ಳಲು ಬಯಸುತ್ತಾರೆ. ಈಗಾಗಲೆ ದೇಶದ ಬಹುತೇಕ ಭೂಮಾಲಿಕತ್ವ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳನ್ನು ಅನ್ಯಾಯವಾಗಿ ಆಕ್ರಮಿಸಿಕೊಂಡಿರುವ ಮೇಲ್ವರ್ಗದವರು, ಆಧುನಿಕ ಕಾಲದಲ್ಲೂ ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೆ ಪ್ರಾಬಲ್ಯವಿರಬೇಕೆಂದು ಬಯಸುತ್ತಾರೆ. ಈಗಾಗಲೆ ನ್ಯಾಯಾಂಗದಲ್ಲಿ, ಸರಕಾರಿ ಉದ್ಯೋಗದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, ಮಾಧ್ಯಮಗಳಲ್ಲಿ ಮತ್ತು ಇತರ ಎಲ್ಲಾ ಕ್ಷೇತ್ರಗಳಲ್ಲಿ ಮೇಲ್ವರ್ಗದವರೆ ಪ್ರಾಬಲ್ಯ ಹೊಂದಿದ್ದಾರೆ ಎನ್ನುತ್ತಾರೆ ಅಪೂರ್ವಾನಂದ ಅವರು.

ನಾವು ಒಮ್ಮೆ ಪ್ರಾಮಾಣಿಕವಾಗಿ ಯೋಚಿಸಬೇಕಿದೆ. ಮೀಸಲಾತಿ ಇಲ್ಲದಿದ್ದರೆ ದಲಿತ-ದಮನಿತರು ಸರಕಾರಿ ಉದ್ಯೋಗ ಪಡೆಯಲು ಸಾಧ್ಯವಿತ್ತೆ? ಆಯ್ಕೆ ಸಮಿತಿಗಳಲ್ಲಿ ಮೀಸಲು ವರ್ಗಗಳ ಪ್ರತಿನಿಧಿಗಳು ಇಲ್ಲದಿದ್ದರೆ ಆಯ್ಕೆಯು ನ್ಯಾಯಯುತವಾಗಿರುತ್ತದೆಯೇ? ಮೀಸಲಾತಿ ಸೀಟು/ಹುದ್ದೆಗಳಿಗೆ ಅಭ್ಯರ್ಥಿಗಳು ಸೂಕ್ತ ಅಥವಾ ಅರ್ಹರಲ್ಲ ಎಂದು ಘೋಷಿಸಿದ ದಿನಗಳು ನಮಗೆ ಇನ್ನೂ ನೆನಪಿದೆ, ಆದ್ದರಿಂದ ಮುಂದಿನ ಹಂತದಲ್ಲಿ ಮೀಸಲು ಸೀಟುಗಳು ಸಾಮಾನ್ಯ ವರ್ಗಕ್ಕೆ ಹೋಗಬಹುದು. ಮೀಸಲು ವರ್ಗಗಳಲ್ಲಿ ಅರ್ಹ ಅಭ್ಯರ್ಥಿಗಳಿಲ್ಲ ಎಂಬ ನೆಪದಲ್ಲಿ  ಆ ಸೀಟು/ಹುದ್ದೆಗಳನ್ನು ಹಾಗೆ ಖಾಲಿ ಉಳಿಸಿಕೊಳ್ಳಬಹುದೆ? ಈ ಮೇಲ್ಜಾತಿ ಜನರ ಕುತಂತ್ರವನ್ನು ಪರಿಗಣಿಸಿಯೇ ಮೀಸಲು ಸ್ಥಾನಗಳನ್ನು ಸಾಮಾನ್ಯ ವರ್ಗದ ಸೀಟುಗಳಾಗಿ ಪರಿವರ್ತಿಸಲು ಸಾಧ್ಯವೇ ಇಲ್ಲ ಎಂಬ ಕಾನೂನನ್ನು ರೂಪಿಸಲಾಯಿತು. ಆ ಕಾರಣದಿಂದಲೆ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಹುದ್ದೆಗಳನ್ನು ತುಂಬಲು ಒತ್ತಾಯಿಸುವುದನ್ನು ನಾವು ನೋಡಿದ್ದೇವೆ. ಇಲ್ಲದಿದ್ದರೆ ಮೀಸಲಾತಿಯ ಮೂಲ ಉದ್ದೇಶವೆ ಈ ಮೇಲ್ವರ್ಗದ ಜನ ಬುಡಮೆಲು ಮಾಡುತ್ತಿದ್ದರು ಎನ್ನುವುದು ಅಪೂರ್ವಾನಂದರ ಕಾಳಜಿಯಾಗಿದೆ.

ಇವಿಎಸ್ ಹೆಸರಿನಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಆಯ್ದ ‘ಮೇಲ್ವರ್ಗದ’ ಜಾತಿಗಳಿಗೆ ೧೦% ಮೀಸಲಾತಿ ನೀಡಿರುವುದರ ಒಳಾರ್ಥವೆಂದರೆ ಈ ಸ್ಥಾನಗಳು ಎಲ್ಲಾ ಮೇಲ್ಜಾತಿಯ ಅಥವಾ ‘ಸಾಮಾನ್ಯ’ ಅಭ್ಯರ್ಥಿಗಳಿಗೆ ಲಭ್ಯವಿಲ್ಲ. ಆದರೆ ಈ ಸ್ಥಾನಗಳು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿರುವವರಿಗೆ ಅವರು ಮೀಸಲು ಎಂದು ಕರೆಯಲ್ಪಡುವ ವರ್ಗಗಳಿಗೆ ಸೇರಿದ್ದರೂ ಸಹ ಅಲಭ್ಯವಾಗಿವೆ. ಉದಾಹರಣೆಗೆ ಲಿಂಗಾಯತರು ಮತ್ತು ವಕ್ಕಲಿಗರು ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗದಲ್ಲಿ ಮತ್ತು ಸಾಮಾನ್ಯ ವರ್ಗದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ಅವರು ಇವಿಎಸ್ ಕೋಟಾದಡಿಯಲ್ಲಿ ಸ್ಪರ್ಧಿಸಲು ಅರ್ಹರಲ್ಲ. 

ಈ ಇವಿಎಸ್ ಮೀಸಲಾತಿ ಬಗ್ಗೆ ಮೇಲ್ವರ್ಗದವರು ಗಲಾಟೆ ಮಾಡದಿರುವುದು ಇದೇ ಕಾರಣದಿಂದ. ಇಲ್ಲಿ ಪ್ರತಿಭೆಗೆ ಅನ್ಯಾಯವಾಗುತ್ತಿದೆ ಎಂಬ ಕೊರಗಾಗಲಿ ಅಥವಾ ಕೂಗಾಗಲಿ ಕೇಳಿಸುತ್ತಿಲ್ಲ. ಕಡಿಮೆ ಅಂಕ ಗಳಿಸುವ ಅಭ್ಯರ್ಥಿಗಳು ಈ ೧೦% ಮೀಸಲು ಕೋಟಾದಲ್ಲಿ ಫಲಾನುಭವಿಗಳಾದರೆ, ಅವರು ‘ಮೇಲ್ಜಾತಿ’ಗೆ ಸೇರಿದವರಾಗಿರುವುದರಿಂದ ಸ್ವಾಭಾವಿಕವಾಗಿ ಪ್ರತಿಭಾವಂತರು ಎಂದು ಭಾವಿಸಲಾಗುತ್ತದೆ. ಇವಿಎಸ್ ಕೋಟಾದಡಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಅಂಕ ಗಳಿಸಿ ಅವಕಾಶ ಪಡೆದವರ ಅರ್ಹತೆಯನ್ನು ಮೀಸಲಾತಿ ವಿರೋಧಿ ಮೇಲ್ಜಾತಿಯ ಜನರು ಇಲ್ಲಿ ಅನುಮಾನಿಸುವುದಿಲ್ಲ. ಇದಕ್ಕೆ ಮೇಲ್ವರ್ಗದವರು ದೈವದತ್ತವಾಗಿ ಪ್ರತಿಭಾವಂತರು ಎನ್ನುವ ಸ್ಥಾಪಿತ ನಂಬಿಕೆಯಿದೆ ಎನ್ನುತ್ತಾರೆ ಅಪೂರ್ವಾನಂದ ಅವರು.

ವ್ಯಕ್ತಿಯ ಪ್ರತಿಭೆಯು ಆತನಿಗೆ ಅನೇಕ ಅವಕಾಶಗಳಿಗೆ ಜನ್ಮ ನೀಡುತ್ತದೆ ಎನ್ನುವ ಸ್ಥಾಪಿತ ನಂಬಿಕೆಯೆ ತಪ್ಪಿನಿಂದ ಕೂಡಿದೆ. ಬದಲಾಗಿ ಅವಕಾಶಗಳಿಂದ ವ್ಯಕ್ತಿಯ ಪ್ರತಿಭೆ ಹೊರಹೊಮ್ಮುತ್ತದೆ ಎಂದು ಹೇಳುವುದು ಹೆಚ್ಚು ಸೂಕ್ತ. ವ್ಯಕ್ತಿಯೊಬ್ಬನ ಪ್ರತಿಭೆಯು ಆತನ ವಯಕ್ತಿಕ ಪ್ರಯತ್ನದಿಂದ ಅಭಿವೃದ್ಧಿ ಹೊಂದಿದ ಗುಣವಾಗಿರದೆ, ಅದು ಆತನ ಸಾಮಾಜಿಕ ಅಭ್ಯಾಸದಿಂದ ಅಭಿವೃದ್ಧಿ ಹೊಂದಿರುತ್ತದೆ. ಶತಶತಮಾನಗಳಿಂದ ಬಹುಸಂಖ್ಯಾತರನ್ನು ವಂಚಿಸಿ ಸಮಾಜದ ಪ್ರತಿಯೊಂದು ಅವಕಾಶಗಳನ್ನು ತಮಗಾಗಿಯೇ ಮೀಸಲಿಟ್ಟುಕೊಂಡವರು ತಮ್ಮದು ಸಹಜ ಪ್ರತಿಭೆ ಎಂದುಕೊಳ್ಳತೊಡಗಿದ್ದಾರೆ. ಇತರರ ಅವಕಾಶಗಳನ್ನು ದಬ್ಬಾಳಿಕೆಯಿಂದ ಕಸಿದುಕೊಂಡು ಅರ್ಹತೆ ಮತ್ತು ಪ್ರತಿಭೆಯ ಮಾಲೀಕರಂತೆ ವರ್ತಿಸುವವರು ತಾವು ಹುಟ್ಟುಹಾಕಿರುವ ಸಾಮಾಜಿಕ ಅಸಮಾನ ವ್ಯವಸ್ಥೆಯೊಳಗೆ ಅಡಗಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ಅರ್ಥಕೊಳ್ಳುವುದಿಲ್ಲ. ಅಥವಾ ಬಹುಶಃ ಅವರು ಅದನ್ನು ಚೆನ್ನಾಗಿ ತಿಳಿದವರಾಗಿದ್ದು ಈ ಅಸಮಾನತೆಯ ಪರಿಸ್ಥಿತಿ ಭವಿಷ್ಯದಲ್ಲೂ ಮುಂದುವರಿಯಬೇಕೆಂದು ಬಯಸುತ್ತಾರೆ ಎನ್ನುತ್ತಾರೆ ಅಪೂರ್ವಾನಂದ ಅವರು. 

ದೇಶದೆಲ್ಲೆಡೆ ಹಾಗು ವಿಶೇಷವಾಗಿ ಕರ್ನಾಟಕದಲ್ಲಿ ಅರ್ಹ ಜಾತಿ/ವರ್ಗದ ಜನರು ಸೂಕ್ತ ವರ್ಗಗಳಲ್ಲಿ ತಮಗೆ ಮೀಸಲಾತಿ ನೀಡಬೇಕೆಂದು ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸದಾ ಮೀಸಲಾತಿ ವ್ಯವಸ್ಥೆಯನ್ನು ದ್ವೇಷಿದಿಂದ ಹಾಗು ತಿರಸ್ಕಾರದಿಂದ ಟೀಕಿಸುತ್ತ ಬಂದಿರುವ ಮೇಲ್ವರ್ಗದವರು ಮೀಸಲಾತಿಗಾಗಿ ಯಾವುದೇ ಹೋರಾಟ ಮಾಡದೆ ಕಣ್ಣುಮುಚ್ಚಿಕೊಂಡು ಬೆಣ್ಣೆ ತಿಂದ ಬೆಕ್ಕಿನಂತೆ ಈಗ ಇವಿಎಸ್ ಕೋಟಾದಡಿಯಲ್ಲಿ ೧೦% ಮೀಸಲಾತಿಯನ್ನು ಅನಾಯಾಸವಾಗಿ ಪಡೆದುಕೊಂಡಿದ್ದಾರೆ. ಇದನ್ನು ಭಾರತದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಡವ್ ಮಾಸ್ಟರ್‌ಗೆ ಸಾಥ್‌ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

Next Post

ಸರಳವಾಗಿ ಮುಹೂರ್ತ ನೆರವೇರಿಸಿಕೊಂಡ ಸೂರ್ಯ ಚಿತ್ರತಂಡ

Next Post
ಸರಳವಾಗಿ ಮುಹೂರ್ತ ನೆರವೇರಿಸಿಕೊಂಡ ಸೂರ್ಯ ಚಿತ್ರತಂಡ

ಸರಳವಾಗಿ ಮುಹೂರ್ತ ನೆರವೇರಿಸಿಕೊಂಡ ಸೂರ್ಯ ಚಿತ್ರತಂಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!