ಅಕ್ಟೋಬರ್ ಮೂರನೇ ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಯಿಂದ ಅಳಿಸುವ ನೆಪದಲ್ಲಿ ಬೂತ್ ಮಟ್ಟದ ಅಧಿಕಾರಿಗಳೆಂದು ಹೇಳಿಕೊಳ್ಳುವ ಜನರ ಗುಂಪು ತಮ್ಮ ಮನೆಗಳಿಗೆ ಬಂದಿದೆ ಎಂದು ಬೆಂಗಳೂರಿನ ಶಿವಾಜಿನಗರ ನಿವಾಸಿಗಳು ಆರೋಪಿಸಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಮಕ್ಕನ್ ಕಾಂಪೌಂಡ್ ನಿವಾಸಿಗಳು ಈ ಆರೋಪಗಳನ್ನು ಮಾಡಿದ್ದಾರೆ. ಆ ಪ್ರದೇಶದ ಬೂತ್ ಮಟ್ಟದ ಅಧಿಕಾರಿಯಾಗಿರುವ ಆಶಾ ಕಾರ್ಯಕರ್ತೆ ಗೀತಾ ವಿ ಈ ಆರೋಪವನ್ನು ದೃಢಪಡಿಸಿದ್ದಾರೆ.
“ಆಧಾರ್ ಸಂಖ್ಯೆ ಮತ್ತು ಮತದಾರರ ಗುರುತಿನ ಸಂಖ್ಯೆ ಸೇರಿದಂತೆ ವಿವರಗಳನ್ನು ಕೇಳಲು ಕೆಲವು ಜನರು ನನ್ನ ಪ್ರದೇಶದ ಮತದಾರರನ್ನು ಸಂಪರ್ಕಿಸಿದ್ದಾರೆ” ಎಂದು ಗೀತಾ TheNewsMinute ಗೆ ತಿಳಿಸಿದ್ದಾರೆ. “ನಾನು ಕ್ರಾಸ್ ಚೆಕ್ ಮಾಡಿದಾಗ, ಮತದಾರರ ಪಟ್ಟಿಯಿಂದ ಅಳಿಸಲು ಗುರುತಿಸಲಾದ ಕನಿಷ್ಠ 20 ಜನರು ಇನ್ನೂ ಇದೇ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ ಎಂದು ನಾನು ಕಂಡುಕೊಂಡಿದ್ದೇನೆ” ಎಂದು ಗೀತಾ ಹೇಳಿದ್ದಾರೆ.
ಬೂತ್ ಮಟ್ಟದ ಅಧಿಕಾರಿಯಾಗಿ ತಮ್ಮ ಜವಾಬ್ದಾರಿಗಳ ಭಾಗವಾಗಿ, ಗೀತಾ ಅವರು ಚುನಾವಣಾ ಆಯೋಗದ ಏಕೈಕ ಪಾಯಿಂಟ್ ಆನ್-ಗ್ರೌಂಡ್ ವೆರಿಫಿಕೇಶನ್ ಅಧಿಕಾರಿಯಾಗಿದ್ದಾರೆ. ನಗರ ಕೇಂದ್ರದಲ್ಲಿ, ಪ್ರತಿ ಬೂತ್ ಮಟ್ಟದ ಅಧಿಕಾರಿಯು ಸುಮಾರು 1,200 ಮತದಾರರು ಅಥವಾ 300-400 ಮನೆಗಳು ಇರುವ ಪ್ರದೇಶದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಚುನಾವಣೆಗೆ ತಿಂಗಳು ಬಾಕಿ ಇರುವಂತೆ ಗೀತಾ ಅವರಿಗೆ ಮತದಾರರ ನೋಂದಣಿ, ಕ್ಷೇತ್ರ ಪರಿಶೀಲನೆ, ಗುರುತಿನ ಚೀಟಿ ತಿದ್ದುಪಡಿ, ವೋಟರ್ ಸ್ಲಿಪ್ ವಿತರಣೆ ಹಾಗೂ ಮತದಾರರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಲಾಗಿದೆ.

ನವೆಂಬರ್ 9 ರಂದು ಔಪಚಾರಿಕ ಮತದಾರರ ಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಿದ್ದರೂ, ಶಿವಾಜಿನಗರದಲ್ಲಿ ಅಕ್ಟೋಬರ್‌ನಲ್ಲಿಯೇ ಅಪರಿಚಿತರು ಮತದಾರರ ಪಟ್ಟಿಯನ್ನು ನವೀಕರಿಸುವ ನೆಪದಲ್ಲಿ ತಮ್ಮ ಮನೆಗೆ ಭೇಟಿ ನೀಡಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ.
“ಬಿಬಿಎಂಪಿ ಎಂದು ಹೇಳಿಕೊಳ್ಳುವ ಅಧಿಕಾರಿಗಳು ನಮ್ಮನ್ನು ಚುನಾವಣಾ ಪಟ್ಟಿಯಿಂದ ಅಳಿಸುವುದಾಗಿ ಹೇಳಿಕೊಂಡು ನಮ್ಮ ಮನೆಗೆ ಬಂದರು. ನಾವು ಹತ್ತಿರದಲ್ಲೇ ವಾಸಿಸುತ್ತಿದ್ದೇವೆ ಎಂದು ನಮ್ಮ ನೆರೆಹೊರೆಯವರು ಅವರಿಗೆ ತಿಳಿಸಿದರೂ ಅಧಿಕಾರಿಗಳು ನಮ್ಮ ಬಳಿಗೆ ಬಂದಿಲ್ಲ. ಈಗ, ನಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ ”ಎಂದು ಶಿವಾಜಿನಗರದ 34 ವರ್ಷದ ಜರೀನಾ ತಾಜ್ ತಿಳಿಸಿದ್ದಾರೆ.
ಮತ್ತೊಬ್ಬ ನಿವಾಸಿ ಅಫ್ರೋಜ್ ಪಾಷಾ ಮಾತನಾಡಿ, ತಮ್ಮ ಮನೆಯಲ್ಲಿ ಪರಿಶೀಲನೆಗೆ ಬಂದವರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕುವ ಬಗ್ಗೆ ಚರ್ಚಿಸುತ್ತಿದ್ದರು. “ನಾನು ಅವರ ಮುಂದೆ ನಿಂತಾಗ ಅವರು ನನ್ನ ಹೆಸರನ್ನು ಅಳಿಸುವ ಬಗ್ಗೆ ಮಾತನಾಡುತ್ತಿದ್ದರು!”ಎಂದು ಶಿವಾಜಿನಗರದ ಅದೇ ಪ್ರದೇಶದಲ್ಲಿ ತನ್ನ ಅವಿಭಕ್ತ ಕುಟುಂಬದೊಂದಿಗೆ ವಾಸಿಸುತ್ತಿರುವ 42 ವರ್ಷದ ಕ್ಯಾಟರರ್ ಅಫ್ರೋಜ್ ಪಾಷಾ ಹೇಳಿದ್ದಾರೆ.
ನಗರದಲ್ಲಿ ಸಾವಿರಾರು ಮತದಾರರಿಂದ ವೈಯಕ್ತಿಕ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿದ ಖಾಸಗಿ ಎನ್‌ಜಿಒ ಒಳಗೊಂಡಿರುವ ಪ್ರಮುಖ ಗೌಪ್ಯತೆ ಉಲ್ಲಂಘನೆಯ ಕುರಿತು ಟಿಎನ್‌ಎಂ ಹಾಗೂ ಪ್ರತಿಧ್ವನಿ ಬೆಂಗಳೂರಿನಲ್ಲಿ ತನಿಖಾ ವರದಿ ನಡೆಸುತ್ತಿರುವ ಸಮಯದಲ್ಲಿಯೇ ಶಿವಾಜಿನಗರದಲ್ಲಿ ಈ ಬೆಳವಣಿಗೆಗಳು ನಡೆದಿವೆ.
ಆಗಸ್ಟ್ 20 ರಂದು, BBMP ಮತದಾರರ ಹಕ್ಕುಗಳು ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಕುರಿತು ‘ಜಾಗೃತಿ ಮೂಡಿಸಲು’ ಚಿಲುಮೆ ಎಂಬ NGO ಗೆ ಅನುಮತಿ ನೀಡಿ ಸರ್ಕಾರಿ ಆದೇಶವನ್ನು ಹೊರಡಿಸಿತ್ತು. ಆದರೆ ಅವರು ಷರತ್ತುಗಳನ್ನು ಮೀರಿ, ಅಕ್ರಮವಾಗಿ, ಏಜೆನ್ಸಿಗಳೊಂದಿಗೆ ಉಪ-ಗುತ್ತಿಗೆಗಳಿಗೆ ಸಹಿ ಹಾಕಿ ನೂರಾರು ಕ್ಷೇತ್ರ ಏಜೆಂಟರನ್ನು ನೇಮಿಸಿಕೊಂಡಿದೆ. ಅಲ್ಲದೆ, ಈ ಏಜೆಂಟ್ ಗಳು ಮತದಾರರಿಂದ ಅವರ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ಹಾಗೂ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ID ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಸಂಗ್ರಹಿಸಿದ್ದಾರೆ. ಅಲ್ಲದೆ, ಮತದಾರರು ತಮ್ಮ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನೂ ಪಡೆದುಕೊಂಡಿದ್ದಾರೆ.
ಶಿವಾಜಿನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಿಲುಮೆ ಅಥವಾ ಅದರ ಉಪ ಗುತ್ತಿಗೆದಾರರು ಭಾಗಿಯಾಗಿದ್ದಾರೆಯೇ ಎಂಬುದು ಅಸ್ಪಷ್ಟವಾಗಿದ್ದರೂ, ಮತದಾರರ ಹೆಸರನ್ನು ಅಳಿಸಲಾಗುತ್ತದೆ ಎಂದು ‘ಬೂತ್ ಮಟ್ಟದ ಅಧಿಕಾರಿ’ ಹೇಳಿದ್ದಾರೆ ಎಂದು ಅನೇಕ ನಿವಾಸಿಗಳು ದೂರಿದ್ದಾರೆ.

31ರ ಹರೆಯದ ಗೃಹಿಣಿ ಸಲ್ಮಾ ಸುಲ್ತಾನ, ತಮ್ಮ ಕುಟುಂಬದ ಸದಸ್ಯರು ಈಗಲೂ ಅಲ್ಲಿಯೇ ವಾಸವಾಗಿದ್ದಾರೆ ಎಂದು ಬಂದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದು ಪ್ರಯಾಸದ ಕೆಲಸವಾಗಿತ್ತು ಎಂದು ದೂರಿದ್ದಾರೆ. “ಈ ಮನೆಯಲ್ಲಿ ವಾಸಿಸುವ ಮತದಾರರನ್ನು ಪರಿಶೀಲಿಸುವ ಜನರು ಬಂದಾಗ ನಾನು ಮನೆಯಲ್ಲಿದ್ದೆ. ನಮ್ಮ ಸ್ಥಳಕ್ಕೆ ನಿಯಮಿತವಾಗಿ ಬರುವ ಬಿಎಲ್‌ಒ ಆಗಿರಲಿಲ್ಲ. ನಾವೆಲ್ಲರೂ ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ನನ್ನ ಪತಿ, ಸಹೋದರ ಮತ್ತು ತಂದೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾರೆ ಎಂದು ನಾನು ಅವರಿಗೆ ಹೇಳಲು ಪ್ರಯತ್ನಿಸುತ್ತಿದ್ದರೂ ಅವರು ಮತದಾರರ ಪಟ್ಟಿಯಿಂದ ಅಳಿಸುವ ಬಗ್ಗೆ ಮಾತನಾಡುತ್ತಿದ್ದರು, ”ಎಂದು ಸಲ್ಮಾ ತಿಳಿಸಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೋಷಗಳಿವೆ ಎಂದು ಅಕ್ಟೋಬರ್ 11 ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿಗೆ ಪುಷ್ಠಿ ನೀಡಲು ಖಾಸಗಿ ಸಮೀಕ್ಷೆಯನ್ನು ಬಳಸಲಾಗಿದೆ ಎಂದು ವಿರೋಧ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೋಷವಿದೆ ಎಂದು ಆರೋಪಿಸಿ ಅಫ್ಸರ್ ಪಾಷ, ಭಾಸ್ಕರ್ ಡಿ, ಗಿರೀಶಂ ಎನ್, ಶ್ರೀಕಾಂತ್ ಎಸ್, ಮಹಮ್ಮದ್ ಇನಾಯತ್, ಶೇಖ್ ದಾವೂದ್ ಮತ್ತು ಅನ್ವರ್ ಬಾಷಾ ಎಂಬವರು ದೂರು ಸಲ್ಲಿಸಿದ್ದಾರೆ. “ನಾವು ಈ ವರ್ಷ ಫೆಬ್ರವರಿಯಿಂದ ಕ್ಷೇತ್ರದಲ್ಲಿ ನಮ್ಮದೇ ಆದ ಸಮೀಕ್ಷೆಯನ್ನು ನಡೆಸಿದ್ದೇವೆ ಮತ್ತು ಕ್ಷೇತ್ರದಲ್ಲಿ 26,000 ಮತದಾರರು ನಕಲಿ ಎಂದು ಕಂಡುಬಂದಿದೆ. ನಾವು ಅನುಮಾನಿಸುವ ಬಹುತೇಕ ಮತದಾರರು ಮುಸ್ಲಿಂ ಸಮುದಾಯದವರು. ಈ ಕ್ಷೇತ್ರದ ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ನಾವು ಬಯಸುತ್ತೇವೆ ”ಎಂದು ದೂರುದಾರರಲ್ಲಿ ಒಬ್ಬರಾದ ಗಿರೀಶಂ ಎನ್ ಟಿಎನ್‌ಎಂಗೆ ತಿಳಿಸಿದರು.
ಶಿವಾಜಿನಗರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಸುಹೇಲ್ ಅಹಮದ್ ಅವರು ಶಿವಾಜಿನಗರದಲ್ಲಿ ರಹಸ್ಯವಾಗಿ ಮತದಾರರ ಪರಿಶೀಲನೆಯ ಪ್ರಕ್ರಿಯೆಯ ಬಗ್ಗೆ ನಿರಾಕರಿಸಿದ್ದಾರೆ. “ಬಿಎಲ್‌ಒಗಳನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳು ಮತದಾರರ ಪರಿಶೀಲನೆಗೆ ಬರುತ್ತಿರುವ ಬಗ್ಗೆ ಮತದಾರರಿಂದ ದೂರುಗಳಿದ್ದರೆ, ನಾವು ಅದನ್ನು ಪರಿಶೀಲಿಸುತ್ತೇವೆ. ಇಲ್ಲಿಯವರೆಗೆ, ನಾವು ಅಂತಹ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಮತ್ತು ಔಪಚಾರಿಕ ಮತದಾರರ ಪರಿಶೀಲನೆ ಪ್ರಕ್ರಿಯೆಯು ಈ ವಾರದಿಂದ ಪ್ರಾರಂಭವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.