ಎಂಟಿಬಿ ಆಡಿಯೋ ವೈರಲ್ ಆಗಿದೆ ಆರೋಪ ಇದೆ ಆದರೆ ಅವರು ಏತಕ್ಕಾಗಿ ಅದರಲ್ಲಿ ಮಾತನಾಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಿನ್ನೂ ಅವರನ್ನ ಭೇಟಿ ಮಾಡಿಲ್ಲ. ಭೇಟಿ ಮಾಡಿ ನಂತರ ತಿಳಿಸುತ್ತೇನೆ. ಈ ಕುರಿತು ವಿವರವಾಗಿ ಚರ್ಚೆ ಮಾಡುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ನೋಡಿ ನಾನೂ ಬೇರೆ ಪಕ್ಷದಿಂದ ಬಂದವನು. ನನಗೆ ಅಲ್ಲಿ ಅಸಮಾಧಾನವಿತ್ತು. ನನಗೆ ಅಲ್ಲಿ ಇಷ್ಟವಿರಲಿಲ್ಲ ಹಾಗಾಗಿ ನಾನು ಬಿಜೆಪಿಗೆ ಬಂದೆ. ದೇಶದಲ್ಲಿ ನಾನು ಯೋಚಿಸಿದ ಹಾಗೆ ಇನ್ನೂ ಇಪ್ಪತ್ತೈದು ವರ್ಷ ಬಿಜೆಪಿ ಇರುತ್ತೆ. ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಸರ್ಕಾರ ನೀಡಿದ್ದಾರೆ. ಅದನ್ನ ನೋಡಿಕೊಂಡೇ ನಾನು ಬಿಜೆಪಿಗೆ ಬಂದೆ. ನಾನು ಇಷ್ಟಪಟ್ಟು ಬಿಜೆಪಿಗೆ ಬಂದೆ. ನಾನು ಬಂದ ಮೇಲೆ ಯಡಿಯೂರಪ್ಪ ಸಿಎಂ ಆದರು. ಉತ್ತಮ ಸರ್ಕಾರವನ್ನೂ ನೀಡಿದರು ಎಂದು ಹೇಳಿದ್ದಾರೆ.
ಈಗ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂತಹ ಸರ್ಕಾರ ನೋಡಿ ಮೆಚ್ಚಿ ಬರುವವರನ್ನ ನಾವೇಕೆ ತಡೆಯಬೇಕು. ಎಲ್ಲರ ಹಿನ್ನೆಲೆ ನೋಡಿಯೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಮ್ಮ ಬ್ಯಾಗ್ರೌಂಡ್ ನೋಡಿಯೇ ಸೇರಿಸಿಕೊಂಡರು. ಬಿಜೆಪಿ ಎಂದರೆ ಶುದ್ಧವಾದ ಅಭಿವೃದ್ಧಿ ಮಾಡುವ ಪಕ್ಷ ಹಾಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ. ತೆಲಂಗಾಣದಲ್ಲಿನ ಆಪರೇಷನ್ ಕಮಲ ಸುಳ್ಳು, ಇದು ಟಿಆರ್ಎಸ್ ಬಿಜೆಪಿ ವಿರುದ್ದ ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ನಾವು ಹದಿನೇಳು ಜನ ಬಿಜೆಪಿಗೆ ಸೇರುವಾಗ ಹಣ ಪಡೆದು ಸೇರಿಲ್ಲ. ನರೇಂದ್ರ ಮೋದಿ ಆಡಳಿತ ನೋಡಿ ಸೇರಿದ್ವಿ. ನಮ್ಮ ಮೇಲೂ ಆರೋಪ ಮಾಡಿದ್ದರು. ಡಿಕೆ ಶಿವಕುಮಾರ್ಗೆ ಮಾತನಾಡಲು ಏನೂ ವಿಷಯ ಇಲ್ಲ ಹಾಗಾಗಿ ಪುನಃ ಆಪರೇಷನ್ ಕಮಲ ಬಗ್ಗೆ ಮಾತನಾಡುತ್ತಾರೆ. ನಮಗೆ ಕೆಲಸವಿದೆ ಹಾಗೂ ಜವಾಬ್ದಾರಿ ಇದೆ. ನಾವು ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಿಯೇ ಗುರುತಿಸಿಕೊಂಡಿದ್ದೇವೆ. ಬೇರೆಯವರ ಬಗ್ಗೆ ಅನಗತ್ಯ ಟೀಕೆ ಟಿಪ್ಪಣಿಗಳೇಕೆ ಎಂದು ಸುಮ್ಮನ್ನಿದ್ದೇವೆ ಎಂದರು.
ಶಿವಮೊಗ್ಗದಲ್ಲಿ ಹೋರಿ ಹಬ್ಬಕ್ಕೆ ಮೂರು ಬಲಿಯಾಗಿದ್ದು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ನಾನೂ ಕೂಡ ಮಹಾರಾಷ್ಟ್ರದಲ್ಲಿದವನು ಇಂತಹದನ್ನ ಹೇಗೆ ತಡೆಯಬೇಕು ಎಂಬುದು ಗೊತ್ತಿದೆ. ಏಕರೂಪ ನೀತಿ ಸಂಹಿತೆ ಜಾರಿ ಕುರಿತು ಚರ್ಚೆಗಳಾಗುತ್ತಿವೆ. ಈಗಲೇ ಏನೂ ಹೇಳಲು ಬರೋದಿಲ್ಲ. ಚುನಾವಣೆ ಸಮಯದಲ್ಲಿ ಈ ವಿಷಯಗಳು ಚರ್ಚೆಗೆ ಬರುತ್ತವೆ ಎಂಬುದು ಸುಳ್ಳು. ಯಾವಾಗ ಕಾನೂನು ಜಾರಿ ತರಬೇಕೋ ಅಂತಹ ಸಮಯದಲ್ಲಿ ತರುತ್ತಾರೆ. ಕಾದು ನೋಡೋಣ ಎಂದರು.






