2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಅದಕ್ಕೆ ಪೂರಕವೆಂಬಂತೆ ವರುಣಾ, ಚಾಮರಾಜಪೇಟೆ, ಚಿಕ್ಕನಾಯಕಹಳ್ಳಿ, ಚಾಮುಂಡೇಶ್ವರಿ, ಬಾದಾಮಿ, ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು ಮತ್ತು ಅವರ ಅಭಿಮಾನಿಗಳು ಒತ್ತಾಯಿಸಿದ್ದರು.
ಇನ್ನು ಈ ಸಾಲಿಗೆ ಹೊಸ ಸೇರ್ಪಡೆ ಕೋಲಾರ ಈಗಾಗಲೇ ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದ್ದು ಸಿದ್ದರಾಮಯ್ಯಗೆ ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ದರಿದ್ದಾರೆ ಎಂದು ಹೇಳಲಾಗಿದೆ ಅದಕ್ಕೆ ಪೂರಕವೆಂಬಂತೆ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಈಗಾಗಲೇ ಈ ಕುರಿತು ಆಪ್ತವಲಯದಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಒಂದು ಸುತ್ತು ಚರ್ಚಿಸಿದ್ದು ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಗಳ ಮತ ಕಾಂಗ್ರೆಸ್ ಕೈ ತಪ್ಪಿ ಹೋಗದಂತೆ ಸಿದ್ದು ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸಿದ್ದರಾಮಯ್ಯ ಜಿಟಿಡಿ ಕಾಂಗ್ರೆಸ್ ಸೇರುವ ಹುಮ್ಮಿಸ್ಸಿನಲ್ಲಿ ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರೂ ಆದರೆ, ಜಿಟಿಡಿ ವಾಪಸ್ ಜೆಡಿಎಸ್ ಕದ ತಟ್ಟಿದ್ದರಿಂದ ಲೆಕ್ಕಾಚಾರವೆಲ್ಲ ಉಲ್ಟಾ ಹೊಡೆದಿದೆ.
ಇನ್ನು ಬಾದಾಮಿಯಲ್ಲೂ ಅದೇ ಚಿತ್ರಣ ಮೂಡಿದ್ದು ಸಿದ್ದು ಸ್ಪರ್ಧೆಗೆ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಸಿದ್ದು ಇನ್ನೊಮ್ಮೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಆಂತರಿಕ ಬಂಡಾಯ ಎದುರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.
ನವೆಂಬರ್ ಮೊದಲನೇ ವಾರದಿಂದ ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಪ್ರವಾಸ ಮಾಡಲಿದ್ದು ಸೀತಾಬೆಟ್ಟದಲ್ಲಿರುವ ಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ವೇಮಗಲ್ ನಿಂದ ತಮ್ಮ ಚುನಾವಣಾ ರ್ಯಾಲಿ ನಡೆಸಲಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.






