ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ತಂಡ 7 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದು ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ರಾಂಚಿಯಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಗೆ 278 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ 45.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡ 48 ರನ್ ಕಲೆ ಹಾಕುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್ ಗೆ 161 ರನ್ ಜೊತೆಯಾಟದ ಮೂಲಕ ತಂಡವನ್ನು ಮುನ್ನಡೆಸಿದರು.
ಕಿಶನ್ 84 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 93 ರನ್ ಬಾರಿಸಿದ್ದಾಗ ಔಟಾಗಿ 7 ರನ್ ಗಳಿಂದ ಶತಕ ವಂಚಿತರಾದರೆ, ಶ್ರೇಯಸ್ ಅಯ್ಯರ್ 111 ಎಸೆತಗಳಲ್ಲಿ 15 ಬೌಂಡರಿ ಒಳಗೊಂಡ 113 ರನ್ ಬಾರಿಸಿ ಔಟಾಗದೇ ಉಳಿದರು. ಕೊನೆಯಲ್ಲಿ ಸಂಜು ಸ್ಯಾಮ್ಸನ್ 36 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 30 ರನ್ ಬಾರಿಸಿ ಅಯ್ಯರ್ ಗೆ ಬೆಂಬಲ ನೀಡಿದರು.
ಮರ್ಕರಂ-ಹೆಂಡ್ರಿಕ್ಸ್ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಆರಂಭ ಭಾರತಕ್ಕಿಂತ ಭಿನ್ನವಾಗಿರಲಿಲ್ಲ. 40 ರನ್ ಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ರೇಜಾ ಹೆಂಡ್ರಿಕ್ಸ್ ಮತ್ತು ಏಡಿಯನ್ ಮರ್ಕರಂ 129 ರನ್ ಜೊತೆಯಾಟ ನಿಭಾಯಿಸಿದರು.
ಹೆಂಡ್ರಿಕ್ಸ್ 76 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 74 ರನ್ ಗಳಿಸಿದರೆ, ಮರ್ಕರಂ 89 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 79 ರನ್ ಬಾರಿಸಿದರು. ಕಳೆದ ಪಂದ್ಯದ ಹೀರೊಗಳಾದ ಕ್ಲಾಸೆನ್ (30) ಮತ್ತು ಡೇವಿಡ್ ಮಿಲ್ಲರ್ (ಅಜೇಯ 35) ತಂಡಕ್ಕೆ ನೆರವಾದರು.











