ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನೂ ಹಾಕುವಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ಝೈದ್ ಖಾನ್ ಶನಿವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಝೈದ್ ಖಾನ್ ನಮ್ಮ ದೇಶ, ನಾಡು, ನುಡಿಯ ಸಂಕೇತವಾಗಿರುವ ರಾಷ್ಟ್ರ ಗೀತೆ ಹಾಗೂ ನಾಡಗೀತೆಗಳು ಹಿರಿಯರಿಂದ ಕಿರಿಯವರೆಗೂ ಎಲ್ಲರ ಬಾಯಲ್ಲೂ ಮೊಳಗಬೇಕು. ನಾಡಗೀತೆಯ ಮಹತ್ವ ಇಂದಿನ ಮತ್ತು ಮುಂದಿನ ಪೀಳಿಗೆಯ ಹೃದಯದೊಳಗೆ ಇಳಿಯಬೇಕು. ಹಾಗಾಗಿ ಮುಖ್ಯಮಂತ್ರಿಗಳು ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯೂ ಮೊಳಗುವಂತೆ ಮಾಡಬೇಕು ಎಂಬುದಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಚಲನಚಿತ್ರ ಮಂಡಳಿಯವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಝೈದ್ ಖಾನ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಪ್ಯಾನ್ ಇಂಡಿಯಾ ಚಿತ್ರವಾದ ಬನಾರಸ್ ನ್ನು ಬೈಕಾಟ್ ಮಾಡುವ ಕೂಗು ಕೇಳಿ ಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಝೈದ್, ನಾನು ಒಬ್ಬ ಕಲಾವಿದ. ಪ್ರಾಮಾಣಿಕವಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದೇನು ತಪ್ಪಿದೆ? ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳುವ ಸ್ವಭಾವ ನನ್ನದು. ನಾನೂ ಈ ನೆಲದ ಕಲಾವಿದ. ಜನ ಚಿತ್ರ ನೋಡಿ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.