ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಭಾರತ್ ಜೋಡೊ ಪಾದಯಾತ್ರೆ ನಾಳೆ (ಸೆಪ್ಟೆಂಬರ್ 30) ರಂದು ಕರ್ನಾಟಕ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ಮುಖಂಡರ ಬ್ಯಾನರ್, ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.
ಕೇರಳದಲ್ಲಿ ಆರಂಭವಾದ ಪಾದಯಾತ್ರೆ ಸೆಪ್ಟೆಂಬರ್ 30ರಂದು ಚಾಮರಾಜನಗರಕ್ಕೆ ಕಾಲಿಡಲಿದೆ. ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಪ್ರವಾಸ ಮುಂದುವರಿಯಲಿದೆ.

ರಾಜ್ಯದಲ್ಲಿ ಪಾದಯಾತ್ರೆ ಆರಂಭದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ ಮುಖಂಡರ ಬ್ಯಾನರ್ ಗಳನ್ನು ಹಾಕಲಾಗಿದೆ. ಆದರೆ ಕಿಡಿಗೇಡಿಗಳು ಪಾದಯಾತ್ರೆಗೆ ಮುನ್ನ ಸುಮಾರು ೪೦ಕ್ಕೂ ಹೆಚ್ಚು ಬ್ಯಾನರ್ ಗಳನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ.
ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಹಾಕಲಾಗಿರುವ ಬ್ಯಾನರ್ ಗಳನ್ನು ಹರಿದು ಹಾಕಲಾಗಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೊ ಪಾದಯಾತ್ರೆ 22 ದಿನಗಳ ಕಾಲ ನಡೆದಿದ್ದು, ಕೇರಳದಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯಗೊಂಡಿದೆ. ನಾಳೆ ಕರ್ನಾಟಕದಲ್ಲಿ ಎರಡನೇ ಹಂತದ ಪಾದಯಾತ್ರೆ ಆರಂಭಗೊಳ್ಳಲಿದೆ.






