ಮಳೆಗೆ ತತ್ತರಿಸಿದ ಬೆಂಗಳೂರನ್ನು ಮತ್ತೊಂದು ಪ್ರವಾಹದಿಂದ ತಪ್ಪಿಸಲು ಒತ್ತುವರಿ ತೆರವು ಕಾರ್ಯಾಚರಣೆ ಪಾಲಿಕೆ ಶುರುಮಾಡಿದೆ. ಆದರೆ ದೊಡ್ಡವರ ಮುಂದೆ ಗಪ್ ಚುಪ್ ಆಗಿ ಶ್ರೀಸಾಮಾನ್ಯರ ಮಂದೆ ಬಿಬಿಎಂಪಿ ಬುಲ್ಡೋಜರ್ ಪ್ರತಾಪ ತೋರಿಸುತ್ತಿದೆ. ಆದರೆ ಅಸಲಿಗೆ ಬೆಂಗಳೂರು ಮುಳುಗಲು ಕಾರಣ ಯಾರು..? ಅನ್ನೋದನ್ನು CAG (Comptroller & Auditor General) ತನ್ನ ಆಡಿಟ್ ವರದಿಯಲ್ಲಿ ಬಹಿರಂಗ ಮಾಡಿದೆ.
ಹೇಳಿ ಕೇಳಿ 2021ರಲ್ಲೇ ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆ ಸರ್ಕಾರಕ್ಕೆ CAG ಎಚ್ಚರಿಸಿತ್ತು. ಬೆಂಗಳೂರಿನ ಸದ್ಯದ ಪರಿಸ್ಥಿತಿ ನೋಡಿದ್ರೆ ಮುಂದಕ್ಕೆ ಪ್ರವಾಹದ ಭವಿಷ್ಯ ನುಡಿದಿದಂತಿತ್ತು 2021ರಲ್ಲಿ ಸಿದ್ದಸಡಿಸಿದ CAG ಆಡಿಟ್ ವರದಿ. ಒಟ್ಟು 136 ಪುಟಗಳ ವರದಿ ಸಲ್ಲಿಕೆಯಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಸ್ಥಿತಿಗತಿ ಬಗ್ಗೆ ವಿವರಿಸಲಾಗಿದೆ. ಜೊತೆಗೆ ಬಿಬಿಎಂಪಿ ಎಡವಟ್ಟು ಹಾಗೂ ಅಸಡ್ಡೆ ಬಗ್ಗೆಯೂ CAG ಎತ್ತಿಹಿಡಿದಿತ್ತು. 2021ರಲ್ಲಿ Comptroller & Auditor General ಸರ್ಕಾರಕ್ಕೆ ಸಲ್ಲಿಸಿದ ಆಡಿಟ್ ವರದಿಯ ಪ್ರತಿ ಪ್ರತಿಧ್ವನಿಗೆ ಲಭ್ಯವಾಗಿದೆ.

CAG ವರದಿಯಲ್ಲಿ ಬಿಬಿಎಂಪಿ ಬೇಜವಾಬ್ದಾರಿ ಬಗ್ಗೆ ಉಲ್ಲೇಖ.!!
ಹೆಬ್ಬಾಳ – ನಾಗಾವರ ವ್ಯಾಲಿ, ಅರ್ಕಾವತಿ ವ್ಯಾಲಿ, ವೃಷಭಾವತಿ ವ್ಯಾಲಿ, ಸುವರ್ಣಮುಖಿ ವ್ಯಾಲಿ, ಕೋರಮಂಗಲ ವ್ಯಾಲಿ ಭೌಗೋಳಿಕವಾಗಿ ಬೆಂಗಳೂರಿನ ಜೀವನಾಡಿಗಳು. ಈ ಐದು ವ್ಯಾಲಿಗಳನ್ನು ಉಳಿಸಿಕೊಳ್ಳಲು, ನಿರ್ವಹಣೆ ಮಾಡಲು ಪಾಲಿಕೆ ಎಡವಿದೆ ಎಂದು ಆಡಿಟ್ ವರದಿ ಬೊಟ್ಟು ಮಾಡಿತ್ತು. ಐದು ವ್ಯಾಲಿಗಳನ್ನು ಸಮಪರ್ಕವಾಗಿ ನಿಭಾಯಿಸಿದಿದ್ದರೆ ಬೆಂಗಳೂರಿನಲ್ಲಿ ಮಳೆ ಹರಿವು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಐದು ವ್ಯಾಲಿಗಳೂ ಕೂಡ ಮೂಲತಃ ಒಂದಕ್ಕೊಂದು ಸಂಪರ್ಕ ಬೆಸೆದುಕೊಂಡಿದೆ. ಅದಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಗರದಲ್ಲಿ ಒತ್ತುವರಿಯಾಗಿದೆ, ಇದನ್ನು ಬಿಬಿಎಂಪಿ ತಡೆಯಲಿಲ್ಲ. ಹೀಗೆ ಬೆಂಗಳೂರಿನಲ್ಲಿ ಮಳೆಯಿಂದಾಗುವ ಅನಾಹುತಗಳ ಬಗ್ಗೆ 2021ರಲ್ಲಿ ಎಚ್ಚರಿಸಿದರೂ ಬಿಬಿಎಂಪಿ ಎಚ್ಚೆತ್ತುಕೊಂಡಿರಲಿಲ್ಲ.

2021ರ CAG ಆಡಿಟ್ ವರದಿಯ ಪ್ರಮುಖ ಅಂಶಗಳೇನು.!?
• ನೀರುಗಾಲುವೆ ನಿರ್ವಹಣೆಯಲ್ಲಿ ಬಿಬಿಎಂಪಿ ಎಡವಿದೆ
• ಅಭಿವೃದ್ಧಿ ಬೇಡಿಕೆಗಳಿಗೆ ಒತ್ತು ಕೊಟ್ಟು ಕೆರೆ ಉಳಿವಿಗೆ ಶ್ರಮಿಸಿಲ್ಲ
• ನೀರುಗಾಲುವೆ, ರಾಜಕಾಲುವೆ, ಕೆರೆ ಒತ್ತುವರಿ BDA, BESCOM, BWSSB ಸೇರಿದಂತೆ ಇತರೆ ಸಂಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು
• BBMP ವ್ಯಾಪ್ತಿಯ 201 ಕೆರೆಗಳ ಪೈಕಿ 66 ಅಭಿವೃದ್ಧಿ ಹೊಂದದ ಕೆರೆ ಹಾಗೂ 18 ನಿರ್ಜೀವ ಕೆರೆಯ ಬಗ್ಗೆ ಉಳಿಸಿಕೊಳ್ಳಲು ಪಾಲಿಕೆ ಆಸಕ್ತಿ ತೋರದ್ದು
• ನಶಿಸಿ ಹೋಗುತ್ತಿರುವ ನಗರದ ಅಂತರ್ಜಲ ಮಟ್ಟವನ್ನು ಕಾಲಕಾಲಕ್ಕೆ ಉನ್ನತೀಕರಿಸಲು ಪಾಲಿಕೆ ಯಾವುದೆ ಕ್ರಮ ತೆಗೆದುಕೊಳ್ಳಲಿಲ್ಲ
• ನಗರದಲ್ಲಿ ಮಳೆ ನೀರು ಕೊಯ್ಲು (Rain Water Harvesting) ಬಗ್ಗೆ ಸೈಟ್ ಮಾಲೀಕರಿಗೆ ಅರಿವು ಮೂಡಿಸದೇ ಇದ್ದಿದ್ದು
• ನಗರದ 40%ಕ್ಕೂ ಅಧಿಕ ಪ್ರಾಪರ್ಟಿಗಳು ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡೇ ಇಲ್ಲ
• BWSSB ಜೊತೆಗೂಡಿ RWH ವ್ಯವಸ್ಥೆ ಸೈಟ್ ನಲ್ಲಿ ಕಡ್ಡಾಯಗೊಳಿಸುವ ಯಾವುದೇ ಕಾನೂನು ಮಾಡದೆ ಇದ್ದಿದ್ದು
• ಕೆರೆ ನಾಲೆಗಳು ನೀರುಗಾಲುವೆಗೆ, ನೀರುಗಾಲವೆಯಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸಿಕೊಡದೆ ಇದ್ದಿದ್ದು
• ಕಾಲಕಾಲಕ್ಕೆ ಹೂಳೆತ್ತದೆ ನಿರ್ವಹಣೆ ಮಾಡದೆ ಬಿಟ್ಟ ಕಾರಣ ಕೆರೆ ತುಂಬುವಾಗ ಪ್ರವಾಹ ಭೀತಿ
• ಕಟ್ಟಡಗಳಿಗೆ ಅನುಮತಿ ಕೊಡುವುದರ ಜೊತೆಗೆ ನೈಸರ್ಗಿಕ ನೀರಿನ ಹರಿವಗೆ ಬೇಕಾದ ವ್ಯವಸ್ಥೆ ಮಾಡಿ ಕೊಡದೆ ಇದ್ದಿದ್ದೇ ಪ್ರವಾಹಕ್ಕೆ ಕಾರಣವಾಗಬಹುದು
