ಒತ್ತುವರಿ ತೆರವು ಕಾರ್ಯಾಚರಣೆ ಹೆಸರಲ್ಲಿ ಬಿಬಿಎಂಪಿ ಪ್ರತಿ ದಿನ ತಿಪ್ಪೆಸಾರಿಸುವ ಕೆಲಸ ಮಾಡುತ್ತಿದೆ. ಎಲ್ಲೂ ಕೂಡ ಕಾರ್ಯಾಚರಣೆ ಪೂರ್ಣ ಮಾಡದ ಬಿಬಿಎಂಪಿ ವಿಪ್ರೋ, ಸಲಾರ್ಪುರಿಯಾ ಒತ್ತುವರಿ ತೆರವು ಕಾರ್ಯಾಚರಣೆಯಲ್ಲೂ ಕೂಡ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದೆ.
ತೆರವು ಮಾಡಿದ ಎಲ್ಲೂ ಕೂಡ ಕಾರ್ಯಾಚರಣೆ ಪೂರ್ಣಗೊಳಿಸದ ಬಿಬಿಎಂಪಿ
ಮಳೆ ನಿಂತ ಕೂಡಲೇ ಒತ್ತುವರಿ ತೆರವು ಅಂತ ಅಖಾಡಕ್ಕಿಳಿದ ಬಿಬಿಎಂಪಿ ಅಧಿಕಾರಿಗಳ ವೀರಾವೇಶ ನೋಡಿದ್ರೆ ಒತ್ತುವರಿದಾರರಿಗೆ ಉಳಿಗಾಲವೇ ಇಲ್ಲ ಎನ್ನುವಂತಿತ್ತು. ಅಷ್ಟರ ಮಟ್ಟಿಗೆ ಬುಲ್ಡೋಜರ್ ತೋರಿಸಿ ಶೋ ಆಫ್ ಮಾಡಿದ್ದೇ ಮಾಡಿದ್ದು. ಆದರೀಗ ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ಒತ್ತುವರಿ ಪಟ್ಟಿಯಲ್ಲಿ ದೊಡ್ಡವರ ಹೆಸರು ಬರುತ್ತಿದ್ದಂತೆ ಪಾಲಿಕೆ ಅಧಿಕಾರಿಗಳ ಬುಲ್ಡೋಜರ್ ಬಿಲ ಸೇರಿದೆ. ಇದಕ್ಕೆ ಪೂರಕ ಎಂಬಂತೆ ವಿಪ್ರೋ, ಸಲಾರ್ ಪುರಿಯಾ ತೆರವು ಕಾರ್ಯಾಚರಣೆ ಆಮೆಗತಿಯಲ್ಲಿ ಸಾಗಿದೆ.

ಇಂದೂ ವಿಪ್ರೋ ಒತ್ತುವರಿ ಸಂಪೂರ್ಣವಾಗಿ ತೆರವು ಮಾಡಿದ ಬಿಬಿಎಂಪಿ !!
ಕಳೆದ ಶನಿವಾರ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾಗೆ ಸೇರಿದ ಜಾಗದಲ್ಲಿ ಒತ್ತುವರಿಯಾಗಿದೆ ಎಂದ ಮಾರ್ಕ್ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆಗೆ ಮುಂದಾಗಿದ್ರು. ಕಾರ್ಯಾಚರಣೆ ಶುರುವಾಗ್ತಿದ್ದಂತೆ ಅಧಿಕಾರಿಗಳ ಮೊಬೈಲ್ ಕರೆಯೊಂದರಿಂದ ತೆರವು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ವೇಳೆ ಫೆನ್ಸಿಂಗ್ ತೆರವು ಮಾಡಲು ಗ್ಯಾಸ್ ಕಟರ್ ಬೇಕು. ನಾಳೆ ಕಾರ್ಯಾಚರಣೆ ಮುಂದುವರೆಯುತ್ತೆ ಅಂತ ಅಧಿಕಾರಿಗಳು ನೆಪ ಕೊಟ್ಟಿದ್ದರು. ಅದಾಗಿ ಇಂದು ಮಧ್ಯಾಹ್ನದ ವರೆಗೂ ವಿಪ್ರೋ ಕಡೆ ಸುಳಿಯದ ಪಾಲಿಕೆ ಅಧಿಕಾರಿಗಳು ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಬಂದು ಮತ್ತೆ ತೆರವು ಡ್ರಾಮಾ ಆಡಿದರು. ಇಂದೂ ಕೂಡ ನಾಲ್ಕು ಕಲ್ಲು ಎತ್ತಿ ಹಾಕಿ ತೆರವು ಕಾರ್ಯಾಚರಣೆ ಮುಗೀತು ಅಂತ ಹೊರಟಿದ್ದಾರೆ.
ಬಿಬಿಎಂಪಿಯ ಈ ನಡೆ ಬಗ್ಗೆ ಸರ್ಜಾಪುರ ಸ್ಥಳೀಯ ನಿವಾಸಿಗಳು ಅಸಮಾಧಾನ ಹೊರ ಹಾಕಿದ್ದು, ಒತ್ತುವರಿಯಿಂದಾಗಿ ಮಳೆಗಾಲದಲ್ಲಿ ಇಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು. ಅಲ್ಲದೆ ಬಡವರ ಮನೆ ಮೇಲೆ ಮಾತ್ರ ಬುಲ್ಡೋಜರ್ ಹತ್ತಿಸುವ ಬಿಬಿಎಂಪಿ ಅಧಿಕಾರಿಗಳು ದೊಡ್ಡವರ ಹೆಸರು ಬಂದಾಗ ಸೈಲೆಂಟ್ ಆಗಿರೋದಕೇ ಎಂದು ಪ್ರಶ್ನಿಸಿದರು.
ಈ ನಡುವೆ ನಿನ್ನೆ ಬಿಬಿಎಂಪಿ ಅಧಿಕಾರಿಗಳು ಅರ್ಧಂಬರ್ಧ ಮಾಡಿದ ಕಾರ್ಯಾಚರಣೆ ಹಿನ್ನೆಲೆ ಇಂದು ವಿಪ್ರೋದಿಂದಲೇ ಗ್ಯಾಸ್ ಕಟ್ಟಿಂಗ್ ಮಾಡಿ ತಮ್ಮ ಫೆನ್ಸಿಂಗ್ ಅನ್ನು ತಾವೇ ತೆರವು ಮಾಡಿದರು. ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳ ಇಬ್ಬಗೆನೀತಿ ಮತ್ತೆ ಬಯಲಾಗಿದೆ. ಕೇವಲ. 300 ಮೀಟರ್ ಉದ್ದದ ರಾಜಕಾಲುವೆ ಒತ್ತುವರಿ ತೆರವು ಮಾಡಲು ಆಗದ ಅಧಿಕಾರಿಗಳು ಜನರ ಸಾಮಾನ್ಯರ ಮನೆ, ಶೆಡ್, ಗೋಡೆಯನ್ನು ಕೆಡವಿ ಒತ್ತುವರಿದಾರರ ಬಗ್ಗೆ ಮುಲಾಜೇ ಇಲ್ಲ ಅಂತ ಕಾಲರ್ ಏರಿಸುತ್ತಿದೆ.