ಸ್ನಾನ ಮಾಡುತ್ತಿದ್ದ 60 ವಿದ್ಯಾರ್ಥಿನಿಯ ಖಾಸಗಿ ವೀಡಿಯೊಗಳನ್ನು ಹಾಸ್ಟೇಲ್ ನಲ್ಲಿ ತಂಗಿದ್ದ ಯುವತಿಯೊಬ್ಬಳು ಸೋರಿಕೆ ಮಾಡಿದ ಘಟನೆ ಚಂಡೀಗಢದ ವಿಶ್ವವಿದ್ಯಾಲಯದ ಹಾಸ್ಟೇಲ್ ನಲ್ಲಿ ನಡೆದಿದ್ದು, ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.
ಹಾಸ್ಟೇಲ್ ನಲ್ಲಿ ತಂಗಿದ್ದ ವಿದ್ಯಾರ್ಥಿನಿಯರು ಸ್ನಾನ ಮಾಡುವ ದೃಶ್ಯಗಳನ್ನು ಸೆರೆ ಹಿಡಿದ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿನಿಯರು ಆಘಾತಗೊಂಡಿದ್ದು, ಹಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಶಿಮ್ಲಾ ಮೂಲದ ಯುವಕನೊಬ್ಬ ಯುವತಿಗೆ ಆಮೀಷವೊಡ್ಡಿ ಈ ಕೃತ್ಯ ಮಾಡಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಯುವತಿಯ ಮೊಬೈಲ್ ವಶಪಡಿಸಿಕೊಂಡಿದ್ದು, ಡಾಟಾ ಸಂಗ್ರಹಿಸುತ್ತಿದ್ದಾರೆ.
ಘಟನೆ ಬಗ್ಗೆ ವಿದ್ಯಾರ್ಥಿನಿಯರು ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸ್ಟೇಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಘಟನೆ ಅತ್ಯಂತ ಸೂಕ್ಷ್ಮವಾಗಿದ್ದು, ಎಲ್ಲರೂ ಶಾಂತರೀತಿಯಿಂದ ವರ್ತಿಸಬೇಕು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೇ ವೀಡಿಯೊ ಇದ್ದವರು ಬೇರೆ ಕಡೆ ಷೇರ್ ಮಾಡದಂತೆ ಚಂಡೀಗಢ ವಿಶ್ವವಿದ್ಯಾಲಯ ಮನವಿ ಮಾಡಿದೆ.