ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಪ್ರವಾಹ ಪರಿಸ್ಥಿತಿ ಸರಿಪಡಿಸಲು ಒತ್ತುವರಿ ತೆರವು ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ರಾಜಕಾಲುವೆ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾಲುವೆ ಅಭಿವೃದ್ದಿಗೆ ಈಗಾಗಲೇ 1500 ಕೋಟಿ ರೂ. ಮೊತ್ತವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. ಅಲ್ಲದೇ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ರಾಜಕಾಲುವೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. 850 ಕಿ.ಮೀ. ರಾಜಕಾಲುವೆ ಪೈಕಿ ಕಳೆದ 20 ವರ್ಷಗಳಲ್ಲಿ 450 ಕಿ.ಮೀ. ಮಾತ್ರ ಅಭಿವೃದ್ಧಿಯಾಗಿದೆ. ನಮ್ಮ ಸರಕಾರ ಆದ್ಯತೆ ಮೇಲೆ ಬಾಕಿ ಉಳಿದ 300 ಕಿ.ಮೀ. ರಾಜಕಾಲುವೆ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದು, ಒಂದೂವರೆ ವರ್ಷದಲ್ಲಿ ಈ ಕೆಲಸ ಆಗಲಿದೆ ಎಂದರು.
ಈ ಬಾರಿ ಇತಿಹಾಸದಲ್ಲೇ ಅತ್ಯಧಿಕ ಮಳೆಯಾಗಿದೆ. ಅದರಲ್ಲೂ 2 ಕ್ಷೇತ್ರಗಳಲ್ಲಿ ಅತೀ ಹೆಚ್ಚಾಗಿದ್ದು, 110 ಹಳ್ಳಿಗಳು ಬೆಂಗಳೂರಿಗೆ ಸೇರ್ಪಡೆಯಾಗಿವೆ. ಈ ಹಳ್ಳಿಗಳ ಕೆರೆಗಳು ಅಲ್ಲದೇ ಮಹದೇವಪುರದಲ್ಲಿ 69 ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಸಮಸ್ಯೆ ಆಗಿದೆ ಎಂದು ಅವರು ವಿವರಿಸಿದರು.






