ಭಾರತ-ಪಾಕ್ ನಡುವಿನ ಯಾವುದೇ ಪಂದ್ಯಗಳಿರಲಿ ಅದನ್ನು ಪರಸ್ಪರ ದೇಶಗಳ ಸಮರದಂತೆ ಬಹುತೇಕ ಮಾಧ್ಯಮಗಳು ರೋಚಕವಾಗಿ ಬಿಂಬಿಸಿ, ನೋಡುಗರ ಭಾವನೆಯನ್ನು ಪ್ರಚೋದಿಸುತ್ತದೆ. ಆ ಮೂಲಕ ಪರಸ್ಪರ ದೇಶಗಳಲ್ಲಿ ದ್ವೇಷ ಜೀವಂತವಾಗಿರಲು ತಮ್ಮ ಕೈಯಲ್ಲಾದ ಸಹಾಯವನ್ನು ಮಾಡುತ್ತದೆ.
ಮನಸಿಗೆ ಮುದ ನೀಡುವಂತಹ ಸುದ್ದಿಯೊಂದು ವರದಿಯಾಗಿದ್ದು, ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿಯವರ ಕಿರಿಯ ಮಗಳು ಭಾರತ-ಪಾಕ್ ಪಂದ್ಯಾಟದ ವೇಳೆ ಭಾರತದ ಧ್ವಜವನ್ನು ಕೈಯಲ್ಲಿಡಿದು ಸಂಭ್ರಮಿಸಿದ್ದಾರೆ. ಇದನ್ನು ಸ್ವತಃ ಶಾಹಿದಿ ಅಫ್ರಿದಿಯೇ ಬಹಿರಂಗಪಡಿಸಿದ್ದಾರೆ.
ಏಷ್ಯಾ ಕಪ್ 2022 ರಲ್ಲಿ, ಭಾರತ ಮತ್ತು ಪಾಕಿಸ್ತಾನ (IND vs PAK) ಆಗಸ್ಟ್ 28 ರಂದು ಮತ್ತು ನಂತರ ಸೆಪ್ಟೆಂಬರ್ 4 ರಂದು ಮುಖಾಮುಖಿ ಆಗಿದ್ದವು. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೂ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು. ಈ ಎರಡೂ ಪಂದ್ಯಗಳಿಗೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಪಾಕಿಸ್ತಾನದ ಟಿವಿ ಚಾನೆಲ್ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಈ ಪಂದ್ಯದ ವೇಳೆ ತಮ್ಮ ಕಿರಿಯ ಮಗಳು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಹೆಚ್ಚಿನ ಅಭಿಮಾನಿಗಳು ಭಾರತದಿಂದ ಬಂದವರು ಎಂದು ಆಂಕರ್ ಹೇಳಿದ್ದಾರೆ. ಈ ಬಗ್ಗೆ ಅಫ್ರಿದಿ, ‘ಹೌದು, ಅವರು ನನಗೆ ಹೇಳುತ್ತಿದ್ದರು, ನನ್ನ ಕುಟುಂಬ ಅಲ್ಲಿ ಕುಳಿತಿತ್ತು. ವೀಡಿಯೋವನ್ನು ನನಗೆ ಕಳುಹಿಸಲಾಗಿತ್ತು, ನಾನು ನೋಡುತ್ತಿದ್ದೆ. ಕೇವಲ 10 ಪ್ರತಿಶತ ಪಾಕಿಸ್ತಾನಿಗಳು ಇಲ್ಲಿದ್ದಾರೆ. ಉಳಿದ 90 ಪ್ರತಿಶತ ಭಾರತೀಯರು ಎಂದು ನನ್ನ ಹೆಂಡತಿ ನನಗೆ ತಿಳಿಸಿದರುʼ ಎಂದು ಹೇಳಿದರು.
ಶಾಹಿದ್ ಅಫ್ರಿದಿ, ‘ಪಾಕಿಸ್ತಾನದ ಧ್ವಜ ಕೂಡ ಅಲ್ಲಿ ಲಭ್ಯವಿರಲಿಲ್ಲ. ನನ್ನ ಕಿರಿಯ ಮಗಳು ಕೈಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಳು. ನನ್ನ ಬಳಿ ಅದರ ವಿಡಿಯೋ ಇದೆ ಆದರೆ ಅದನ್ನು ಟ್ವೀಟ್ ಮಾಡಬೇಕೋ ಬೇಡವೋ ಎಂದು ನನಗೆ ಅರ್ಥವಾಗುತ್ತಿಲ್ಲʼ ನಗುತ್ತಾ ಅಫ್ರೀದಿ ಹೇಳಿದರು.






