ನೆಹರು ದ್ವೇಷಿಗಳು ಎಷ್ಟೆ ಗಂಟಲು ಹರಿದುಕೊಂಡು ಚೀರಾಡಿದರೂ ಅವರನ್ನು ಅಧುನಿಕ ಭಾರತದ ಶಿಲ್ಪಿ ಎಂದು ಭಾರತದ ನೈಜ ದೇಶಭಕ್ತರು ಮತ್ತು ಇಡೀ ಜಾಗತಿಕ ಸಮುದಾಯ ಗುರುತಿಸಿದೆ. ಬ್ರಿಟೀಷರು ಬಿಟ್ಟುಹೋದ ಈ ಬರಿದಾದ ದೇಶವನ್ನು ಶೂನ್ಯದಿಂದ ಕಟ್ಟಿದ ಶ್ರೇಯ ನೆಹರುರವರಿಗಲ್ಲದೆ ಮತ್ಯಾರಿಗೂ ಸಲ್ಲದು. ಈ ದೇಶದ ಮೂಲಸೌಕರ್ಯ ಅಭಿವೃದ್ಧಿ ˌ ಇಂಧನ ಮೂಲಗಳ ಸೃಷ್ಟಿ ˌ ಉನ್ನತ ಶಿಕ್ಷಣ ಸಂಸ್ಥೆಗಳುˌ ಕೈಗಾರಿಕೋದ್ಯಮಗಳುˌ ಬಂದರು, ರಸ್ತೆ, ವಿಮಾನ ನಿಲ್ದಾಣ, ರೈಲ್ವೆಗಳ ಅಭಿವೃದ್ಧಿ ಇತ್ಯಾದಿ ನೆಹರು ದೂರದರ್ಶಿತ್ವದ ಫಲಶೃತಿಗಳು. ನೆಹರು ಯಾವತ್ತು ಹಣೆಯ ಮೇಲೆ ಕುಂಕುಮˌ ಗಂಧˌ ಬಂಡಾರ ಬಳಿದುಕೊಂಡು ಆಶಾಡಭೂತಿಗಳಂತೆ ಮಠ-ಮಂದಿರ ಅಂಡಲೆಯಲಿಲ್ಲ. ಬದಲಿಗೆ ವೈಜ್ಞಾನಿಕ ಮನೋಭಾವದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಿದರು.
“ನಾವು ಇಂದು ಆಚರಿಸುತ್ತಿರುವ ಸಂಭ್ರಮವು ಕೇವಲ ಒಂದು ಹೆಜ್ಜೆ. ಇದು ಮುಂದಿನ ದಿನಗಳಲ್ಲಿ ಅಪಾರವಾದ ಅವಕಾಶಗಳನ್ನು ತೆರೆಯಬಲ್ಲದು. ನಾಳೆ ನಾವು ಇನ್ನೂ ಹೆಚ್ಚಿನ ವಿಜಯಗಳು ಮತ್ತು ಸಾಧನೆಗಳನ್ನು ನಿರೀಕ್ಷಿಸಬೇಕಿದೆ. ಈ ಅವಕಾಶವನ್ನು ಗ್ರಹಿಸಲು ಮತ್ತು ಭವಿಷ್ಯದ ಸವಾಲಗಳನ್ನು ಸ್ವೀಕರಿಸಲು ನಾವು ಸಾಕಷ್ಟು ಧೈರ್ಯಶಾಲಿಗಳು ಮತ್ತು ಬುದ್ಧಿವಂತರಾಗಿದ್ದೇವೆಯೇ?.” ಎಪ್ಪತ್ತೈದು ವರ್ಷಗಳ ಹಿಂದೆ, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಧ್ಯರಾತ್ರಿ ಭಾರತದ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತ ತಮ್ಮ ಸ್ಫೂರ್ತಿದಾಯಕ ಭಾಷಣದಲ್ಲಿ ಈ ಮೇಲಿನ ಹೇಳಿಕೆಗಳನ್ನು ನೀಡಿದ್ದರು. ಅವರ ಭರವಸೆಯ ನುಡಿಗಳು ಭಾರತ ಮುಂದಿನ ದಿನಗಳಲ್ಲಿ ಹೇಗೆ ಹೆಜ್ಜೆಗಳನ್ನಿಡಬೇಕು ಎನ್ನುವುದರ ಸೂಚ್ಯ ದೃಷ್ಟಿಕೋನದ ಪ್ರತಿಬಿಂಬವಾಗಿದ್ದವು.
ನೆಹರೂರವರು ಭಾರತ ಮುಂದಿನ ದಿನಗಳಲ್ಲಿ ಹೇಗಿರಬೇಕು ಎನ್ನುವ ಕುರಿತು ದಿವ್ಯ ದೃಷ್ಟಿ ಹೊಂದಿದ್ದರು. ಅವರ ಭಾರತದ ದೃಷ್ಟಿಕೋನವು ಪ್ರಜಾಪ್ರಭುತ್ವ, ಜಾತ್ಯತೀತತೆ, ಅಂತರ್ಗತ ಆರ್ಥಿಕ ಬೆಳವಣಿಗೆ, ಮಾಧ್ಯಮ ಸ್ವಾತಂತ್ರ್ಯ ˌ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಅಲಿಪ್ತ ನೀತಿ ಮತ್ತು ಭಾರತದ ಭವಿಷ್ಯದ ಬೆಳವಣಿಗೆಗೆ ಅಡಿಪಾಯ ಹಾಕಬಲ್ಲ ಸಂಸ್ಥೆಗಳ ಆಧಾರದಲ್ಲಿ ಹುಟ್ಟಿಕೊಂಡಿತ್ತು. ಸ್ವಾತಂತ್ರ್ಯಾನಂತರ ನೆಹರೂ ಅವರು ನಾಯಕತ್ವವಹಿಸಿಕೊಳ್ಳುವ ಸಂದರ್ಭ ಎಂತದ್ದಾಗಿತ್ತು ಎನ್ನುವುದನ್ನು ನಾವು ಗಮನಿಸಬೇಕು. ೧೯೪೭ ರಲ್ಲಿ, ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ರಾಜಕೀಯ ವ್ಯವಸ್ಥೆ ಛಿದ್ರಗೊಂಡಿತ್ತು ˌ ಸಾಮಾಜಿಕ ವ್ಯವಸ್ಥೆ ವಿಘಟನೆಗೊಂಡಿತ್ತು ಹಾಗು ದೇಶದ ಸ್ಥಿತಿ ಭಾವನಾತ್ಮಕವಾಗಿ ನಾಶಗೊಂಡಿತ್ತು. ಅಂತಹ ಸಂದಿಗ್ಧ ಹಾಗು ಪ್ರಕ್ಷುಬ್ಧ ಸಂದರ್ಭದಲ್ಲಿ ಅವರು ಅಪಾರ ಸಂಯಮ ಮತ್ತು ಅತ್ಯಂತ ಆತ್ಮಸ್ಥೈರ್ಯದಿಂದ ದೇಶವನ್ನು ಮುನ್ನಡೆಸಿದ್ದಲ್ಲದೆ ಒಂದು ಆಧುನಿಕ, ಪ್ರಗತಿಶೀಲ ರಾಷ್ಟ್ರದ ದೃಷ್ಟಿಕೋನವನ್ನು ಹುಟ್ಟುಹಾಕಿ ಸದ್ದಿಲ್ಲದೆ ಜಾಗತಿಕ ಸಮುದಾಯದ ಗೌರವಕ್ಕೆ ಪಾತ್ರರಾದರು.
ನೆಹರುರವರು ಒಂದು ದೇಶವನ್ನು ಆಧುನಿಕತೆಯ ಬೇಡಿಕೆಗಳ ಆಧಾರದಲ್ಲಿ ರೂಪಿಸುತ್ತಾ ಅನೇಕ ಪ್ರಗತಿಪರ ಕಾರ್ಯಗಳನ್ನು ಮಾಡಿ ಭಾರತವನ್ನು ಅಧುನಿಕ ದೇವಾಲಯವಾಗಿ ಕಟ್ಟಿದರೆ ಹೊರತು ಪರಾವಲಂಬಿ ಪುರೋಹಿತರಿಗೆ ಆಶ್ರಯವಾಗಬಲ್ಲ ಹಾಗು ವಿಜ್ಞಾನಕ್ಕೆ ವಿರುದ್ಧವಾದ ಮೌಢ್ಯಗಳನ್ನು ಬಿತ್ತುವ ಮಂದಿರಗಳನ್ನು ಅಥವಾ ಬೃಹತ್ ಪ್ರತಿಮೆಗಳನ್ನು ನಿರ್ಮಿಸಲಿಲ್ಲ. ನೆಹರು ನಿರ್ಮಿಸಿದ ಭಾಕ್ರಾನಂಗಲ್ ಅಣೆಕಟ್ಟು ಯೋಜನೆಯು ಬಹುಪಯೋಗಿ ಅಣೆಕಟ್ಟುಗಳ ಸರಣಿಯಾಗಿದ್ದು, ಸ್ವಾತಂತ್ರ್ಯದ ನಂತರ ಭಾರತ ಸರಕಾರವು ಕೈಗೊಂಡ ಆರಂಭಿಕ ನದಿ ಕಣಿವೆ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾಗಿತ್ತು. ಆದಾಗ್ಯೂ, ಈ ಯೋಜನೆಯು ಸ್ವಾತಂತ್ರ್ಯಪೂರ್ವದಲ್ಲೆ ಕಲ್ಪಿಸಲಾಗಿತ್ತು. ಭಾರತವು ಕೃಷಿ ಪ್ರಧಾನ ದೇಶವಾದ್ದರಿಂದ ನಿರಾವರಿ ಯೋಜನೆಗೆ ಮೊದಲ ಆದ್ಯತೆ ನೀಡಿದವರು ನೆಹರುರವರು.
ಇಂದಿನ ಛತ್ತೀಸ್ಗಢ ರಾಜ್ಯದ ಭಿಲಾಯ್ ಪಟ್ಟಣ ಬೃಹತ್ ಕಬ್ಬಿಣದ ಅದಿರು ನಿಕ್ಷೇಪಗಳ ನೆಲೆಯಾಗಿದೆ ಎನ್ನುವುದನ್ನು ಅರಿತ ನೆಹರು ಅವರು ಭಿಲಾಯ್ ಸ್ಟೀಲ್ ಪ್ಲಾಂಟ್ ನ್ನು ನಿರ್ಮಿಸಲು ಯೋಜನೆ ರೂಪಿಸಿದರು. ಭಾರತ ಮತ್ತು ಅಂದಿನ ಸೋವಿಯತ್ ಸರಕಾರಗಳು ಮಾರ್ಚ್ ೨, ೧೯೫೫ ರಂದು ನವದೆಹಲಿಯಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಅದರ ಪರಿಣಾಮವಾಗಿ ಬೃಹತ್ ಬಿಲಾಯಿ ಸ್ಟೀಲ್ ಉತ್ಪಾದನಾ ಘಟಕ ತಲೆ ಎತ್ತಿತು. ಅದರಂತೆˌ ನೆಹರುರವರು ಬಾಬಾ ಪರಮಾಣು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಪರಮಾಣು ಶಕ್ತಿ ಆಯೋಗದ ಅಡಿಯಲ್ಲಿ ಪರಮಾಣು ರಿಯಾಕ್ಟರ್ಗಳು ಮತ್ತು ತಂತ್ರಜ್ಞಾನಕ್ಕಾಗಿ ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಭಾರತ ಸರಕಾರವು ಜನವರಿ ೩, ೧೯೫೪ ರಂದು ಅಟೊಮಿಕ್ ಎನರ್ಜಿ ಎಸ್ಟಾಬ್ಲೀಷ್ಮೆಂಟ್ ಟ್ರಾಂಬೆ (AEET) ಅನ್ನು ಅಣುಶಕ್ತಿ ಆಯೋಗದಡಿಯಲ್ಲಿ ಪ್ರಾರಂಭಿಸಿತು.
ಹೈಬ್ರಿಡ್ ಮೆಕ್ಕೆಜೋಳ ಮತ್ತು ವಿಕಿರಣಗೊಂಡ ಗೋಧಿ ಮ್ಯುಟೆಂಟ್ ಅನ್ನು ಉತ್ಪಾದಿಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೋಶಿ ಸೇನ್ ಅವರಂತಹ ಸ್ಥಳೀಯ ವಿಜ್ಞಾನಿಗಳನ್ನು ಬೆಂಬಲಿಸಲು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR)ಅನ್ನು ಅಂದು ನೆಹರು ಆರಂಭಿಸಿದರು. ಅದು ಇಂದು ಕೃಷಿ ಸಂಶೋಧನೆಯ ಅತ್ಯಂತ ಪ್ರತಿಷ್ಟೆಯ ಸಂಸ್ಥೆಯಾಗಿ ಬೆಳೆದು ನಿಂತು ದೇಶದ ಕೃಷಿ ಕ್ಷೇತ್ರದ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನ ನೀಡುತ್ತಿದೆ. ದೇಶದ ಕೃಷಿ ವಿಶ್ವವಿದ್ಯಾಲಯಗಳು ಕೈಗೊಳ್ಳುತ್ತಿರುವ ಸಂಶೋಧನೆಗಳಿಗೆ ಪೂರಕವಾಗಿ ಈ ಸಂಸ್ಥೆಯು ಕೃಷಿ ಕ್ಷೇತ್ರದ ಸಂಶೋಧನೆಯಲ್ಲಿ ಪರಪೋಚ್ಛ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ನೆಹರು ಸ್ಥಾಪಿಸಿದ ಈ ಎಲ್ಲಾ ಸಂಸ್ಥೆಗಳು ದೇಶದ ಸರ್ವಾಂಗೀಣ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿವೆ. ದೇಶದ ಆರ್ಥಿಕ ಅಭಿವೃದ್ಧಿಗೆ ಈ ಸಂಸ್ಥೆಗಳ ಪ್ರಸ್ತುತತೆ ತುಂಬಾ ಇತ್ತು. ಒಂದು ದೇಶದ ಆರ್ಥಿಕ ಅಭಿವೃದ್ಧಿಯು ಮುಖ್ಯವಾಗಿ ಆ ದೇಶದ ಕೈಗಾರಿಕಾ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ. ಸಣ್ಣ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸಲು ಕಬ್ಬಿಣ ಮತ್ತು ಉಕ್ಕು, ಹಡಗು, ಗಣಿಗಾರಿಕೆ, ಇತ್ಯಾದಿಗಳಂತಹ ಭಾರೀ ಮತ್ತು ಮೂಲಭೂತ ಕೈಗಾರಿಕೆಗಳ ಅಗತ್ಯತೆ ತುಂಬಾ ಇರುತ್ತದೆ. ಆ ದಿಶೆಯಲ್ಲಿ ನೆಹರುರವರ ಕೈಗಾರಿಕಾ ನೀತಿಯು ದೇಶದ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ. ಅದಷ್ಟೆ ಅಲ್ಲದೆ ದೇಶದಲ್ಲಿ ಅವರ ಕೈಗಾರಿಕಾ ನೀತಿಯಿಂದ ಉದ್ಯೋಗ ಸೃಷ್ಟಿಯಾಗುವ ಮೂಲಕ ಕೆಳ ಮಧ್ಯಮ ವರ್ಗದ ಜನರ ಬದುಕಿಗೆ ಆಸರೆಯಾಯಿತು.
ನೆಹರುರವರ ಕೈಗಾರಿಕಾ ನೀತಿಯು ದೇಶದ ಪ್ರಾದೇಶಿಕ ಅಭಿವೃದ್ಧಿಗೂ ಭದ್ರ ಬುನಾದಿಯನ್ನು ಹಾಕಿತು. ಖಾಸಗಿ ಕೈಗಾರಿಕಾ ವಲಯವು ಸಾಮಾನ್ಯವಾಗಿ ನಗರ ಕೇಂದ್ರಿತವಾಗಿದ್ದು ಅದು ದೇಶದ ಹಿಂದುಳಿದ ಪ್ರದೇಶವನ್ನು ಸದಾ ನಿರ್ಲಕ್ಷಿಸುತ್ತದೆ. ಆದರೆ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮ ವಲಯದ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಿˌ ಆ ಪ್ರದೇಶಗಳ ಅಭಿವೃದ್ಧಿಗೆ ನಾಂದಿ ಹಾಡಿತು. ದುರಂತವೆಂದರೆ ಅಂದು ನೆಹರುರವರು ಸ್ಥಾಪಿಸಿದ ಸಾರ್ವಜನಿಕ ಉದ್ಯಮಗಳು ಇಂದು ಖಾಸಗಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿವೆ.
ನೆಹರು ಅವರು ಸ್ಥಾಪಿಸಿದ ಉದ್ಯಮಗಳು ದೇಶದಲ್ಲಿ ಬೃಹತ್ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಿದವು. ಭಾರತದಲ್ಲಿ ಅಂದು ಸ್ಥಾಪಿಸಲಾದ ವಿವಿಧ ಸಾರ್ವಜನಿಕ ವಲಯಗಳಿಗೆ ಸಾಕಷ್ಟು ಮಾನವಶಕ್ತಿಯ ಅಗತ್ಯವಿತ್ತು ಮತ್ತು ಇದು ಅಗಣಿತ ಉದ್ಯೋಗಾಕಾಂಕ್ಷಿಗಳಿಗೆ ಅವರ ಶೈಕ್ಷಣಿಕ ಅರ್ಹತೆˌ ಅನುಭವ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಉದ್ಯೋಗವನ್ನು ಒದಗಿಸಿತು. ಇಂದು ಸಾರ್ವಜನಿಕ ಉದ್ಯಮಗಳನ್ನು ಉದ್ದೇಶಪೂರ್ವಕವಾಗಿ ನಷ್ಟಕ್ಕೆ ದೂಡಿ ಅವುಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟಮಾಡಲಾಗುತ್ತಿದೆ. ನೆಹರುರವರು ಸಾರ್ವಜನಿಕ ಉದ್ಯಮಗಳನ್ನು ಸೇವಾ ಉದ್ದೇಶದಿಂದ ಸ್ಥಾಪಿಸಿದರೆ ಹೊರತು ಲಾಭದ ಲೆಕ್ಕಾಚಾರದಿಂದಲ್ಲ. ಭಾರತೀಯ ಸಮಾಜಕ್ಕೆ ಉಪಯುಕ್ತ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ ಅವರು ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿದರು.
ದೇಶದಲ್ಲಿ ತ್ವರಿತ ಕೈಗಾರಿಕಾ ಬೆಳವಣಿಗೆಗೆ ಉತ್ತಮ ಮೂಲಸೌಕರ್ಯದ ಅಗತ್ಯವಿರುತ್ತದೆ. ದೇಶದ ಮೂಲಸೌಕರ್ಯ ಉದ್ಯಮಗಳಿಗೆ ಉತ್ತಮ ರಸ್ತೆಗಳು, ರೈಲುಮಾರ್ಗಗಳು, ವಿದ್ಯುತ್ತೀಕರಣ ಮುತಾದ ಮೂಲಸೌಕರ್ಯಗಳ ನಿರ್ಮಾಣಕ್ಕೆ ಬೃಹತ್ ಬಂಡವಾಳದ ಅಗತ್ಯವಿರುತ್ತದೆ. ಖಾಸಗಿ ವಲಯವು ಸೂಕ್ತ ಲಾಭವಿಲ್ಲದೆ ಅಂತಹ ಬೃಹತ್ ಬಂಡವಾಳ ಹೂಡಲಾರವು. ಆದರೆ ಸಾರ್ವಜನಿಕ ಉದ್ಯಮ ವಲಯವು ಎಲ್ಲಾ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿ ಅವನ್ನು ಸುಲಭವಾಗಿ ನಿಭಾಯಿಸುವ ಶಕ್ತಿ ಹೊಂದಿರುತ್ತದೆ. ಆ ದಿಶೆಯಲ್ಲಿ ನೆಹರುರವರು ದೇಶದಲ್ಲಿ ಕೈಗಾರಿಕೋದ್ಯಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಉತ್ತಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದರು. ಅವರ ದೂರದೃಷ್ಟಿಯ ಫಲದಿಂದ ಭಾರತ ಕ್ಷೀಪ್ರವಾಗಿ ಕೈಗಾರಿಕರಣಗೊಳ್ಳಲು ಸಹಕಾರಿಯಾಯಿತು.
ಆದರೆ ಸಾರ್ವಜನಿಕ ಉದ್ಯಮ ವಲಯ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳ ಕಳಪೆ ಸಾಧನೆಗೆ ಅಸಮರ್ಥ ನಿರ್ವಹಣೆಯು ಒಂದು ಕಾರಣವಾಗಿದೆ. ಈ ಉದ್ಯಮಗಳನ್ನು ಇಂದು ನಿರ್ವಹಿಸುತ್ತಿರುವವರು ಸೂಕ್ತ ವೃತ್ತಿಪರ ಅರ್ಹತೆಯಾಗಲಿ ಅಥವಾ ಕೈಗಾರಿಕಾ ಉದ್ಯಮಗಳ ನಿರ್ವಹಣೆಯ ಜ್ಞಾನವಾಗಲಿ ಹೊಂದಿಲ್ಲ. ಅದರೊಟ್ಟಿಗೆ ಅವರಲ್ಲಿ ದಕ್ಷತೆಯ ಕೊರತೆಯು ಎದ್ದು ಕಾಣುತ್ತಿದೆ. ಈ ಉದ್ಯಮಗಳು ವಾಣಿಜ್ಯ ಉದ್ದೇಶ ಅಥವಾ ಲಾಭ ಗಳಿಕೆಗಾಗಿ ಸ್ಥಾಪಿಸದೆ ಸಮಾಜ ಕಲ್ಯಾಣದ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆರ್ಥಿಕ ಅಭಿವೃದ್ಧಿಗೆ ನಿತ್ಯನೂತನ ಆವಿಷ್ಕಾರಗಳ ಅತ್ಯಗತ್ಯವಿರುತ್ತದೆ. ಅಂತಹ ಆವಿಷ್ಕಾರಗಳ ಕೊರತೆಯು ಕೂಡ ಸಾರ್ವಜನಿಕ ಉದ್ಯಮಗಳ ವಿಫಲತೆಗೆ ಕಾರಣವಾಗಿದೆ.
ಸಾರ್ವಜನಿಕ ಉದ್ಯಮಗಳು ಏಕಸ್ವಾಮ್ಯ ಅಥವಾ ಸ್ಪಧ್ಪಾತ್ಮಕ ಮನೋಭಾವದ ಕೊರತೆಯಿಂದಾಗಿ ಇಂದು ಸೊರಗುತ್ತಿವೆ. ಖಾಸಗಿ ವಲಯವು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಮತ್ತು ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಯಾವಾಗಲೂ ಹೊಸ ತಂತ್ರಜ್ಞಾನಗಳ ಹುಡುಕಾಟ ಮತ್ತು ಅಧುನಿಕ ಉತ್ಪಾದನಾ ವಿಧಾನಗಳ ಅವಿಷ್ಕಾರದಲ್ಲಿ ಕಾರ್ಯನಿರತವಾಗಿರುತ್ತವೆ. ಅವುಗಳಿಗೆ ಪ್ರಸ್ತುತ ಸವಾಲುಗಳನ್ನು ಎದುರಿಸುವ ಕ್ಷಮತೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಮುಖ್ಯವಾಗಿ ಅವು ಉತ್ತಮ ವ್ಯವಹಾರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ಯಾವುದೆ ಉದ್ಯಮವಾಗಿರಲಿ ಅದು ಅತ್ಯುತ್ತಮ ವ್ಯವಹಾರ ತತ್ವಗಳ ಮೇಲೆ ನಡೆಯಬೇಕು. ಎಲ್ಲಾ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ದಕ್ಷತೆಯನ್ನು ಸುಧಾರಿಸುವತ್ತ ಗಮನಹರಿಸಬೇಕು. ಸಾರ್ವಜನಿಕ ವಲಯವು ಹೊಂದಾಣಿಕೆ ಮನೋಭಾವ ಮತ್ತು ಕ್ಷಮತೆಯನ್ನು ಹೆಚ್ಚಿಸಿಕೊಂಡು ಹೆಚ್ಚು ಪರಿಣಾಮಕಾರಿ ಹಾಗು ಲಾಭದಾಯಕವಾಗಿಸುವ ಗುರಿಯೊಂದಿಗೆ ತಮ್ಮ ನೀತಿಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಮಾರ್ಪಡಿಸಿಕೊಳ್ಳಬೇಕಿದೆ.
ಸಾರ್ವಜನಿಕ ಉದ್ಯಮಗಳು ತಮ್ಮ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಗಣನೀಯ ಸ್ವಾಯತ್ತತೆಯನ್ನು ಹೊಂದುವ ಅಗತ್ಯವಿದೆ. ಅವು ಅಧಿಕಾರವನ್ನು ನಿಯೋಜಿಸುವ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಬೇಕಿದೆ. ಅಗತ್ಯ ಸ್ವಾಯತ್ತತೆ ನೀಡಿದರೆ ಅವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲವು ಮತ್ತು ಬೆಳವಣಿಗೆಯ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಲ್ಲವು. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಉದ್ಯಮ ವಲಯದ ಸೋಲಿಗೆ ರಾಜಕೀಯ ಹಸ್ತಕ್ಷೇಪವೂ ಮುಖ್ಯ ಕಾರಣವಾಗುತ್ತಿದೆ. ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ರಾಜಕಾರಣಿಗಳ ಸಾಮ್ರಾಜ್ಯ ಎಂದು ಪರಿಗಣಿಸಲಾಗುತ್ತಿದೆ. ಅವುಗಳನ್ನು ಆಡಳಿತ ಪಕ್ಷದ ಅಗತ್ಯತೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಸಲ್ಪಡುವ ವ್ಯವಸ್ಥೆ ಹುಟ್ಟುಪಡೆದಿದೆ. ಆ ಕಾರಣದಿಂದ ಸಾರ್ವಜನಿಕ ಉದ್ಯಮ ವಲಯ ರಾಜಕೀಯ ಹಸ್ತಕ್ಷೇಪದಿಂದ ಸಂಪೂರ್ಣ ಮುಕ್ತವಾಗಬೇಕಿದೆ.
ಹೀಗೆ ನೆಹರುರವರು ಉದಾತ್ ಉದ್ದೇಶಗಳನ್ನು ಇಟ್ಟುಕೊಂಡು ಈ ದೇಶವನ್ನು ದೂರದೃಷ್ಟಿಯ ನೆಲೆಗಟ್ಟಿನಲ್ಲಿ ರೂಪಿಸಿದ್ದಾರೆ. ಆದರೆ ಇಂದು ಅಂತಹ ಅಪ್ರತಿಮ ನಾಯಕನ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಹುಟ್ಟಿಸುವಲ್ಲಿ ದೇಶದ್ರೋಹಿ ಹಾಗು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರತವಾಗಿವೆ. ನೆಹರೂ ತಮ್ಮ ಸಮಕಾಲೀನ ನಾಯಕರಿಂದ ಕೂಡ ಟೀಕೆಗೆ ಒಳಪಟ್ಟಿದ್ದರು. ಆ ಟೀಕೆಗಳು ವಸ್ತುನಿಷ್ಟವಾಗಿದ್ದವೆ ಹೊರತು ವ್ಯಕ್ತಿತ್ವ ಹಾಗು ಚಾರಿತ್ರ್ಯ ಹರಣದಿಂದ ಕೂಡಿರಲಿಲ್ಲ.
ಆದಾಗ್ಯೂ, ಭಾರತದ ಸ್ವಾತಂತ್ರ್ಯ ಚಳುವಳಿಗೆ ಮತ್ತು ದೇಶದ ಮೊದಲ ಪ್ರಧಾನಿಯಾಗಿ ಅವರು ನೀಡಿದ ಅನನ್ಯ ಕೊಡುಗೆಗಳಿಗಾಗಿ ದೇಶದ ಒಳಗಿನ ಮತ್ತು ಹೊರಗಿನ ಜನರು ಅವರನ್ನು ಒಬ್ಬ ಮಹಾನ್ ದೂರದೃಷ್ಟಿಯುಳ್ಳ ನಾಯಕನೆಂದು ಒಪ್ಪಿಕೊಂಡಿದ್ದಾರೆ. ನೆಹರುರವರ ಮಾನವ ಸಹಜ ಹಾಗು ನಿರ್ಲಕ್ಷಿಸಬಹುದಾದ ನ್ಯೂನತೆಗಳು ಅವರು ಸ್ವಾತಂತ್ರ್ಯಕ್ಕೆ ಕೊಟ್ಟ ಅನನ್ಯ ಕೊಡುಗೆಗಳುˌ ಸ್ವತಂತ್ರ ರಾಷ್ಟ್ರದ ಮೊದಲ ಪ್ರಧಾನ ಮಂತ್ರಿಯಾಗಿ ಅವರು ಕೈಕೊಂಡ ರಾಷ್ಟ್ರ ಭದ್ರತೆಯ ಕಾರ್ಯಗಳು ಹಾಗು ಅವರು ಹುಟ್ಟುಹಾಕಿರುವ ಉಜ್ವಲ ಪರಂಪರೆಯನ್ನು ನಾಶಗೊಳಿಸುವ ಪಟ್ಟಭಭ್ರ ಶಕ್ತಿಗಳಿಗೆ ಸಹಕಾರಿಯಾಗಲಾರವು.