ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಮನೆಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸಂಭ್ರಮಿಸಿದ ಭಾರತ ಈಗ ಶತಮಾನದ ಸಂಭ್ರಮದೊಂದಿಗೆ ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿದೆ. ಈ ದೇಶದ ಮೌಲ್ಯಯುತ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಗರಿಕತೆಗೆ ಬುನಾದಿ ಹಾಕಿದಂತಹ ಚಿಂತನಾವಾಹಿನಿಗಳು ನಿರಂತರವಾಗಿ ಅಧಿಕಾರ ರಾಜಕಾರಣದ ಮಾಲಿನ್ಯ ಮತ್ತು ಸಾಂಸ್ಕೃತಿಕ ಮೇಲರಿಮೆಯ ದಾಳಿಯಿಂದ ನೇಪಥ್ಯಕ್ಕೆ ಸರಿಯುತ್ತಿರುವುದನ್ನು ಗಮನಿಸುತ್ತಲೇ, ಭಾರತ ತನ್ನ ನೂರರ ಹೊಸ್ತಿಲಲ್ಲಿ ಗಾಂಧಿ-ಅಂಬೇಡ್ಕರ್ ಕಂಡಂತಹ ಒಂದು ಶಾಂತಿಯುತ-ಸೌಹಾರ್ದಯುತ-ಸೋದರತೆಯ ಸಮಾಜವಾಗಿ ಕಾಣುವ ಆಶಯ ಸಹಜವಾಗಿಯೇ ನಮ್ಮಲ್ಲಿ ಇದೆ, ಇರಬೇಕಾಗಿದೆ. 1947ರಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಅಮೃತ ಗಳಿಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಹಿರಿಯ ಜೀವಗಳು ಕೆಡವಿದ ತಾರತಮ್ಯದ ಬೇಲಿಗಳು, ಬೇಧಭಾವದ ಗೋಡೆಗಳು ಮತ್ತು ವೈಷಮ್ಯದ ಕುಡಿಗಳು, 75ರ ಹರೆಯದಲ್ಲಿ ಹಂತಹಂತವಾಗಿ ಮರುಜೀವ ಪಡೆಯುತ್ತಿರುವ ಆತಂಕವೂ ನಮ್ಮನ್ನು ಕಾಡಬೇಕಿದೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಎಸೆದ ಪ್ರಕರಣವೊಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಜೀವ ಬೆದರಿಕೆ ಎನ್ನುವ ಒಂದು ಪರಿಕಲ್ಪನೆ ಸಾರ್ವಜನಿಕ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸರಕಿನಂತೆ ಬಳಕೆಯಾಗುತ್ತಿದ್ದು, ಸಿದ್ಧರಾಮಯ್ಯನವರೂ ತಮಗೆ ಜೀವ ಬೆದರಿಕೆ ಇದೆ ಎಂಬ ಆತಂಕಕ್ಕೊಳಗಾಗಿದ್ದಾರೆ. ಇದರ ಸತ್ಯಾಸತ್ಯತೆಗಳೇನೇ ಇದ್ದರೂ, ಮೊಟ್ಟೆ ಎಸೆದ ಪ್ರಸಂಗ ನಾವು ಪೋಷಿಸುತ್ತಿರುವ ಸಮಾಜದ ಒಂದು ಆಯಾಮವನ್ನು ಬಿಂಬಿಸುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗದು. ಮೊಟ್ಟೆ ಎಸೆದ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವರು ಎನ್ನುವುದಕ್ಕಿಂತಲೂ, ಇಂತಹ ಒಂದು ಪ್ರವೃತ್ತಿ ನಮ್ಮ ಸಮಾಜದ ಗರ್ಭದೊಳಗೇ ಏಕೆ ಹೊಕ್ಕಿದೆ ಎಂದು ಯೋಚಿಸಿದರೆ, ಈ ವಿವಾದವನ್ನು ಮುಕ್ತವಾಗಿ ಪರಾಮರ್ಶಿಸಬಹುದು. ಸಾಮಾಜಿಕ ಮೌಲ್ಯಗಳು, ಮನುಜ ಸಂವೇದನೆ ಮತ್ತು ಸಹಬಾಳ್ವೆಯ ಚಿಂತನೆಗಳನ್ನು ನಮ್ಮ ನಡುವೆ ಬಿಟ್ಟು ಹೋದ ಅನೇಕಾನೇಕ ಮಹನೀಯರ ಬೋಧನೆಗಳನ್ನು ಯುವ ಪೀಳಿಗೆಗೆ ತಲುಪಿಸಬೇಕಾದ ಜವಾಬ್ದಾರಿ ಇರುವ ರಾಜಕೀಯ ವ್ಯವಸ್ಥೆ ಇಂದು ಈ ಎಲ್ಲ ಮೌಲ್ಯಗಳನ್ನೂ ಬಿಕರಿಯಾಗುವ ಪದಾರ್ಥಗಳನ್ನಾಗಿ ಮಾಡಿದೆ.
1947ರ ಮೌಲ್ಯಯುತ ರಾಜಕೀಯ ಮತ್ತು ಸಾಮಾಜಿಕ ಮಾದರಿಗಳು ಇಂದು ನಮ್ಮ ಮುಂದಿಲ್ಲ. ಅಪರಾಧಮುಕ್ತ, ಭ್ರಷ್ಟಾಚಾರ ಮುಕ್ತ, ಸ್ವಜನಪಕ್ಷಪಾತ ಮುಕ್ತ ಮತ್ತು ಸ್ವಾರ್ಥರಹಿತ ರಾಜಕಾರಣ ವರ್ತಮಾನದ ಸಂದರ್ಭದಲ್ಲಿ ರಮ್ಯ ಕನಸಿನಂತೆ ಕಾಣಬಹುದಷ್ಟೇ. ಆಡಳಿತ ವ್ಯವಸ್ಥೆಯ ಅಡಿಯಿಂದ ಮುಡಿಯವರೆಗೂ ಈ ಎಲ್ಲ ಋಣಾತ್ಮಕ ಗುಣಗಳನ್ನು ಆವಾಹಿಸಿಕೊಂಡಿರುವ ಒಂದು ರಾಜಕೀಯ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಆರ್ಥಿಕವಾಗಿ ಮಾರುಕಟ್ಟೆ ಮತ್ತು ಕಾರ್ಪೋರೇಟ್ ಶಕ್ತಿಗಳನ್ನು ಅವಲಂಬಿಸಿದ್ದರೆ, ಸಾಮಾಜಿಕವಾಗಿ ಜಾತಿ ವ್ಯವಸ್ಥೆಯನ್ನೂ, ಸಾಂಸ್ಕೃತಿಕವಾಗಿ ಮತಧರ್ಮಗಳನ್ನೂ ಅವಲಂಬಿಸಿದೆ. ಈ ಭೂಮಿಕೆಗಳಲ್ಲಿ ನಿಂತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಚುನಾಯಿತ ಪ್ರತಿನಿಧಿಗಳು ಇದರೊಳಗಿನ ಚಾರಿತ್ರಿಕ ಮತ್ತು ವರ್ತಮಾನದ ಲೋಪಗಳನ್ನೇ ಹೆಕ್ಕಿ ತೆಗೆಯುತ್ತಾ ಜನಸಾಮಾನ್ಯರ ನಡುವೆ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಈ ವೈಫಲ್ಯವನ್ನು ಮರೆಮಾಚಲೆಂದೇ ಜಾತಿ, ಮತಧರ್ಮಗಳ ಬೇಲಿಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಾ ಯುವ ಸಮೂಹವನ್ನು ತನ್ನ ಕಾಲಾಳುಗಳಂತೆ ಬಳಸಿಕೊಳ್ಳುತ್ತಿದೆ.
ಸಾರ್ವಜನಿಕ ಜೀವನದಲ್ಲಿ, ಸಾಮಾಜಿಕ ವಲಯದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗೆ ತಾನು ಸಮಾಜಕ್ಕೆ ಏನು ಕೊಡಲು ಸಾಧ್ಯ ಎಂಬ ಮೌಲ್ಯಯುತ ಜಿಜ್ಞಾಸೆ ಕಾಡಲೇಬೇಕು. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಕಾರ್ಯಾಂಗ ಮತ್ತು ಶಾಸಕಾಂಗದ ಪ್ರತಿನಿಧಿಗಳಲ್ಲಿ ಈ ಜಿಜ್ಞಾಸೆ ನಿರಂತರವಾಗಿ ಕಾಡುತ್ತಿರಲೇಬೇಕು. ಅದರಲ್ಲೂ ಜನರಿಂದಲೇ, ಜನರಿಗಾಗಿಯೇ ಶಾಸನ ಸಭೆಗಳಿಗೆ ಆಯ್ಕೆಯಾಗುವ “ ಸೋ ಕಾಲ್ಡ್ ಜನಪ್ರತಿನಿಧಿಗಳಿಗೆ ” ತಮ್ಮಿಂದ ಸಮಾಜ ಏನನ್ನು ನಿರೀಕ್ಷಿಸುತ್ತಿದೆ ಎಂಬ ಪರಿಜ್ಞಾನವೂ ಇರಬೇಕು. ಯುವ ಸಮೂಹ ತನ್ನ ಭವಿಷ್ಯದ ಬದುಕು ಕಟ್ಟಿಕೊಳ್ಳುವ ಮಾರ್ಗಗಳನ್ನು ಶೋಧಿಸುತ್ತಲೇ ಇರುತ್ತದೆ. ಈ ಸಮೂಹಕ್ಕೆ ಶಾಂತಿ, ಸಮನ್ವಯತೆ, ಸೌಹಾರ್ದತೆ ಮತ್ತು ಸೋದರತ್ವದ ಮಾರ್ಗಗಳನ್ನೂ, ಸುಭದ್ರ ಸುಸ್ಥಿರ ಭವಿಷ್ಯದ ಭರವಸೆಯನ್ನೂ ಕಲ್ಪಿಸುವ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸಲಾಗುತ್ತಿದೆಯೇ ?
ಸಿದ್ಧರಾಮಯ್ಯ ಅವರ ಮೇಲೆ ಕಲ್ಲೆಸೆದ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಶೋಧಿಸಬೇಕಿದೆ. ಭಾರತದ ರಾಜಕಾರಣದಲ್ಲಿ ಇದೇನೂ ಮೊದಲ ಘಟನೆಯೇನಲ್ಲ. 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಹಮದಾಬಾದ್ನ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ, ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅವರತ್ತ ಷೂ ಎಸೆದಿದ್ದ. 1984ರ ಸಿಖ್ ಹತ್ಯಾಕಾಂಡದ ತನಿಖೆಯಲ್ಲಿ ಸಿಬಿಐ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿದ ಹಿನ್ನೆಲೆಯಲ್ಲಿ 2009ರಲ್ಲಿ ಅಂದಿನ ಗೃಹ ಸಚಿವ ಪಿ ಚಿದಂಬರಂ ಅವರ ಮೇಲೆ ಜರ್ನೈಲ್ ಸಿಂಗ್ ಎಂಬ ಪತ್ರಕರ್ತ ಷೂ ಎಸೆದಿದ್ದ. 2009ರ ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯೆಂದೇ ಬಿಂಬಿಸಲಾಗಿದ್ದ ಹಿರಿಯ ಧುರೀಣ ಎಲ್ ಕೆ ಅಡ್ವಾಣಿ ಅವರ ಮೇಲೆ ಒಬ್ಬ ಮರದ ಚಪ್ಪಲಿಯನ್ನು ಎಸೆದಿದ್ದ. 2010ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರೂ ಇದೇ ಆತಿಥ್ಯವನ್ನು ಎದುರಿಸಬೇಕಾಯಿತು. 2016ರ ಏಪ್ರಿಲ್ 9ರಂದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಸಹ ಈ ರೀತಿ ದಾಳಿಗೆ ಗುರಿಯಾಗಿದ್ದರು. ಇವೆಲ್ಲವೂ ಪತ್ರಿಕೆಗಳಲ್ಲಿ ವರದಿಯಾದ ಪ್ರಸಂಗಗಳು.
ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಸಮೂಹದಲ್ಲಿ ಈ ಪ್ರವೃತ್ತಿ ಮೂಡಲು ಹಲವು ಕಾರಣಗಳಿರುತ್ತವೆ. ಚುನಾಯಿತ ಪ್ರತಿನಿಧಿಗಳಿಂದ ತಾವು ನಿರೀಕ್ಷಿಸಿದ ಅಭಿವೃದ್ಧಿ ಅಥವಾ ಬದಲಾವಣೆಗಳು ಆಗದೆ ಇರುವುದು ಸಾಮಾನ್ಯವಾಗಿ ಜನರಲ್ಲಿ ಆಕ್ರೋಶ ಹೆಚ್ಚಾಗಲು ಕಾರಣವಾಗಿರುತ್ತದೆ. ಸಾರ್ವಜನಿಕರಲ್ಲಿನ ಹತಾಶೆ ಮತ್ತು ಆಕ್ರೋಶಗಳನ್ನು ಕೂಡಲೇ ಶಮನ ಮಾಡುವ ನೈತಿಕ ಜವಾಬ್ದಾರಿ ಆಡಳಿತ ವ್ಯವಸ್ಥೆಯ ಮೇಲಿರುತ್ತದೆ. ನಿರುದ್ಯೋಗ, ಬಡತನ, ಹಸಿವು, ವಸತಿಹೀನತೆ, ಅನೈರ್ಮಲ್ಯ ಮತ್ತು ದೈನಂದಿನ ಬದುಕಿಗೆ ಅವಶ್ಯವಾದ ಮೂಲ ಸೌಕರ್ಯಗಳ ಕೊರತೆ ಇವೆಲ್ಲವೂ ಸಹ ಇದಕ್ಕೆ ಕಾರಣವಾಗಿರುತ್ತದೆ. ಈ ಹತಾಶೆ ಮತ್ತು ಆಕ್ರೋಶಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯ ಪರಿಣಾಮವಾಗಿ ಮಡುಗಟ್ಟಿದಾಗ, ಯಾವುದೋ ಒಂದು ಸಂದರ್ಭದಲ್ಲಿ ಅದು ವಿಭಿನ್ನ ರೂಪಗಳಲ್ಲಿ ಹೊರಹೊಮ್ಮುತ್ತದೆ. ಹಿಂಸಾತ್ಮಕ, ಆಕ್ರಮಣಕಾರಿ ಪ್ರವೃತ್ತಿ ಯುವ ಸಮೂಹದಲ್ಲಿ ಹೆಚ್ಚಾಗಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿರುವ ರಾಜಕೀಯ ನಾಯಕರಿಗೆ ಈ ರೀತಿಯ ದಾಳಿಗಳನ್ನು ಎದುರಿಸಬೇಕಾಗುತ್ತದೆ.
ಈ ಕಲ್ಲೆಸೆಯುವ, ಮೊಟ್ಟೆ ಎಸೆಯುವ ಯುವ ಸಮೂಹದ ಆದರ್ಶಗಳು ಯಾರು ? ಸ್ವಾತಂತ್ರ್ಯ ಪೂರ್ವದಲ್ಲಾಗಲೀ, 1980ರ ದಶಕದವರೆಗಿನ ರಾಜಕೀಯ ನಾಯಕರಲ್ಲಾಗಲೀ ಈ ಆದರ್ಶಗಳನ್ನು ಶೋಧಿಸುವುದು ಕಷ್ಟ. ಏಕೆಂದರೆ ಅಲ್ಲಿಯವರೆಗಿನ ಭಾರತದ ರಾಜಕಾರಣದಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಮಾನ್ಯತೆ ಇತ್ತು. ಕಳೆದ ನಾಲ್ಕು ದಶಕಗಳ ಅಧಿಕಾರ ರಾಜಕಾರಣದಲ್ಲಿ ಈ ಮೌಲ್ಯಗಳನ್ನೂ ಹರಾಜು ಹಾಕಲಾಗಿದೆ. ಕೆಲವು ಪ್ರಸಂಗಗಳನ್ನು ಇಲ್ಲಿ ಉದಹರಿಸಬಹುದು. ಸಂಸತ್ತಿನಲ್ಲಿ ತೆಲಂಗಾಣ ಮಸೂದೆಯನ್ನು ಮಂಡಿಸಿದಾಗ ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರ ಮೇಲೆ ತೆಲಂಗಾಣ ಸಂಸದರು ಮೆಣಸಿನ ಪುಡಿಯನ್ನು ಎಸೆದಿದ್ದರು. ಒಮ್ಮೆ ಉತ್ತರಪ್ರದೇಶದ ವಿಧಾನಸಭೆಯ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಶಾಸಕರ ನಡುವೆ ವಾಗ್ವಾದ ತಾರಕಕ್ಕೇರಿ ಶಾಸಕರು ಕುರ್ಚಿಗಳನ್ನು, ಮೈಕ್ರೋಫೋನ್ಗಳನ್ನು ಪರಸ್ಪರ ಎಸೆದುಕೊಂಡಿದ್ದರು. ಒಡಿಷಾದ ವಿಧಾನಸಭೆಯಲ್ಲೂ ಕುರ್ಚಿಗಳನ್ನೆಸೆದ ಘಟನೆ ನಡೆದಿತ್ತು. ತಮಿಳುನಾಡು ವಿಧಾನಸಭೆಯಲ್ಲಿ ಕರುಣಾನಿಧಿಯವರಿಗೆ ಆದ ಅನುಭವ ತಿಳಿದದ್ದೇ ಆಗಿದೆ. ಸಂವಿಧಾನವನ್ನು ಪ್ರತಿನಿಧಿಸುವ ಶಾಸನ ಸಭೆಗಳಿಗೆ ಸಲ್ಲಬೇಕಾದ ಕನಿಷ್ಠ ಗೌರವವನ್ನೂ ಸಲ್ಲಿಸದ ಮಟ್ಟಿಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಮೌಲ್ಯಹೀನರಾಗಿರುವುದು ಸ್ಪಷ್ಟ.
ಸ್ವಾತಂತ್ರ್ಯ ಸಂಗ್ರಾಮದ ಎರಡು ಶತಮಾನಗಳಲ್ಲಿ ಮಹಾನ್ ನಾಯಕರು ಯುವ ಸಮಾಜಕ್ಕೆ ಏನು ನೀಡಿದ್ದರು ಎಂದು ಯೋಚಿಸಿದಾಗ ಈ ಜನಪ್ರತಿನಿಧಿಗಳು ಸಮಾಜಕ್ಕೆ ಮತ್ತು ಯುವ ಸಮಾಜಕ್ಕೆ ಏನನ್ನು ನೀಡಬೇಕಿತ್ತು ಎನ್ನುವುದಕ್ಕೂ ಸ್ಪಷ್ಟ ಉತ್ತರ ದೊರೆತೀತು. ವಿವೇಕಾನಂದರು ನೀಡಿದ ಆಧ್ಯಾತ್ಮಿಕ ಶಕ್ತಿ, ಠಾಗೂರರು ನೀಡಿದ ವಿಶ್ವಮಾನವ ಪ್ರಜ್ಞೆ, ಗಾಂಧಿ ನೀಡಿದ ಶಾಂತಿ-ಅಹಿಂಸೆಯ ಮಂತ್ರ, ಅಂಬೇಡ್ಕರ್ ನೀಡಿದ ಅರಿವು-ಸಮಾನತೆಯ ಸಂವಿಧಾನ, ನೆಹರೂ ನೀಡಿದ ಆಧುನಿಕತೆಯ ಪರಿಕಲ್ಪನೆ ಇವೆಲ್ಲವೂ ಭವ್ಯ ಭಾರತದ ನಿರ್ಮಾಣದ ಇಟ್ಟಿಗೆಗಳಾಗಬೇಕಿತ್ತು. ಸ್ವಾತಂತ್ರ್ಯಾನಂತರದಲ್ಲಿ ನೆಹರೂ ಅವರಿಂದ ವಾಜಪೇಯಿಯವರವರೆಗೆ ಈ ದೇಶವನ್ನಾಳಿದ ರಾಜಕೀಯ ನಾಯಕರು ಒಂದು ಸೌಜನ್ಯಯುತ, ಸಂಯಮಪೂರ್ಣ ರಾಜಕೀಯ ಪರಿಭಾಷೆಯನ್ನೂ ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ದುರಂತ ಎಂದರೆ ಕಳೆದ ನಾಲ್ಕು ದಶಕಗಳಲ್ಲಿ ಈ ಎಲ್ಲ ಸ್ಥಾವರಗಳನ್ನೂ ವ್ಯವಸ್ಥಿತವಾಗಿ ಕೆಡವಿ ಹಾಕಲಾಗಿದೆ. ಇಂದಿನ ಜನಪ್ರತಿನಿಧಿಗಳು ಯುವ ಸಮೂಹಕ್ಕೆ ಯಾವ ರಾಜಕೀಯ ಪರಿಭಾಷೆಯನ್ನು ಉಣಬಡಿಸುತ್ತಿದ್ದಾರೆ ? ಯಾವ ರೀತಿಯ ಕ್ರಿಯೆ-ಪ್ರಕ್ರಿಯೆಯ ಪ್ರಮೇಯಗಳನ್ನು ಬೋಧಿಸುತ್ತಿದ್ದಾರೆ ?
ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ನೀಡಿದ ಬೋಧೆಗಳನ್ನು, ಕುವೆಂಪು, ಠಾಗೂರ್ ಮುಂತಾದ ಮಹಾನ್ ಕವಿಗಳು ನೀಡಿದ ವಿಶ್ವಮಾನವ ಸಂದೇಶದ ತತ್ವಗಳನ್ನು ಯುವ ಸಮೂಹಕ್ಕೆ ತಲುಪಿಸಬೇಕಾದ ನಾವು, ಯುವ ಸಮುದಾಯದ ಕೈಗಳಿಗೆ ಕಲ್ಲು, ಮೊಟ್ಟೆ, ತ್ರಿಶೂಲ, ಲಾಂಗು, ಮಚ್ಚು, ತಲವಾರು, ಬಡಿಗೆ, ಬಂದೂಕುಗಳನ್ನು ನೀಡುತ್ತಿದ್ದೇವೆ. ಸಣ್ಣನ ಜಲ್ಲಿಕಲ್ಲಿನಿಂದ ಕೈಬಾಂಬಿನವರೆಗೆ ಯುವ ಸಮೂಹದ ಕೈಗೆ ನೀಡುವ ಯಾವುದೇ ವಸ್ತುವಾದರೂ ಅದರ ಹಿಂದೆ ಒಂದು ಆಕ್ರಮಣಕಾರಿ ಮನಸ್ಥಿತಿಯೂ ಇರುತ್ತದೆ, ಹಲ್ಲೆಕೋರ ಮನೋಭಾವವೂ ಇರುತ್ತದೆ. ಈ ಅಲ್ಪಾಯುಧಗಳನ್ನು ಯುವಕರ ಕೈಗೆ ಕೊಡುವವರ ಉದ್ದೇಶ/ದುರುದ್ದೇಶ ಏನೇ ಇದ್ದರೂ ಅದನ್ನು ಬಳಸುವ ಯುವ ಮನಸುಗಳು ನಿರಂತರ ಕ್ಷೋಭೆ ಎದುರಿಸುತ್ತಿರುತ್ತವೆ. ಉದ್ದೇಶಿತ ಗುರಿಯನ್ನೂ ದಾಟಿ ಈ ಅಲ್ಪಾಯುಧಗಳು ಬಳಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಆಯುಧ ಬಳಸುವ ಹಕ್ಕು ಅದನ್ನು ಹೊಂದಿರುವ ವ್ಯಕ್ತಿಯದ್ದೇ ಆಗಿರುತ್ತದೆ. ಕೊಟ್ಟವರು ತಮ್ಮ ನೈತಿಕ ಮತ್ತು ಭೌತಿಕ ನಿಯಂತ್ರಣವನ್ನು ಎಂದೋ ಕಳೆದುಕೊಂಡಿರುತ್ತಾರೆ. .
ಇದರ ದುರಂತ ನಿದರ್ಶನವನ್ನು ಕಾಶ್ಮೀರದ ಕಣಿವೆಗಳಲ್ಲಿ ಕಂಡಿದ್ದೇವೆ. ಕಾಶ್ಮೀರಕ್ಕಾಗಿ ಅಥವಾ ಇಸ್ಲಾಂ ಧರ್ಮ ರಕ್ಷಣೆಗಾಗಿ ಉಗ್ರವಾದಿ ಸಂಘಟನೆಗಳು ಅಲ್ಲಿನ ಒಂದು ಇಡೀ ಯುವ ಪೀಳಿಗೆಯನ್ನು ಕಲ್ಲೆಸೆಯುವ, ಬಂದೂಕು ಬಳಸುವ, ಗ್ರೆನೇಡ್ ಎಸೆಯುವ ಕಾಲಾಳುಗಳಾಗಿ ರೂಪಿಸಿಬಿಟ್ಟಿವೆ. ಈ ಯುವ ಸಮೂಹ ಭಾವೋನ್ಮಾದಕ್ಕೆ ಬಲಿಯಾಗಿ ತನ್ನ ಸ್ವಂತಿಕೆಯನ್ನೇ ಕಳೆದುಕೊಂಡು, ಭಯೋತ್ಪಾದನೆ ಮತ್ತು ಉಗ್ರವಾದದ ಬಲಿಪೀಠಗಳಲ್ಲಿ ಬಲಿಯಾಗುತ್ತಿದ್ದಾದೆ. ಈ ಉನ್ಮತ್ತ ಯುವ ಸಮೂಹವನ್ನು ನಿಯಂತ್ರಿಸುವ ನೈತಿಕತೆಯನ್ನೂ ಉಗ್ರವಾದವನ್ನು ಪೋಷಿಸಿದ ನಾಯಕರು, ಸಂಘಟನೆಗಳು ಕಳೆದುಕೊಂಡಿರುವುದನ್ನು ಕಂಡಿದ್ದೇವೆ. ಇಂದು ದ್ವೇಷರಾಜಕಾರಣಕ್ಕೆ ಬಲಿಯಾಗಿ ಸಶಸ್ತ್ರೀಕರಣಕ್ಕೊಳಗಾಗುತ್ತಿರುವ ಹಿಂದೂ ಯುವ ಸಮೂಹವೂ ಮತ್ತೊಂದು ರೀತಿಯಲ್ಲಿ ಆಕ್ರಮಣಕಾರಿ ಧೋರಣೆಯನ್ನು ಬೆಳೆಸಿಕೊಳ್ಳುತ್ತಿದೆ. ಮತಾಂಧತೆ ಮತ್ತು ಮತೀಯ ರಾಜಕಾರಣದಿಂದ ಹೊರತಾಗಿ ನೋಡಿದರೂ, ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಯುವ ಕಾಲಾಳುಗಳಲ್ಲಿ ಆಕ್ರಮಣಕಾರಿ ಮನೋಭಾವವನ್ನು ಹೆಚ್ಚಿಸುತ್ತಿರುವುದನ್ನು ಗಮನಿಸಬಹುದು. ಕೇರಳದ ರಾಜಕಾರಣ ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣುತ್ತದೆ.
ಪಕ್ಷ ರಾಜಕಾರಣ, ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ನೋಡಿದಾಗಲೂ, ಇಂದಿನ ದಿನಗಳಲ್ಲಿ ಕ್ಷುಲ್ಲಕ ಜಗಳ ನಡೆದರೂ ಯುವಕರು ಚೂರಿಯಿಂದ ಇರಿಯುವುದು ಸಾಮಾನ್ಯವಾಗಿಹೋಗಿದೆ. ಸಾರ್ವಜನಿಕ ಬದುಕಿನಲ್ಲಿ ಚಾಕು, ಚೂರಿ ಬಳಸುವುದು ನಿಷಿದ್ಧ ಅಥವಾ ಪಾಶವೀತನದ ದ್ಯೋತಕ ಎಂದು ಭಾವಿಸಿದ್ದಂತಹ ಒಂದು ಸಮಾಜವನ್ನು ನಾವು ಈ ಹಂತಕ್ಕೆ ತಂದು ನಿಲ್ಲಿಸಿದ್ದೇವೆ. ವ್ಯಕ್ತಿಗತ ನೆಲೆಯ ಪ್ರೇಮಪ್ರಕರಣಗಳಲ್ಲೂ ಶಸ್ತ್ರ ಬಳಕೆ ಸಾಮಾನ್ಯವಾಗಿಹೋಗಿದೆ. ಇದಕ್ಕೆ ಕಾರಣರು ಯಾರು ? ಶಾಂತಿ, ಅಹಿಂಸೆ, ಸಹನೆ ಮತ್ತು ಸಮಾನತೆಯನ್ನು ಬೋಧಿಸಿದ ಗಾಂಧಿ, ಅಂಬೇಡ್ಕರ್ ಮುಂತಾದವರ ಬೌದ್ಧಿಕ ಸಮ್ಮುಖದಲ್ಲೇ ಇಂತಹ ಒಂದು ಆಕ್ರಮಣಕಾರಿ ಯುವ ಕಾಲಾಳುಗಳನ್ನು ನಮ್ಮ ಸಮಾಜ ಸೃಷ್ಟಿಸುತ್ತಲೇ ಬಂದಿದೆ. ಜಾತಿ, ಮತ, ಧರ್ಮದ ಶ್ರೇಷ್ಠತೆಯ ರಕ್ಷಣೆಗಾಗಿ, ಮನುಷ್ಯನ ಶ್ರೇಷ್ಠ ಗುಣಗಳಲ್ಲೊಂದಾದ ಮಾನವತೆಯ ಲಕ್ಷಣವನ್ನೇ ಬಲಿಕೊಡುವ ವಾತಾವರಣವನ್ನು ಭಾರತದ ರಾಜಕಾರಣ ಸೃಷ್ಟಿಸಿಬಿಟ್ಟಿದೆ. ಹಿಂಸೆ, ಅತ್ಯಾಚಾರ, ದೌರ್ಜನ್ಯ, ತಾರತಮ್ಯಗಳನ್ನು ವರ್ಜಿಸಬೇಕಾದ ಒಂದು ನಾಗರಿಕತೆಯನ್ನು ಉಲ್ಲಂಘಿಸಿ ಈ ಋಣಾತ್ಮಕ ಗುಣಗಳನ್ನೇ ವೈಭವೀಕರಿಸುವ, ಸಂಭ್ರಮಿಸುವ ವಿಕೃತ ಸಮಾಜವನ್ನು ನಮಗೆ ನಾವೇ ನಿರ್ಮಿಸಿಕೊಂಡಿದ್ದೇವೆ. ಇದಕ್ಕೆ ಕಾರಣರು ಯಾರು ?
ಆಡಳಿತ ವ್ಯವಸ್ಥೆಯನ್ನು ಪ್ರತಿನಿಧಿಸುವ ಶಾಸನ ಸಭೆಗಳ ಸಮಸ್ತ ಸದಸ್ಯರನ್ನು, ಪಕ್ಷಾತೀತವಾಗಿ, ಈ ಪ್ರಶ್ನೆ ಕಾಡಬೇಕಿದೆ. ಕೆಲವರನ್ನಾದರೂ ಜಾಗೃತಗೊಳಿಸಬೇಕಿದೆ. ಈ ಚುನಾಯಿತ ಪ್ರತಿನಿಧಿಗಳಿಗೆ ಜನರಿಂದಲೇ ಆಯ್ಕೆಯಾಗುವ ಸರ್ಕಾರವನ್ನು ನಿಭಾಯಿಸುವುದು ಸಾಂವಿಧಾನಿಕ ಕರ್ತವ್ಯವಾಗಿರುವಂತೆಯೇ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಹ ಆಡಳಿತ ನೀತಿಗಳನ್ನು ರೂಪಿಸುವುದು ಸಹ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಹಾಗೆಯೇ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಮನ್ವಯತೆ ಮತ್ತು ಸೋದರತೆಯನ್ನು ಕಾಪಾಡಿಕೊಂಡು ಬರುವ ಒಂದು ವಾತಾವರಣವನ್ನು ನಿರ್ಮಿಸುವುದು ನೈತಿಕ ಜವಾಬ್ದಾರಿಯೂ ಆಗಿರುತ್ತದೆ. ಇದನ್ನೇ ಡಾ ಬಿ ಆರ್ ಅಂಬೇಡ್ಕರ್ ಸಾಂವಿಧಾನಿಕ ನೈತಿಕತೆ ಎನ್ನುತ್ತಾರೆ. ಈ ನೈತಿಕತೆಯನ್ನು ನಮ್ಮ ರಾಜಕೀಯ ವ್ಯವಸ್ಥೆ ಕಳೆದುಕೊಂಡಿರುವುದರಿಂದಲೇ ಯುವ ಸಮೂಹ ದಿಕ್ಕು ತಪ್ಪುತ್ತಿದೆ. ನಾವು ಇಂದಿನ ಯುವ ಪೀಳಿಗೆಗೆ, ಭವಿಷ್ಯದ ಪ್ರಜೆಗಳಿಗೆ ಮಾನವೀಯ ನೆಲೆಗಳ ಮೌಲ್ಯಗಳನ್ನು ನೀಡುವಂತಾದರೆ, ಸಮಾಜವೂ ಸಹ ಬೌದ್ಧಿಕ ಸ್ವಾಸ್ಥ್ಯದೊಂದಿಗೆ ಸುಂದರವಾಗಿ ರೂಪುಗೊಳ್ಳಲು ಸಾಧ್ಯ.
ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಯೂ ತಾನು ಸಮಾಜಕ್ಕೆ ಬೌದ್ಧಿಕವಾಗಿ ಏನನ್ನು ನೀಡುತ್ತಿದ್ದೇನೆ ಎಂದು ಎದೆಮುಟ್ಟಿ ಪ್ರಶ್ನಿಸಿಕೊಳ್ಳುವುದು ಇವತ್ತಿನ ತುರ್ತು. ಈ ನೀಡುವಿಕೆಯ ಪ್ರಕ್ರಿಯೆಯಲ್ಲಿ ನಡವಳಿಕೆ, ಚಟುವಟಿಕೆ, ಕ್ರಿಯೆ, ಮನೋಭಾವ, ಚಿಂತನೆ, ಆಲೋಚನೆ ಮತ್ತು ಆದರ್ಶ ಇವೆಲ್ಲವೂ ಅಡಗಿರುತ್ತದೆ. ಇದರೊಂದಿಗೆ ಬಳಸುವ ಭಾಷೆ ಮತ್ತು ಪರಿಭಾಷೆಯೂ ಸಮಾಜದ ದೃಷ್ಟಿಯಿಂದ ಆರೋಗ್ಯಕರವಾಗಿರಬೇಕಾಗುತ್ತದೆ. ಆದರ್ಶ ಎನ್ನುವ ಉದಾತ್ತ ಪರಿಕಲ್ಪನೆಯನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಭವಿಷ್ಯದ ಭಾರತಕ್ಕೆ ನೀಡಲು ಇಂದಿನ ರಾಜಕೀಯ ವ್ಯವಸ್ಥೆಗೆ ಸಾಧ್ಯವಿದೆ. ದುರಂತ ಎಂದರೆ ರಾಜಕೀಯ ಪಕ್ಷಗಳು ನಾಯಕರು ತಮ್ಮ ಭ್ರಷ್ಟತೆ ಮತ್ತು ಅನೈತಿಕತೆಯನ್ನು ಸಮರ್ಥಿಸಿಕೊಳ್ಳಲು ಮತ್ತೊಬ್ಬರತ್ತ ಬೆರಳು ತೋರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೇಳಿರುವಂತೆ ಇಲ್ಲಿ ಯಾರೂ ಸತ್ಯಹರಿಶ್ಚಂದ್ರರು ಇಲ್ಲ. ಆದರೆ ಸುಂದರ ಭವಿಷ್ಯ ಭಾರತದ ನಿರ್ಮಾಣಕ್ಕಾಗಿ ಈ ದೇಶದ ಯುವ ಸಮೂಹ ನಕ್ಷತ್ರಿಕರಾಗಬೇಕಿದೆ. ನಾವು, ಅಂದರೆ ನಮ್ಮ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆ ಯುವ ಸಮೂಹಕ್ಕೆ ಅರಿವು, ಜ್ಞಾನ, ಸಹನೆ ಮತ್ತು ಸೋದರತೆಯ ಅಸ್ತ್ರಗಳನ್ನು ನೀಡಬೇಕಿದೆ. ತಮಗೆ ಒದಗಿಸುತ್ತಿರುವುದನ್ನೇ ಬಳಸುತ್ತಿರುವ ಯುವ ಸಮೂಹವನ್ನು ಬೌದ್ಧಿಕವಾಗಿಯಾದರೂ 1980ರ ದಶಕದ ಹಿಂದಿನ ಭಾರತಕ್ಕೆ , 1950ರ ಮುಂಚಿನ ಆದರ್ಶಗಳಿಗೆ ಕರೆದೊಯ್ಯುವುದರ ಮೂಲಕ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಿದೆ.