21 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ US ಓಪನ್ 2022 ರಿಂದ ಹಿಂದೆ ಸರಿಯುವುದನ್ನು ಗುರುವಾರ ದೃಢಪಡಿಸಿದ್ದಾರೆ. ಆಗಸ್ಟ್ 29 ರಿಂದ ಪ್ರಾರಂಭವಾಗುವ ಗ್ರ್ಯಾಂಡ್ ಸ್ಲಾಮ್ಗಾಗಿ ನ್ಯೂಯಾರ್ಕ್ಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ತಿಳಿಸಿದ್ದಾರೆ. ಆ ಮೂಲಕ ತಮ್ಮ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಗಳಿಗೆ ತಣ್ಣೀರೆರೆಚಿದ್ದಾರೆ.
ನ್ಯೂಯಾರ್ಕ್ನಲ್ಲಿ 3 ಬಾರಿ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ಅವರು ಅಧಿಕೃತ ಪ್ರವೇಶ ಪಟ್ಟಿಯ ಭಾಗವಾಗಿದ್ದರು. ಆದರೆ ಲಸಿಕೆ ಹಾಕದ ಕಾರಣದಿಂದ ಅವರು ಯುನೈಟೆಡ್ ಸ್ಟೇಟ್ಸ್ಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಜೊಕೊವಿಕ್ ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಟ್ಯೂನ್-ಅಪ್ ಕ್ರೀಡಾ ಕೂಟಗಳಲ್ಲೂ ಕಾಣಿಸಿಕೊಂಡಿರಲಿಲ್ಲ.
ಕೋವಿಡ್ -19 ವಿರುದ್ಧ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ ಕಾರಣ 2022 ರಲ್ಲಿ ಆಸ್ಟ್ರೇಲಿಯನ್ ಓಪನ್ ನಂತರ ಇದು ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಿಂದ ಜೊಕೊವಿಕ್ ಹೊರಗುಳಿಯುತ್ತಿದ್ದಾರೆ.
“ದುಃಖಕರವೆಂದರೆ, ನಾನು ಈ ಬಾರಿ US ಓಪನ್ಗಾಗಿ ನ್ಯೂಯಾರ್ಕ್ ಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲದ ಸಂದೇಶಗಳಿಗಾಗಿ ಧನ್ಯವಾದಗಳು” ಎಂದು ಜೊಕೊವಿಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
![](https://pratidhvani.com/wp-content/uploads/2022/08/i-hope-novak-djokovic-can-do-it-says-former-atp-star.webp)
ಜೊಕೊವಿಕ್ಗೆ ಯುನೈಟೆಡ್ ಸ್ಟೇಟ್ಸ್ಗೆ ಪ್ರಯಾಣಿಸಲು ಸಾಧ್ಯವಾಗದಿರುವುದು ‘ತುಂಬಾ ದುರದೃಷ್ಟಕರ’ ಎಂದು ಯುಎಸ್ ಓಪನ್ ಟೂರ್ನಮೆಂಟ್ ನಿರ್ದೇಶಕ ಸ್ಟೇಸಿ ಅಲ್ಲಾಸ್ಟರ್ ಹೇಳಿದ್ದಾರೆ. “ನೊವಾಕ್ ಒಬ್ಬ ಮಹಾನ್ ಚಾಂಪಿಯನ್ ಮತ್ತು 2022 ರ ಯುಎಸ್ ಓಪನ್ನಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರುವುದು ತುಂಬಾ ದುರದೃಷ್ಟಕರವಾಗಿದೆ, ಏಕೆಂದರೆ ಯುಎಸ್ ನಾಗರಿಕರಲ್ಲದವರಿಗೆ ಫೆಡರಲ್ ಸರ್ಕಾರದ ಲಸಿಕೆ ನೀತಿಯಿಂದಾಗಿ ದೇಶವನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. 2023 ಯುಎಸ್ ಓಪನ್ಗೆ ಮರಳಿದರೆ, ನೊವಾಕ್ ರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ” ಎಂದು ಅಲ್ಲಾಸ್ಟರ್ ಹೇಳಿದ್ದಾರೆ.
ಕೋವಿಡ್ -19 ವಿರುದ್ಧ ಲಸಿಕೆ ತೆಗೆದುಕೊಳ್ಳಲು ನಿರಾಕರಿಸುತ್ತಿರುವ ಜೊಕೊವಿಕ್, ವ್ಯಾಕ್ಸಿನೇಷನ್ ಬಗ್ಗೆ ತನ್ನ ನಿಲುವನ್ನು ಉಳಿಸಿಕೊಳ್ಳಲು ಗ್ರ್ಯಾಂಡ್ ಸ್ಲಾಮ್ಗಳಲ್ಲಿ ಆಡುವುದನ್ನು ಬಿಟ್ಟುಕೊಡಲು ತಾನು ಸಿದ್ಧನಿದ್ದೇನೆ ಎಂದು ಈ ಹಿಂದೆ ಒತ್ತಿ ಹೇಳಿದ್ದರು. ಅದರಂತೆಯೇ, ಕೋವಿಡ್ ತೆಗೆದುಕೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಪ್ರವೇಶ ನಿರಾಕರಿಸಿದ ದೇಶಗಳಲ್ಲಿ ಆಟವಾಡಲು ಜೊಕೊವಿಕ್ ಹೋಗುತ್ತಿಲ್ಲ.