ಬಿಜೆಪಿ ಹಾಗೂ RSS ನವರಿಗೆ ಧಮ್ಮು ತಾಕತ್ತು ಇದ್ದರೆ, ಮೊಟ್ಟೆ, ಮಾಂಸ, ಮೀನು ತಿನ್ನುವವರ ಮತ ಬೇಡ, ಇವರು ನಮ್ಮ ಶಾಖೆಗೆ ಬರುವುದು ಬೇಡ ಎಂದು ಘೋಷಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸಹಾರಿಗಳು ಅತ್ಯಂತ ಸ್ವಾಭಿಮಾನಿಗಳು, ದೈವ ಭಕ್ತರು. ಮಾಂಸ ತಿಂದ ಮಾತ್ರಕ್ಕೆ ಭಕ್ತಿ ಕಡಿಮೆ ಆಗುವುದಿಲ್ಲ. ಬೇಡರ ಕಣ್ಣಪ್ಪ ಆಗತಾನೆ ಮೊಲ ಬೇಟೆಯಾಡಿ ಶಿವನಿಗೆ ಅದರ ಮಾಂಸದ ನೇವೇದ್ಯ ಮಾಡುತ್ತಾರೆ. ಮಾಹಿತಿ, ವೈಚಾರಿಕತೆ ತಿಳಿದುಕೊಳ್ಳದೆ ಸಮಾಜವನ್ನು ಒಡೆದು ಆಳುವ ಪ್ರಯತ್ನವನ್ನು ಪ್ರಬುದ್ಧ ಜನರು ಗಮನಿಸಲಿದ್ದಾರೆ. ಇಂತಹ ಅವಕಾಶವಾದಿ ಹೇಳಿಕೆ ನೀಡುವ, ಆಹಾರ, ಬಟ್ಟೆ, ಆಚಾರ ವಿಚಾರವಾಗಿ ಸಮಾಜ ಒಡೆಯುವ ಬಿಜೆಪಿಯವರಿಗೆ ರಾಜ್ಯ ಹಾಗೂ ದೇಶದಲ್ಲಿ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕರು ಮಂತ್ರಿ, ಶಾಸಕರಾಗಬೇಕಾದರೆ ನೀವು ಸಂವಿಧಾನ ರೀತಿ ನಡೆದುಕೊಳ್ಳುವುದಾಗಿ ನಡೆದುಕೊಂಡು ಅದರ ಆಶಯ ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡುತ್ತಾರೆ. ಸಂವಿಧಾನದ ಆರ್ಟಿಕಲ್ 21ರಲ್ಲಿ ಬದುಕುವ ಸ್ವಾತಂತ್ರ್ಯದ ಹಕ್ಕು ನೀಡಲಾಗಿದೆ. ಅದರ ಪ್ರಕಾರ ಕಾನೂನಿನಲ್ಲಿ ನಿಷೇಧವಾಗಿರುವ ಆಹಾರ ಹೊರತಾಗಿ ಉಳಿದ ಯಾವುದೇ ಆಹಾರವನ್ನು ಸೇವಿಸುವ ಅಧಿಕಾರವನ್ನು ನೀಡಲಾಗಿದೆ. ದೇಶದಲ್ಲಿ ಅಗೋರಿಗಳು, ನಾಗಸಾಧುಗಳು, ಋಷಿಮುನಿಗಳ ಆಹಾರ ಪದ್ಧತಿ ಬೇರೆ ಇದೆ. ಸಂವಿಧಾನದಲ್ಲಿ ಇರುವ ಅವಕಾಶ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.