ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.
ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನು ಜನರ ಮನೆ ಮುಂದೆ ತರಲು ಸರಕಾರಕ್ಕೂ ಕಷ್ಟಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಹುಚ್ಚು ಆತ್ಮ ವಿಶ್ವಾಸ ಇರಬೇಕು. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಾ ಅಂತ ಯಾರಾದರೂ ಊಹೆ ಮಾಡಿದ್ರಾ? ನೀವು ಒಳ್ಳೆಯದನ್ನ ಮಾತಾಡ್ತಾ, ಯೋಚನೆ ಮಾಡ್ತಾ ಹೋಗಿ. ತಂತಾನೆ ಅದು ಒಳ್ಳೆಯದಾಗುತ್ತದೆ. ನೀವು ಒಳ್ಳೆಯದು ಮಾಡ್ತಾ ಹೋಗಿ.
ನಮ್ಮೊಳಗೆ ಸರ್ಕಾರ ಹುಟ್ಟಬೇಕು. ಪ್ರತಿಯೊಬ್ಬ ತನ್ನ ವೃತ್ತಿಯಲ್ಲಿ ಕಷ್ಟಪಟ್ಟು ಮುಂದೆ ಬರುವ ಮೂಲಕದೇಶದ ಪ್ರಗತಿ ಸಾಧಿಸಬಹುದು. ಹಳ್ಳಿಯ ಮೂಲೆಯಿಂದ ಬೆಳೆಯಬಹುದು. ನಿಮ್ಮಲ್ಲಿ ಸಾಧಿಸುವ ಚಲ ಇದ್ದರೆ ಗೆಲುವು ಸಾಧ್ಯ ಎಂದಿದ್ದಾರೆ.
ಮಜಾ ಮಾಡಿ, ತುಂಬಾ ಸೀರಿಯಸ್ ಆಗಬೇಡಿ. ಸಣ್ಣ ಸಣ್ಣ ಖುಷಿ ಅನುಭವಿಸಿ. ಫ್ರೆಂಡ್ಸ್ ಜೊತೆ ಸುತ್ತಾಡಿ, ಜೀವನ ಅನುಭವಿಸಿ. ಸಿಎಂ ಹಲವು ಕನಸು ಹೊಂದಿದ್ದಾರೆ. ಅವರ ಕನಸುಗಳೆಲ್ಲ ಈಡೇರಲಿ ಎಂದು ಆಶಿಸಿದ್ದಾರೆ.