ಮಂಗಳೂರಿನಲ್ಲಿ ಸೆಕ್ಷನ್ 144 ಮತ್ತು ಇತರ ನಿರ್ಬಂಧಗಳನ್ನು ಎರಡು ದಿನಗಳವರೆಗೆ ವಿಸ್ತರಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಹೌದು ಈ ಕುರಿತು ಆದೇಶ ಹೊರಡಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು, “ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ಸೆಕ್ಷನ್ 144 ಅನ್ನು ಆಗಸ್ಟ್ 6 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚುವರಿ ನಿರ್ಬಂಧಗಳನ್ನು ಅಂದರೆ ಸಂಜೆ 6 ಗಂಟೆಗೆ ಮುಂಚಿತವಾಗಿ ಅಂಗಡಿಗಳನ್ನು ಮುಚ್ಚುವುದನ್ನು ಸಹ ಮುಂದಿನ ಎರಡು ದಿನಗಳವರೆಗೆ ವಿಸ್ತರಿಸಲಅಗಿದೆ” ಎಂದು ತಿಳಿಸಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ನಿಷೇಧ ಮುಂದುವರಿಯಲಿದೆ ಎಂದು ಹೇಳಿದರು. ಈ ಮೊದಲು ನಿರ್ಬಂಧಗಳು ಆಗಸ್ಟ್ 1 ರವರೆಗೆ ಜಾರಿಯಲ್ಲಿತ್ತು.
ಕಳೆದ 10 ದಿನಗಳಲ್ಲಿ ಕರಾವಳಿ ಬಾಗದಲ್ಲಿ ಮೂರು ಭೀಕರ ಕೊಲೆಗಳ ನಂತರ ದಕ್ಷಣ ಕನ್ನಡ ಜಿಲ್ಲೆಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಉದ್ವಿಗ್ನತೆಯ ನಡುವೆ ಈ ಆದೇಶ ಬಂದಿದೆ.
ಮಂಗಳೂರು ಹೊರವಲಯದಲ್ಲಿ 23 ವರ್ಷದ ಫಾಜಿಲ್ ಎಂಬಾತನನ್ನು ಅಪರಿಚಿತ ತಂಡವೊಂದು ಕೊಚ್ಚಿ ಕೊಲೆ ಮಾಡಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಘಟನೆಯ ನಂತರ ಸುರತ್ಕಲ್, ಮೂಲ್ಕಿ, ಬಜ್ಪೆ ಮತ್ತು ಪಣಂಬೂರಿನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
”ರಾತ್ರಿ 8 ಗಂಟೆ ಸುಮಾರಿಗೆ (ಜುಲೈ 28) ಸುರತ್ಕಲ್ ನ ಕೃಷ್ಣಾಪುರ ಕಾಟಿಪಳ್ಳ ರಸ್ತೆ ಬಳಿ 23 ವರ್ಷದ ಬಾಲಕನ ಮೇಲೆ 4-5 ಮಂದಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾಋಿಯಾಗದೇ ಅವನು ಮೃತಪಟ್ಟಿದ್ದಾನೆ” ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಜುಲೈ 29 ರಂದು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವೈನ್ ಶಾಪ್ಗಳನ್ನು ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಜುಲೈ 26 ರಂದು ರಾತ್ರಿ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬುವವರ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ಮಾರಕಾಶ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹತ್ಯೆಯ ನಂತರ, ಕರ್ನಾಟಕ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ. ಎಎನ್ಐ ಜೊತೆ ಮಾತನಾಡಿದ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಇದುವರೆಗೆ ಒಟ್ಟು 15 ಜನರನ್ನು ವಿಚಾರಣೆ ನಡೆಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಜುಲೈ 21 ರಂದು ದಕ್ಷಿಣ ಕನ್ನಡದ ಸುಳ್ಯದಲ್ಲಿ 19 ವರ್ಷದ ಮೊಹಮ್ಮದ್ ಮಸೂದ್ ಎಂಬ ಯುವಕ ಎಂಟು ಜನರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.