The Gray man ಎಂಬ ಹಾಲಿವುಡ್ ಸಿನಿಮಾದಲ್ಲಿ ನಟ ಧನುಷ್ ಅವರನ್ನು ತಮಿಳ್ ಫ್ರೆಂಡ್ ಎಂದು ಸಂಬೋಧಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ತಮಿಳರು ತಮ್ಮದೇ ಛಾಪು ಒತ್ತಿದ್ದಾರೆ. ಅಂತೆಯೇ ಎಲ್ಲೇ ಹೋದರೂ ನಮ್ಮ ಕನ್ನಡ ‘ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕಿದೆ ಎಂದು ನಿರ್ದೇಶಕ, ಗೀತರಚನೆಕಾರ ಕವಿರಾಜ್ ಹೇಳಿದ್ದಾರೆ.
ತಮ್ಮ ಅಧಿಕೃತ ಪೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ನಿರ್ದೇಶಕ, ಗೀತರಚನೆಕಾರ ಕವಿರಾಜ್, ಹಾಲಿವುಡ್ ನ ಅಗ್ರಪಂಕ್ತಿಯ ನಟರಲ್ಲೊಬ್ಬರಾದ Ryan Gosling ಮುಖ್ಯಪಾತ್ರದಲ್ಲಿರುವ The Gray man ಎಂಬ 2022 ರ ಹಾಲಿವುಡ್ ಆಕ್ಷನ್ ಸಿನಿಮಾ ದಲ್ಲಿ ತಮಿಳಿನ ಸ್ಟಾರ್ ಧನುಶ್ ಒಂದು ಡೈನಾಮಿಕ್ ಪಾತ್ರದಲ್ಲಿ ನಟಿಸಿ ಆಕ್ಷನ್ ಸೀನ್ ಗಳಲ್ಲಿ ಮುಖ್ಯಪಾತ್ರಗಳಿಗೂ ಒಂದು ಕೈ ಮೇಲೆನ್ನುವಂತೆ ಕಾಣಿಸಿಕೊಂಡಿದ್ಧಾರೆ. ಅದಕ್ಕು ಮುಖ್ಯವಾಗಿ ನನ್ನ ಗಮನ ಸೆಳೆದಿದ್ದು ಈ ಸಿನಿಮಾದಲ್ಲಿ ಅವರನ್ನು ‘ತಮಿಳ್ ಫ್ರೆಂಡ್’ ಎಂದೇ ಸಂಬೋಧಿಸುತ್ತಾರೆ . ವಿಶ್ವದ ಅನೇಕ ದೇಶಗಳಲ್ಲಿ ತಮಿಳರು ತಮ್ಮದೇ ಛಾಪು ಒತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು, ಮಲೇಷ್ಯಾ , ಸಿಂಗಾಪುರ , ಶ್ರೀಲಂಕಾದಂತಹ ದೇಶಗಳಲ್ಲಿ ತಮಿಳು ಅಲ್ಲಿನ ಸರ್ಕಾರ ಮಾನ್ಯ ಮಾಡಿರುವ ಅಧಿಕೃತ ಭಾಷೆಯಾಗಿದ್ದು , ಇಂಡೋನೇಶ್ಯಾ, ಫಿಜಿ ,ದಕ್ಷಿಣ ಆಫ್ರಿಕಾ ಸೇರಿದಂತೆ ಇನ್ನು ಹಲವಾರು ದೇಶಗಳಲ್ಲಿ ಗಮನಾರ್ಹ ಸ್ಥಾನದಲ್ಲಿದೆ. ಮಾತೃ ಭಾಷೆಯ ಅಸ್ಮಿತೆಯಲ್ಲಿ ನಮ್ಮ ಪಕ್ಕದ ನಾಡಿನವರು ‘ವಿಶ್ವಾದ್ಯಂತ’ ಗಳಿಸಿಕೊಂಡಿರುವ ಹೆಮ್ಮೆಯ ಐಡೆಂಟಿಟಿ ನಿಜಕ್ಕೂ ಮೆಚ್ಚುವಂತದ್ದು.

ಈ ಕಾಲದಲ್ಲಿ ಮಾತೃಭಾಷಾ ಅಸ್ಮಿತೆಯಿಂದ ಏನು ಪ್ರಯೋಜನ ಎನ್ನುವವರು ಗಮನಿಸಬೇಕಿರುವುದೆಂದರೆ ಈ ಐಡೆಂಟಿಟಿ ಕೇವಲ ಅವರಿಗೆ ಸಾಂಸ್ಕ್ಕತಿಕವಾಗಷ್ಟೇ ಅಲ್ಲದೇ ಉದ್ದಿಮೆ , ಕಲೆ ,ರಾಜಕೀಯ , ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವಾದ್ಯಂತ ವಿಶೇಷ ಮನ್ನಣೆ ದೊರಕಲು ನೆರವಾಗಿದೆ. ಹಾಗಾಗಿ ಈ ದಿಸೆಯಲ್ಲಿ ಕನ್ನಡಿಗರಾದ ನಾವು ಇನ್ನಷ್ಟು ಮುಂದುವರಿಯಬೇಕಿದೆ , ಒಗ್ಗಟ್ಟಾಗಬೇಕಿದೆ. ಎಲ್ಲೇ ಹೋದರು ನಮ್ಮ ಕನ್ನಡ ‘ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕಿದೆ , ಪ್ರತಿಪಾದಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.






