ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ನಡೆಸುತ್ತಿದ್ದಾರೆ ಎನ್ನಲಾದ ರೆಸ್ಟೋ ಬಾರ್ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಆರೋಪಿಸಿದ ಮೂವರು ಕಾಂಗ್ರೆಸ್ ನಾಯಕರಿಗೆ 24 ಗಂಟೆಗಳಲ್ಲಿ ಟ್ವೀಟ್ ಡಿಲೀಟ್ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಹಾಗೂ ನೆಟ್ಟಾ ಡಿಸೋಜಾರಿಗೆ ಆಗಷ್ಟ್ 18ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಒಂದು ವೇಳೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕರು ಡಿಲೀಟ್ ಮಾಡಲು ನಿರಾಕರಿಸಿದರೆ ಸಾಮಾಜಿಕ ಮಾಧ್ಯಮವೇ ಅದನ್ನು ಡಿಲೀಟ್ ಮಾಡಬೇಕಾಗುತ್ತದೆ ಎಂದು ನಾಯಾಲಯ ಹೇಳಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಔಪಚಾರಿಕವಾಗಿ ಉತ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ನ್ಯಾಯಾಲಯದ ಮುಂದೆ ನಾವು ಸತ್ಯವನ್ನು ತಿಳಿಸುತ್ತೇವೆ. ಸಚಿವೆ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಆದೇಶದ ನಂತರ ಸಂಸದ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ವಾರ ಕಾಂಗ್ರೆಸ್ ನಾಯಕರುಗಳು ವಿಶೇಷ ಸುದ್ದಿಗೋಷ್ಠಿ ನಡೆಸಿ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮ ರೆಸ್ಟೋ ಬಾರ್ ನಡೆಸುತ್ತಿರುವುದಾಗಿ ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಸಚಿವೆ ಆರೋಪ ಮಾಡಿದ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿದ್ದು ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.






