ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಕೋರ್ಟ್ ಸ್ಥಾನವನ್ನು ಆವರಿಸಿಕೊಂಡಿದೆ. ಕಾಂಗರೂ ಕೋರ್ಟ್ನಂತೆ ಇವು ತಮಗಿಷ್ಟ ಬಂದಂತೆ ಪ್ರಚಾರ ಮಾಡುತ್ತಾ, ತಮ್ಮ ಅಜೆಂಡಾವನ್ನು ಜನರ ಮೇಲೆ ಹೇರುತ್ತಾ ಕಟ್ಟೆ ಪಂಚಾಯಿತಿ ನಡೆಸಿ ಭಾರತದ ಪ್ರಜಾಪ್ರಭುತ್ವ ಅಪಾಯವನ್ನುಂಟು ಮಾಡುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.
ರಾಂಚಿಯಲ್ಲಿ ನಡೆದ ಶೈಕ್ಷಣಿಕ ಸಮಾರಂಭದಲ್ಲಿ ಉಪನ್ಯಾಸ ಮಾಡಿದ ರಮಣ ಮಾತನಾಡಿ, ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುವುದನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಅನುಭವಿ ನ್ಯಾಯಾಧೀಶರು ಸಹ ಸಮಸ್ಯೆಗಳ ಬಗ್ಗೆ ತೀರ್ಮಾನ ನೀಡಲು ಕಷ್ಟವಾಗುತ್ತದೆ. ಆದರೆ, ಮಾಧ್ಯಮಗಳಿಗೆ ಆ ಹಕ್ಕು ಇಲ್ಲದಿದ್ದರೂ ಹಲವು ಪ್ರಕರಣಗಳಲ್ಲಿ ಕೋರ್ಟ್ಗಿಂತಲೂ ಮೊದಲೇ ತೀರ್ಪು ನೀಡುವುದನ್ನು ನಾವು ನೋಡಬಹುದು ಎಂದು ಅವರು ಹೇಳಿದ್ದಾರೆ.
ಮುಂದುವರೆದು, ಮಾಧ್ಯಮಗಳು ತನ್ನ ಜವಾಬ್ದಾರಿಯನ್ನು ಉಲ್ಲಂಘಿಸಿ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಿದೆ. ” ತಮಗಿಷ್ಟ ಬಂದಂತೆ ಪ್ರಚಾರ ಮಾಡುತ್ತಾ, ತಮ್ಮ ಅಜೆಂಡಾವನ್ನು ಜನರ ಮೇಲೆ ಹೇರಿ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಮತ್ತು ವ್ಯವಸ್ಥೆಗೆ ಹಾನಿ ಮಾಡುತ್ತಿವೆ” ಎಂದು ಅವರು ಹೇಳಿದರು.
“ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಟಿತ ಪ್ರಚಾರ ನಡೆಯುತ್ತಿದೆ. ಅದಕ್ಕೆ ನ್ಯಾಯಮೂರ್ತಿಗಳು ತಕ್ಷಣವೇ ಪ್ರತಿಕ್ರಿಯಿಸುವುದಿಲ್ಲ. ದಯವಿಟ್ಟು ಅದನ್ನು ದೌರ್ಬಲ್ಯ – ಅಸಹಾಯಕತೆ ಎಂದು ತಪ್ಪಾಗಿ ಗ್ರಹಿಸಬೇಡಿ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.

ಮುದ್ರಣ ಮಾಧ್ಯಮವು ಇನ್ನೂ ಸ್ವಲ್ಪ ಮಟ್ಟಿಗೆ ಹೊಣೆಗಾರಿಕೆಯನ್ನು ಹೊಂದಿದೆ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಾಧೀಶರು, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾನು ಒತ್ತಾಯಿಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮವು ಜನರಿಗೆ ಶಿಕ್ಷಣ ನೀಡಲು ಮತ್ತು ರಾಷ್ಟ್ರಕ್ಕೆ ಶಕ್ತಿ ತುಂಬಲು ತಮ್ಮ ಧ್ವನಿಯನ್ನು ಬಳಸಿಕೊಳ್ಳಬೇಕು. ಅದು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಭಾರತೀಯ ಜನತಾ ಪಕ್ಷದ ವಕ್ತಾರ ನೂಪುರ್ ಶರ್ಮಾ ಅವರನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರೊಂದಿಗೆ ಪಾರ್ದಿವಾಲಾ ಅವರು ಪೀಠ ತೀವ್ರವಾಗಿ ಖಂಡಿಸಿತ್ತು. ಆಕೆಯ ಹೇಳಿಕೆಯು ದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿಗೆ ಕಾರಣವಾಗಿದೆ ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಮೌಖಿಕವಾಗಿ ಆದೇಶಿಸಿತ್ತು.
ಸುಪ್ರೀಂ ಕೋರ್ಟ್‌ನ ಮೌಖಿಕ ಅವಲೋಕನಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಖಂಡಿಸಿ ಅನೇಕರು ಪೋಸ್ಟ್ ಹಾಕಿದ್ದರು. ನಂತರ ಮೀಡಿಯಾಗಳು ಅದನ್ನು ವರದಿ ಮಾಡಿದ್ದವು. ಶರ್ಮಾ ವಿರುದ್ಧ ಮಾಡಿರುವ ಅವಲೋಕನಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿಯನ್ನೂ ಸಲ್ಲಿಸಲಾಗಿತ್ತು.








