ವಿವಿಧ ದೂರುಗಳ ಮೇರೆಗೆ ಕರ್ನಾಟಕದ ವಿಜಯನಗರ ಜಿಲ್ಲೆಯ ಅಧಿಕಾರಿಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ ಬಳಿ ಇರುವ 16 ಅಕ್ರಮ ರೆಸಾರ್ಟ್‌ಗಳನ್ನು ಸೀಲ್ ಮಾಡಿದ್ದಾರೆ. ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಈ ಎಲ್ಲಾ ಸಂಸ್ಥೆಗಳು ತುಂಗಭದ್ರಾ ನದಿಯ ಉತ್ತರದ ದಡದಲ್ಲಿ ಮುಖ್ಯಭಾಗದಲ್ಲಿ ನೆಲೆಗೊಂಡಿವೆ.
“ಕೃಷಿ ಭೂಮಿಯಲ್ಲಿ ರೆಸಾರ್ಟ್ ನಡೆಸುತ್ತಿದ್ದರಿಂದ ಪ್ರಾಧಿಕಾರವು ರೆಸಾರ್ಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ, ಆದರೆ ಮಾಲೀಕರು ಅದಕ್ಕೆ ಉತ್ತರಿಸದ ಕಾರಣ ಕಾರ್ಯಾಚರಣೆಯನ್ನು ಮುಂದುವರೆಸಿ 16 ರೆಸಾರ್ಟ್‌ಗಳಿಗೆ ಸೀಲ್ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇವೆ” ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ವಿಜಯನಗರ ಜಿಲ್ಲಾಧಿಕಾರಿ, 48 ಗಂಟೆಗಳಲ್ಲಿ ಅಕ್ರಮ ರೆಸಾರ್ಟ್‌ಗಳನ್ನು ತೆರವು ಮಾಡುವಂತೆ ಪ್ರಾಧಿಕಾರಕ್ಕೆ ಆದೇಶ ನೀಡಿದ್ದರು. 2021 ರಲ್ಲಿ, ಹಂಪಿ ಸಮೀಪದ ಆನೆಗುಂಡಿಯ ವಿರುಪಾಪುರ ಗಡಿ ದ್ವೀಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 40 ರೆಸಾರ್ಟ್‌ಗಳನ್ನು ಪ್ರಾಧಿಕಾರ ಮುಚ್ಚಿಸಿತ್ತು.
ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು, “ಹಂಪಿ ಯುನೆಸ್ಕೋ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ, 20 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.