ಪರಿಷ್ಕೃತ ಪಠ್ಯಗಳನ್ನು ಸಮರ್ಥಿಸಲಾಗದ ಬಿಜೆಪಿಯ ನೈತಿಕ ಅದಃಪತನ ಎಷ್ಟಿದೆ ಎಂದರೆ, ಪಠ್ಯ ಪುಸ್ತಕಗಳ ಬಗ್ಗೆ ಶಿಕ್ಷಣ ಸಚಿವರ ಬದಲು ಕಂದಾಯ ಸಚಿವರು ಪತ್ರಿಕಾಗೋಷ್ಠಿ ನಡೆಸುವಷ್ಟು ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪರಿಷ್ಕೃತ ಪಠ್ಯಗಳನ್ನು ಸಮರ್ಥಿಸಲಾಗದ ಬಿಜೆಪಿಯ ನೈತಿಕ ಅದಃಪತನ ಎಷ್ಟಿದೆ ಎಂದರೆ, ಪಠ್ಯ ಪುಸ್ತಕಗಳ ಬಗ್ಗೆ ಶಿಕ್ಷಣ ಸಚಿವರ ಬದಲು ಕಂದಾಯ ಸಚಿವರು ಪತ್ರಿಕಾಗೋಷ್ಠಿ ನಡೆಸುವಷ್ಟು! ಆರ್ ಅಶೋಕ್ ಅವರೇ, ನಿಮ್ಮ ಇಲಾಖೆ ಕೆಲಸಗಳ ಬಗ್ಗೆ ಮಾತಾಡಿ, ನಿಮ್ಮದಲ್ಲದ್ದು ನಿಮಗೇಕೆ? ಬಿಜೆಪಿ ಜಾತಿ ಲೆಕ್ಕ ಹಾಕಿ ಚೂ ಬಿಡುತ್ತದೆ ಎನ್ನಲು ಇದೇ ನಿದರ್ಶನ ಎಂದು ಕಿಡಿಕಾರಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರು ನೀಡಿದ ತೀರ್ಪನ್ನು ಧಿಕ್ಕರಿಸಿ, ಶಾಸಕರನ್ನು ಕುರಿಗಳಂತೆ ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗರೇ ನಿಮಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ತಿಳಿದಿದೆಯೇ? ಇನ್ನು ಯಾವ ಮುಖ ಇಟ್ಟುಕೊಂಡು ಬಿಜೆಪಿ ಮತ್ತು ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುತ್ತೀರಿ ಎಂದು ಹೇಳಿದೆ.

ಜಾತಿಗಳ ನಡುವೆ ವಿಷಬೀಜ ಬಿತ್ತಿದೆ, ಧರ್ಮಗಳ ನಡುವೆ ವೈಮಸ್ಸು ತೂರಿಸಿದೆ, ತಿರಂಗದ ಬದಲಿಗೆ ಭಗವಾಧ್ವಜವನ್ನು ರಾಷ್ಟ್ರ ಧ್ವಜ ಬದಲಿಸುವ ಕನಸು ಕಂಡಿದೆ. ಈಗ ಕರ್ನಾಟಕವನ್ನು ತುಂಡು ಮಾಡಲು ಹೊಂಚು ಹಾಕಿದೆ ಬಿಜೆಪಿ. ಒಡೆದಾಳುವ ನೀತಿ ಹೊಂದಿರುವ ನಿಜವಾದ ‘ತುಕಡೆ ಗ್ಯಾಂಗ್’ ಬಿಜೆಪಿ ಹೊರತು ಬೇರೆ ಯಾರಿಲ್ಲ ಎಂದು ವಾಗ್ದಾಳಿ ನಡೆಸಿದೆ.