ಒಂದೆಡೆ ಭಾರತದಲ್ಲಿ, ಗಿಗ್ ಆರ್ಥಿಕತೆ ಸೃಷ್ಟಿಸಿರುವ ಸವಾಲುಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಇನ್ನೊಂದೆಡೆ ಇದೇ ಆರ್ಥಿಕತೆ ಸೃಷ್ಟಿಸಿರುವ ಉದ್ಯೋಗಾವಕಾಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಚೈನ್ನೈನ ಗಣೇಶ್ ಮುರುಗನ್ ಎಂಬ ಡೆಲಿವರಿ ಬಾಯ್ ಗಾಲಿಕುರ್ಚಿಯಲ್ಲಿ ಕೂತು ಆಹಾರ ವಿತರಿಸುತ್ತಿದ್ದು ಇಡೀ ದೇಶದ ಗಮನ ಸೆಳೆದಿದ್ದಾರೆ.
ಬೆನ್ನುಹುರಿ ಗಾಯಗೊಂಡಿರುವ ಚೆನ್ನೈನ 37 ವರ್ಷದ ಗಣೇಶ್ ಮುರುಗನ್ ಅವರು ಭಾರತದ ಮೊದಲ ಗಾಲಿಕುರ್ಚಿ ಆಹಾರ ವಿತರಣಾ ವ್ಯಕ್ತಿ. ಐಐಟಿ ಮದ್ರಾಸ್ನ ಸ್ಟಾರ್ಟ್-ಅಪ್ನಿಂದ ವಿನ್ಯಾಸಗೊಳಿಸಲಾದ ನವೀನ ಮೋಟಾರೀಕೃತ ಎಲೆಕ್ಟ್ರಿಕ್ ವೀಲ್ಚೇರ್ ಬಳಸಿ ಅವರು ಆಹಾರ ವಿತರಣೆ ಮಾಡುತ್ತಾರೆ. ಈ ಟು-ಇನ್-ಒನ್ ಮೋಟಾರೈಸ್ಡ್ ವ್ಹೀಲ್ಚೇರ್ ಅನ್ನು ಒಂದು ಗುಂಡಿಯನ್ನು ಒತ್ತುವ ಮೂಲಕ ಬೇರ್ಪಡಿಸಬಹುದು ಮತ್ತು ಹಾಗೆ ಮಾಡಿದಾಗ ಹಿಂದಿನ ಭಾಗವು ಸರಳವಾದ ಗಾಲಿಕುರ್ಚಿಯಾಗಿ ಬದಲಾಗುತ್ತದೆ. ಇದು ಆಹಾರವನ್ನು ಸಂಗ್ರಹಿಸಲು ಮತ್ತು ತಲುಪಿಸಲು ಪ್ರವೇಶಿಸಬಹುದಾದ ರೆಸ್ಟೋರೆಂಟ್ಗಳು ಅಥವಾ ಬಹುಮಹಡಿ ಕಟ್ಟಡಗಳಿಗೆ ಯಾರ ಸಹಾಯವೂ ಇಲ್ಲದೆ ಹೋಗಿ ಬರಲು ಅನುಕೂಲ ಮಾಡಿಕೊಡುತ್ತದೆ.
ಈ ವಾಹನದಿಂದ ಅಪಾರ ಆತ್ಮವಿಶ್ವಾಸವನ್ನು ಗಳಿಸಿಕೊಂಡಿರುವ ಗಣೇಶ್ “ಇತ್ತೀಚೆಗೆ ನಾನು ಅಂಬತ್ತೂರಿನಲ್ಲಿ 10 ನೇ ಮಹಡಿಯಲ್ಲಿ ಡೆಲಿವರಿ ಮಾಡಬೇಕಾಗಿತ್ತು. ನಾನು ಗ್ರಾಹಕರನ್ನು ಕೆಳಗೆ ಬರಲು ಹೇಳಲಿಲ್ಲ. ನಾನು ಮುಂಭಾಗದ ಚಕ್ರವನ್ನು ಬೇರ್ಪಡಿಸಿ ಗಾಲಿಕುರ್ಚಿಯಂತೆ ಮಾಡಿ ಲಿಫ್ಟ್ಗೆ ಹತ್ತಿದೆ. ಗ್ರಾಹಕರು ಇದರಿಂದ ತುಂಬಾ ಪ್ರಭಾವಿತರಾದರು. ನಾನು ಕೂಡ ಹೊಸ ಅನುಭವವನ್ನು ಆನಂದಿಸಿದೆ ಮತ್ತು ಗ್ರಾಹಕರು ಸಹ ಸಂತೋಷಪಟ್ಟರು” ಎನ್ನುತ್ತಾರೆ.

ಅದೇ ರೀತಿ ಪೋಲಿಯೊ ಪೀಡಿತರಾದ ರಾಜಾರಾಂ ಅವರು ಅವರು ಸೈಕಲ್ ವಿಭಾಗದ ಅಡಿಯಲ್ಲಿ ಜೊಮಾಟೊ ಜೊತೆಗೆ ಸೈನ್ ಅಪ್ ಮಾಡಿಕೊಂಡಿದ್ದು ಉತ್ತರ ಚೆನ್ನೈನಲ್ಲಿ ಆಹಾರ ವಿತರಿಸುತ್ತಿದ್ದಾರೆ. ಈ ವೀಲ್ಚೇರನ್ನೂ ಅವರೂ ಬಳಸುತ್ತಿದ್ದು ಮೋಟಾರೀಕೃತ ಗಾಲಿಕುರ್ಚಿ ತನ್ನ ಕನಸುಗಳಿಗೆ ರೆಕ್ಕೆಗಳನ್ನು ನೀಡಿದೆ ಎಂದು ಅವರು ಹೇಳುತ್ತಾರೆ. ಅವರ ಆದಾಯ ಈಗ ಮೊದಲಿಗಿಂತ ₹ 9,000 ಹೆಚ್ಚಾಗಿದೆ. ” ಈ ಆದಾಯದೊಂದಿಗೆ, ನನ್ನ ಮಾಸಿಕ ಬಾಡಿಗೆ ಮತ್ತು ಇತರ ಹೆಚ್ಚುವರಿ ವೆಚ್ಚಗಳನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ. “ನನ್ನ ಆಹಾರ ವಿತರಣಾ ಚೀಲವನ್ನು ನಾನು ಹೊತ್ತೊಯ್ಯುವಾಗ ಜನರು ನನ್ನನ್ನು ಮೆಚ್ಚುಗೆಯಿಂದ ಮತ್ತು ಹೆಮ್ಮೆಯಿಂದ ನೋಡುತ್ತಾರೆ. ಅವರು ಮೊದಲು ಮತ್ತು ಈಗ ನನ್ನನ್ನು ನೋಡುವ ರೀತಿಯಲ್ಲಿ ನಾನು ದೊಡ್ಡ ವ್ಯತ್ಯಾಸವನ್ನು ಗಮನಿಸಿದ್ದೇನೆ”ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ಈ ವಾಹನವನ್ನು ನಿಯೋಮೋಷನ್ ಅಸಿಸ್ಟೆವ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸ್ಟಾರ್ಟ್-ಅಪ್ ವಿನ್ಯಾಸಗೊಳಿಸಿದ್ದು ಐಐಟಿ ಮದ್ರಾಸ್ನ ಮೂವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸ್ಥಾಪಿಸಿದ್ದಾರೆ. ಈ ವಾಹನವು ಗಂಟೆಗೆ 25 ಕಿಮೀ ವೇಗದಲ್ಲಿ ಚಲಿಸುತ್ತದೆ. ಚಾರ್ಜ್ ಮಾಡಲು 4 ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ 25 ಕಿ.ಮೀ ಚಲಿಸುತ್ತದೆ. ಈ ಟು-ಇನ್-ಒನ್ ವಾಹನದ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗಳಾಗಿದ್ದು ವಿಕಲಚೇತನರನ್ನು ಸಬಲೀಕರಣಗೊಳಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.
ಸ್ಟಾರ್ಟ್ಅಪ್ನ ಸಂಸ್ಥಾಪಕರು ಈಗ ಕಾರ್ಪೋರೆಟ್ ಕಂಪೆನಿಗಳನ್ನು ಸಂಪರ್ಕಿಸುತ್ತಿದ್ದು ಸಿಎಸ್ಆರ್ ನಿಧಿಗಳ ಮೂಲಕ ಈ ವಾಹನಗಳ ವೆಚ್ಚವನ್ನು ಭರಿಸಲಾಗದ ವಿಕಲಚೇತನರಿಗೆ ವಾಹನ ಒದಗಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಈಗಾಗಲೇ ಸ್ಟಾರ್ಟ್ ಅಪ್ ಸುಮಾರು 1300 ವಾಹನಗಳನ್ನು ಪೂರೈಸಿದೆ. ಇವುಗಳಲ್ಲಿ ಸುಮಾರು 300 ವಾಹನಗಳು ಕಾರ್ಪೊರೇಟ್ ಪ್ರಾಯೋಜಕತ್ವವನ್ನು ಪಡೆದಿವೆ.

ಐಐಟಿ ಮದ್ರಾಸ್ನ ಈ ಆವಿಷ್ಕಾರವು ಇ-ಕಾಮರ್ಸ್ನಲ್ಲಿ ವಿಕಲಚೇತನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ಮತ್ತಷ್ಟು ಆಶಾವಾದ ವ್ಯಕ್ತಪಡಿಸುವ ಸಂಶೋಧಕರು ಇದು ಕೇವಲ ಪ್ರಾರಂಭವಾಗಿದೆ, ಇದಕ್ಕಿಂತ ಉತ್ತಮವಾದದ್ದು ಇನ್ನು ಬರಲಿದೆ ಎಂದು ಹೇಳುತ್ತಾರೆ.








