ಅಫ್ಘಾನಿಸ್ತಾನವನ್ನು ತಾಲಿಬಾನ್ ವಶ ಪಡಿಸಿಕೊಂಡಾಗಿನಿಂದ ಅಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಸರ್ಕಾರ ನಡೆಸುವ ಯಾವ ಅನುಭವವೂ ಇಲ್ಲದ ತಾಲಿಬಾನ್ ಸರ್ಕಾರವು ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸಂಪೂರ್ಣ ಹಳ್ಳಹಿಡಿಸಿದೆ. ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳು ತಾಲಿಬಾನ್ ಆಡಳಿತಕ್ಕೆ ಬೆದರಿ ಸೇವೆಯಲ್ಲಿ ಮುಂದುವರಿಯಲು ಹಿಂಜರಿದಿದ್ದು ಸರ್ಕಾರವನ್ನು ಸರಾಗವಾಗಿ ಮುನ್ನೆಡಸಲು ಅನುಭವದ ಕೊರತೆಯನ್ನು ತಾಲಿಬಾನ್ ಎದುರಿಸುವಂತಾಗಿದೆ.
ಅಫ್ಘನ್ ಜನರು ಉದ್ಯೋಗಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಈ ನಡುವೆ, ಅಫ್ಗಾನಿಸ್ತಾನದ ಮಾಜಿ ಟಿವಿ ನಿರೂಪಕ ಮೂಸಾ ಮೊಹಮ್ಮದಿ ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಚಿತ್ರಗಳನ್ನು ಅಫ್ಘಾನಿಸ್ತಾನದ ಹಿಂದಿನ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ್ದ ಮಾಜಿ ಅಧಿಕಾರಿ, ಪತ್ರಕರ್ತ ಕಬೀರ್ ಹಕ್ಮಲ್ ಅವರು ಟ್ವಿಟರ್ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ. ಈ ಟ್ವಿಟರ್ ಪೋಸ್ಟ್, ಅಫ್ಘಾನಿಸ್ತಾನದಲ್ಲಿ ವೃತ್ತಿಪರರು, ಜನಸಾಮಾನ್ಯರು ಎಂತಹಾ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.
ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ʼಮೊಹಮ್ಮದಿ ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದ ಭಾಗವಾಗಿದ್ದರು, ಆದಾಗ್ಯೂ, ಅಫ್ಘಾನಿಸ್ತಾನದಲ್ಲಿ ಇಂತಹ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ, ಅವರು ಈಗ ತಮ್ಮ ಜೀವನವನ್ನು ಪೂರೈಸಲು ಆಹಾರವನ್ನು ಮಾರಾಟ ಮಾಡುತ್ತಿದ್ದಾರೆʼ ಎಂದು ಅವರು ಬರೆದಿದ್ದಾರೆ.
“ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದ್ದರು. ಅದಾಗ್ಯೂ, ಈಗ ಅವರ ಕುಟುಂಬವನ್ನು ಪೋಷಿಸಲು ಅವರಿಗೆ ಯಾವುದೇ ಆದಾಯವಿಲ್ಲ. ಹಾಗಾಗಿ, ಹಣವನ್ನು ಗಳಿಸಲು ಬೀದಿ ಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಭೀಕರ ಬಡತನವನ್ನು ಅನುಭವಿಸುತ್ತಾರೆ, ” ಎಂದು ಅವರು ಹೇಳಿದ್ದಾರೆ.
ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನಕ್ಕೆ ಬಂದಿದೆ. ಮೊಹಮ್ಮದಿ ಅವರನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ವಾಸಿಕ್ ತಿಳಿಸಿದ್ದಾರೆ.