
ಭೋಪಾಲ್: ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಶುಕ್ರವಾರ ಇಲ್ಲಿನ ಬಿಲ್ಡರ್ಗಳು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಸುಳಿವಿನ ಮೇರೆಗೆ ಐಟಿ ಇಲಾಖೆಯು ಭೋಪಾಲ್ನ ಹೊರವಲಯದಲ್ಲಿರುವ ಮೆಂಡೋರಿ ಅರಣ್ಯದಲ್ಲಿ ಬಿಟ್ಟು ಹೋಗಿದ್ದ ವಾಹನದಿಂದ 52 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ವಶಪಡಿಸಿಕೊಂಡ ಚಿನ್ನದ ಬೆಲೆ ಸುಮಾರು 40.47 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಲ್ಲದೇ ವಾಹನದಲ್ಲಿದ್ದ 10 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಾಯುಕ್ತ ಪೊಲೀಸರು ಹಾಗೂ ಐಟಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಕಾರಿನೊಳಗೆ ಯಾರೂ ಇರಲಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಆದಾಗ್ಯೂ, ವಾಹನದ ಎರಡು ಚೀಲಗಳಲ್ಲಿ ಚಿನ್ನ ಮತ್ತು ನಗದು ಪತ್ತೆಯಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವ ರೀಲರ್ಗಳಿಗೂ ಚಿನ್ನ ವಶಕ್ಕೂ ಸಂಬಂಧವಿದೆ ಎಂದು ಶಂಕಿಸಿದ್ದಾರೆ.
ಆದರೆ, ಸದ್ಯಕ್ಕೆ ಅವರು ಯಾವುದೇ ಖಚಿತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಡಿಸೆಂಬರ್ 18 ರಂದು ಭೋಪಾಲ್ ಮತ್ತು ಇಂದೋರ್ನ ತ್ರಿಶೂಲ್ ಕನ್ಸ್ಟ್ರಕ್ಷನ್, ಕ್ವಾಲಿಟಿ ಗ್ರೂಪ್ ಮತ್ತು ಇಶಾನ್ ಗ್ರೂಪ್ಗೆ ಸಂಬಂಧಿಸಿದ 51 ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಇವರಲ್ಲಿ ಒಬ್ಬರು ಚಿನ್ನಾಭರಣ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರಬಹುದು ಎಂದು ನಂಬಲಾಗಿದೆ. ಕಳೆದ ಮೂರು ದಿನಗಳಿಂದ ಭೋಪಾಲ್ನಲ್ಲಿ ದಾಳಿ ನಡೆಯುತ್ತಿದೆ. ತನಿಖೆಯ ವೇಳೆ ಐಟಿ ತಂಡಕ್ಕೆ ಭಾದಭಡಾದ ಮೆಂಡೋರಿಯಲ್ಲಿ ಅರಣ್ಯ ಮಾರ್ಗವಾಗಿ ಚಿನ್ನವನ್ನು ಸಾಗಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತು.
30 ವಾಹನಗಳಲ್ಲಿ 100 ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಕಾರನ್ನು ಸುತ್ತುವರೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರ ಜಂಟಿ ತಂಡ ಇದೀಗ ಆಸ್ತಿಯ ಮೂಲವನ್ನು ಹುಡುಕಲು ಪ್ರಯತ್ನಿಸುತ್ತಿದೆ.