ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ನಾಮಪತ್ರ ಸಲ್ಲಿಕೆಯ ಮೊದಲ ದಿನವೇ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನ ಹೊಂದಿರುವ ರಾಷ್ಟ್ರಪತಿ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಕಳೆದ ಐದು ದಶಕಗಳಲ್ಲಿ ರಾಷ್ಟ್ರಪತಿಗಳ ಕಚೇರಿಯ ಕಾರ್ಯನಿರ್ವಹಣೆ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದರೂ, ದೇಶದ ಪ್ರಥಮ ಪ್ರಜೆ ಎಂದೇ ಪರಿಗಣಿಸಲ್ಪಡುವ ಈ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿ ಪಕ್ಷಾತೀತವಾಗಿರಬೇಕು ಮತ್ತು ಸಂವಿಧಾನ ನಿಷ್ಠೆಯನ್ನೇ ಪ್ರಧಾನವಾಗಿರಿಸಿಕೊಂಡಿರಬೇಕು ಎಂಬ ನಿರೀಕ್ಷೆಯ ನಡುವೆಯೇ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಜ್ಜಾಗುತ್ತಿರುತ್ತವೆ.
ಸಂಸದೀಯ ಪ್ರಜಾತಂತ್ರದ ಕಾರ್ಯನಿರ್ವಹಣೆಯಲ್ಲಿ ಹಲವಾರು ಸಂದರ್ಭಗಳಲ್ಲಿ ತಮ್ಮದೇ ಆದ ಸ್ವಾಯತ್ತ ನಿರ್ಣಯಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ರಾಷ್ಟ್ರಪತಿಯಾದವರು ಎದುರಿಸುತ್ತಾರೆ. ಅನೇಕ ಸನ್ನಿವೇಶಗಳಲ್ಲಿ ತಟಸ್ಥ ನೀತಿಯನ್ನೇ ಅನುಸರಿಸುವುದು ಸಹಜವೇ ಆದರೂ, ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಆಡಳಿತಾರೂಢ ಪಕ್ಷದ ಬಹುಮತದೊಂದಿಗೆ ಅನುಮೋದನೆ ಪಡೆದ ಶಾಸನಗಳು ಮತ್ತು ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಲಾದ ಶಾಸನಗಳಿಗೆ ಸಮ್ಮತಿ ಸೂಚಿಸುವ ಸಂದರ್ಭದಲ್ಲಿ ರಾಷ್ಟ್ರಪತಿಗಳ ನಿಲುವು ನಿರ್ಣಾಯಕವಾಗುತ್ತದೆ. ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಭಾರತದ ಪ್ರಜಾತಂತ್ರದಲ್ಲಿ ರಾಷ್ಟ್ರಪತಿ ಕಚೇರಿಯು ಆಡಳಿತಾರೂಢ ಪಕ್ಷದ ಆಡಳಿತ ನೀತಿಗಳನ್ನು ವಿರೋಧಿಸಿರುವುದನ್ನು ಕಾಣಬಹುದು.
ಶಾಸನಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಪ್ರಧಾನವಾಗಿರುವ ಅಸ್ಮಿತೆಯ ರಾಜಕಾರಣ ರಾಷ್ಟ್ರಪತಿ ಚುನಾವಣೆಗೂ ಅಂಟಿರುವುದು ಈಗ ಗುಟ್ಟಿನ ಮಾತೇನಲ್ಲ. ಆಡಳಿತಾರೂಢ ಪಕ್ಷಗಳು ತಮ್ಮ ರಾಜಕೀಯ ಅನುಕೂಲತೆಗಳಿಗನುಗುಣವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಒಂದು ಪರಂಪರೆಗೆ ಐದು ದಶಕಗಳ ಹಿಂದೆಯೇ ನಾಂದಿ ಹಾಡಲಾಗಿದೆ. ಹಾಗಾಗಿ ಸರ್ವ ಪಕ್ಷಗಳೂ ಒಮ್ಮತದೊಂದಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳೂ ಇಲ್ಲವಾಗಿವೆ. ಆಳುವ ಪಕ್ಷಗಳು ತಮ್ಮ ಬಹುಮತವನ್ನು ಆಧರಿಸಿ ಆಯ್ಕೆ ಮಾಡುವ ಅಭ್ಯರ್ಥಿಯು ಸಾರ್ವತ್ರಿಕವಾಗಿ ಎಲ್ಲ ವಿರೋಧ ಪಕ್ಷಗಳಿಗೂ ಒಪ್ಪಿಗೆಯಾಗುವ ಒಂದು ವಾತಾವರಣ ಇದ್ದರೆ ಅಥವಾ ವಿರೋಧ ಪಕ್ಷಗಳು ಬಯಸುವ ಸಾರ್ವಜನಿಕ ವ್ಯಕ್ತಿಯೊಬ್ಬರ ಉಮೇದುವಾರಿಕೆ ಆಡಳಿತಾರೂಢ ಪಕ್ಷಕ್ಕೆ ಒಪ್ಪಿಗೆಯಾಗುವುದಾದರೆ, ಅದು ಪ್ರಜಾತಂತ್ರದ ಗೆಲುವು ಎಂದೇ ಹೇಳಬಹುದು. ಆದರೆ ಒಣಪ್ರತಿಷ್ಠೆ, ವ್ಯಕ್ತಿ ಆರಾಧನೆ, ಅಸ್ಮಿತೆಯ ಲೆಕ್ಕಾಚಾರ ಮತ್ತು ಆಡಳಿತ ನೀತಿಗಳ ನಿರ್ವಹಣೆಯ ಆದ್ಯತೆಗಳು ಈ ಒಂದು ಪ್ರವೃತ್ತಿಗೆ ಅಡ್ಡಿಯಾಗುತ್ತವೆ. ತಮ್ಮ ಬಹುಮತದ ಆಧಾರದಲ್ಲಿ ಒಂದು ಆಡಳಿತಾರೂಢ ಪಕ್ಷ ಜಾರಿಗೊಳಿಸುವ ಸರ್ಕಾರಿ ಶಾಸನಗಳು ಕೆಲವೊಮ್ಮೆ ಜನವಿರೋಧಿ ಆಗಿದ್ದರೂ, ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿದ್ದರೂ, ಅಂತಹ ಶಾಸನಗಳಿಗೆ ಸಮ್ಮತಿ ನೀಡುವಂತಹ ರಾಷ್ಟ್ರಪತಿಯನ್ನು ಬಹುತೇಕ ಎಲ್ಲ ಪಕ್ಷಗಳೂ ಬಯಸುತ್ತವೆ. ಕಾಂಗ್ರೆಸ್ ಪಕ್ಷವೇ ಇಂತಹ ಒಂದು ಪರಂಪರೆಗೆ 1960-70ರ ದಶಕದಲ್ಲೇ ನಾಂದಿ ಹಾಡಿದೆ. ಬಿಜೆಪಿ ಸರ್ಕಾರ ಇದೇ ಪರಂಪರೆಯನ್ನು ಮುಂದುವರೆಸುತ್ತಿದೆ.
ಆದುದರಿಂದಲೇ ಶಾಸನ ಸಭೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಸ್ಮಿತೆಯ ರಾಜಕಾರಣವೇ ಇಲ್ಲಿಯೂ ಪ್ರಧಾನವಾಗಿ ಕಂಡುಬರುತ್ತದೆ. ಒಬ್ಬ ದಲಿತ ರಾಷ್ಟ್ರಪತಿ, ಮುಸ್ಲಿಂ ರಾಷ್ಟ್ರಪತಿ ಅಥವಾ ಮತ್ತಾವುದೇ ಅಸ್ಮಿತೆಯನ್ನಾಧರಿಸಿದ ಆಯ್ಕೆಗಳು ಆಯಾ ಸಾಮುದಾಯಿಕ ಹಿತಾಸಕ್ತಿಗಿಂತಲೂ ಹೆಚ್ಚಾಗಿ ಆಡಳಿತಾರೂಢ ಪಕ್ಷದ ರಾಜಕೀಯ ಲೆಕ್ಕಾಚಾರಗಳಿಂದ ಪ್ರೇರಿತವಾಗಿರುತ್ತದೆ. ವರ್ತಮಾನದ ಅಸ್ಮಿತೆಯ ರಾಜಕಾರಣದ ಹೊರತಾಗಿಯೂ ಇಂದೂ ಸಹ ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳನ್ನು ರಾಜಿ ಮಾಡಿಕೊಳ್ಳದೆ ಕಾಪಾಡುವ ಕ್ಷಮತೆ, ಸಾಮರ್ಥ್ಯ ಮತ್ತು ಇಚ್ಚಾಶಕ್ತಿ ಇರುವ ಸಾರ್ವಜನಿಕ ಮುತ್ಸದ್ದಿಗಳು ನಮ್ಮ ನಡುವೆ ಹೇರಳವಾಗಿದ್ದಾರೆ. ಅಬ್ದುಲ್ ಕಲಾಂ ಅವರ ಆಯ್ಕೆ ಒಂದು ಅಪರೂಪದ ನಿದರ್ಶನ. ಯಾವುದೇ ವೈಯಕ್ತಿಕ ಅಥವಾ ವ್ಯಕ್ತಿಗತ ರಾಜಕೀಯ ಒಲವು ಇಲ್ಲದ ಇಂತಹ ಮೇರು ವ್ಯಕ್ತಿಗಳನ್ನು ಸರ್ವಾನುಮತದಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಆಶಯ ಸಾರ್ವಜನಿಕರಲ್ಲಿ ಕಂಡುಬಂದರೂ, ರಾಜಕೀಯ ಪಕ್ಷಗಳಲ್ಲಿ ಕಂಡುಬರುವುದಿಲ್ಲ. ಹಾಗಾಗಿಯೇ ರಾಷ್ಟ್ರಪತಿ ಚುನಾವಣೆಯೂ ಸಹ ರಾಜಕೀಯ ಮೇಲಾಟದ ಮತ್ತು ಅಸ್ಮಿತೆಯ ರಾಜಕಾರಣದ ಒಂದು ಭಾಗವಾಗಿಯೇ ನಡೆಯುತ್ತದೆ.

ವಿರೋಧ ಪಕ್ಷಗಳ ಕಸರತ್ತು
ರಾಜಕೀಯ ಭಿನ್ನಮತ ಮತ್ತು ವಿರೋಧಗಳ ಹೊರತಾಗಿಯೂ ರಾಷ್ಟ್ರಪತಿ ಹುದ್ದೆಗೆ ಸರ್ವಾನುಮತದ ಅಭ್ಯರ್ಥಿಯನ್ನು ಸೂಚಿಸುವ ಒಂದು ವಾತಾವರಣವೇ ಇಲ್ಲದಾಗಿರುವ ಈ ಹೊತ್ತಿನಲ್ಲಿ ಸಹಜವಾಗಿಯೇ ಪ್ರಧಾನ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯ ಆಯ್ಕೆಗಾಗಿ ಕಸರತ್ತು ನಡೆಸಿವೆ. ಇತ್ತ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಮ್ಮತದ ಅಭ್ಯರ್ಥಿಗಾಗಿ ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆಯಲ್ಲೂ ತೊಡಗಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳನ್ನೂ ಒಳಗೊಂಡಂತೆ ಬಿಜೆಪಿ ನಾಯಕತ್ವವು ಇತರ ವಿರೋಧ ಪಕ್ಷಗಳನ್ನು ಸಂಪರ್ಕಿಸುತ್ತಿದ್ದು ಒಮ್ಮತದ ಅಭ್ಯರ್ಥಿಗಾಗಿ ಯತ್ನಿಸುತ್ತಿದೆ. ಆದರೆ ಬಿಜೆಪಿ ಸೂಚಿಸುವ ಅಭ್ಯರ್ಥಿಯನ್ನೇ ಇತರ ಪಕ್ಷಗಳೂ ಒಪ್ಪಬೇಕೆಂಬ ಧೋರಣೆಯಿಂದ ಈ ಪ್ರಯತ್ನಗಳು ನಡೆಯುವುದು ವ್ಯರ್ಥಾಲಾಪವಾಗುತ್ತದೆ. ಒಂದು ವೇಳೆ ಬಿಜೆಪಿ ನಾಯಕತ್ವಕ್ಕೆ ಸರ್ವಾನುಮತದ ಆಯ್ಕೆಯೇ ಆಪ್ತವಾಗಿದ್ದರೆ, ಸರ್ವಪಕ್ಷಗಳ ಸಭೆ ಕರೆದು ಸ್ವತಂತ್ರ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲವಾದರೆ ಇದು ಮೇಲ್ನೋಟಕ್ಕೆ ಪ್ರಜಾಸತ್ತತ್ಮಕವಾಗಿ ಕಾಣುವ ನಾಮಮಾತ್ರದ ಪ್ರಯತ್ನವಾಗುತ್ತದೆ.
ವಾಸ್ತವ ಸನ್ನಿವೇಶ ಹೀಗಿರುವುದರಿಂದಲೇ ಪ್ರಮುಖ ವಿರೋಧ ಪಕ್ಷಗಳು ತಮ್ಮದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಚಿಸುತ್ತಿವೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಳತ್ವ ವಹಿಸಿ 17 ಪಕ್ಷಗಳ ಸಭೆಯೊಂದನ್ನೂ ನಡೆಸಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಮತ್ತು ಮಹಾತ್ಮ ಗಾಂಧಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರುಗಳು ಈ ಸಭೆಯಲ್ಲಿ ಕೇಳಿಬಂದಿದೆ. 2017ರ ಚುನಾವಣೆಗಳಲ್ಲೂ ಎಡಪಕ್ಷಗಳು ಗೋಪಾಲಕೃಷ್ಣ ಗಾಂಧಿ ಅವರನ್ನು ಸೂಚಿಸಿದ್ದರೂ, ಕಾಂಗ್ರೆಸ್ ಪಕ್ಷದ ವಿರೋಧದ ಕಾರಣ ಹಿನ್ನಡೆ ಉಂಟಾಗಿತ್ತು. ಸಾರ್ವಜನಿಕ ವಲಯದಿಂದ ಇನ್ಫೋಸಿಸ್ ಕಂಪನಿಯ ಸುಧಾ ಮೂರ್ತಿ ಅವರ ಹೆಸರು ಸಹ ಕೇಳಿಬರುತ್ತಿದ್ದು, ಸ್ವತಃ ಆಡಳಿತಾರೂಡ ಬಿಜೆಪಿಯೇ ಇವರ ಹೆಸರನ್ನು ಸೂಚಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಉತ್ತರಪ್ರದೇಶ ಚುನಾವಣೆಗಳ ನಂತರದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯವರೂ ರಾಷ್ಟ್ರಪತಿ ಹುದ್ದೆಗಾಗಿ ಬಿಜೆಪಿಯಿಂದ ಉಮೇದುದಾರರಾಗಬಹುದು ಎಂಬ ಸುದ್ದಿ ಹರಡಿತ್ತು.
17 ವಿರೋಧ ಪಕ್ಷಗಳು ಏರ್ಪಡಿಸಿದ್ದ ಸಭೆಯಿಂದ ಆಮ್ ಆದ್ಮಿ ಪಕ್ಷ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ದೂರ ಉಳಿದಿದ್ದು, ಬಿಜು ಜನತಾ ದಳ ಈವರೆಗೂ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ. ವಿರೋಧ ಪಕ್ಷಗಳಲ್ಲೂ ಸಹ ಪಕ್ಷ ರಾಜಕಾರಣದಿಂದ ಹೊರತಾದ ಅಭ್ಯರ್ಥಿಯನ್ನು ಸೂಚಿಸುವ ಸಾಧ್ಯತೆ ಕಡಿಮೆ ಇರುವುದನ್ನು ಮೇಲ್ನೋಟಕ್ಕೆ ಗಮನಿಸಬಹುದಾಗಿದೆ. ಹಾಗಾಗಿಯೇ ಶರದ್ ಪವಾರ್ ಅವರ ಹೆಸರೂ ಕೇಳಿಬಂದಿದ್ದು, ಪವಾರ್ ನಿರಾಕರಿಸಿದ್ದಾರೆ. ಸಾರ್ವಜನಿಕರಿಗೆ ಸಾರ್ವತ್ರಿಕವಾಗಿ ಒಪ್ಪಿಗೆಯಾಗುವಂತಹ ರಾಜಕೀಯೇತರ ವ್ಯಕ್ತಿಯೊಬ್ಬರನ್ನು ಸೂಚಿಸುವ ಮೂಲಕ ವಿರೋಧಪಕ್ಷಗಳು ತಮ್ಮ ರಾಜಕೀಯ ಮುತ್ಸದ್ದಿತನವನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶ ಎಂದೇ ಹೇಳಬಹುದು. ಆದರೆ ಭಾರತದ ರಾಜಕೀಯ ಪಕ್ಷಗಳು ಈ ಸೂಕ್ಷ್ಮಗಳಿಂದ ಎಂದೋ ವಿಮುಖವಾಗಿರುವುದರಿಂದ ಇದು ಉತ್ಪ್ರೇಕ್ಷಿತ ಅಪೇಕ್ಷೆ ಎನಿಸುತ್ತದೆ.
ಬಿಜೆಪಿ ಆಯ್ಕೆಯ ಹಿಂದೆ ರಾಜಕೀಯ ಲೆಕ್ಕಾಚಾರ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಆಡಳಿತಾರೂಢ ಪಕ್ಷವೊಂದರಲ್ಲಿ ಎರಡೂ ಸದನಗಳಲ್ಲೂ ಮುಸ್ಲಿಂ ಪ್ರಾತಿನಿಧ್ಯ ಇಲ್ಲದಿರುವುದನ್ನು ಕಾಣುತ್ತಿದ್ದೇವೆ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಗೂ ಈ ಬಾರ ಅವಕಾಶ ನೀಡಲಾಗಿಲ್ಲ. ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಪಕ್ಷ ಎಂದು ಬಿಂಬಿಸಲು ಇದು ಸಮರ್ಥನೀಯ ಸನ್ನಿವೇಶವನ್ನು ಒದಗಿಸಿದೆ. ಭಾರತದ ಬಹುಪಾಲು ಮುಸ್ಲಿಮ್ ಜನತೆ ಮತ್ತು ಎಡಪಂಥೀಯ, ಉದಾರವಾದಿಗಳು ಇದೇ ಅಭಿಪ್ರಾಯವನ್ನು ಹೊಂದಿವೆ. ಈ ಆಕ್ಷೇಪಗಳಿಂದ ಹೊರತಾಗಿ ನಿಲ್ಲಲು ಈ ಬಾರಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ ಎನ್ನಲಾಗಿದೆ. ರಾಜ್ಯಸಭೆಯಿಂದ ಹೊರಬಿದ್ದ ಮುಕ್ತಾರ್ ಅಬ್ಬಾಸ್ ನಕ್ವಿ ಅಥವಾ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲು ಬಿಜೆಪಿ ನಾಯಕತ್ವ ಯೋಚಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಇಲ್ಲಿ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರಗಾರಿಕೆಯೂ ಇದೆ.
ತನ್ನ ಮುಸ್ಲಿಂ ವಿರೋಧಿ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಖಾನ್ ಅವರ ಉಮೇದುವಾರಿಕೆಯನ್ನು ಬಳಸಿಕೊಳ್ಳಬಹುದು. ಭಾರತದ ಮೊಟ್ಟ ಮೊದಲ ಮುಸ್ಲಿಂ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು 2002ರಲ್ಲಿ ಆಯ್ಕೆ ಮಾಡಿದ್ದೂ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವೇ. ಇತ್ತೀಚೆಗೆ ಆರಿಫ್ ಮೊಹಮ್ಮದ್ ಖಾನ್ ಬಿಜೆಪಿ ಪರವಾದ ನಿಲುವು ವ್ಯಕ್ತಪಡಿಸುತ್ತಿದ್ದರೂ, ತಮ್ಮ ರಾಜಕೀಯ ಪಯಣದಲ್ಲಿ ಪ್ರಾಮಾಣಿಕತೆ ಮತ್ತು ಕ್ಷಮತೆಗೂ ಹೆಸರಾಗಿದ್ದಾರೆ. ಹಾಗಾಗಿ ಅವರ ಉಮೇದುವಾರಿಕೆಯಿಂದ ಬಿಜೆಪಿ ತಾನು ಮುಸ್ಲಿಂ ವಿರೋಧಿ ಅಲ್ಲ ಎಂದು ಬಿಂಬಿಸುವುದೇ ಅಲ್ಲದೆ ನೂಪುರ್ ಶರ್ಮಾ ಅವರ ವಿವಾದಾಸ್ಪದ ಹೇಳಿಕೆಯ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಪ್ರತಿರೋಧ ಮತ್ತು ಕೊಲ್ಲಿ ರಾಷ್ಟ್ರಗಳ ತೀವ್ರ ವಿರೋಧಕ್ಕೆ ಪ್ರತಿಕ್ರಿಯೆಯಾಗಿ, ಈ ಆಯ್ಕೆ ಮಾಡುವ ಮೂಲಕ ಬಿಜೆಪಿ ನಾಯಕತ್ವ ತಾನು ಮುಸ್ಲಿಂ ವಿರೋಧಿ ಅಲ್ಲ ಎಂದು ಬಿಂಬಿಸಲು ಯತ್ನಿಸಬಹುದು. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನುವುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.

ಈ ಹಿಂದೆ ಕಲಾಂ ಅವರನ್ನು ಆಯ್ಕೆ ಮಾಡಿದಾಗ ಅಥವಾ ರಾಮನಾಥ್ ಕೋವಿಂದ್ ಅವರನ್ನು ಚುನಾಯಿಸಿದಾಗಲೂ ಬಿಜೆಪಿಗೆ ಮುಸ್ಲಿಮರು ಮತ್ತು ದಲಿತರು ಸಾರಾಸಗಟಾಗಿ ತಮ್ಮ ಬೆಂಬಲ ನೀಡಲಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಮೇಲಾಗಿ ಅಬ್ದುಲ್ ಕಲಾಂ ಅವರಂತೆ ಆರಿಫ್ ಮೊಹಮ್ಮದ್ ಖಾನ್ ಅಜಾತ ಶತ್ರು ಏನಲ್ಲ. ಈಗಾಗಲೇ ಹಲವು ಸಂದರ್ಭಗಳಲ್ಲಿ ತೀವ್ರವಾದಿ ಮುಸ್ಲಿಂ ನಾಯಕರ ಮತ್ತು ಮುಸ್ಲಿಂ ಧಾರ್ಮಿಕ ನಾಯಕರ ವಿರೋಧ ಎದುರಿಸಿದ್ದಾರೆ. ರಾಜೀವ್ ಗಾಂಧಿ ಸರ್ಕಾರದ ಶಹಬಾನೋ ಪ್ರಕರಣದಿಂದಲೇ ಕಾಂಗ್ರೆಸ್ ಪಕ್ಷದಿಂದ ದೂರವಾದ ಆರಿಫ್ ಮೊಹಮ್ಮದ್ ಖಾನ್, ತೀವ್ರವಾದಿ ಮುಸ್ಲಿಮರನ್ನು ಮತ್ತು ಧಾರ್ಮಿಕ ನಾಯಕರನ್ನು, ಮುಸ್ಲಿಂ ಮತಾಂಧತೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. 2004ರಿಂದಲೂ ಬಿಜೆಪಿಯೊಡನೆ ಗುರುತಿಸಿಕೊಂಡಿದ್ದಾರೆ.
1972-73ರಲ್ಲಿ ಚೌಧರಿ ಚರಣ್ ಸಿಂಗ್ ಹಿಂಬಾಲಕರಾಗಿ ಭಾರತೀಯ ಕ್ರಾಂತಿ ದಳದ ಶಾಸಕರಾಗಿ ಉತ್ತರಪ್ರದೇಶ ವಿಧಾನಸಭೆ ಪ್ರವೇಶಿಸಿದ ಖಾನ್ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ನಾಯಕರಾಗಿಯೂ ಕೆಲಕಾಲ ಸಕ್ರಿಯರಾಗಿದ್ದವರು. 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ 1980 ಮತ್ತು 1984ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. 1986ರಲ್ಲಿ ಶಹಬಾನೋ ಪ್ರಕರಣದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿಯನ್ನು ವಿರೋಧಿಸಿ ಜನತಾ ದಳ ಸೇರಿದ್ದ ಖಾನ್ ಅವರು 1989ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ವಿ ಪಿ ಸಿಂಗ್ ಸರ್ಕಾರದಲ್ಲಿ ನಾಗರಿಕ ಯಾನ ಮತ್ತು ಇಂಧನ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1998ರಲ್ಲಿ ಮತ್ತೊಮ್ಮೆ ಪಕ್ಷ ಬದಲಿಸಿ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಯಾದ ಆರಿಫ್ ಮೊಹಮ್ಮದ್ ಖಾನ್ ಮಧ್ಯಪ್ರದೇಶದ ಬಹರೇಚ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ ನಂತರ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 2019ರಲ್ಲಿ ನರೇಂದ್ರ ಮೋದಿ ಸರ್ಕಾರ ಖಾನ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಮುಸ್ಲಿಂ ಸಮಾಜದಲ್ಲಿ ಸುಧಾರಣೆಗಳನ್ನು ತರಲು ಬಯಸುವ ಆರಿಫ್ ಮೊಹಮ್ಮದ್ ಖಾನ್, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯನ್ನು ರದ್ದುಪಡಿಸಬೇಕು ಎಂಬ ಆಗ್ರಹದ ಮೂಲಕ ಮುಸ್ಲಿಂ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು.

ತಮ್ಮ ಧಾರ್ಮಿಕ ಅಸ್ಮಿತೆಯ ಬಗ್ಗೆ ಎಂದೂ ಹಿಂಜರಿಯದ ಆರಿಫ್ ಮೊಹಮ್ಮದ್ ಖಾನ್ ಹಿಂದೂ ಮತ್ತಿತರ ಧರ್ಮಗಳನ್ನೂ, ತತ್ವಶಾಸ್ತ್ರಗಳನ್ನೂ ಅಷ್ಟೇ ಗೌರವದಿಂದ ಕಾಣುತ್ತಾರೆ. ತಮ್ಮ ಧಾರ್ಮಿಕ ಅಸ್ಮಿತೆಯನ್ನು ಪ್ರತಿಪಾದಿಸುತ್ತಲೇ “ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲೇ ನಾನು ನಂಬುವಂತಹ ಮತವನ್ನು ಅನುಸರಿಸುವ, ಬೋಧಿಸುವ ಮತ್ತು ಆಚರಿಸುವ ಹಕ್ಕನ್ನೂ ಪ್ರತಿಪಾದಿಸುತ್ತೇನೆ. ಆದರೆ ನನ್ನ ಈ ಧಾರ್ಮಿಕ ಹಕ್ಕು ಇತರ ಯಾವುದೇ ವ್ಯಕ್ತಿಯ ಮೇಲೆ ದಬ್ಬಾಳಿಕೆ ನಡೆಸುವ ಹಕ್ಕನ್ನು ನನಗೆ ನೀಡುವುದಿಲ್ಲ. ನನ್ನ ಮತಶ್ರದ್ಧೆಯನ್ನು ಪಾಲಿಸುವ ಹಕ್ಕು ನನಗಿದೆ ಆದರೆ ಇತರರಿಗೆ ಹಾನಿ ಉಂಟುಮಾಡುವಂತಹ ಯಾವುದೇ ಆಚರಣೆಯಲ್ಲಿ ತೊಡಗುವ ಹಕ್ಕು ಇರುವುದಿಲ್ಲ ” ಎಂದು ತಮ್ಮ ಲೇಖನವೊಂದರಲ್ಲಿ ಹೇಳುವ ಮೂಲಕ, ತಮ್ಮ ಜಾತ್ಯತೀತ, ಮತನಿರಪೇಕ್ಷತೆಯ ಧೋರಣೆಯನ್ನು ವ್ಯಕ್ತಪಡಿಸುತ್ತಾರೆ. ನರೇಂದ್ರ ಮೋದಿ ಸರ್ಕಾರದ ತ್ರಿವಳಿ ತಲಾಕ್ ನಿಷೇಧ, ಆರ್ಟಿಕಲ್ 370 ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಮಮಂದಿರ ನಿರ್ಮಾಣವನ್ನೂ ಖಾನ್ ಅವರು ಸಮರ್ಥಿಸಿದ್ದಾರೆ.
ಇತ್ತೀಚಿನ ನೂಪುರ್ ಶರ್ಮಾ ವಿವಾದದಲ್ಲೂ ತಟಸ್ಥ ನಿಲುವು ತಳೆದಿರುವ ಆರಿಫ್ ಮೊಹಮ್ಮದ್ ಖಾನ್ ಈ ವಿಚಾರದಲ್ಲಿ ಭಾರತ ಸರ್ಕಾರ ಕ್ಷಮೆ ಕೋರಬೇಕಿಲ್ಲ ಎಂದು ಹೇಳಿರುವುದೇ ಅಲ್ಲದೆ ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳು ಕ್ಷಮಾರ್ಹವಲ್ಲ ಎಂದೂ ಹೇಳಿದ್ದಾರೆ. ಈ ಕೆಲವು ನಿಲುವುಗಳಿಂದಾಗಿಯೇ ಸೌಮ್ಯವಾದಿ ಮುಸ್ಲಿಂ ಸಮುದಾಯಕ್ಕೆ ಆರಿಫ್ ಮೊಹಮದ್ ಖಾನ್ ಆಪ್ತರಾಗುತ್ತಾರೆ. ಅವರ ಅನೇಕ ನಿಲುವುಗಳು ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸುವುದರಿಂದ ಬಿಜೆಪಿ ಬೆಂಬಲಿಗರೂ ಖಾನ್ ಅವರ ಆಯ್ಕೆಯನ್ನು ಸ್ವಾಗತಿಸುವ ಸಾಧ್ಯತೆಗಳಿವೆ. ಆದರೆ ಖಾನ್ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ತನಗೆ ಅಂಟಿರುವ ಮುಸ್ಲಿಂ ವಿರೋಧಿ ಹಣೆಪಟ್ಟಿಯನ್ನು ಹೋಗಲಾಡಿಸಲು ಸಾಧ್ಯವಾಗುವುದೋ ಇಲ್ಲವೋ ಹೇಳಲಾಗುವುದಿಲ್ಲ. ನೂಪುರ್ ಶರ್ಮಾ ಅವರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತಿರುವ ಮುಸ್ಲಿಂ ಮತಾಂಧರು ಇದರಿಂದ ಸಂತೃಪ್ತರಾಗುವುದೂ ಇಲ್ಲ. 2017ರಲ್ಲಿ ಇಮಾಂ ಒಬ್ಬರು ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಮುಸಲ್ಮಾನರೇ ಅಲ್ಲ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂತಿಮವಾಗಿ
ಬಿಜೆಪಿ ಅಥವಾ ವಿರೋಧ ಪಕ್ಷಗಳ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ, ಬದಲಾಗುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಪಕ್ಷಾತೀತವಾಗಿ, ಯಾವುದೇ ರಾಜಕೀಯ ಸಿದ್ಧಾಂತಗಳ ಹಂಗಿಲ್ಲದೆ, ಸಂವಿಧಾನ ರಕ್ಷಣೆಯ ಏಕಮೇವ ಧ್ಯೇಯದಿಂದ ಕಾರ್ಯನಿರ್ವಹಿಸುವ ಪ್ರಥಮ ಪ್ರಜೆಯ ಅವಶ್ಯಕತೆ ಇದೆ. ಅಸ್ಮಿತೆಯ ರಾಜಕಾರಣದಿಂದಾಚೆ, ಚುನಾವಣೆ ಮತ್ತು ಅಧಿಕಾರ ರಾಜಕಾರಣದ ಪ್ರಭಾವದಿಂದಾಚೆ, ಜಾತಿ, ಮತ, ಧರ್ಮ ಮತ್ತು ಇತರ ಯಾವುದೇ ಸಾಮುದಾಯಿಕ ಅಸ್ಮಿತೆಗಳ ಗೋಡೆಗಳಿಂದಾಚೆ, ಸ್ವಾಯತ್ತತೆಯಿಂದ ಸಂವಿಧಾನವನ್ನು ರಕ್ಷಣೆ ಮಾಡುವಂತಹ ಒಬ್ಬ ವ್ಯಕ್ತಿ ರಾಷ್ಟ್ರಪತಿಯಾಗುವುದು ಈ ದೇಶದ ಬಹುಕೋಟಿ ನಾಗರಿಕರ ಆಕಾಂಕ್ಷೆಯೂ ಆಗಿರಲಿಕ್ಕೆ ಸಾಧ್ಯ. ತಮ್ಮ ಸ್ವಾರ್ಥ ರಾಜಕಾರಣವನ್ನು ಬದಿಗಿಟ್ಟು, ಭಾರತದ ಐಕ್ಯತೆ, ಅಖಂಡತೆ ಮತ್ತು ಬಹುಸಾಂಸ್ಕೃತಿಕ ನೆಲೆಗಳನ್ನು ಸಂವಿಧಾನದ ಆಶಯಗಳಿಗನುಗುಣವಾಗಿ ಸಂರಕ್ಷಿಸುವಂತಹ ರಾಷ್ಟ್ರಪತಿಯೊಬ್ಬರು ಸಮಸ್ತ ಭಾರತೀಯರಿಗೆ ಬೇಕಾಗಿದ್ದಾರೆ. ಈ ಬಾರಿಯಾದರೂ ಈ ಕನಸು ಕೈಗೂಡುವುದೇ ? ಕಾದುನೋಡೋಣ.









