ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಸೋಮವಾರ ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಮಂಗಳವಾರ ಅಂದರೆ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಕಾರಣ ಎರಡನೇ ದಿನವೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಇಂದು ಕೂಡ ರಾಹುಲ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದಾರೆ. ನಿನ್ನೆ ರಾಹುಲ್ ವಿಚಾರಣೆಗಾಗಿ ಮೊದಲ ಬಾರಿಗೆ ಇಡಿ ಮುಂದೆ ಹಾಜರಾಗಿದ್ದರು. ಸೋಮವಾರ ವಿಚಾರಣೆ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಇಡಿ ಕಚೇರಿಯಿಂದ ನಿರ್ಗಮಿಸಿದ್ದರು.

ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೂಡ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಂದು ರಾಹುಲ್ ಮನೆಯಿಂದ ಇಡಿ ಕಚೇರಿವರೆಗಿನ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.