ಉಡುಪಿ ಜಿಲ್ಲೆಯ ಕಾರ್ಕಳ ಉದ್ವಿಗ್ನವಾಗಿದ್ದು, ಕಾರ್ಕಳದಲ್ಲಿ ರಾತ್ರೋರಾತ್ರಿ ಗೋಡ್ಸೆ ರಸ್ತೆ ಪ್ರತ್ಯಕ್ಷವಾಗಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಖಾರವಾಗಿ ಟೀಕಿಸಿರುವ ಬಿಕೆ ಹರಿಪ್ರಸಾದ್ ಅವರು, ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು ಎಂದು ಹೇಳಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು . ಅದು ಥೇಟ್ ಕಾರ್ಕಳದ ರಸ್ತೆಗೆ ಇಟ್ಟಿದ್ದ ಗೋಡ್ಸೆಯ ನಾಮಫಲಕವನ್ನ ಕಿತ್ತು ಹಾಕಿದಂತೆ. ನಾಮ ಫಲಕ ತೆರವುಗೊಳಿಸಿ ಅದೇ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿಡಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಎಂದಿದ್ದಾರೆ.
ಸಮಾಜಿಕ ಜಾಲತಾಣದಲ್ಲೂ ಹೆಚ್ಚಿದ ಆಕ್ರೋಶ :
ಬೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕಾರ್ಕಳ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿಡಲಾಗಿದ್ದು, ರಾತ್ರೋರಾತ್ರಿ ರಸ್ತೆಯಲ್ಲಿ ಗೋಡ್ಸೆ ಬೋರ್ಡ್ ಕಾಣಿಸಿಕೊಂಡಿದೆ. ಬೋರ್ಡ್ ಪತ್ತೆಯಾಗ್ತಿದ್ದಂತೆ ಕಾರ್ಕಳ ಉದ್ವಿಗ್ನಗೊಂಡಿದ್ದು, ಗಾಂಧೀಜಿ ಕೊಂದವನ ಹೆಸರನ್ನು ರಸ್ತೆ ಇಟ್ಟಿದ್ದಾರೆ, ದೇಶದ ಮೊದಲ ಭಯೋತ್ಪಾದನ ಹೆಸರು ರಸ್ತೆಗೆ ಇಡ್ಬೋದಾ..? ಎಂದುಕಾರ್ಕಳದ ಬೋಳ ಪಂಚಾಯ್ತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ.
೨೦ ನೇ ಶತಮಾನದ ದಕ ಜಿಲ್ಲೆಯು ಶಿಕ್ಷಣ, ಬ್ಯಾಂಕಿಂಗ್, ಸಹಕಾರೀ ಚಳುವಳಿ ಮೊದಲಾದ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆಯನ್ನು ಮಾಡಿತು. ೨೧ನೇ ಶತಮಾನದ ದಕ ಜಿಲ್ಲೆಯಲ್ಲಿ ಅದೆಲ್ಲ ನೆಗೆದು ಬಿತ್ತು!. ಎಂದು ಪುರುಷೋತಮ್ ಬಿಳಿಮಲೆ ಅವರು ಟೀಕಿಸಿದ್ದಾರೆ.
ವಿವಾದ ಬುಗಿಲೆದ್ದ ಕೂಡಲೇ ಎಚ್ಚೆತ್ತ ಪಂಚಾಯ್ತಿ ಬೋರ್ಡ್ ತೆರವು :
ಕೂಡಲೇ ಬೋರ್ಡ್ ತೆರವು ಮಾಡುವಂತೆ ಜನರು ಆಗ್ರಹ ಮಾಡಿರ ಪರಿಣಾಮ, ಪಂಚಾಯತ್ಗೂ ಈ ಬೋರ್ಡ್ ಸಂಬಂಧವಿಲ್ಲ ಆದರೆ ಪಿಡಿಓ, ಪೊಲೀಸರ ಕರೆಸಿ ಬೋರ್ಡ್ ತೆರವುಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ ಈಗ ಬೋರ್ಡ್ ತೆರವುಗೊಳಿಸಲಾಗಿದೆ.