ಆಧಾರ್ ಕಾರ್ಡ್ ದುರುಪಯೋಗ ಆಗುತ್ತಿರುವ ಬಗ್ಗೆ ಈ ಹಿಂದೆ ಬಂದ ಆರೋಪಗಳು, ದೂರಗಳ ಬಗ್ಗೆ ತಕರಾರು ತೆಗೆದಿದ್ದ ಕೇಂದ್ರ ಸರ್ಕಾರವೇ ಈಗ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ.
ಅಷ್ಟೇ ಅಲ್ಲದೇ ಆಧಾರ್ ಕಾರ್ಡ್ ಗಳ ಛಾಯಾಪ್ರತಿಗಳನ್ನು ಯಾವುದೇ ಸಂಸ್ಥೆಯೊಂದಿಗೂ ಹಂಚಿಕೊಳ್ಳಬಾರದು ಎಂದು ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ, ಕೇಂದ್ರ ಸರ್ಕಾರದ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಪ್ರಕಟಣೆ ಹೊರಡಿಸಿದ್ದು ‘ನಾಗರಿಕರು ತಮ್ಮ ಆಧಾರ್ ಕಾರ್ಡ್ಗಳ ಛಾಯಾಪ್ರತಿಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಏಕೆಂದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು’ ಎಂದು ತಿಳಿಸಿದೆ.
ದುರುಪಯೋಗ ತಡೆಯುವುದಕ್ಕಾಗಿ ಸೂಕ್ತ ಪರಿಹಾರವನ್ನೂ ಸೂಚಿಸಲಾಗಿದೆ. ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಉಳಿದ ಸಂಖ್ಯೆಗಳು ಕಾಣದಂತೆ ಮುಖವಾಡ ಹಾಕಿದ ಆಧಾರ್ ಸಂಖೆಯ್ನು ಅನ್ನು ನಾಗರಿಕರು ಬಳಸಬೇಕೆಂದು ಸಲಹೆ ನೀಡಲಾಗಿದೆ. ಇದನ್ನು UIDAI ಅಧಿಕೃತ ವೆಬ್ಸೈಟ್ https://myaadhaar.uidai.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಡೌನ್ಲೋಡ್ ಮಾಡಲು ಮುಂದುವರಿಯುವ ಮೊದಲು “ನಿಮಗೆ ಮುಖವಾಡದ ಆಧಾರ್ ಬೇಕೇ” ಎಂಬುದನ್ನು ಆಯ್ಕೆ ಮಾಡಲು UDAI ಸೂಚಿಸಿದೆ. ಯಾವುದೇ ಆಧಾರ್ ಸಂಖ್ಯೆಯ ಅಸ್ತಿತ್ವವನ್ನು https://myaadhaar.uidai.gov.in/verifyAadhaar ನಲ್ಲಿ ಪರಿಶೀಲಿಸಬಹುದಾಗಿದೆ.
ಯಾವುದೇ ಆಧಾರ್ ಸಂಖ್ಯೆಯನ್ನು ಆಫ್ಲೈನ್ನಲ್ಲಿ ಪರಿಶೀಲಿಸಲು, mAadhaar ಮೊಬೈಲ್ ಅಪ್ಲಿಕೇಶನ್ನಲ್ಲಿ QR ಕೋಡ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಇ-ಆಧಾರ್ ಅಥವಾ ಆಧಾರ್ ಪತ್ರ ಅಥವಾ ಆಧಾರ್ PVC ಕಾರ್ಡ್ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ.
ದುರುಪಯೋಗ ತಡೆಯಲು ಮತ್ತಷ್ಟು ಸಲಹೆಗಳನ್ನು ನೀಡಿದ್ದು, ಸಾರ್ವಜನಿಕವಾಗಿ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡದಂತೆಯೂ ಸೂಚಿಸಿದೆ. ಸಾಧ್ಯವಾದಷ್ಟು ಸಾರ್ಜವನಿಕರು ಕಂಪ್ಯೂಟರ್ ಬಳಸುವ ಸ್ಥಳಗಳಾದ ಇಂಟರ್ನೆಟ್ ಕೆಫೆ ಅಥವಾ ಕಿಯೋಸ್ಕ್ನಲ್ಲಿ ಇ- ಆಧಾರ್ ಬಳಸುವುದನ್ನು ಬಿಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಅಂತಹ ಕಡೆ ಬಳಸಿದ್ದೇ ಆದರೆ, ಆ ಕಂಪ್ಯೂಟರ್ನಿಂದ ಇ-ಆಧಾರ್ನ ಎಲ್ಲಾ ಡೌನ್ಲೋಡ್ ಮಾಡಿದ ಪ್ರತಿಗಳನ್ನು ಶಾಶ್ವತವಾಗಿ ಅಳಿಸಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಸೂಚಿಸಿದೆ.
ಯುಐಡಿಎಐನಿಂದ ಬಳಕೆದಾರರ ಪರವಾನಗಿಯನ್ನು ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ದೃಢೀಕರೀಸಲು ಆಧಾರ್ ಅನ್ನು ಬಳಸಬಹುದು. ಹೋಟೆಲ್ಗಳು ಅಥವಾ ಚಿತ್ರಮಂದಿರಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ನ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳಲು ಅನುಮತಿಸುವುದಿಲ್ಲ. ಇದು ಆಧಾರ್ ಕಾಯಿದೆ 2016 ರ ಅಡಿಯಲ್ಲಿ ಅಪರಾಧವಾಗಿದೆ. ಖಾಸಗಿ ಸಂಸ್ಥೆಗಳು ನಿಮ್ಮ ಆಧಾರ್ ಕಾರ್ಡ್ ಅನ್ನು ನೋಡಲು ಒತ್ತಾಯಿಸಿದರೆ ಅಥವಾ ನಿಮ್ಮ ಆಧಾರ್ ಕಾರ್ಡ್ನ ಫೋಟೊಕಾಪಿಯನ್ನು ಶೋಧಿಸಿದರೆ ಅಂತಹವರು UIDAI ನಿಂದ ಮಾನ್ಯತೆ ಪಡೆದ ಬಳಕೆದಾರ ಪರವಾನಗಿಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ಎಂದೂ ನಾಗರಿಕರಿಗೆ ಸಲಹೆ ಮಾಡಿದೆ.