ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಮತ್ತು ರಾಜಕಾರಣಿ ಜಗ್ಗೇಶ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಭಾನುವಾರದಂದು ಘೋಷಿಸಿದೆ.
ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಉತ್ತರ ಪ್ರದೇಶದಿಂದ ಸೀತಾರಾಮನ್ ಅವರನ್ನು ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. ಕರ್ನಾಟಕದಲ್ಲಿನ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರನ್ನು ಭದ್ರಪಡಿಸಿಕೊಳ್ಳಲು ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆಗೂ ಮುನ್ನ ಹೇಳಿದ್ದಾರೆ.
ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಪಕ್ಷವು ಈಗ ನಾಲ್ಕು ಸ್ಥಾನಗಳಲ್ಲಿ ಇಬ್ಬರನ್ನು ಅಭ್ಯರ್ಥಿಗಳನ್ನು ಘೋಷಿಸಿದೆ, ಇನ್ನೊಂದೆಡೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಶಾಸಕಾಂಗ ಸಭೆಯಲ್ಲಿ ಯಾವುದೇ ಪಕ್ಷಗಳಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಶಕ್ತಿ ಇಲ್ಲದ ಕಾರಣ ನಾಲ್ಕನೇ ಸ್ಥಾನದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.