ಕಳೆದೆರಡು ವರ್ಷಗಳಲ್ಲಿ ಕಾಡಿದ ಕೊರೋನಾ ಮತ್ತು ಅದು ತಂದೊಡ್ಡಿದ ಉದ್ಯೋಗ ನಷ್ಟದಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದೇ ಇದರ ಉದ್ದೇಶವಾಗಿದ್ದರೂ ಪೋಷಕರ ಈ ಕ್ರಮ ಮುಚ್ಚಿ ಹೋಗುತ್ತಿದ್ದ ಸರ್ಕಾರಿ ಶಾಲೆಗಳಿಗೆ ಜೀವದಾನ ನೀಡಿದ್ದು ಸುಳ್ಳಲ್ಲ. ಪೋಷಕರ ಈ ನಿರ್ಧಾರಕ್ಕೆ ಪೂರಕವಾಗಿ ಸರ್ಕಾರವೂ ನಡೆಯುತ್ತಿದ್ದು ಈ ವರ್ಷ ರಾಜ್ಯ ಸರ್ಕಾರವು ತನ್ನ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಲಭ್ಯವಿರುವ ಮೂಲಸೌಕರ್ಯಗಳಿಗೆ ಅನುಗುಣವಾಗಿ ‘ಅನಿಯಮಿತ’ ಪ್ರವೇಶ ಒದಗಿಸಲು ನಿರ್ಧರಿಸಿದೆ. ಇದು ಆಂಗ್ಲ ಮಾಧ್ಯಮ ಶಾಲೆಗಳ ಶುಲ್ಕ ಭರಿಸಲು ಸಾಧ್ಯವಿಲ್ಲದ ಪೋಷಕರಿಗೆ ವರದಾನವಾಗಿ ಪರಿಣಮಿಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದ್ದು 2022-23 ಶೈಕ್ಷಣಿಕ ವರ್ಷದಲ್ಲಿ ಹೊಸ ಇಂಗ್ಲಿಷ್-ಮಧ್ಯಮ ಶಾಲೆಗಳನ್ನು ತೆರೆಯಲಾಗುವುದಿಲ್ಲ ಎಂದಿದೆ.
“ಹಲವು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ದಾಖಲಾತಿಯನ್ನು ಹೆಚ್ಚಿಸುವಂತೆ ಕೇಳುತ್ತಿವೆ. ಹೆಚ್ಚಿನ ಮಕ್ಕಳನ್ನು ದಾಖಲಿಸಲು ಸರಿಯಾದ ಮೂಲಸೌಕರ್ಯ ಲಭ್ಯವಿದ್ದಲ್ಲಿ ನಾವು ಇದಕ್ಕೆ ಅನುಮತಿ ನೀಡುತ್ತೇವೆ” ಎಂದು ಇಲಾಖೆಯ ಅಧಿಕಾರಿಯೊಬ್ಬರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕರ ಕೊರತೆಯಿದ್ದರೆ, ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
![](https://pratidhvani.com/wp-content/uploads/2022/05/file74qw9le0iw21sdwu9tb-1112458-1653515646.jpg)
ಬೇಡಿಕೆಯ ಆಧಾರದ ಮೇಲೆ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು (SDMC ಗಳು) ಈ ಬಗ್ಗೆ ಬ್ಲಾಕ್ ಶಿಕ್ಷಣ ಅಧಿಕಾರಿ (BEO) ಗೆ ವಿನಂತಿಗಳನ್ನು ಸಲ್ಲಿಸಬಹುದು.
ಕರ್ನಾಟಕವು ಒಟ್ಟು 44,615 ಸರಕಾರಿ ಶಾಲೆಗಳನ್ನು ಹೊಂದಿದ್ದು 2019-20 ರಲ್ಲಿ ಮೊದಲ ಬಾರಿಗೆ 1,001 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್-ಮಾಧ್ಯಮ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಕೋವಿಡ್ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಪ್ರಹಾರ ನಡೆಸಿದರೂ ಎದೆಗುಂದದೆ ಶಿಕ್ಷಣ ಇಲಾಖೆಯು ನಂತರದ ವರ್ಷದಲ್ಲಿ 276 ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು 444 ಉರ್ದು-ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್-ಮಾಧ್ಯಮ ವಿಭಾಗಗಳನ್ನು ತೆರೆಯುವ ಮೂಲಕ 1,400 ಹೆಚ್ಚಿನ ಶಾಲೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಿತು.