ನಿನ್ನೆ ಮದುವೆಗೆ ಹೊರಟಿದ್ದಂತ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿಯಾಗಿ 9 ಮಂದಿ ಸಾವನಪ್ಪಿರುವ ಪ್ರಕರಣ ಧಾರವಾಡದ ಬಾಡ ಗ್ರಾಮದ ಬಳಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮೃತ ಪಟ್ಟಂತ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ.

ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.