ರಾಜ್ಯದ ಸಾವಿರಾರು ಮಕ್ಕಳು ಇಂದು ತಮ್ಮ ಭವಿಷ್ಯ ಬದುಕಿನ ಮೊದಲ ಮೆಟ್ಟಿಲನ್ನು ಸ್ಪರ್ಶಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಎಂದರೆ ಭಾರತದ ಸಂದರ್ಭದಲ್ಲಿ ಬದುಕಿನ ಒಂದು ಹಂತ. ಏಕೆಂದರೆ ಅದು ಮಕ್ಕಳ ಭವಿಷ್ಯದ ಓದು, ವ್ಯಾಸಂಗ, ಅಧ್ಯಯನ ಮತ್ತು ಉದ್ಯೋಗ ಎಲ್ಲದಕ್ಕೂ ಅತ್ಯವಶ್ಯ ಎನಿಸಿಬಿಟ್ಟಿರುವ ಬೌದ್ಧಿಕ ಮೆಟ್ಟಿಲು. ವರ್ಷವಿಡೀ ತಾವು ಪಟ್ಟ ಶ್ರಮ ಫಲಕಾರಿಯಾಗಲೆಂದು ಪ್ರಾರ್ಥಿಸುತ್ತಿರುವ ಮಕ್ಕಳು ಎದೆಗುಂದದಂತೆ ತಮ್ಮ ಫಲಿತಾಂಶವನ್ನು ಎದುರಿಸಬೇಕು. ವಾಣಿಜ್ಯೀಕರಣಗೊಂಡ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಕೆಯೇ ಪ್ರಧಾನವಾಗಿರುವುದರಿಂದ ಇಂದಿನ ಬಹುಪಾಲು ಮಕ್ಕಳು ತಮ್ಮ ಅಂಕಪಟ್ಟಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯ ನೀಡುವುದುಂಟು. ಹೆಚ್ಚಿನ ಅಂಕ ಗಳಿಸಿದ ಮಕ್ಕಳನ್ನು “ ಪ್ರತಿಭಾಕಾರಂಜಿ”ಯ ಚಿಲುಮೆಗಳೆಂದು ಸನ್ಮಾನಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದರಿಂದ ಮಕ್ಕಳಲ್ಲಿ ಅಂಕಪೈಪೋಟಿ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ಮಧ್ಯಮ ವರ್ಗದ, ನಗರೀಕರಣಕ್ಕೊಳಗಾದ ಮಕ್ಕಳಿಗೆ ಸೀಮಿತವಾದ ಲಕ್ಷಣ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗಕ್ಕೆ ರಹದಾರಿಯನ್ನು ತೆರೆಯುವ ಒಂದು ಹಂತ. ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಸಾವಿರಾರು ಉತ್ತರಗಳು ಲಭಿಸುತ್ತವೆ. ಈ ಉತ್ತರಗಳ ಬಗ್ಗೆ ಹೆಚ್ಚು ಯೋಚಿಸದೆ ಮಕ್ಕಳು ತಮ್ಮ ಮುಂದಿನ ವ್ಯಾಸಂಗದ ಬಗ್ಗೆ ಚಿಂತೆ ಮಾಡಬೇಕು. ಯಾವ ಕೋರ್ಸ್ ಓದಿದರೆ ಶೀಘ್ರ ಉದ್ಯೋಗ ದೊರೆಯುತ್ತದೆ ಎಂಬ ಸಂಕುಚಿತ ಪ್ರಶ್ನೆಗೆ ಒಳಗಾಗದೆ, ಜ್ಞಾನಾರ್ಜನೆಗಾಗಿ, ಬದುಕು ರೂಪಿಸಿಕೊಳ್ಳುವ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಈ ಹಂತದಲ್ಲಿ ಮಕ್ಕಳು ಆಲೋಚನೆ ಮಾಡಬೇಕು. ತೇರ್ಗಡೆಯಾಗದ ಮಕ್ಕಳು ಅಥವಾ ಕಡಿಮೆ ಅಂಕ ಗಳಿಸಿದ ಮಕ್ಕಳು ಯಾವುದೇ ರೀತಿಯ ಕೀಳರಿಮೆಯಿಲ್ಲದೆ ಮುನ್ನಡೆಯಬೇಕು. ಮರಳಿ ಯತ್ನವ ಮಾಡು ಎಂಬ ಕವಿನುಡಿಯಂತೆ ಮರಳಿ ಮರಳಿ ಯತ್ನಿಸಬೇಕು ಮತ್ತು ಯಶಸ್ಸಿನ ಗುರಿ ತಲುಪುವವರೆಗೂ ಶ್ರಮಿಸಬೇಕು. ಪೋಷಕರೂ ಸಹ ಇಂತಹ ಮಕ್ಕಳಿಗೆ ಸಾಂತ್ವನ ಹೇಳಿ ಅವರು ಎದುರಿಸುತ್ತಿರಬಹುದಾದ ಕೊರತೆಗಳನ್ನು ನೀಗಿಸುವ ಮೂಲಕ ಮುಂದಿನ ಹಾದಿಯನ್ನು ಸುಗಮಗೊಳಿಸಲು ಯತ್ನಿಸಬೇಕು. ಯಾವುದೇ ಕೂಸು ಪರೀಕ್ಷಾ ಫಲಿತಾಂಶದ ಕಾರಣಕ್ಕಾಗಿ ಜೀವಹಾನಿಗೆ ಮುಂದಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಪೋಷಕರ ಮೇಲಿದ್ದಷ್ಟೇ ಸಮಾಜದ ಮೇಲೂ ಇರುತ್ತದೆ.
ಕಾಲೇಜು ಶಿಕ್ಷಣಕ್ಕೆ ಪ್ರವೇಶಿಸುವ ಮಕ್ಕಳಿಗೆ ಸಾಕಷ್ಟು ಗೊಂದಲಗಳಿರುತ್ತವೆ. ಕಲಾ ವಿಭಾಗ, ವಿಜ್ಞಾನ ಅಥವಾ ವಾಣಿಜ್ಯ, ಕಂಪ್ಯೂಟರ್ ತಂತ್ರಜ್ಞಾನ ಹೀಗೆ ಹತ್ತು ಹಲವಾರು ಆಯ್ಕೆಗಳು ವಿದ್ಯಾರ್ಥಿಗಳ ಮುಂದಿರುತ್ತದೆ. ಮಾರುಕಟ್ಟೆಯ ಜಾಹೀರಾತುಗಳು ಮತ್ತು ಕಾಲೇಜುಗಳ ಆತ್ಮರತಿಯ ಪ್ರಕಟನೆಗಳಿಗೆ ಮರುಳಾಗದ ತಮ್ಮ ಬೌದ್ಧಿಕ ಶಕ್ತಿಗೆ ನಿಲುಕಬಹುದಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಪೋಷಕರು ಸ್ವಾತಂತ್ರ್ಯ ನೀಡಬೇಕು. ಅಮೆರಿಕದ ಕನಸು ಕಾಣುವ ಪೋಷಕರು ತಮ್ಮ ಭ್ರಮೆಗೆ ಮಕ್ಕಳ ಚಂದದ ಬದುಕಿನ ಅಮೂಲ್ಯ ಕ್ಷಣಗಳನ್ನು ಬಲಿಕೊಡಬೇಕಿಲ್ಲ. ಎಸ್‌ಎಸ್‌ಎಲ್‌ಸಿ ಪೂರೈಸುವ ಮಕ್ಕಳಲ್ಲಿ ಮುಖ್ಯವಾಗಿ ಆತ್ಮಬಲ ತುಂಬಬೇಕು, ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲ ಮೂಡಿಸಬೇಕು. ಹಾಗೆಯೇ ಅವರಿಗೆ ಆಪ್ತ ಎನಿಸುವ ವಿಷಯಗಳನ್ನು ವ್ಯಾಸಂಗ ಮಾಡಲು ಅವಕಾಶವನ್ನೂ ನೀಡಬೇಕು. ಇದು ಬದುಕನ್ನು ರೂಪಿಸುವ ಒಂದು ಘಟ್ಟ ಮಾತ್ರ ಅಂತಿಮ ತಾಣ ಅಲ್ಲ ಎನ್ನುವ ವಾಸ್ತವವನ್ನು ಮಕ್ಕಳಿಗೆ ಮನದಟ್ಟು ಮಾಡಬೇಕು. ಭವಿಷ್ಯದ ಲಾಲಸೆಗಳಿಗೆ ಅಥವಾ ಭ್ರಮಾಧೀನ ಜಗತ್ತಿನ ಲೋಲುಪತೆಗಳಿಗೆ ಮಕ್ಕಳ ಮನಸು ಬಲಿಯಾಗದಂತೆ ಪೋಷಕರೂ ಎಚ್ಚರವಹಿಸಬೇಕು.
ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗುವ ಮತ್ತು ಆಗದಿರುವ ಎಲ್ಲ ಮಕ್ಕಳೂ ಅರ್ಥಮಾಡಿಕೊಳ್ಳಬೇಕಾದ ಒಂದು ವಾಸ್ತವ ಎಂದರೆ ಇನ್ನು ಮುಂದೆ ಅವರು ಇಡುವ ಪ್ರತಿ ಹೆಜ್ಜೆಯೂ ಸುಖಿ ಸಮಾಜವನ್ನು ಕಟ್ಟುವ ಇಟ್ಟಿಗೆಗಳಂತೆ. ತಮ್ಮ ಪ್ರತಿ ಹೆಜ್ಜೆಯೂ ಆರೋಗ್ಯಕರವಾಗಿರುವಂತಹ ಆಲೋಚನೆಗಳನ್ನು ಮೈಗೂಡಿಸಿಕೊಂಡು ಹೋಗುವ ರೀತಿಯಲ್ಲಿ ತಮ್ಮ ವಿದ್ಯಾರ್ಜನೆಯನ್ನು ಮುಂದುವರೆಸಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಈ ವಯಸ್ಸಿನ ಮಕ್ಕಳ ಬೌದ್ಧಿಕ ಗ್ರಹಿಕೆ ಹಿಂದಿಗಿಂತಲೂ ತೀಕ್ಷ್ಣವಾಗಿರುತ್ತದೆ ಹಾಗೆಯೇ ಸೂಕ್ಷ್ಮವೂ ಆಗಿರುತ್ತದೆ. ತಮ್ಮ ಮನಸಿನ ಸೂಕ್ಷ್ಮ ಎಳೆಗಳನ್ನು ಕಾಪಾಡಿಕೊಳ್ಳುತ್ತಾ, ತಮ್ಮ ಹಾಗೂ ತಮ್ಮನ್ನು ಪೊರೆದ ಕುಟುಂಬದ, ಸಮಾಜದ ಒಳಿತಿಗಾಗಿ ಒಂದು ವೈಚಾರಿಕ ನೆಲೆಯನ್ನು ರೂಪಿಸಿಕೊಳ್ಳಲು ಮಕ್ಕಳಿಗೆ ನೆರವಾಗುವುದು ಸಮಾಜದ ಆದ್ಯ ಕರ್ತವ್ಯವೂ ಹೌದು.
ಕೊನೆಯ ಹನಿ
ಮಕ್ಕಳೇ ಫಲಿತಾಂಶ ಏನೇ ಇರಲಿ ನಗುಮೊಗದಿಂದ ಸ್ವೀಕರಿಸಿ. ಯಶಸ್ಸಿಗೆ ಬೀಗದೆ ವೈಫಲ್ಯಕ್ಕೆ ಎದೆಗುಂದದೆ ಬದುಕು ಇನ್ನೂ ವಿಶಾಲವಾಗಿದೆ ಎಂಬ ಭರವಸೆಯೊಂದಿಗೆ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಿ. ಆರೋಗ್ಯಕರವಾದ ಭವಿಷ್ಯ ಭಾರತದ ನಿರ್ಮಾಣದ ಕಾಲಾಳುಗಳಾಗಲು ಹೊರಟಿದ್ದೀರಿ. ಈ ಫಲಿತಾಂಶವೇ ಅಂತಿಮವಲ್ಲ. ಜಗತ್ತು ತೆರೆದಿದೆ, ಬಾಗಿಲುಗಳೂ ತೆರೆದೇ ಇರುತ್ತವೆ. ವೈಫಲ್ಯಕ್ಕೆ ಎದೆಗುಂದದೆ ಮುನ್ನಡೆಯಿರಿ. ಯಶಸ್ಸನ್ನು ಸಂಭ್ರಮಿಸುತ್ತಲೇ ತಮ್ಮ ಸಹಪಾಠಿಗಳನ್ನೂ ಜೊತೆಗೇ ಕೊಂಡೊಯ್ಯುವ ಮನೋಭಾವದೊಂದಿಗೆ ಒಂದು ಸುಖೀ ಸಮಾಜದ ನಿರ್ಮಾಣಕ್ಕೆ ಮುಂದಣ ಹೆಜ್ಜೆ ಇಡುತ್ತಾ ಹೋಗಿ. ಅಂಕ ಸಾಮ್ರಾಟರಾಗದಿದ್ದರೆ ಜ್ಞಾನ ಸಾಮ್ರಾಟರಾಗಿ ಮುನ್ನಡೆಯಿರಿ.
ಎಲ್ಲ ಮಕ್ಕಳಿಗೂ ಶುಭವಾಗಲಿ. ಭವಿಷ್ಯ ಉಜ್ವಲವಾಗಲಿ.