ಮಧ್ಯಾಹ್ನದ ಊಟ ಮತ್ತು ಕ್ಷೀರ ಭಾಗ್ಯದಂತಹ ರಾಜ್ಯ ಸರ್ಕಾರದ ಯೋಜನೆಗಳ ಹೊರತಾಗಿಯೂ, ಕರ್ನಾಟಕದಲ್ಲಿ ಐದು ವರ್ಷದೊಳಗಿನ 35% ಮಕ್ಕಳಲ್ಲಿ ಬೆಳವಣಿಗೆ ಕುಂಠಿತರಾಗಿದ್ದಾರೆ ಎಂದು ಮೇ 3ರಂದು ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ತಿಳಿಸಿದೆ. ಇದು ರಾಷ್ಟ್ರೀಯ ಸರಾಸರಿಯಾಗಿರುವ 36% ಕ್ಕಿಂತ ಕೇವಲ 1% ಕಡಿಮೆ.
ಬೆಳವಣಿಗೆ ಕುಂಠಿತವಾಗುವುದು ಅಥವಾ ವಯಸ್ಸಿಗೆ ತಕ್ಕುದಾದ ಎತ್ತರ ಇಲ್ಲದಿರುವುದು ದೀರ್ಘಕಾಲದ ಪೋಷಣೆಯ ಕೊರತೆಯ ಸಂಕೇತವಾಗಿದೆ. ತೆಳ್ಳಗಿನ ತಾಯಂದಿರಿಗೆ ಜನಿಸುವ ಮಕ್ಕಳು ಬೆಳವಣಿಗೆಯಲ್ಲಿನ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ ಮತ್ತು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕುಂಠಿತಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂದೂ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯ ಬಗ್ಗೆ ಮಾತನಾಡುತ್ತಾ ಬೆಂಗಳೂರಿನ ಅಕುರಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ತರಬೇತುದಾರ ಡಾ. ಸಲ್ದಾನಾ ಅವರು ಈ ಅಪೌಷ್ಟಿಕತೆಗೆ ಎರಡು ಕಾರಣಗಳಿವೆ ಎನ್ನುತ್ತಾರೆ. ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳ ಸಾಮಾಜಿಕವಾಗಿ ಆರ್ಥಿಕವಾಗಿ ಕೆಳಗಿರುವ ಗುಂಪುಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ದೀರ್ಘಾವಧಿಯ ಅಪೌಷ್ಟಿಕತೆ ಮತ್ತು ಗುಣಮಟ್ಟದ ಆಹಾರ ಸೇವನೆಯಲ್ಲಿನ ಕೊರತೆ ಕಂಡು ಬರುತ್ತದೆ. ಅಂದರೆ, ಈ ಮಕ್ಕಳ ಪೋಷಕರು ಮತ್ತು ಒಡಹುಟ್ಟಿದವರು ಸಹ ಅಪೌಷ್ಟಿಕತೆಯನ್ನು ಹೊಂದಿರುತ್ತಾರೆ.
ಎರಡನೆಯದಾಗಿ, ಕಳೆದ ಎರಡು ವರ್ಷಗಳಲ್ಲಿನ ಸಾಂಕ್ರಾಮಿ ರೋಗಕ ಸಮಯದಲ್ಲಿ, ಸರ್ಕಾರದ ಕೈಗೊಂಡ ಕ್ರಮಗಳು ಮತ್ತು ಆರ್ಥಿಕ ಕುಸಿತದಿಂದಾಗಿ ಪೌಷ್ಠಿಕಾಂಶದ ಆಹಾರಗಳಾದ ಬೇಳೆಕಾಳುಗಳು, ಎಣ್ಣೆಗಳು ಮತ್ತು ಸಸ್ಯ ಮತ್ತು ಮಾಂಸಾಹಾರಿ ಆಹಾರಗಳ ಬೆಲೆಗಳಲ್ಲಿನ ಹೆಚ್ಚಳಕ್ಕೆ ಕಾರಣವಾಯಿತು. ಇದು ದೀರ್ಘಕಾಲದ ಅಪೌಷ್ಟಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಸಮೀಕ್ಷೆಯ ಫಲಿತಾಂಶಗಳು ಆಶ್ಚರ್ಯಕರವಾಗಿಲ್ಲ ಎನ್ನುವ ಕರ್ನಾಟಕ ಜನರೋಗ್ಯ ಚಳವಳಿಯ ಸಹ ಸಂಚಾಲಕಿ ಅಖಿಲಾ ವಾಸನ್ ರಾಜ್ಯದಲ್ಲಿ ನಲವತ್ತರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕೇವಲ 11% ಶಿಶುಗಳು ಮಾತ್ರ ಬೇಕಾದಷ್ಟು ಆಹಾರವನ್ನು ಪಡೆಯುತ್ತಾರೆ. ಮಧ್ಯಾಹ್ನದ ಊಟದ ಗುಣಮಟ್ಟವೂ ರಾಜ್ಯದಲ್ಲಿ ತುಂಬಾ ಕಳಪೆಯಾಗಿದೆ ಎನ್ನುತ್ತಾರೆ. “ಮಧ್ಯಾಹ್ನದ ಊಟದಲ್ಲಿ, ಅವರು ಮೊಟ್ಟೆಗಳನ್ನು ನೀಡುವುದಿಲ್ಲ ಮತ್ತು ಆಹಾರಕ್ಕೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಕೂಡ ಬಳಸುವುದಿಲ್ಲ ” ಎಂದು ಹೇಳುತ್ತಾರೆ.
“ಬೆಳವಣಿಗೆ ಕುಂಠಿತವಾಗುವುದು ಶೈಕ್ಷಣಿಕ ಸಾಧನೆಯ ಮೇಲೂ ಪರಿಣಾಮ ಬೀರುತ್ತದೆ. ಅಂದರೆ, ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ” ಎಂದು ವಾಸನ್ ಹೇಳುತ್ತಾರೆ. “ಸರಳವಾಗಿ ಹೇಳುವುದಾದರೆ ಮಕ್ಕಳ ಭವಿಷ್ಯವು ಅಪಾಯದಲ್ಲಿದೆ” ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಕಾರ್ಯಕರ್ತೆ ಡಾ ಸಿಲ್ವಿಯಾ ಕರ್ಪಗಮ್ “ದೀರ್ಘಕಾಲದ ಅಪೌಷ್ಟಿಕತೆ ಕರ್ನಾಟಕದಲ್ಲಿ ಗಂಭೀರ ಸಮಸ್ಯೆಯಾಗಿದೆ. ಮತ್ತು ಕೊರೋನಾ ಮತ್ತು ಲಾಕ್‌ಡೌನ್‌ನಿಂದಾದ ಜೀವನೋಪಾಯದ ನಷ್ಟ, ಸ್ಥಳಾಂತರ, ಸಾರ್ವಜನಿಕ ಸಾರಿಗೆಯ ಸ್ಥಗಿತ, ಮೂಲಭೂತ ಆರೋಗ್ಯ ಸೇವೆಗಳ ನಿರಾಕರಣೆ ಇವು ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸಿತು” ಎನ್ನುತ್ತಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ದುರ್ಬಲ ಗುಂಪುಗಳಾದ 14 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಗರ್ಭಿಣಿ ಹಾಗೂ ಬಾಣಂತಿಯರು ಕಾನೂನುಬದ್ಧವಾಗಿ ಸರ್ಕಾರದಿಂದ ಆಹಾರ ಪಡೆದುಕೊಳ್ಳಲು ಅರ್ಹತೆ ಪಡೆದುಕೊಳ್ಳುತ್ತಾರೆ ಆದರೆ ಸರ್ಕಾರಕ್ಕೆ ಇದನ್ನು ಪೂರೈಸಲಾಗುತ್ತಿಲ್ಲ ಎಂದು ಅವರು ಹೇಳಿದರು.
“ಸರ್ಕಾರವು ಒದಗಿಸುವ ಆಹಾರವನ್ನು ಸಹ ಧಾನ್ಯಗಳು ಮತ್ತು ರಾಗಿಗೆ ಸೀಮಿತಗೊಳಿಸಲಾಗಿದೆ. ಅತ್ಯಂತ ಕಳಪೆ ಆಹಾರ ವೈವಿಧ್ಯತೆ ಇದೆ. ಹಾಲು ಮತ್ತು ಡೈರಿ ಹೊರತುಪಡಿಸಿ ಎಲ್ಲಾ ಪ್ರಾಣಿ ಮೂಲದ ಆಹಾರಗಳ ಕಲಬೆರೆಕೆ ಮಾಡಲಾಗುತ್ತದೆ. ಇವುಗಳು ಅಸ್ತಿತ್ವದಲ್ಲಿರುವ ಸೂಚಕಗಳನ್ನು ಸಹ ಇನ್ನಷ್ಟು ಹದಗೆಡಿಸಬಹುದು, ಆದ್ದರಿಂದ ಆಹಾರ ಮತ್ತು ಪೌಷ್ಟಿಕಾಂಶಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳು NFHS ಮತ್ತು CNNS ನಂತಹ ಪುರಾವೆಗಳು, ವಿಜ್ಞಾನ ಮತ್ತು ಡೇಟಾವನ್ನು ಆಧರಿಸಿರಬೇಕು ಎಂದು ನಾವು ಒತ್ತಾಯಿಸಬೇಕಾಗಿದೆ, ” ಎಂದು ಕರ್ಪಗಮ್ ಹೇಳುತ್ತಾರೆ.